ಚಿಂಚೋಳಿ: ತಾಲೂಕಿನ ದೋಟಿಕೊಳ ಗ್ರಾಮದ ಕೆರೆ ದುರಸ್ತಿ ಕಾರ್ಯ ಆಗದೇ ಇರುವುದರಿಂದ ನೀರು ಸಂಗ್ರಹವಾಗದೇ ದಿನನಿತ್ಯ ಬಂಡಿನಿಂದ (ಆಣೆಕಟ್ಟಿನಿಂದ) ಸೋರಿಕೆಯಾಗುತ್ತಿದ್ದು, ಕೂಡಲೇ ದುರಸ್ತಿ ಕಾರ್ಯ ಕೈಗೊಳ್ಳಬೇಕು ಎಂದು ಕನಕಪುರ ಗ್ರಾಪಂ ಮಾಜಿ ಅಧ್ಯಕ್ಷ ಸಂಜೀವರೆಡ್ಡಿ ಆಗ್ರಹಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೋಟಿಕೊಳ ಗ್ರಾಮದ ಹೊಲಗಳಿಗೆ ನೀರಾವರಿ ಸೌಲಭ್ಯ ಪಡೆಯಲು ಆಗಿನ ಮುಖ್ಯಮಂತ್ರಿ ವೀರೇಂದ್ರ ಪಾಟೀಲ ರುಸ್ತಂಪುರ, ಮೋಘಾ, ಹೂವಿನಬಾವಿ ಗ್ರಾಮಗಳಿಂದ ಹರಿದು ಬರುವ ನಾಲಾಗೆ 1972ರಲ್ಲಿ ಸಣ್ಣ ನೀರಾವರಿ ಕೆರೆ ನಿರ್ಮಿಸಿಕೊಟ್ಟಿದ್ದರು. ಇದರಿಂದ ದೋಟಿಕೊಳ ಗ್ರಾಮದ 450ಹೆಕ್ಟೇರ್ ಜಮೀನಿಗೆ ನೀರಾವರಿ ಸೌಲಭ್ಯ ಸಿಗುತ್ತಿತ್ತು ಎಂದು ಹೇಳಿದರು.
ಕಳೆದ 2020ರಲ್ಲಿ ಅಕ್ಟೋಬರ್ 14ರಂದು ಸುರಿದ ಭಾರಿ ಮಳೆಗೆ ಗುಡ್ಡಗಾಡು ಪ್ರದೇಶಗಳಿಂದ ಹೆಚ್ಚಿನ ನೀರು ಹರಿದು ಬಂದಿದ್ದರಿಂದ ಮಧ್ಯರಾತ್ರಿ 12ಗಂಟೆ ಸುಮಾರಿಗೆ ಪ್ರವಾಹ ಉಂಟಾಗಿ ಕೆರೆಯ ಕೆಲವು ಭಾಗದಲ್ಲಿ ಒಡ್ಡು ಒಡೆದಿದ್ದರಿಂದ, ಗ್ರಾಮಸ್ಥರು ವೇಸ್ಟವೇರ್ ಒಡೆದು ನೀರು ಹೊರಕ್ಕೆ ಹರಿದು ಬಿಟ್ಟಿದ್ದರು. ಇಲ್ಲದಿದ್ದರೆ ದೋಟಿಕೊಳದ ಒಡ್ಡು ಸಂಪೂರ್ಣ ಒಡೆದು ಹೋಗುವ ಸಾಧ್ಯತೆ ಇತ್ತು ಎಂದು ವಿವರಿಸಿದರು.
ದೋಟಿಕೊಳ ಗ್ರಾಮದ ಕೆರೆಯಲ್ಲಿ ಬಿರುಕು ಕಾಣಿಸಿಕೊಂಡಿರುವ ಕುರಿತು ಶಾಸಕ ಡಾ| ಅವಿನಾಶ ಜಾಧವ ಪರಿಶೀಲಿಸಿದ್ದಾರೆ. ಆದರೂ ಕಳೆದ ಎರಡು ವರ್ಷಗಳಿಂದ ದುರಸ್ತಿ ಕಾರ್ಯಕ್ಕಾಗಿ ಅನುದಾನ ಮಂಜೂರಿಗೊಳಿಸಿಲ್ಲ. ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ಅಧಿಕಾರಿಗಳ ನಿರ್ಲಕ್ಷತನದಿಂದ ಕೆರೆ ದುಸ್ಥಿತಿಯಲ್ಲಿದೆ ಎಂದರು. ಮಳೆಗಾಲ ಪ್ರಾರಂಭವಾಗಿದ್ದು, ಮಳೆ ನೀರು ಹರಿದು ಬಂದರೆ ಕೆರೆ ಸೋರಿಕೆಯಾಗಿ ಒಡ್ಡು ಸಂಪೂರ್ಣ ಒಡೆದು ಹೋಗುವ ಹಂತದಲ್ಲಿದೆ. ಆದ್ದರಿಂದ ಕೂಡಲೇ ದುರಸ್ತಿ ಮಾಡಬೇಕು ಎಂದು ಒತ್ತಾಯಿಸಿದರು.
ದೊಟಿಕೊಳ ಗ್ರಾಮದ ಕೆರೆ ಒಡ್ಡು 2020ರಲ್ಲಿ ಕೆರೆ ಒಡ್ಡು ಒಡೆದಿದೆ. ಇದರ ದುರಸ್ತಿ ಕಾರ್ಯಕ್ಕೆ ಬಿಜೆಪಿ ಸರಕಾರ ಅನುದಾನ ನೀಡದೇ ನಿರ್ಲಕ್ಷÂತನ ವಹಿಸಿದೆ. ಇದು ಗ್ರಾಮಸ್ಥರ ಜೀವಕ್ಕೆ ಕಂಟಕವಾಗಿದೆ.
-ದೀಪಕನಾಗ ಪುಣ್ಯಶೆಟ್ಟಿ , ಜಿಪಂ ಮಾಜಿ ಅಧ್ಯಕ್ಷ
ದೋಟಿಕೊಳ ಗ್ರಾಮದ ಸಣ್ಣ ನೀರಾವರಿ ಕೆರೆ ದುರಸ್ತಿ ಕಾಮಗಾರಿಗೆ ಸರ್ಕಾರದಿಂದ ಇನ್ನು ಅನುದಾನ ಬಂದಿಲ್ಲ. ಆದ್ದರಿಂದ ಯಾವುದೇ ಕೆಲಸ ಕೈಗೊಂಡಿಲ್ಲ.-
ಶಿವಶರಣಪ್ಪ ಕೇಶ್ವಾರ, ಎಇಇ, ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ