ಕನಕಗಿರಿ: ಒಣ ಬೇಸಾಯ ಪ್ರದೇಶವಾದ ಕನಕಗಿರಿ ತಾಲೂಕಿಗೆ ಕೆರೆ ತುಂಬಿಸುವ ಯೋಜನೆ ರೈತರಿಗೆ ವರದಾನವಾಗಿದೆ. ಮಳೆ ಇಲ್ಲದೇ ಸತತ ಬರಗಾಲದಿಂದ ತತ್ತರಿಸಿದ್ದ ಈ ಭಾಗದ ಜನರಿಗೆ ಅಂತರ್ಜಲಮಟ್ಟ ಹೆಚ್ಚಾಗಿ ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದಾರೆ. ತಾಲೂಕಿನ ವ್ಯಾಪ್ತಿಯ ಕೆರಗಳಿಗೆ ತುಂಗಭದ್ರ ನದಿಯಿಂದ ಕೆರೆ ತುಂಬುವ ಯೋಜನೆಯಡಿ ಕೆರೆಗಳನ್ನು ತುಂಬಿಸಿದ್ದು, ಇದರಿಂದ ಅಂತರ್ಜಲಮಟ್ಟ ಹೆಚ್ಚಾಗಿದೆ.
ಮಾಜಿ ಶಾಸಕ ಶಿವರಾಜ ತಂಗಡಗಿ ಅವರ ಅವಧಿಯಲ್ಲಿ ತಾಲೂಕಿನ ಲಕ್ಷ್ಮೀ ದೇವಿ ಕೆರೆ, ದೇವಲಾಪುರ ಕೆರೆ, ಲಾಯದುಣಸಿ ಕೆರೆ, ಕೆ. ಕಾಟಪುರ ಕೆರೆ, ಬಸರಿಹಾಳ ಕೆರೆ, ಗೌರಿಪುರ ಕೆರೆ, ಮುಸಲಾಪುರ ಕೆರೆ, ವಿಠಲಾಪುರ ಕೆರೆ, ಇಂಗಳದಾಳ ಕೆರೆ ಸೇರಿದಂತೆ ಒಟ್ಟು 9 ಕೆರೆಗಳನ್ನು 141 ಕೋಟಿ ರೂ. ವೆಚ್ಚದಲ್ಲಿ ಸಣ್ಣ ನೀರಾವರಿ ಇಲಾಖೆಯಿಂದ ತುಂಬಿಸಲಾಗಿತ್ತು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಯೋಜನೆಯನ್ನು ಲೋಕಾರ್ಪಣೆ ಮಾಡಿದರು.
ಹಾಲಿ ಶಾಸಕ ಬಸವರಾಜ ದಢೇಸುಗೂರು ಎರಡನೇ ಹಂತದ ಕೆರೆ ತುಂಬುವ ಯೋಜನೆಯಲ್ಲಿ ಕೆ. ಕಾಟಪುರ ಕೆರೆಯಿಂದ ಕರಡೋಣಿ ಕೆರೆ ಮತ್ತು ಸಿರವಾರ ಕೆರೆಗೆ ಹಾಗೂ ಮುಸಲಾಪುರ ಕೆರೆಯಿಂದ ರಾಮದುರ್ಗಾ ಕೆರೆಗೆ ನೀರು ತುಂಬಿಸುವ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದ್ದಾರೆ. ಸದ್ಯ ಕಾಮಗಾರಿ ಪ್ರಗತಿಯಲ್ಲಿ ಇದೆ. ಇದರಿಂದ ತಾಲೂಕು ವ್ಯಾಪ್ತಿಯ ಕೆರೆಗಳನ್ನು ನೀರು ತುಂಬಿಸುವ ಕಾರ್ಯ ಭರದಿಂದ ಸಾಗಿದೆ. ಇದರಿಂದ ಅಂತರ್ಜಲಮಟ್ಟ ಹೆಚ್ಚಾಗಿ ರೈತರು ಉತ್ತಮ ಫಸಲು ತೆಗೆದು ಆರ್ಥಿಕವಾಗಿ ಸಬಲರಾಗುತ್ತಿದ್ದಾರೆ. ಒಟ್ಟಾರೆ ಕೆರೆ ತುಂಬಿಸುವ ಯೋಜನೆ ರೈತರಿಗೆ ವರದಾನವಾಗಿದೆ.
ಸ್ವಚ್ಛಗೊಳದ ಕೆರೆಗಳು: ಕನಕಗಿರಿ ತಾಲೂಕಿನ ವ್ಯಾಪ್ತಿಯಲ್ಲಿ ಸಣ್ಣ ನೀರಾವರಿ ಇಲಾಖೆಗೆ ಒಳಪಡುವ ಕೆರೆಗಳಲ್ಲಿ ಮುಳ್ಳು ಗಿಡಗಳು ಬೆಳೆದಿದ್ದು, ಅವುಗಳನ್ನು ತೆರವುಗೊಳಿಸಿ ಸ್ವಚ್ಛತೆ ಮಾಡುವ ಕಾರ್ಯಕ್ಕೆ ಅಧಿಕಾರಿಗಳು ಮುಂದಾಗಿಲ್ಲ. ಕರಡೋಣಿ, ಸಿರವಾರ, ರಾಮದುರ್ಗಾ ಕೆರೆಗಳಲ್ಲಿ ಹೊಳು ತುಂಬಿದ್ದು, ಮುಳ್ಳಿನ ಗಿಡಗಳು ಬೆಳದಿವೆ. ನಿರ್ವಹಣೆ ಇಲ್ಲ: ತಾಲೂಕು ವ್ಯಾಪ್ತಿಯಲ್ಲಿರುವ ಕೆರೆಗಳನ್ನು ಅಧಿಕಾರಿಗಳು ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ. ಇದರಿಂದ ರೈತರು ಕೆರೆಗಳನ್ನು ಒತ್ತುವರಿ ಮಾಡುತ್ತಿದ್ದಾರೆ. ಕೆರೆಗಳ ವಿಸ್ತೀರ್ಣ ಗುರುತು ಮಾಡಿಲ್ಲ. ಕನಕಗಿರಿ ತಾಲೂಕಿನ ವ್ಯಾಪ್ತಿಯಲ್ಲಿ 8 ಜಿನುಗು ಕೆರೆಗಳನ್ನು ನಿರ್ಮಾಣ ಮಾಡಲು ತಹಶೀಲ್ದಾರ್ ಕಚೇರಿಯಿಂದ ಭೂ ಸ್ವಾ ದೀನ ಪ್ರಕ್ರಿಯೆ ನಡೆದಿದೆ.
ಕೆರೆಗಳು: ತಾಲೂಕು ವ್ಯಾಪ್ತಿಯಲ್ಲಿ ಲಕ್ಷ್ಮೀ ದೇವಿ ಕೆರೆ, ದೇವಲಾಪುರ ಕೆರೆ, ಲಾಯದುಣಸಿ ಕೆರೆ, ಕೆ. ಕಾಟಪುರ ಕೆರೆ, ಬಸರಿಹಾಳ ಕೆರೆ, ಗೌರಿಪುರ ಕೆರೆ, ಮುಸಲಾಪುರ ಕೆರೆ, ವಿಠಲಾಪುರ ಕೆರೆ, ಇಂಗಳದಾಳ ಕೆರೆ, ಕರಡೋಣ ಕೆರೆ, ರಾಮದುರ್ಗ, ಸಿರವಾರ ಸೇರಿದಂತೆ ಒಟ್ಟು 24 ಕೆರೆಗಳು ಸಣ್ಣ ನೀರಾವರಿ ಇಲಾಖೆಗೆ ಒಳಪಡುತ್ತೇವೆ. ಜಲಮೂಲ ಮಾಯ: ತಾಲೂಕು ವ್ಯಾಪ್ತಿಯ ಕೆಲ ಕೆರೆಗಳಿಗೆ ಜಲಮೂಲಗಳಾದ ಹಳ್ಳಕೊಳ್ಳಗಳು ಮಾಯವಾಗಿವೆ. ಮಳೆಗಾಲದಲ್ಲಿ ನೀರು ಸರಿಯಾಗಿ ಕೆರೆಗಳಲ್ಲಿ ಸಂಗ್ರಹವಾಗುತ್ತಿಲ್ಲ. ಇದರಿಂದ ಕೆರೆಗಳು ಭರ್ತಿಯಾಗದೇ ಭಣಗುಟ್ಟುತ್ತಿವೆ. ಹಳ್ಳಕೊಳ್ಳಗಳನ್ನು ರೈತರು ಒತ್ತುವರಿ ಮಾಡಿದ್ದಾರೆ. ಕೆಲ ರೈತರು ಹಳ್ಳಕ್ಕೆ ಅಡಲಾಗಿ ಕೃಷಿ ಹೊಂಡಗಳನ್ನು ನಿರ್ಮಿಸಿದ್ದಾರೆ. ಸಣ್ಣ ನೀರಾವರಿ ಇಲಾಖೆಯಿಂದ ಕೂಡ ಬ್ರಿಡ್ಜ್ ಕಂ ಬ್ಯಾರೆಜ್ ನಿರ್ಮಾಣ ಮಾಡಲಾಗಿದೆ. ಇದರಿಂದ ಕೆರೆಗಳಿಗೆ ಮಳೆ ನೀರು ಸೇರುತ್ತಿಲ್ಲ. ಸಂಬಂಧಿಸಿದ ಅಧಿಕಾರಿಗಳು ಜಲಮೂಲ ಸಂರಕ್ಷಿಸಲು ಮುಂದಾಗಬೇಕಾಗಿದೆ.
ಹೊಳು ಅಕ್ರಮ ಎತ್ತುವಳಿ: ಸಮೀಪದ ಇಂಗಳದಾಳ, ಕೆ. ಕಾಟಾಪುರ, ಕೆರೆಗಳಲ್ಲಿ ಹೊಳನ್ನು ಅಕ್ರಮವಾಗಿ ಎತ್ತುತ್ತಿದ್ದಾರೆ. ಕೆರೆ ಹೊಳನ್ನು ತೆಗೆಯಬೇಕಾದರೆ ಸಣ್ಣ ನೀರಾವರಿ ಇಲಾಖೆಯ ಅನುಮತಿ ಪಡೆದು ಶುಲ್ಕವನ್ನು ಪಾವತಿಸಬೇಕೆಂಬ ನಿಯಮವಿದೆ. ಆದರೆ ಅಧಿಕಾರಿಗಳು ಕಣ್ಣು ತಪ್ಪಿಸಿ ಕೆರೆ ಹೊಳನ್ನು ಇಟ್ಟಿಗೆ ಭಟ್ಟಿಗಳಿಗೆ ಸಾಗಿಸುತ್ತಿದ್ದಾರೆ. ಈ ಬಗ್ಗೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕೆಂಬುವುದು ಸಾರ್ವಜನಿಕರು ಒತ್ತಾಯವಾಗಿದೆ.
ನಮ್ಮ ಇಲಾಖೆ ವ್ಯಾಪ್ತಿಗೆ ಬರುವ ಕೆರೆಗಳಲ್ಲಿ ಬೆಳೆದಿರುವ ಮುಳ್ಳಿನ ಗಿಡಗಳನ್ನು ತೆರವುಗೊಳಿಸಲು ಈಗಾಗಲೇ ಟೆಂಡರ್ ಆಗಿದ್ದು, ಶೀಘ್ರವೇ ಕೆಲಸ ಪ್ರಾರಂಭಿಸಲು ಗುತ್ತಿಗೆದಾರರಿಗೆ ಸೂಚಿಸಲಾಗುವುದು. –
ಕೃಷ್ಣ ಮೂರ್ತಿ, ಅಭಿಯಂತರರು, ಸಣ್ಣ ನೀರಾವರಿ ಇಲಾಖೆ
-ಶರಣಪ್ಪ ಗೋಡಿನಾಳ