ಬೆಂಗಳೂರು: ಕೆರೆಗಳು ಮತ್ತು ರಾಜಕಾಲುವೆಗಳನ್ನು ಒತ್ತುವರಿ ಮಾಡಿಕೊಂಡು ಕಟ್ಟಡಗಳನ್ನು ನಿರ್ಮಾಣ ಮಾಡಿರುವುದರಿಂದ ನಗರದ ತಾಪಮಾನ ಹೆಚ್ಚಾಗುತ್ತಿದೆ ಎಂದು ಕೇಂದ್ರ ಸಚಿವ ಅನಂತಕುಮಾರ್ ಆತಂಕ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಭಾನುವಾರ ಆಯೋಜಿಸಿದ್ದ “ಇಕೋ-ಚೇತನ’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, “ನಾಡಪ್ರಭು ಕೆಂಪೇಗೌಡರು ಬೆಂಗಳೂರಿನ ಸುತ್ತ ನಿರ್ಮಿಸಿದ ಸಾವಿರರು ಕೆರೆಗಳು ಹಾಗೂ ಅದಕ್ಕೆ ಪೂರವಾಗಿ ಕಟ್ಟಿದ ರಾಜಕಾಲುವೆಗಳನ್ನು ಕಬಳಿಸಿ ಕಟ್ಟಡಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಇದರಿಂದ ಕೆರೆಗಳು ನಾಶವಾಗಿದ್ದು, ನಗರದ ಪ್ರಕೃತಿ ಹಾಳಾಗಿ ತಾಪಮಾನದಲ್ಲಿ ಬದಲಾವಣೆಯಾಗಿದೆ,” ಎಂದರು.
“ನಗರದಲ್ಲಿ 48 ಲಕ್ಷಕ್ಕೂ ಹೆಚ್ಚು ವಾಹನಗಳಿದ್ದು, ಇದರಿಂದ ಸುಮಾರು 5 ಸಾವಿರ ಮೆಟ್ರಿಕ್ ಟನ್‌ನಷ್ಟು ವಾಯು ಮಾಲಿನ್ಯ ಉಂಟಾಗುತ್ತಿದೆ. ನಾಗರಿಕರು 500 ಗ್ರಾಮ್‌ನಷ್ಟು ಕಾರ್ಬನ್ ಡೈಯಾಕ್ಸೆ„ಡ್‌ನ ವಿಷಯುಕ್ತ ಗಾಳಿಯನ್ನು ಉಸಿರಾಡುವಂತಾಗಿದೆ,” ಎಂದು ಬೇಸರ ವ್ಯಕ್ತಪಡಿಸಿದರು.
“ಪರಿಸರವನ್ನು ಸಂರಕ್ಷಿಸುವ ನಿಟ್ಟಿನಲ್ಲಿ “ಇಕೋ ಚೇತನ’ ಅಭಿಯಾನವನ್ನು ಅದಮ್ಯ ಚೇತನ ಸಂಸ್ಥೆಯಿಂದ ಆರಂಭಿಸಲಾಗಿದೆ. ನಗರದ ಎಲ್ಲ ಪ್ರದೇಶಗಳಲ್ಲಿ ಅಭಿಯಾನ ನಡೆಯಲಿದೆ. ಆ ಮೂಲಕ ಇದನ್ನು ರಾಷ್ಟ್ರೀಯ ಆಂದೋಲನವಾಗಿಸುವ ನಿಟ್ಟಿನಲ್ಲಿ ನಗರದ ಪ್ರತಿಯೊಬ್ಬ ನಾಗರಿಕರು ಪ್ರಯತ್ನಿಸಬೇಕು. ಅದಮ್ಯ ಚೇತನ ಸಂಸ್ಥೆಯ ವತಿಯಿಂದ ಈವರೆಗೆ 1 ಲಕ್ಷ ಸಸಿಗಳನ್ನು ವಿತರಿಸಿದ್ದು, 40 ಸಾವಿರ ಗಿಡಗಳನ್ನು ನೆಡಲಾಗಿದೆ,” ಎಂದು ತಿಳಿಸಿದರು.
“ನಗರದ ಎಲ್ಲ ಕಟ್ಟಡಗಳಲ್ಲಿಯೂ ಮಳೆ ನೀರು ಕೊಯ್ಲು ಪದ್ಧತಿಯನ್ನು ಅಳವಡಿಸಿಕೊಳ್ಳಬೇಕಿದ್ದು, ಮಳೆ ನೀರನ್ನು ಸಂಗ್ರಹಿಸಿದಾಗ ಮಾತ್ರ ಅಂತರ್ಜಲ ಉಳಿಯಲು ಸಾಧ್ಯ. ಮಳೆ ನೀರು ಸಂಗ್ರಹ ಮಾಡುವುದರಿಂದ ಮನೆಯ ಸುತ್ತಮುತ್ತಲಿನ ವಾತಾವರಣವೂ ತಂಪಾಗಿರುತ್ತದೆ. ಜತೆಗೆ ನಾವು ಸೇವಿಸುವ ಆಹಾರದಲ್ಲಿಯೂ ಬದಲಾವಣೆಗಳನ್ನು ಮಾಡಿಕೊಳ್ಳುವ ಅನಿವಾರ್ಯತೆ ಎದುರಾಗಿದ್ದು, ನಾವೆಲ್ಲ ಜೈವಿಕ ಪದಾರ್ಥಗಳನ್ನು ಉಪಯೋಗಿಸಲು ಮುಂದಾಗಬೇಕಿದೆ,” ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಅದಮ್ಯ ಚೇತನ ಸಂಸ್ಥೆಯ ಅಧ್ಯಕ್ಷೆ ಡಾ.ತೇಜಸ್ವಿನಿ ಅನಂತಕುಮಾರ್, ಶಾಸಕ ಸತೀಶ್ ರೆಡ್ಡಿ, ವಿಧಾನ ಪರಿಷತ್ ಸದಸ್ಯೆ ತಾರಾ ಅನುರಾಧ, ಪಾಲಿಕೆ ಸದಸ್ಯರಾದ ಗುರುಮೂರ್ತಿ ರೆಡ್ಡಿ, ಮೋಹನ್‌ರಾಜು, ಸರಸ್ವತಮ್ಮ, ಪರಿಸರವಾದಿ ಯಲ್ಲಪ್ಪ ರೆಡ್ಡಿ, ಡಿಆರ್‌ಡಿಓ ಮಾಜಿ ಮುಖ್ಯಸ್ಥ ಡಾ.ನಾಯಕ್ ಸೇರಿದಂತೆ ಪ್ರಮುಖರು ಇದ್ದರು.