Advertisement

ಅಭಿವೃದ್ಧಿ ಹೆಸರಲ್ಲಿ ಕೆರೆ ಏರಿಗೆ ಕುತ್ತು!

10:51 AM Mar 13, 2020 | Suhan S |

ಬೆಂಗಳೂರು: ಬೆನ್ನಿಗಾನಹಳ್ಳಿಯ ಕೆರೆಯನ್ನು ಎರಡು ವರ್ಷಗಳ ಹಿಂದೆಯಷ್ಟೇ ಅಂದಾಜು 3 ಕೋಟಿ ರೂ. ವೆಚ್ಚದಲ್ಲಿ ಪಾಲಿಕೆ ಅಭಿವೃದ್ಧಿ ಮಾಡಿತ್ತು. ಸದ್ಯ ಬಿಎಂ ಆರ್‌ಸಿಎಲ್‌ ಮೆಟ್ರೋ “ಅಭಿವೃದ್ಧಿ’ ಕಾಮಗಾರಿ ಹೆಸರಿ ನಲ್ಲಿ ಕೆರೆಯ ಜಾಗಕ್ಕೆ ಕತ್ತರಿ ಬೀಳುವ ಮುನ್ಸೂಚನೆ ಸಿಕ್ಕಿದೆ!

Advertisement

ಸಿಲ್ಕ್ಬೋರ್ಡ್‌- ಕೆ.ಆರ್‌.ಪುರ ಮಾರ್ಗದಲ್ಲಿ ಮೆಟ್ರೋ ಎರಡನೇ ಹಂತದ ಕಾಮಗಾರಿ ಈಗಾಗಲೇ ಪ್ರಾರಂಭವಾಗಿದೆ. ಮಾರ್ಗ ಮಧ್ಯದಲ್ಲಿರುವ ಬೆನ್ನಿಗಾನಹಳ್ಳಿ ಕೆರೆಯ ಒಂದು ಭಾಗದ ಏರಿಯನ್ನು ಬಿಟ್ಟುಕೊಡುವಂತೆ ಮೆಟ್ರೋ ಸಂಸ್ಥೆಯ ಅಧಿಕಾರಿಗಳು ಬಿಬಿಎಂಪಿ ಕೆರೆ ವಿಭಾಗದ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಹೀಗಾಗಿ, ಕೆರೆ ಅಧಿಕೃತವಾಗಿಯೇ ಒತ್ತುವರಿಯಾಗಲಿದೆ.

ಮೆಟ್ರೋಗೆ ಕೆರೆಯ ಏರಿಭಾಗವನ್ನು ಬಿಟ್ಟುಕೊಟ್ಟರೆ, ಕೆರೆಯ ಅಭಿವೃದ್ಧಿಗೆ ವೆಚ್ಚ ಮಾಡಿದ ಶೇ.50ರಷ್ಟು ಹಣ ನೀರು ಪಾಲಾಗಲಿದೆ. ಅಷ್ಟೇ ಅಲ್ಲ, ಈ ರೀತಿ ಅಭಿವೃದ್ಧಿ ಆಗಿರುವ ಪ್ರದೇಶದಲ್ಲೇ ಮತ್ತೂಂದು ಇಲಾಖೆ ಅಭಿವೃದ್ಧಿ ಯೋಜನೆ ರೂಪಿಸಿಕೊಳ್ಳುತ್ತಿರುವುದು ಗಮನಿಸಿದರೆ, ಇಲಾಖೆಗಳ ಮಧ್ಯೆ ಇರುವ ಸಮನ್ವಯ ಕೊರತೆಯೂ ಎದ್ದುಕಾಣುತ್ತಿದೆ. ಬೆನ್ನಿಗಾನಹಳ್ಳಿ ಕೆರೆ 18 ಎಕರೆ 25 ಗುಂಟೆ ವಿಸ್ತೀರ್ಣವಿದ್ದು, ಕೆರೆಯ ರಚನೆ ಭಿನ್ನವಾಗಿದೆ. ಕೆರೆ ಎರಡು ಭಾಗವಾಗಿ ವಿಭಜನೆಯಾಗಿದ್ದು, ಕೆರೆಯ ಒಂದು ಪಾರ್ಶ್ವದಲ್ಲಿ ರೈಲ್ವೆ ಹಳಿಗಳು, ಮತ್ತೂಂದು ಪಾರ್ಶ್ವದಲ್ಲಿ ಕೆರೆಯ ಮೇಲೆ ಮೇಲ್ಸೇತುವೆ ಹಾದುಹೋಗಿದೆ. ಸದ್ಯ ಮೆಟ್ರೋ ಅಧಿಕಾರಿಗಳು ಕೆರೆಯ ಏರಿಯ ಒಂದು ಭಾಗವನ್ನು ನೀಡುವಂತೆ ಮನವಿ ಮಾಡಿದ್ದಾರೆ.

ಕೆರೆ ಪಕ್ಕವೇ ಮೆಟ್ರೋ ನಿಲ್ದಾಣ?: ಮೆಟ್ರೋ ಎರಡನೇ ಹಂತದ ಕಾಮಗಾರಿಗಾಗಿ ಹೊರವಲಯದ ರಸ್ತೆಯಿಂದ ಟಿನ್‌ಫ್ಯಾಕ್ಟರಿ ಮಾರ್ಗ ಸಂರ್ಪಕಿಸುವ ಮೇಲ್ಸೇತುವೆಯ ರಸ್ತೆಯನ್ನು ಮುಚ್ಚಿ ಅಲ್ಲಿ ಮೆಟ್ರೋ ನಿಲ್ದಾಣ ನಿರ್ಮಾಣ ಮಾಡುವ ಹಾಗೂ ಕೆರೆಯ ಏರಿ ಭಾಗವನ್ನು ರಸ್ತೆಯಾಗಿ ಬದಲಾಯಿಸುವ ಪ್ರಸ್ತಾವನೆ ಯನ್ನು ಬಿಎಂಆರ್‌ಸಿಎಲ್‌ ಪಾಲಿಕೆಯ ಮುಂದಿಟ್ಟಿದೆ. ಬೆನ್ನಿಗಾನಹಳ್ಳಿ ಕೆರೆಯ ಮೇಲೆ ಈಗಾಗಲೇ ಮೇಲ್ಸೇತುವೆ, ರೈಲು ಮಾರ್ಗಗಳು ಹಾದು ಹೋಗಿದ್ದು, ಪರೋಕ್ಷವಾಗಿ ಕೆರೆಯ ಭಾಗವನ್ನು ಆವರಿಸಿಕೊಂಡಿವೆ. ಈಗ ಮೆಟ್ರೋ ಕಾಮಗಾರಿಗಾಗಿ ಕೆರೆಯ ಜಾಗವನ್ನು ನೀಡಿದರೆ, ಕೆರೆಯ ವಿಸ್ತೀರ್ಣ ಮತ್ತಷ್ಟು ಕಡಿಮೆಯಾಗಲಿದೆ. ಇಲ್ಲಿವರೆಗೆ ಕೆರೆ ಅಭಿವೃದ್ಧಿಗೆ ಬಿಬಿಎಂಪಿ ವ್ಯಯಮಾಡಿದ ಹಣ ಪೋಲಾದಂತಾಗುತ್ತದೆ.

ಕೆರೆಗೆ ಕೊಳಚೆ ನೀರು ಸೇರ್ಪಡೆ: ಪಾಲಿಕೆ ಕೆರೆಯ ಒಂದು ಭಾಗವನ್ನು ಮಾತ್ರ ಸ್ವತ್ಛ ಮಾಡಿದ್ದು, ರೈಲ್ವೆ ಹಳಿ ಹಾದು ಹೋಗಿರುವ ಭಾಗವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದೆ.  ಹೀಗಾಗಿ, ಈ ಭಾಗದ ಸುತ್ತಮುತ್ತಲಿನ ಮನೆಗಳ ಕೊಳಚೆ ನೀರು ಕೆರೆಯನ್ನು ಸೇರುತ್ತಿದೆ.

Advertisement

ಅಭಿವೃದ್ಧಿ ನೆಪದಲ್ಲಿಸಸಿಗಳನ್ನು ಕಡಿದರು! :  ಕೆರೆ ಅಭಿವೃದ್ಧಿ ಹೆಸರಿನಲ್ಲಿ ನೆಡಲಾಗಿದ್ದ ಸಸಿಗಳನ್ನು ಕಡಿದಿರುವ ಪಾಲಿಕೆ, ನಂತರ ಸಸಿನೆಟ್ಟು ಪೋಷಣೆ ಮಾಡಿಲ್ಲ ಎಂದು ಸ್ಥಳೀಯ ನಿವಾಸಿ ಚಂದ್ರಶೇಖರ್‌ ದೂರಿದರು. ಕೆರೆಯ ಸುತ್ತಮುತ್ತಲಿನ ಪ್ರದೇಶದ ವಾತಾವರಣ ಈ ಹಿಂದೆಗಿಂತ ಸುಧಾರಿಸಿದೆ ನಿಜ. ಆದರೆ, ಅಭಿವೃದ್ಧಿ ಹೆಸರಲ್ಲಿ ಸಸಿಗಳನ್ನು ಕಡಿಯಲಾಗಿದೆ. ಪಾದಚಾರಿ ಮಾರ್ಗ ಮತ್ತು ಕುಳಿತುಕೊಳ್ಳಲು ಕುರ್ಚಿ ವ್ಯವಸ್ಥೆ ಇಲ್ಲ. ಕೆರೆ ರಕ್ಷಣೆ ದೃಷ್ಟಿಯಿಂದ ರಕ್ಷಣಾ ಸಿಬ್ಬಂದಿ ನೇಮಕ ಮಾಡಬೇಕು ಎಂದು ಅವರು ಒತ್ತಾಯಿಸಿದರು.

ಬೆನ್ನಿಗಾನಹಳ್ಳಿ ಕೆರೆ ಏರಿಭಾಗವನ್ನು ಬಿಟ್ಟುಕೊಡುವಂತೆ ಬಿಎಂಆರ್‌ ಸಿಎಲ್‌ ಪ್ರಸ್ತಾವನೆ ನೀಡಿದೆ. ಆದರೆ, ಈ ನಿಟ್ಟಿನಲ್ಲಿ ಅಂತಿಮ ತೀರ್ಮಾನ ತೆಗೆದು ಕೊಂಡಿಲ್ಲ. ಇನ್ನು ಕೆರೆಯ ರಕ್ಷಣಾ ಕ್ರಮ ಶೀಘ್ರವಾಗಿ ತೆಗೆದುಕೊಳ್ಳಲಾಗುವುದು. –ಬಿ.ಟಿ. ಮೋಹನ್‌ ಕೃಷ್ಣ, ಕೆರೆ ವಿಭಾಗದ ಮುಖ್ಯ ಎಂಜಿನಿಯರ್

ನಿರ್ವಹಣೆ ಲೋಪಗಳು :

  • ಕೆರೆಯಲ್ಲಿ ನೀರು ತುಂಬಿದರೆ ಸರಾಗವಾಗಿ ನೀರು ಹೊರಕ್ಕೆ ಹೋಗಲು ಸೂಕ್ತ ಕೋಡಿ ವ್ಯವಸ್ಥೆಯೇ ಇಲ್ಲ
  • ಇಡೀ ಕೆರೆಯ ಯಾವ ಭಾಗದಲ್ಲೂ ಬೇಲಿ ನಿರ್ಮಿಸಿಲ್ಲ
  • ಕೆರೆಯ ಅಂಗಳದಲ್ಲಿ ಬಿಬಿಎಂಪಿ ಪಾದಚಾರಿ ಮಾರ್ಗ ನಿರ್ಮಾಣ ಮಾಡಿಲ್ಲ
  • ಕೆರೆಗೆ ಸೇರುವ ಒಳಚರಂಡಿ ನೀರು ತಡೆಯವಲ್ಲಿ ಮತ್ತಷ್ಟು ಕ್ರಮಗಳು ಅಗತ್ಯ
  • ಕೆರೆಯ ಸುತ್ತಮುತ್ತಲಿನ ಪ್ರದೇಶದಲ್ಲಿ ಸಸಿನೆಟ್ಟು ಪೋಷಿಸುವಲ್ಲಿ ಪಾಲಿಕೆ ವಿಫ‌ಲ

ಯಾವುದಕ್ಕೆ ಎಷ್ಟು ಖರ್ಚು :

  • ಹಳೆ ಮದ್ರಾಸ್‌ ರಸ್ತೆಯ ಸರ್ವೆ ನಂ.47ನಲ್ಲಿರುವ ಬೆನ್ನಿಗಾನಹಳ್ಳಿ ಕೆರೆ
  • ಬೆನ್ನಿಗಾನಹಳ್ಳಿ ಕೆರೆಯ ಒಟ್ಟು ವಿಸ್ತೀರ್ಣ18 ಎಕರೆ 25 ಗುಂಟೆ
  • 2 ವರ್ಷದ ಹಿಂದೆ ಕೆರೆ ಅಭಿವೃದ್ಧಿಗೆ 3 ಕೋಟಿ ರೂ. ಅನುದಾನ
  • ಇದರಲ್ಲಿ ಕೆರೆಯಂಗಳ ಅಭಿವೃದ್ಧಿಗೆ 1.60 ಕೋಟಿ ರೂ., ಏರಿ ಅಭಿವೃದ್ಧಿಗೆ 27.49 ಲಕ್ಷ ರೂ. ಹಾಗೂ ಕೆರೆಯ ದಂಡೆ ಬಲವರ್ಧನೆಗೆ 56 ಲಕ್ಷ ರೂ. ನಿಗದಿ.

 

-ಹಿತೇಶ್‌ ವೈ

Advertisement

Udayavani is now on Telegram. Click here to join our channel and stay updated with the latest news.

Next