ಕೊಪ್ಪಳ: ಗವಿಸಿದ್ದೇಶ್ವರ ಮಹಾಸ್ವಾಮಿಗಳ ಸಂಕಲ್ಪದಂತೆ ತಾಲೂಕಿನ ಗಿಣಗೇರಿ ಕೆರೆ ಹೂಳೆತ್ತುವ ಕಾರ್ಯಕ್ಕೆ ನೆರವಿನ ಮಹಾಪೂರವೇ ಹರಿದು ಬರುತ್ತಿದೆ. ಜನರು ತನು, ಮನ, ಧನ ಸಮರ್ಪಣೆ ಮಾಡಿ ಸಾಮಾಜಿಕ ಕಾರ್ಯಕ್ಕೆ ಸೇವೆ ಸಲ್ಲಿಸುತ್ತಿದ್ದಾರೆ. ಸರ್ಕಾರಿ ನೌಕರರೂ ಒಂದು ತಿಂಗಳ ವೇತನ ನೀಡಿ ಇತರರಿಗೆ ಮಾದರಿಯಾಗಿದ್ದಾರೆ.
ಜಿಲ್ಲೆಯಲ್ಲಿ ಕಳೆದ ವರ್ಷದಿಂದ ಕೆರೆ ಸಂರಕ್ಷಣೆ ಕಾಯಕ ಆರಂಭವಾಗಿದೆ. ಬರದ ಭೀಕರತೆಯಿಂದ ಬೆಚ್ಚಿದ ಜಿಲ್ಲೆಯಲ್ಲಿ ಪ್ರತಿ ಬಾರಿಯೂ ಬೇಸಿಗೆ ಸಂದರ್ಭದಲ್ಲಿ ನೀರಿಗಾಗಿ ಹಾಹಾಕಾರ ಉಂಟಾಗುತ್ತಿದೆ. ಜೀವ ಜಲದ ರಕ್ಷಣೆ ನಡೆದರೆ ಮಾತ್ರ ಮುಂದಿನ ಪೀಳಿಗೆಯು ನೆಮ್ಮದಿಯಿಂದ ಬದುಕಲಿದೆ ಎಂಬುದನ್ನು ಅರಿತ ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಸ್ವಾಮೀಜಿ ಹಿರೇಹಳ್ಳ, ನಿಡಶೇಷಿ ಕೆರೆ ಸೇರಿ ಇತರೆ ಕೆರೆಗಳ ಹೂಳೆತ್ತುವ ಕಾರ್ಯ ಕೈಗೊಂಡು ಜನರ ಗಮನ ಸೆಳೆದಿದ್ದಾರೆ.
ಪ್ರಸಕ್ತ ವರ್ಷ ಕೋವಿಡ್ ಉಲ್ಬಣಿಸಿದ ಹಿನ್ನೆಲೆಯಲ್ಲಿ ಜಾತ್ರೆಯನ್ನು ಸರಳವಾಗಿ ಆಚರಿಸಿ ಸಾಮಾಜಿಕ ಕಾರ್ಯಕ್ಕೆಮುಂದಾಗಿ ಗಿಣಗೇರಿ ಕೆರೆ ಹೂಳೆತ್ತುವ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ. ಈಗಾಗಲೇ ಕೆರೆ ಹೂಳೆತ್ತುವ ಕಾರ್ಯ ಭರದಿಂದ ಸಾಗಿದ್ದು, ಸುತ್ತಲಿನ ಹತ್ತಾರು ಹಳ್ಳಿಗಳ ಜನರು, ರಾಜಕಾರಣಿಗಳು, ಉದ್ಯಮಿಗಳು, ಕಲಾವಿದರು, ಶಿಕ್ಷಕರು, ಸರ್ಕಾರಿ ನೌಕರರು, ಗುತ್ತಿಗೆದಾರು, ಕಾರ್ಮಿಕರು ಸೇರಿದಂತೆ ಗ್ರಾಮಸ್ಥರು ಸೇವೆಗೆ ಮುಂದಾಗುತ್ತಿರುವುದು ನಿಜಕ್ಕೂ ಗಮನಾರ್ಹ ಸಂಗತಿ.
ಹೂಳೆತ್ತುವ ಕಾರ್ಯಕ್ಕೆ 48 ಲಕ್ಷ ರೂ.: 300 ಎಕರೆ ಪ್ರದೇಶದ ಗಿಣಗೇರಿ ಕೆರೆ ಹೂಳೆತ್ತುವ ಕಾರ್ಯಕ್ಕೆ ಫೆ. 21ರಂದು ಚಾಲನೆ ದೊರೆತಿದ್ದು, ಕೇವಲ ಮೂರೇ ದಿನಗಳಲ್ಲಿ ಹೂಳೆತ್ತುವ ಕಾರ್ಯಕ್ಕೆ 48 ಲಕ್ಷ ರೂ. ದೇಣಿಗೆ ದೊರೆಯುವ ಭರವಸೆ ಸಿಕ್ಕಿದೆ. ವಿವಿಧ ಸಂಘ-ಸಂಸ್ಥೆಗಳ ಪ್ರತಿನಿ ಧಿಗಳು ಕೆರೆ ಹೂಳೆತ್ತುವ ಸ್ಥಳಕ್ಕೆ ತೆರಳಿ ಚೆಕ್, ನಗದು ಕೊಟ್ಟು ತಮ್ಮ ಸೇವೆ ಅರ್ಪಿಸುತ್ತಿದ್ದಾರೆ. ದೇಣಿಗೆಯನ್ನು ಗಿಣಗೇರಿ ಗ್ರಾಮ ಕೆರೆ ಅಭಿವೃದ್ಧಿ ಟ್ರಸ್ಟ್ ಅಡಿ ಸ್ವೀಕಾರ ಮಾಡುತ್ತಿದ್ದು, ಪ್ರತಿ ಪೈಸೆಯ ಲೆಕ್ಕಾಚಾರವನ್ನು ಅದರಲ್ಲಿ ಬರೆಯಲಾಗುತ್ತಿದೆ. ಯಾವುದೇ ವ್ಯಕ್ತಿಯು ದೇಣಿಗೆ ಕೊಟ್ಟ ಒಂದು ಪೈಸೆಯೂ ವ್ಯತ್ಯಾಸವಾಗದಂತೆ ಸಮಿತಿ ಸದಸ್ಯರು ನಿಗಾ ವಹಿಸಿದ್ದಾರೆ.
ನೌಕರರು, ವಿಕಲಚೇತನ, ಕಾರ್ಮಿಕರಿಂದ ದೇಣಿಗೆ: ಕೆರೆ ಹೂಳೆತ್ತುವ ಕಾರ್ಯಕ್ಕೆ ಎಲ್ಲ ವರ್ಗದ ಜನರು ಕೈ ಜೋಡಿಸುತ್ತಿದ್ದಾರೆ. ಗಿಣಗೇರಿಯ ಗ್ರಾಮ ಲೆಕ್ಕಾ ಧಿಕಾರಿ ಆಸೀಫ್ ಅಲಿ ಒಂದು ತಿಂಗಳ ವೇತನ ಕೊಡುವ ಭರವಸೆ ನೀಡಿದ್ದರೆ, ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆಯ ಸಿಪಿಐ ವಿಶ್ವನಾಥ ಹಿರೇಗೌಡ್ರ ಅವರು ತಂದೆಯ ಹೆಸರಲ್ಲಿ ಕೆರೆಯ ಹೂಳೆತ್ತುವ ಕಾರ್ಯಕ್ಕೆ ನೆರವಿನ ಭರವಸೆ ನೀಡಿದ್ದಾರೆ. ಇದಲ್ಲದೇ ಗಿಣಗೇರಿಯ ಕಾರ್ಮಿಕ ಮಹಿಳೆ ಈರಮ್ಮ ಸಹ ದೇಣಿಗೆ ಅರ್ಪಿಸಿದ್ದಾರೆ. ಜೊತೆಗೆ ಶಿಕ್ಷಕ ಪ್ರಾಣೇಶ ಪೂಜಾರ ಅವರ ಶಿಕ್ಷಕ ಬಳಗವೂ ನೆರವಿನ ಭರವಸೆ ನೀಡಿದೆ. ಇದಲ್ಲದೇ ಹೂಳೆತ್ತುವ ಕಾರ್ಯದ ದಿನದಂದೇ ಬಿಜಕಲ್ ಮಠದ ಶಿವಲಿಂಗ ಶ್ರೀಗಳು 1 ಲಕ್ಷ ರೂ. ದೇಣಿಗೆ ಅರ್ಪಿಸಿದ್ದಾರೆ. ಕೆರೆ ಹೂಳೆತ್ತುವ ಕಾರ್ಯಕ್ಕೆ ತಮ್ಮ ಹೆಸರು ಬೇಡ ನನ್ನದೊಂದು ಭಕ್ತಿಯ ಸೇವೆ ಎಂದು ಧನ ಸಹಾಯ ಅರ್ಪಿಸಿ ಹೂಳೆತ್ತುವ ಕಾರ್ಯಕ್ಕೆ ಜನರು ಸಾಕ್ಷಿಯಾಗುತ್ತಿದ್ದಾರೆ.
ದತ್ತು ಕಮ್ಮಾರ