Advertisement

ಕೆರೆ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿ

04:53 PM Mar 23, 2022 | Team Udayavani |

ತುಮಕೂರು: ಜಿಲ್ಲೆಯಲ್ಲಿರುವ ಕೆರೆಗಳನ್ನು ಮಲಿನ ಗೊಳಿಸದೆ ಸಂರಕ್ಷಿಸುವುದು ನಮ್ಮೆಲ್ಲರ ಜವಾಬ್ದಾರಿ ಎಂದು ಹಿರಿಯ ಸಿವಿಲ್‌ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯ ದರ್ಶಿ ರಾಘವೇಂದ್ರ ಶೆಟ್ಟಿಗಾರ್‌ ಅಭಿಪ್ರಾಯಪಟ್ಟರು.

Advertisement

ಜಿಲ್ಲಾಡಳಿತ, ಜಿಪಂ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಾನಗರ ಪಾಲಿಕೆ ಹಾಗೂ ಜಿಲ್ಲಾ ವಕೀಲರ ಸಂಘದ ಆಶ್ರಯದಲ್ಲಿ ವಿಶ್ವ ಜಲ ದಿನಾಚರಣೆ ಪ್ರಯುಕ್ತ ಮಂಗಳವಾರ ನಗರದ ಮರಳೂರು ಕೆರೆ ದಂಡೆಯಲ್ಲಿ ಏರ್ಪಡಿಸಿದ್ದ ಕೆರೆ ಸ್ವಚ್ಛತಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ವಿಶ್ವಸಂಸ್ಥೆಯ ಆಶಯದಂತೆ ನೀರಿನ ಮಹತ್ವ ಮತ್ತು ಜಲ ಸಂರಕ್ಷಣೆ ಕುರಿತು ಜನರಲ್ಲಿ ಅರಿವು ಮೂಡಿಸುವ ಸಲುವಾಗಿ ಈ ಸ್ವಚ್ಛತಾ ಕಾರ್ಯವನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಅರಿವು ಮೂಡಿಸುವುದು: ಇತ್ತೀಚಿನ ದಿನಗಳಲ್ಲಿ ಅಂತರ್ಜಲ ಬತ್ತಿ ಹೋಗುತ್ತಿದ್ದು, ಕೆರೆಗಳಲ್ಲಿ ನೀರು ಭರ್ತಿಯಾಗುತ್ತಿಲ್ಲ. ಗಿಡ-ಮರಗಳನ್ನು ಕಡಿಯುತ್ತಿರು ವುದರಿಂದ ಉತ್ತಮ ಮಳೆ ಬಾರದಾಗಿದೆ. ಈ ನಿಟ್ಟಿನಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ತೆಗೆದು ಕೊಳ್ಳಬೇಕಾದ ಮುನ್ನೆಚ್ಚರಿಕಾ ಕಾರ್ಯಕ್ರಮಗಳ ಬಗ್ಗೆ ಅರಿವು ಮೂಡಿಸುವುದು ಈ ಕಾರ್ಯಕ್ರಮದ ಉದ್ದೇಶ ವಾಗಿದೆ. ಕಳೆದ ವರ್ಷವೂ ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ಹಮ್ಮಿಕೊಂಡಿದ್ದರಿಂದ ಕೆರೆ ದಂಡೆ ಸ್ವಚ್ಛವಾಗಿ ಕಾಣುತ್ತಿದೆ ಎಂದರು.

ಕಸ ಸುರಿಯುವುದು ತಪ್ಪಿದೆ: ಪಾಲಿಕೆ ಸದಸ್ಯ ಧರಣೇಂದ್ರ ಕುಮಾರ್‌ ಮಾತನಾಡಿ, ಕಳೆದ ಒಂದು ವರ್ಷದ ಹಿಂದೆ ಮರಳೂರು ಕೆರೆ ದಂಡೆಯಲ್ಲಿ ಕಸದ ರಾಶಿಯೇ ತುಂಬಿಕೊಂಡಿತ್ತು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಪಾಲಿಕೆ ವತಿಯಿಂದ ಕ್ರಮ ಕೈಗೊಂಡ ಹಿನ್ನೆಲೆಯಲ್ಲಿ ಕಸ ಸುರಿಯುವುದು ತಪ್ಪಿದೆ ಎಂದರು.

1.5 ಕೋಟಿ ರೂ.ಟೆಂಡರ್: ವಿದ್ಯಾರ್ಥಿಗಳ ಮುಂದಾಳತ್ವದಲ್ಲಿ ಮೂರು ತಿಂಗಳಿಗೊಮ್ಮೆ ಈ ಕೆರೆ ದಂಡೆಯಲ್ಲಿ ಸ್ವಚ್ಛತಾ ಕಾರ್ಯ ಕೈಗೊಂಡಿದ್ದರಿಂದ ಜನ ಎಚ್ಚೆತ್ತು, ಕಸ ಸುರಿಯುವುದು ಬಿಟ್ಟಿದ್ದಾರೆ. ಸಣ್ಣ ನೀರಾವರಿ ಇಲಾಖೆ ಯಿಂದ ಕೆರೆ ಸ್ವಚ‍್ಛಗೊಳಿಸಲು 1.5 ಕೋಟಿ ರೂ.ಗಳ ಟೆಂಡರ್‌ ಕರೆಯಲಾಗಿದ್ದು, ಶೀಘ್ರದಲ್ಲೇ ಸ್ವಚ್ಛತಾ ಕಾರ್ಯ ಕೈಗೆತ್ತಿಕೊಳ್ಳಲಿದ್ದಾರೆ ಎಂದು ತಿಳಿಸಿದರು.

Advertisement

ನಗರದ ಶೇ.25ರಷ್ಟು ಪ್ರದೇಶಗಳಿಗೆ ನೀರು: ಸ್ವಚ್ಛತೆ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯವನ್ನು ಆಗಿಂದಾಗ್ಗೆ ಹಮ್ಮಿಕೊಳ್ಳುವುದರಿಂದ ನೈರ್ಮಲ್ಯತೆ ಕಾಪಾಡಲು ಸಾಧ್ಯವಾಗುತ್ತದೆ. ಈ ಬಾರಿ ಉತ್ತಮ ಮಳೆಯಾಗಿರುವುದರಿಂದ ಕೆರೆ ತುಂಬಿ ಸುತ್ತಮುತ್ತಲಿನ ರೈತರಿಗೆ ಅನುಕೂಲವಾಗಿದೆ. ನಗರ ನೀರು ಸರಬ ರಾಜು ಮಂಡಳಿಗೆ ಸ್ಥಳಾವಕಾಶ ಹಾಗೂ ಮತ್ತಿತರ ಸೌಕರ್ಯ ಕಲ್ಪಿಸಿದಲ್ಲಿ ಮರಳೂರು ಕೆರೆಯಿಂದ ನಗರದ ಶೇ.25ರಷ್ಟು ಪ್ರದೇಶಗಳಿಗೆ ನೀರು ಸರಬರಾಜು ಮಾಡಲು ಅನುಕೂಲವಾಗುತ್ತದೆ. ಸ್ಮಾರ್ಟ್‌ ಸಿಟಿ ಮತ್ತು ಪಾಲಿಕೆಯಿಂದ ಕೆರೆಯ ಸುತ್ತ ಫೆನ್ಸಿಂಗ್‌ ಹಾಗೂ ಲೈಟಿಂಗ್‌ ವ್ಯವಸ್ಥೆ ಮಾಡಿದರೆ ಕೆರೆ ನೀರು ಕಲುಷಿತ ವಾಗದಂತೆ ತಡೆಯಬಹುದೆಂದು ತಿಳಿಸಿದರು.

ವಕೀಲರ ಸಂಘದ ಅಧ್ಯಕ್ಷ ಗೋಪಾಲಗೌಡ ಮಾತನಾಡಿ, ನೀರು ತುಂಬಿ ಹಸಿರಿನಿಂದ ಕಂಗೊಳಿಸುತ್ತಿದ್ದ ಮರಳೂರು ಕೆರೆ ಸಂರಕ್ಷಣೆಯಿಲ್ಲದೆ ಅನೈರ್ಮಲ್ಯದಿಂದ ಕೂಡಿತ್ತು. ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಪಾಲಿಕೆಯ ಸಹಕಾರದಲ್ಲಿ ಸ್ವಚ್ಛತಾ ಕಾಮಗಾರಿ ಕೈಗೊಂಡಿದ್ದರಿಂದ ಮತ್ತೂಮ್ಮೆ ಕೆರೆಗೆ ಮರುಜೀವ ಬಂದಂತಾಗಿದೆ ಎಂದರು. ಪಾಲಿಕೆಯ ಕದರಣ್ಣ ಮುಂದಾಳತ್ವದಲ್ಲಿ ಪೌರಕಾರ್ಮಿಕರು, ಎನ್‌ಸಿಸಿ ಕೆಡೆಟ್‌ ವಿದ್ಯಾರ್ಥಿಗಳು ಸ್ವಚ್ಛತಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಮಹಾನಗರ ಪಾಲಿಕೆ ಆಯುಕ್ತೆ ರೇಣುಕಾ, ವಕೀಲರ ಸಂಘದ ಪ್ರಧಾನ ಕಾಯದರ್ಶಿ ಡಿ.ಸಿ.ಹಿಮಾನಂದ್‌, ಪಾಲಿಕೆ ವೈದ್ಯಾಧಿಕಾರಿ ಡಾ.ರಕ್ಷಿತ್‌, ಪರಿಸರ ಇಂಜಿನಿಯರ್‌ ಕೃಷ್ಣಮೂರ್ತಿ, ಆರೋಗ್ಯ ನಿರೀಕ್ಷಕ ಆನಂದ್‌, ಲೆಫ್ಟ್ ನೆಂಟ್‌ಗಳಾದ ಪ್ರದೀಪ್‌ ಕುಮಾರ್‌ ಹಾಗೂ ಜಯಪ್ರಕಾಶ್‌ ಸೇರಿದಂತೆ ಪೊಲೀಸ್‌ ಸಿಬ್ಬಂದಿಗಳು, ಮತ್ತಿತರ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next