* * *
ಮಹಾರಾಷ್ಟ್ರದ ಪಾಲ್ಗಾರ್ ಜಿಲ್ಲೆಯವರು ರಜನಿ. ಈಕೆಯ ತಂದೆ ಶಾಂತಾರಾಮ್ ಪಂಡಿತ್, ಸಿಐಡಿಯಲ್ಲಿ ಸಬ್ ಇನ್‌ಸ್ಪೆಕ್ಟರ್ ಆಗಿದ್ದ ಶಾಂತಾರಾಮ…, ತಮ್ಮ ವೃತ್ತಿ ಬದುಕಿನಲ್ಲಿ ನಡೆಯುವ ಕುತೂಹಲಕರ, ಸ್ವಾರಸ್ಯದ ಸಂಗತಿಗಳನ್ನು ಹೆಂಡತಿ, ಮಗಳೊಂದಿಗೆ ದಿನವೂ ಹೇಳಿಕೊಳ್ಳುತ್ತಿದ್ದರು. ತರಹೇವಾರಿ ಕೇಸ್‌ಗಳು, ಅಪರಾಧಿಗಳ ಹಿನ್ನೆಲೆ, ಅವರನ್ನು ಪತ್ತೆ ಹಚ್ಚಲು ಪೊಲೀಸರು ಅನುಸರಿಸುವ ವಿಧಾನಗಳ ಬಗ್ಗೆ ಪದೇಪದೆ ಕೇಳಿಸಿಕೊಳ್ಳುತ್ತಿದ್ದ ರಜನಿ, ಮುಂದೆ ಪತ್ತೇದಾರಿಣಿಯಾಗಿ ಬದಲಾದದ್ದು ಕಾಕತಾಳೀಯವಲ್ಲ. ತೀರಾ ಆಕಸ್ಮಿಕ!
Advertisement
ಆ ಸಂದರ್ಭವನ್ನು ರಜನಿ ನೆನಪಿಸಿಕೊಳ್ಳುವುದು ಹೀಗೆ: “ಮುಂಬ ಯಿಯ ರೂಪಾರೆಲ್ ಕಾಲೇಜಿನಲ್ಲಿ ಪದವಿ ಓದುತ್ತಿದ್ದ(1983) ಸಮಯ. ನನ್ನ ಸಹಪಾಠಿಯೊಬ್ಬಳು ಪದೇಪದೆ ತರಗತಿಗೆ ಗೈರಾಗುತ್ತಿದ್ದಳು. ಕಾಲೇಜಿನ ಹೊರಗೆ ನಾಲ್ಕಾರು ಹುಡುಗರು ಕಾಣಿಸಿಕೊಂಡ ದಿನವೇ ಆಕೆ ಚಕ್ಕರ್ ಹಾಕುತ್ತಿದ್ದಳು. ಆಕೆಯ ಹಾವಭಾವ, ನಡೆ-ನುಡಿ ಅನುಮಾನಗಳನ್ನು ಹುಟ್ಟು ಹಾಕಿತು. ಒಂದು ದಿನ ಆಕೆಗೆ ಗೊತ್ತಾಗದಂತೆ ಹಿಂಬಾಲಿಸಿದೆ. ಆಗ ನಂಬಲಾಗದ ಸತ್ಯವೊಂದು ಗೊತ್ತಾಯಿತು: ಹರೆಯದ ಹಮ್ಮಿನಲ್ಲಿ ಆಕೆ ವೇಶ್ಯಾವಾಟಿಕೆಗೆ ಇಳಿದಿದ್ದಳು! ಸಹಪಾಠಿಯ ಬದುಕು ಹಾಳಾಗುವುದನ್ನು ತಡೆಯ ಬೇಕು ಅನ್ನಿಸಿತು. ಆಕೆಯ ಪೋಷಕರನ್ನು ಗುಟ್ಟಾಗಿ ಭೇಟಿಯಾಗಿ ವಿಷಯ ತಿಳಿಸಿದೆ. ಈ ಸಂಗತಿಯನ್ನು ಆಕೆಯ ತಾಯಿ ನಂಬಲಿಲ್ಲ. ಇಲ್ಲಸಲ್ಲದ್ದನ್ನು ಹೇಳ್ಳೋಕೆ ಬಂದಿದ್ದೀಯಾ ಎಂದು ಚೆನ್ನಾಗಿ ಬಯ್ದರು. ಆಕೆಯ ತಂದೆ-“ಒಮ್ಮೆ ಚೆಕ್ ಮಾಡೋಣ’ ಎಂದವರು, ಮಗಳನ್ನು ಗುಟ್ಟಾಗಿ ಹಿಂಬಾಲಿಸಿದರು. ಸತ್ಯ ಗೊತ್ತಾದಾಗ ಮಗಳಿಗೆ ಬುದ್ಧಿ ಹೇಳಿ ಅವಳನ್ನು ಉಳಿಸಿಕೊಂಡರು. ನನಗೆ ಥ್ಯಾಂಕ್ಸ್ ಹೇಳಿ, ಪ್ರೈವೇಟ್ ಡಿಟೆಕ್ಟಿವ್ ಆಗಿಯೇ ನೀನು ಕೆಲಸ ಮಾಡಬಾರದೇಕೆ ಎಂದೂ ಸಲಹೆ ಮಾಡಿದರು!
Related Articles
Advertisement
ಸಮಯಕ್ಕೆ ತಕ್ಕಂತೆ ನಟಿಸುವುದು, ಖಾಸಗಿ ಪತ್ತೇ ದಾರರಿಗೆ ಇರಬೇಕಾದ ಮುಖ್ಯ ಲಕ್ಷಣ. ನಾನಂತೂ ಕುರುಡಿ, ಮನೆ ಕೆಲಸದವಳು, ಗರ್ಭಿಣಿ, ನರ್ಸ್…ಮುಂತಾಗಿ ನಟಿಸಿ ಅಪರಾಧಿ ಗಳನ್ನು ಹಿಡಿದಿದ್ದೇನೆ. ಒಂದು ಪ್ರಕರಣವನ್ನಂತೂ ಮರೆಯಲಾರೆ. ಆ ವಿವರ ಹೀಗೆ: ಕೆಲವೇ ದಿನಗಳ ಅಂತರದಲ್ಲಿ ಒಂದು ಕುಟುಂಬದ ತಂದೆ-ಮಗನ ಕೊಲೆಯಾಗಿತ್ತು. ಕೊಲೆಗಾರನನ್ನು ಪತ್ತೆಹಚ್ಚಲು ಪೊಲೀಸರಿಗೆ ಸಾಧ್ಯವಾಗಲಿಲ್ಲ. ಆಗ ಇಲಾಖೆಯವರೇ ಆ ಕೇಸನ್ನು ನನಗೆ ಒಪ್ಪಿಸಿದರು. ಮನೆಕೆಲಸದವಳ ವೇಷದಲ್ಲಿ ಆ ಮನೆಗೆ ಹೋದೆ. ಯಜಮಾನಿಗೊಬ್ಬ ಪ್ರಿಯಕರನಿದ್ದ. ಕೊಲೆ ಮಾಡಿದ್ದವನು ಅವನೇ. ತಮ್ಮ ಅನೈತಿಕ ಸಂಬಂಧ ಬಹಿರಂಗವಾಗುತ್ತದೆಂದು ಅಂಜಿ, ಗೃಹಿಣಿಯೇ ಕೊಲೆ ಮಾಡಿಸಿದ್ದಳು! ಅವರ ರಹಸ್ಯ ಮಾತುಕತೆಯನ್ನು ಗುಟ್ಟಾಗಿ ಟೇಪ್ ರೆಕಾರ್ಡರ್‌ನಲ್ಲಿ ದಾಖಲಿಸಿಕೊಂಡೆ. ಹೀಗಿದ್ದಾಗಲೇ, ಟೇಪ್ ರೆಕಾರ್ಡರ್ ಆಫ್ ಮಾಡಿದ ಸದ್ದು ಅದೊಮ್ಮೆ ಗೃಹಿಣಿಗೆ ಕೇಳಿಸಿಬಿಟ್ಟಿತು. ಆಕೆಗೆ ಅನುಮಾನ ಶುರುವಾಯಿತು. ಮನೆಯಿಂದ ಹೊರಗೆ ಹೋಗದಂತೆ ನಿರ್ಬಂಧ ಹೇರಿದಳು. ಪ್ರಿಯಕರನನ್ನು ಮನೆಗೆ ಕರೆಸಿ- “ಇನ್ಮೆಲೆ ಇಲ್ಲಿಗೆ ಬರಬೇಡ. ಪೊಲೀಸರಿಗೆ ಅನುಮಾನ ಬಂದಿದೆ. ಎಲ್ಲಿಗಾದ್ರೂ ಹೋಗಿಬಿಡು’ ಅಂದದ್ದು ಕೇಳಿಸಿತು! ಈಗ ಬಿಟ್ಟರೆ, ಆತ ಮತ್ತೆ ಸಿಗಲಾರ ಅನ್ನಿಸಿತು. ತತ್‌ಕ್ಷಣ ಚಾಕು ತಗೊಂಡು ಕಾಲು ಕುಯ್ದುಕೊಂಡೆ. ಒಡತಿಯ ಬಳಿ ಹೋಗಿ, ರಕ್ತ ಸುರೀತಿದೆ. ಆಸ್ಪತ್ರೆಗೆ ಹೋಗಿ ಬರ್ತೇನೆ ಅಂದೆ. “ಐದೇ ನಿಮಿಷದಲ್ಲಿ ವಾಪಸ್ ಬರ್ಬೇಕು, ಪಕ್ಕದ ಬೀದಿಯ ಆಸ್ಪತ್ರೆಗೇ ಹೋಗು’ ಅಂದಳು. ಓಡೋಡುತ್ತಾ ಎಸ್ಟೀಡಿ ಬೂತ್ ತಲುಪಿ ಪೊಲೀಸರಿಗೆ ವಿಷಯ ತಿಳಿಸಿದೆ. ಪೊಲೀಸರು ಧಾವಿಸಿ ಬಂದು ಕೊಲೆಗಾರನನ್ನು ಅರೆಸ್ಟ್ ಮಾಡಿದರು.
ಈಗ ಏನಾಗಿದೆಯೆಂದರೆ- ದೇಶದ ಮೊದಲ ಖಾಸಗಿ ಪತ್ತೇದಾರಿಣಿ ಎಂಬ ಶ್ರೇಯ ನನ್ನದಾಗಿದೆ. ಲೇಡಿ ಜೇಮ್ಸ್ ಬಾಂಡ್, ಲೇಡಿ ಶೆರ್ಲಾಕ್ ಹೋಮ್ಸ್ ಎಂಬ ಮೆಚ್ಚುಗೆ ಲಭಿಸಿದೆ. ಅಪರಾಧಿಗಳನ್ನು ಪತ್ತೆ ಹಚ್ಚಲು ದುಬಾೖ ಮತ್ತು ಅಮೆರಿಕಕ್ಕೂ ಹೋಗಿ ಬಂದಿದ್ದೇನೆ. 30 ಮಂದಿಯ ತಂಡದೊಂದಿಗೆ ಕೆಲಸ ಮಾಡುತ್ತಿದ್ದೇನೆ. ಕೆಲವೊಮ್ಮೆ ತೆರೆಯ ಹಿಂದೆ, ಕೆಲವೊಮ್ಮೆ ಮುಂಚೂಣಿಯಲ್ಲಿ ನಿಂತು ಹೋರಾಡಿದ್ದೇನೆ. ಮಾಯಾಜಾಲ…, ಫೇಸಸ್ ಬಿಹೈಂಡ್ ಫೇಸಸ್ ಎಂಬ ಪುಸ್ತಕಗಳನ್ನು ಬರೆದಿದ್ದೇನೆ. ಈ ದಿನಗಳಲ್ಲಿ ಅಪರಾಧಿಗಳನ್ನು ಪತ್ತೆಹಚ್ಚಲು ನೂರಾರು ಅನುಕೂಲಗಳಿವೆ. ನಾನು ಏಜೆನ್ಸಿ ಶುರುಮಾಡಿದಾಗ ಹೆಚ್ಚಿನ ಸೌಲಭ್ಯಗಳಿರಲಿಲ್ಲ. ಆದರೂ ಪ್ರತಿ ಬಾರಿ ನಾನು ಗೆದ್ದೆ. 31 ವರ್ಷದ ಅವಧಿಯಲ್ಲಿ 80,000ಕ್ಕೂ ಹೆಚ್ಚು ಕೇಸ್ ಹ್ಯಾಂಡಲ್ ಮಾಡಿದ ಖ್ಯಾತಿ ನಮ್ಮ ಏಜೆನ್ಸಿಗೆ ಸಿಕ್ಕಿದೆ. ನನ್ನ ಬದುಕಿನ ಕುರಿತು ತಯಾರಿಸಲಾದ “ಲೇಡಿ ಜೇಮ್ಸ್ ಬಾಂಡ್’ ಸಾಕ್ಷಚಿತ್ರ ದೂರದರ್ಶನದಲ್ಲಿ ಪ್ರಸಾರವಾಗಿದೆ. ಇಷ್ಟೆಲ್ಲ ಕಥೆ ತಿಳಿದ ಮೇಲೆ, ನಿಮ್ಮ ಕೆಲಸಕ್ಕೆ ದೊಡ್ಡವರ ಮೆಚ್ಚುಗೆ ಸಿಕ್ಕಿಲ್ಲವಾ ಎಂದು ಕೇಳುತ್ತೀರಿ ಅಲ್ಲವಾ? ಕೇಳಿ: ನನ್ನ ಸಾಹಸದ ಕೆಲಸವನ್ನು ನಟಿ ಮಾಧುರಿ ದೀಕ್ಷಿತ್ ಹಾಡಿ ಹೊಗಳಿ¨ªಾರೆ. ವರ್ಷದ ಸಾಧಕಿ ಎಂದು ರಾಷ್ಟ್ರಪತಿಗಳು ಗೌರವಿಸಿದ್ದಾರೆ. ಆ ಸಂದರ್ಭದಲ್ಲಿ ನನ್ನ ಜತೆ ವೇದಿಕೆ ಹಂಚಿಕೊಂಡ ಐಶ್ವರ್ಯ ರೈ ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದ್ದಾರೆ. ಪತ್ತೇದಾರಿಣಿ- ಗೃಹಿಣಿ-ಎರಡೂ ಆಗುವುದು ಅಸಾಧ್ಯ ಅನಿಸಿದ್ದರಿಂದ ನಾನು ಮದುವೆಯಾಗದೇ ಉಳಿದೆ. ವೃತ್ತಿ ಬದುಕಿನಲ್ಲಿ ದೊಡ್ಡ ಯಶಸ್ಸು ಕಾಣುವ ಮೂಲಕ, ಹೆಣ್ಣು ಮನಸ್ಸು ಮಾಡಿದರೆ ಯಾವ ಕ್ಷೇತ್ರದಲ್ಲಾದರೂ ಮಿಂಚಬಲ್ಲಳು ಎಂದು ತೋರಿಸಿಕೊಟ್ಟ ಸಂತೃಪ್ತಿ ನನ್ನದು…’
ಹೀಗೆ ಮುಗಿಯುತ್ತದೆ ರಜನಿ ಅವರ ಮಾತು. ಸತ್ಯ ಹೇಳ ಬೇಕೆಂದರೆ, ನಾನು ಪತ್ತೇದಾರಿ ಸಾಹಿತ್ಯವನ್ನಾಗಲಿ, ಶೆರ್ಲಾಕ್ ಹೋಮ್ಸ… ಪುಸ್ತಕವನ್ನಾಗಲಿ ಓದಿಲ್ಲ. ಆದರೆ ಪ್ರತಿಬಾರಿಯೂ ಅಪ ರಾಧಿ ಯನ್ನು ಹಿಡಿಯಬೇಕೆಂಬ ಹಠದಲ್ಲಿ ಇನ್ನಿಲ್ಲದ ಶ್ರದ್ಧೆಯಿಂದ ಕೆಲಸ ಮಾಡಿ ಗೆದ್ದಿದ್ದೇನೆ. ಭಯ ಎಂಬ ಪದ ನನ್ನ ಡಿಕ್ಷನರಿಯಲ್ಲಿ ಇಲ್ಲ ಎನ್ನುವ ಈ ದಿಟ್ಟೆಗೆ ಅಭಿನಂದನೆ ಹೇಳಲು- rajanipanditpd7@gmail.com ಸಂಪರ್ಕಿಸಿ.
– ಎ.ಆರ್.ಮಣಿಕಾಂತ್