Advertisement
ಹೆಣ್ಣು ಮಕ್ಕಳ ಹೆಗಲಿಗೋ, ಕೈಗೋ ಒಂದು ಬ್ಯಾಗ್ ನೇತಾಡುತ್ತಿದೆ ಎಂದರೆ ಆಕೆ ಮನೆಯಿಂದ ಹೊರಗೆ ಹೊರಡಲು ಸಿದ್ಧಳಾದಳೆಂದೇ ಲೆಕ್ಕ. ಮೊದಲೆಲ್ಲ ಹೊರಗೆ ಹೋದಾಗ ಕೊಂಡುಕೊಳ್ಳುವ ವಸ್ತುಗಳನ್ನು ತರಲೆಂದೇ ಬಟ್ಟೆ ಚೀಲ ಇರುತ್ತಿತ್ತು. ನಂತರ ಅದೇ ವ್ಯಾನಿಟಿ ಬ್ಯಾಗ್ ಎಂಬ ಫ್ಯಾಷನ್ನಾಗಿ ಹೆಂಗಸರ ಹೆಗಲನ್ನು ತಬ್ಬಿಕೊಂಡಿತು. ಈ ಬ್ಯಾಗಿಗೂ ಹೆಣ್ಣು ಮಕ್ಕಳಿಗೂ ಅವಿನಾಭಾವ ಸಂಬಂಧ. ಹೆಗಲ ಮೇಲೆ ಹಗುರವಾದ ಭಾರವಿರದಿದ್ದರೆ ಏನೋ ಕಳೆದುಕೊಂಡ ಚಡಪಡಿಕೆ. ಅದಿಲ್ಲದೇ ಹೊರಗೆ ಹೋಗುವುದನ್ನು ಊಹಿಸಿಕೊಳ್ಳುವುದೂ ಕಷ್ಟವೇ. ಈಗಂತೂ ಸೀರೆ/ಡ್ರೆಸ್ ಜೊತೆಗೆ ಮ್ಯಾಚ್ ಮಾಡಿಕೊಳ್ಳುವ ಅಲಂಕಾರಿಕ ವಸ್ತುಗಳಲ್ಲಿ ಬ್ಯಾಗ್ ಸಹ ಒಂದಾಗಿದೆ.
ಹರೆಯದ ಹುಡುಗಿಯರ ಬ್ಯಾಗಿನಲ್ಲಿ ಫೋನು, ಒಂದಿಷ್ಟು ಅಲಂಕಾರಿಕ ವಸ್ತುಗಳು ಮಾತ್ರ ಕಾಣ ಸಿಕ್ಕರೆ, ವಿವಾಹಿತೆಯರ, ಅದರಲ್ಲೂ ಮಕ್ಕಳಿರುವ ನಮ್ಮಂಥವರ ಬ್ಯಾಗು ಮಾತ್ರ ಬ್ರಹ್ಮಾಂಡವೇ. ಅಗತ್ಯ ವಸ್ತುಗಳ ಜೊತೆಗೆ, ಹೊರಗೆ ಖರೀದಿಸಿದ ಸಣ್ಣಪುಟ್ಟ ವಸ್ತುಗಳನ್ನು ತುಂಬಿಕೊಳ್ಳುವುದಕ್ಕೆಂದೇ ಇರುವ ಬ್ಯಾಗಿನ ಹೊಟ್ಟೆಯೊಂದು ವಿಸ್ಮಯ ಪಾತ್ರೆ. ಕೃಷ್ಣನ ಬಾಯಲ್ಲಿ ಬ್ರಹ್ಮಾಂಡ ಕಂಡಂತೆ ನಮ್ಮ ಬ್ಯಾಗಿನ ಬಾಯಿಯನ್ನು ಯಾರಾದರೂ ಇಣುಕಿದರೆ, ಜಗತ್ತಿನ ಒಂದು ಸಣ್ಣ ತುಣುಕೇ ಅಲ್ಲಿ ಕಾಣುವುದರಲ್ಲಿ ಆಶ್ಚರ್ಯವಿಲ್ಲ. ಫೀಡಿಂಗ್ ಬಾಟಲಿ, ಡೈಪರ್, ಆಟಿಕೆ, ಅಂಗಿ, ಬಿಸ್ಕತ್ ಪಾಕೇಟ್ ಹೀಗೆ ಮಕ್ಕಳಿಗೆ ತುರ್ತಾಗಿ ಬೇಕಾಗುವ ಎಲ್ಲವೂ ನಮ್ಮ ಬ್ಯಾಗೆಂಬ ಗೂಡಗಂಡಿಯಲ್ಲಿ ಲಭ್ಯ. ಇನ್ನು ಸೇಫ್ಟಿà ಪಿನ್ನಿನ ಗೊಂಚಲು, ನೇಲ್ ಪಾಲಿಶ್, ತಪ್ಪದೇ ಇಟ್ಟುಕೊಳ್ಳುವ ಬಾಚಣಿಗೆ, ಕೊಂಡಿದ್ದೇ ಮರೆತು ಹೋದ ಓಲೆಗಳು, ಟಿಶ್ಯೂ ಪೇಪರ್‌ಗಳು, ಬಣ್ಣ ಬಣ್ಣದ ಕಚೀìಫುಗಳು, ಸ್ಯಾನಿಟರಿ ನ್ಯಾಪಿRನ್, ಪುಟ್ಟ ಕೊಡೆ, ಒಂದಿಷ್ಟು ತಲೆನೋವಿನ ಮಾತ್ರೆಗಳು, ಒಂದು ಪುಸ್ತಕ… ಭೇದಭಾವವಿಲ್ಲದೇ ಇಂಥ ಎಲ್ಲ ವಸ್ತುಗಳನ್ನೂ ತನ್ನ ಹೊಟ್ಟೆಗೆ ಹಾಕಿಕೊಳ್ಳುತ್ತದೆ. ಇದೇ ಅಲ್ಲವೇ ನಮ್ಮ ಬ್ಯಾಗಿನ ಹೃದಯ (ಹೊಟ್ಟೆ?) ವೈಶಾಲ್ಯತೆ!?
Related Articles
ಇನ್ನು ಕೆಲವು ಬಾರಿ, ನಮ್ಮ ಬ್ಯಾಗ್ ಯಾವ ಬ್ಲಾಕ್‌ಹೋಲ್‌ಗೂ ಕಡಿಮೆ ಇಲ್ಲದಂತೆ ನಾವು ಹಾಕಿದ ವಸ್ತುಗಳನ್ನು ನುಂಗಿ ಮಗುಮ್ಮಾಗಿ ಉಳಿದು ಬಿಡುತ್ತದೆ. ಹೆಣ್ಣು ಮಕ್ಕಳ ಸಣ್ಣ ಪುಟ್ಟ ವಸ್ತುಗಳು ಕಳೆಯುವುದೇನಿದ್ದರೂ ಇದೇ ಚಮತ್ಕಾರಿ ಬ್ಯಾಗಿನಲ್ಲಿಯೇ. ಮತ್ತೆ ಅವು ವಾಪಸ್ ಸಿಗುವುದು ಶಿಲಾಯುಗದ ಪಳೆಯುಳಿಕೆಯಷ್ಟು ಹಳೆಯದಾದ ಮೇಲೆ!
Advertisement
ಅವಸರದಲ್ಲಿ ಬ್ಯಾಗಿನ ಕತ್ತಲೆ ಕೋಣೆಗೆ ಸೇರಿಸಿದ ಮದುವೆ ಮನೆಯಲ್ಲಿ ಕೊಟ್ಟ ಲಾಡಿನ ಪೊಟ್ಟಣ, ಸತ್ಯನಾರಾಯಣ ಪ್ರಸಾದ ಹೊರಗೆ ಬಂದು ಬೆಳಕು ಕಾಣುವುದು ಮತ್ಯಾವುದೋ ಮದುವೆ, ಮುಂಜಿಗಳಲ್ಲೇ. ಬಸ್ ಕಂಡಕ್ಟರ್ ಚಿಲ್ಲರೆ ಕೊಡಿ ಎಂದಾಗ ಎಷ್ಟು ಹುಡುಕಿದರೂ ಕೈಗೆ ಸಿಗದೇ ಗೋಳಾಡಿಸುವ ನಾಣ್ಯಗಳು, ಮನೆಯಲ್ಲಿ ಬ್ಯಾಗು ಕೊಡವಿದಾಕ್ಷಣ ಸಶಬ್ಧವಾಗಿ ಉದುರುತ್ತವೆ. ದಿನಸೀ ಅಂಗಡಿಯವನು ಚಿಲ್ಲರೆ ಇಲ್ಲವೆಂದು ಕೈಗೆ ತುರುಕುವ ಚಾಕ್ಲೇಟು ನೆನಪಾಗುವುದು ನಮ್ಮನ್ನು ನೋಡಿ ಬೊಚ್ಚು ಬಾಯಿ ಅಗಲಿಸಿ ನಗುವ ಮಗು ಎದುರಿಗೆ ಸಿಕ್ಕಾಗಲೇ. ಎಲ್ಲೋ ಇಟ್ಟು ಮರೆತು, ಕಳೆದಿದೆಯೆಂದೇ ತಿಳಿದುಕೊಂಡ ಉಂಗುರ ನಮ್ಮ ಬ್ಯಾಗಿನ ಅಜ್ಞಾತ ಮೂಲೆಯಿಂದ ಕಳ್ಳನಂತೆ ಹೊರ ಬಂದಾಗ, ತಿಂಗಳುಗಳಿಂದ ದಿನಕ್ಕೊಮ್ಮೆಯಾದರೂ ಅದನ್ನು ನೆನೆದು ಗೋಳಾಡಿದ ನಮ್ಮ ಸಂಕಟ ಮತ್ತು ಅನಗತ್ಯವಾಗಿ ಯಾರ ಮೇಲೋ ಒಂದು ಕಣ್ಣಿಟ್ಟ ನಮ್ಮ ಸಣ್ಣತನಕ್ಕೆ ನಮಗೇ ನಾಚಿಕೆಯಾಗುತ್ತದೆ.
ರಹಸ್ಯ ವಿಶ್ವ…ಯಾವಾಗಲೂ ಅವುಚಿಕೊಂಡೇ ಇರ್ತಾರಲ್ಲ, ಆ ಬ್ಯಾಗಿನಲ್ಲಿ ಅಂಥದ್ದೇನಿದೆ ಅಂತ ಗಂಡಸರಿಗೆ ಕುತೂಹಲ. ಅದೇನು ಬೆಲೆಬಾಳುವ ಆಸ್ತಿಯೇ ಎಂಬ ತಾತ್ಸಾರವೂ! ಆದರೆ, ಹೆಂಗಸರ ಅದೆಷ್ಟೋ ರಹಸ್ಯಗಳು ಹುದುಗಿರುವುದು ಇಲ್ಲಿಯೇ. ಗಂಡನಿಗೆ ತಿಳಿಯದಂತೆ ಕೊಂಡ ಬಟ್ಟೆ, ಚಿನ್ನದಂಗಡಿಯ ಅಥವಾ ಕೆಲವು ರಹಸ್ಯ ಖರೀದಿಯ ಬಿಲ್ಲುಗಳು ಪ್ರತಿಯೊಬ್ಬರ ಬ್ಯಾಗಿನಲ್ಲಿಯೂ ಭದ್ರವಾಗಿರುತ್ತವೆ. ಅಗತ್ಯವಿದ್ದಾಗ ಸಿಗದೇ ಇನ್ನೆಂದೋ ಸಿಗುವ ದಾಖಲೆಗಳು, ಹೆಸರೇ ಇಲ್ಲದ ಫೋನ್ ನಂಬರ್‌ಗಳು, ಬ್ಯಾಂಕಿಗೆ ಹಾಕದೆ ಎಕ್ಸ್‌ಪೈರ್ ಆದ ಚೆಕ್ ಸಿಕ್ಕರೂ ಅಚ್ಚರಿ ಪಡಬೇಕಿಲ್ಲ! (ನನಗಂತೂ ಸಿಕ್ಕಿದೆ!) ಹೀಗೆ ಅದರೊಳಗೆ ಇಲ್ಲದಿಲ್ಲದ ವಸ್ತುಗಳೇ ಇರುವುದಿಲ್ಲ.ಆದ್ದರಿಂದಲೇ, ಬ್ಯಾಗ್ ಎಂಬ ನನ್ನ ಖಾಸಾ ಜಗತ್ತನ್ನು ಬೇರೆಯವರ ಮುಂದೆ ಬೆತ್ತಲೆಗೆಡವಲು ನನಗೆ ಒಂಚೂರು ಮನಸ್ಸು ಬರುವುದಿಲ್ಲ. ಇತರರ ಕೈಯಲ್ಲಿ ನನ್ನ “ಬ್ಯಾಗ್‌ಲಕ್ಷ್ಮಿ’ಯನ್ನು ಕೊಡುವ ಮಾತೇ ಇಲ್ಲ! ತೀರಾ ಅಪರೂಪಕ್ಕೊಮ್ಮೆ ಕೋಣೆಯ ಬಾಗಿಲು ಮುಚ್ಚಿ, ಕೂಡಿಟ್ಟ ಹಣವನ್ನು ಎಣಿಸುವವರ ಜಾಗ್ರತೆಯಲ್ಲಿ ಅದರ ಹೊಟ್ಟೆಯೊಳಗಿನ ರಹಸ್ಯಮಯ ಖಾನೆಗಳನ್ನೆಲ್ಲ ಖಾಲಿ ಮಾಡುತ್ತೇನೆ. ಆಗ ಸಿಗುವ ಪ್ರತಿ ವಸ್ತುಗಳೂ ಇಂಥ ನೂರೆಂಟು ಕಥೆ ಹೇಳುತ್ತವೆ… – ಕವಿತಾ ಭಟ್