ನವದೆಹಲಿ/ಬೀಜಿಂಗ್: ಗಡಿ ಪ್ರದೇಶದಲ್ಲಿ ಸೇನೆಗೆ ಅಗತ್ಯವಾಗಿರುವ ರಸ್ತೆ, ಸೇತುವೆಗಳನ್ನು ನಿರ್ಮಿಸುವ ಸಂಸ್ಥೆಯಾದ ಬಿಆರ್ ಒ ನಿರ್ಮಿಸಿರುವ 44 ಸೇತುವೆಗಳನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಉದ್ಘಾಟಿಸಿದ್ದ ಬೆನ್ನಲ್ಲೇ ಚೀನಾ ಇದನ್ನು ಖಂಡಿಸಿದ್ದು, ಲಡಾಖ್ ಅನ್ನು ಭಾರತ ಕಾನೂನು ಬಾಹಿರವಾಗಿ ಕೇಂದ್ರಾಡಳಿತ ಪ್ರದೇಶವನ್ನಾಗಿ ಘೋಷಣೆ ಮಾಡಿರುವುದಾಗಿ ಆರೋಪಿಸಿದೆ.
ಗಡಿಯಲ್ಲಿ ಭಾರತ ಮತ್ತು ಚೀನಾ ನಡುವೆ ಸಂಘರ್ಷ ಮುಂದುವರಿದಿದ್ದು, ಏತನ್ಮಧ್ಯೆ ಲಡಾಖ್ ಮತ್ತು ಅರುಣಾಚಲ ಪ್ರದೇಶವನ್ನು ಭಾರತದ ಭಾಗ ಎಂದು ಪರಿಗಣಿಸುವುದಿಲ್ಲ ಎಂಬುದಾಗಿ ಚೀನಾ ಮತ್ತೊಮ್ಮೆ ಪುನರುಚ್ಚರಿಸಿದೆ.
ರಾಜ್ ನಾಥ್ ಸಿಂಗ್ ಅವರು ಮಹತ್ವಪೂರ್ಣವಾದ ಸುಮಾರು 44 ಸೇತುವೆಗಳನ್ನು ಸೋಮವಾರ (ಅಕ್ಟೋಬರ್ 12, 2020) ಉದ್ಘಾಟಿಸಿದ್ದರು. ಅಲ್ಲದೇ ಅರುಣಾಚಲ ಪ್ರದೇಶದಲ್ಲಿ ನಿಚಿಪು ಸುರಂಗ ನಿರ್ಮಾಣಕ್ಕೂ ಅವರು ಶಿಲಾನ್ಯಾಸ ನೆರವೇರಿಸಿದ್ದರು. ಒಟ್ಟು 7 ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಈ ಸೇತುವೆಗಳು ನಿರ್ಮಾಣಗೊಂಡಿದ್ದವು. ಇವು ಟಿ-90 ಯುದ್ಧ ಟ್ಯಾಂಕ್ ಗಳ ಭಾರವನ್ನು ತಾಳಿಕೊಳ್ಳುವಂಥ ಸಾಮರ್ಥ್ಯ ಹೊಂದಿದೆ.
ಲಡಾಖ್ ಎಲ್ ಎಸಿ ಸಮೀಪ ಗಡಿ ಕ್ಯಾತೆ ತೆಗೆದಿರುವ ಚೀನಾಕ್ಕೆ ಭಾರತ ಸೆಡ್ಡು ಹೊಡೆದಿರುವುದು ತೀವ್ರ ಮುಖಭಂಗವಾಗಿದ್ದು, ಏತನ್ಮಧ್ಯೆ ಭಾರತ ಆಯಾ ಕಟ್ಟಿನ ಸ್ಥಳದಲ್ಲಿ ಸೇನೆಗೆ ಬೇಕಾದ ಅಗತ್ಯ, ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಕೊಡುತ್ತಿರುವುದು ಚೀನಾಕ್ಕೆ ಮರ್ಮಾಘಾತ ನೀಡಿದೆ.