ನವದೆಹಲಿ:ಜಮ್ಮು-ಕಾಶ್ಮೀರದಲ್ಲಿ ಏನಾಗುತ್ತಿದೆ ಎಂಬ ಕುತೂಹಲಕ್ಕೆ ಕೊನೆಗೂ ತೆರೆಬಿದ್ದಿದ್ದು, ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಆರ್ಟಿಕಲ್ 370ನೇ ವಿಧಿ, ಆರ್ಟಿಕಲ್ 35ಎ ವಿಧಿಯನ್ನು ಕೇಂದ್ರ ಸರಕಾರ ಸುಗ್ರೀವಾಜ್ಞೆ ಮೂಲಕ ರದ್ದುಗೊಳಿಸಿರುವುದಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಸೋಮವಾರ ರಾಜ್ಯಸಭೆಯಲ್ಲಿ ಘೋಷಿಸಿದ್ದಾರೆ.
ಅಲ್ಲದೇ ಜಮ್ಮು-ಮತ್ತು ಕಾಶ್ಮೀರದ ಲಡಾಖ್ ಅನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಕೇಂದ್ರ ಸರಕಾರ ಘೋಷಿಸಿದೆ. ಜಮ್ಮು-ಕಾಶ್ಮೀರದ 370ನೇ ವಿಧಿ ರದ್ದು ನಿರೀಕ್ಷಿತವಾಗಿತ್ತು, ಆದರೆ ಲಡಾಖ್ ಕೇಂದ್ರಾಡಳಿತ ಪ್ರದೇಶವನ್ನಾಗಿ ಘೋಷಣೆ ಮಾಡಿರುವುದು ಹೆಚ್ಚಿನ ಮಹತ್ವದ ಪಡೆದಿದೆ. ಲಡಾಖ್ ಪ್ರದೇಶ ಹೇಗಿದೆಎಂಬ ಕಿರು ಮಾಹಿತಿ ಇಲ್ಲಿದೆ..
ಚೀನಾ-ಟಿಬೆಟ್, ಪಾಕಿಸ್ತಾನ ಪ್ರದೇಶಗಳಿಂದ ಸುತ್ತುವರಿದಿರುವ ಲಡಾಖ್ ಹಿಮಾಲಯದ ಮೇಲಿನ ಪ್ರಸ್ಥಭೂಮಿಯಾಗಿದೆ. ಲಡಾಖ್ ಪ್ರದೇಶದಲ್ಲಿ ಮುಂಗೋಲಿಯನ್ ಬುಡಕಟ್ಟು ಹಾಗೂ ಬೌದ್ಧರು ಹೆಚ್ಚಿನ ಸಂಖ್ಯೆಯಲ್ಲಿ ನೆಲೆಸಿದ್ದಾರೆ.
ದುರ್ಗಮ ಪ್ರದೇಶವಾಗಿರುವ ಲಡಾಖ್ ಸಮುದ್ರ ಮಟ್ಟದಿಂದ 8ಸಾವಿರದಿಂದ 13 ಸಾವಿರಗಳಷ್ಟು ಎತ್ತರದಲ್ಲಿದೆ. ಲಡಾಖ್ ಗೆ ಶ್ರೀನಗರದಿಂದ ಹೆದ್ದಾರಿ ನಿರ್ಮಿಸಿದ್ದು ಕೂಡಾ ದೊಡ್ಡ ಸಾಧನೆಯಾಗಿದೆ. ಆರು ತಿಂಗಳ ಕಾಲ ಹಿಮಪಾತದಿಂದ ಈ ಮಾರ್ಗ ಮುಚ್ಚಿ ಹೋಗುತ್ತದೆ. ಲೇಹ್ ನಿಂದ ಮನಾಲಿಗೂ ಒಂದು ರಸ್ತೆ ಇದ್ದು, ಭೀಕರ ಪ್ರಪಾತ, ಭಾರೀ ಕಣಿವೆಗಳು ಇರುವ ಈ ರಸ್ತೆಯಲ್ಲಿ ಚಳಿಗಾಲದಲ್ಲಿ ದುರ್ಗಮವಾಗಿರುತ್ತದೆ.
ಲಡಾಖ್ ನ ರಾಜಧಾನಿ ಲೇಹ್ ನಲ್ಲಿರುವ ವಿಮಾನ ನಿಲ್ದಾಣ ಜಗತ್ತಿನ ಅತ್ಯಂತ ಎತ್ತರದ ವಿಮಾನ ನಿಲ್ದಾಣವಾಗಿದೆ. ಯೋಧರಿಗೆ ಹಿಮಾಲಯದ ಈ ಪ್ರದೇಶದಲ್ಲಿ ಆರು ತಿಂಗಳ ಸೇವೆ ಕಡ್ಡಾಯ. ದಿನನಿತ್ಯದ ದಿನಸಿ, ತರಕಾರಿ, ಮಾಂಸ, ಹಾಲು ಔಷಧಿ ಹಾಗೂ ಪತ್ರಗಳು ತಲುಪುವುದು ದಿನಕ್ಕೆ ಮೂರು, ನಾಲ್ಕು ಬಾರಿ ಚಂಡೀಗಢದಿಂದ ಬಂದು ಹೋಗುವ ಐಎಲ್ 36 ಅಥವಾ ಐಎನ್ 32 ವಿಮಾನದ ಮೂಲಕವೇ. ಹಿಮಪಾತ ಇಲ್ಲದ ದಿನಗಳಲ್ಲಷ್ಟೇ ಲೇಹ್ ವಿಮಾನ ನಿಲ್ದಾಣ ಕಾರ್ಯನಿರ್ವಹಿಸುತ್ತದೆ.
ಜಗತ್ತಿನ ಅತೀ ಎತ್ತರದ ಜನವಸತಿ ಪ್ರದೇಶವಾಗಿರುವ ಲಡಾಖ್ ಒಂದು ನೈಸರ್ಗಿಕ ರೆಫ್ರಿಜರೇಟರ್ ಆಗಿದೆ. ಅಂಗಡಿಗಳಲ್ಲಿ ಜೋಡಿಸಿಟ್ಟ ತರಕಾರಿ, ಹೋಟೆಲ್ ನಲ್ಲಿನ ಆಹಾರ ಪದಾರ್ಥ ದಿನಗಟ್ಟಲೇ ಕೆಟ್ಟು ಹೋಗದೆ ಹಾಗೇ ಇರುತ್ತದೆ. ಚಳಿಗಾಲದಲ್ಲಿ ಲಡಾಖಿಗಳ ದೈನಂದಿನ ಚಟುವಟಿಕೆ ಬೆಳಗ್ಗೆ 8ಗಂಟೆಗೆ ಆರಂಭವಾಗಿ ಸಂಜೆ 4ಗಂಟೆಗೆ ಮುಕ್ತಾಯವಾಗುತ್ತಂತೆ! ಸಂಜೆ 4ಗಂಟೆಗೆ ಸೂರ್ಯ ಕೂಡಾ ಕಣ್ಮರೆಯಾಗಿ ಕತ್ತಲು ಆವರಿಸಿಕೊಳ್ಳುತ್ತದೆ!
ಲಡಾಖ್ ನಲ್ಲಿ ದಿನಕ್ಕೊಂಡು ಅಕ್ರೂಟ್ ತಿನ್ನಿ ಚಳಿಯನ್ನು ದೂರವಿಡಿ ಎಂಬ ಮಾತು ಸಾಮಾನ್ಯವಂತೆ. ಲಡಾಖ್ ನಲ್ಲಿ ಬಹುಪತ್ನಿತ್ವ ಅಸ್ತಿತ್ವದಲ್ಲಿದೆಯಂತೆ! ಲಡಾಖ್, ಲೇಹ್ ನಲ್ಲಿ ಕಣ್ಮಣ ಸೆಳೆಯುವ ಹಲವಾರು ತಾಣಗಳಿವೆ. ಅದರಲ್ಲಿ ಶೆಯ್ ಅರಮನೆ, ಹೆಮಿಸ್ ಗೊಂಪ, ಸ್ತೋಕ್ ಅರಮನೆ , ಶಾಂತಿ ಸ್ತೂಪ ಪ್ರಮುಖವಾದವು.
ಲಡಾಖ್ ವಿಸ್ತಾರ: 86,904 ಕಿಲೋ ಮೀಟರ್
ಒಟ್ಟು ಜನಸಂಖ್ಯೆ: 2,70,126
ಬೌದ್ಧ, ಕ್ರಿಶ್ಚಿಯನ್, ಇಸ್ಲಾಂ ಧರ್ಮ