Advertisement

ಚುನಾವಣೆ ಭರಾಟೆಯಲ್ಲಿ ಪರಿಹಾರ ಕುಂಠಿತ

03:00 PM Dec 12, 2019 | Suhan S |

ಹಾವೇರಿ: ಉಪಚುನಾವಣೆ ಭರಾಟೆಯಲ್ಲಿ ನೆರೆ ಹಾಗೂ ಪ್ರವಾಹ ಸಂತ್ರಸ್ತರಿಗೆ ಹಾನಿ ಪರಿಹಾರ ಒದಗಿಸುವ ಕಾರ್ಯ ಕುಂಠಿತಗೊಂಡಿದ್ದರಿಂದ ಸಂತ್ರಸ್ತರಿಂದ ಭಾರಿ ಆಕ್ರೋಶ ವ್ಯಕ್ತವಾಗಿದೆ.

Advertisement

ಉಪಚುನಾವಣೆ ಕಾರಣದಿಂದಾಗಿ ಬರೋಬರಿ ಒಂದು ತಿಂಗಳ ಕಾಲ ಸ್ಥಗಿತಗೊಂಡಿದೆ ಎಂಬಷ್ಟರ ಮಟ್ಟಿಗೆ ಪರಿಹಾರ ಕಾರ್ಯ ಮಂಕಾಗಿತ್ತು. ಮನೆ ಹಾನಿ, ಜೀವಹಾನಿ ಹಾಗೂ ಮೂಲಸೌಕರ್ಯಕ್ಕೆ ಸಂಬಂಧಿಸಿ ಆರಂಭದಲ್ಲಿ ಒದಗಿಸಿದ ಒಂದಿಷ್ಟು ತಾತ್ಕಾಲಿಕ ಪರಿಹಾರ ಹೊರತುಪಡಿಸಿದರೆ ಮುಂದಿನ ಪರಿಹಾರ ಕಾರ್ಯ ಚುರುಕುಗೊಂಡಿಲ್ಲ. ಅಧಿಕಾರಿಗಳು, ಜನಪ್ರತಿನಿಧಿಗಳು ಎಲ್ಲರೂ ಉಪಚುನಾವಣೆಯಲ್ಲಿ ತಲ್ಲೀನರಾಗಿದ್ದರಿಂದ ನೆರೆ ಸಂತ್ರಸ್ತರಿಗೆ ಸಕಾಲದಲ್ಲಿ ಪರಿಹಾರ ಸಿಗದೆ ಪರದಾಡುವಂತಾಗಿದೆ.

ಜಿಲ್ಲೆಯಲ್ಲಿ ಆಗಸ್ಟ್‌ ಹಾಗೂ ಅಕ್ಟೋಬರ್‌ ತಿಂಗಳಲ್ಲಿ ಸುರಿದ ಭಾರಿ ಮಳೆ ಹಾಗೂ ಪ್ರವಾಹದಿಂದ ಎರಡು ಬಾರಿ ಅಪಾರ ಪ್ರಮಾಣದಲ್ಲಿ ನಷ್ಟವಾಗಿದೆ. ಆಗಸ್ಟ್‌ 3ರಿಂದ 10ವರೆಗೆ ವಾಡಿಕೆ ಮಳೆ 35ಮಿಮೀಯಾಗಿದ್ದು ಈ ಅವಧಿಯಲ್ಲಿ 260ಮಿಮೀ ಮಳೆಯಾಗಿತ್ತು. ಶೇ. 743ರಷ್ಟು ಮಳೆ ಹೆಚ್ಚಾಗಿ ನೆರೆ ಸೃಷ್ಟಿಯಾಗಿತ್ತು. ಇನ್ನು ಅಕ್ಟೋಬರ್‌ 18ರಿಂದ 21ವರೆಗೆ ವಾಡಿಕೆ ಮಳೆ 28ಮಿಮೀಯಾಗಿದ್ದು ವಾಸ್ತವದಲ್ಲಿ 214ಮಿಮೀ ಮಳೆ ಸುರಿದು ಶೇ. 768ರಷ್ಟು ಹೆಚ್ಚು ಮಳೆಯಾಗಿ ಅತಿವೃಷ್ಠಿಗೆ ಕಾರಣವಾಗಿತ್ತು. ಆಗಸ್ಟ್‌ ಮತ್ತು ಅಕ್ಟೋಬರ್‌ ಎರಡೂ ತಿಂಗಳಲ್ಲಾದ ಅತಿವೃಷ್ಟಿಯಿಂದ ಒಂಭತ್ತು ಮಾನವ ಜೀವ ಹಾನಿ, 191 ಜಾನುವಾರು ಜೀವಹಾನಿಯಾಗಿತ್ತು.

ಒಟ್ಟು 17 ಜನರು ಗಾಯಗೊಂಡಿದ್ದರು. ಆಗಸ್ಟ್‌ ತಿಂಗಳಲ್ಲಿ ಒಟ್ಟು 159 ಕಾಳಜಿ ಕೇಂದ್ರ ತೆರೆಯಲಾಗಿತ್ತು. 5324ಕುಟುಂಬಗಳು ಆಶ್ರಯ ಪಡೆದಿದ್ದರು. ಅಕ್ಟೋಬರ್‌ನಲ್ಲಿ ಒಂದು ಕಾಳಜಿ ಕೇಂದ್ರ ತೆರೆಯಲಾಗಿತ್ತು. ಈ ಸಂದರ್ಭದಲ್ಲಿ ಕಾಳಜಿ ಕೇಂದ್ರದ ಆಶ್ರಿತರ ಸೌಲಭ್ಯಕ್ಕಾಗಿ 85.24ಲಕ್ಷ ರೂ., ತುರ್ತು ಪರಿಹಾರವಾಗಿ 3528 ಕುಟುಂಬಗಳಿಗೆ 353 ಲಕ್ಷ ರೂ. ಹಾಗೂ 4000 ಕುಟುಂಬಗಳಿಗೆ 30.18 ಲಕ್ಷರೂ. ಗಳಲ್ಲಿ ಆಹಾರ ಪರಿತರ ಕಿಟ್‌ ವಿತರಿಸಲಾಗಿತ್ತು. ಸಂತ್ರಸ್ತರ ಜೀವನೋಪಾಯ ಸಾಮಗ್ರಿಗಳಿಗಾಗಿ ತಲಾ 10 ಸಾವಿರ ರೂ.ಗಳಂತೆ ಆಗಸ್ಟ್‌ನಲ್ಲಿ 3527 ಕುಟುಂಬಗಳಿಗೆ 352.7ಲಕ್ಷ ರೂ., ಅಕ್ಟೋಬರ್‌ನಲ್ಲಿ 827 ಕುಟುಂಬಗಳಿಗೆ 82.70ಲಕ್ಷ ರೂ. ಪರಿಹಾರ ನೀಡಲಾಗಿತ್ತು. ಇದಾದ ಬಳಿಕ ಸಮರ್ಪಕ ಪರಿಹಾರ ವಿತರಣೆ, ಸೌಲಭ್ಯ ಕಲ್ಪಿಸುವಿಕೆ ಕಾರ್ಯ ನಡೆದಿಲ್ಲ.

ಮನೆ ಹಾನಿ: ಆಗಸ್ಟ್‌ನಲ್ಲಿ 305 ಮನೆಗಳು ಸಂಪೂರ್ಣ ಹಾನಿಯಾಗಿದ್ದವು. ಇದರಲ್ಲಿ 303 ಮನೆಗಳಿಗೆ 3.03ಕೋಟಿ ರೂ., ತೀವ್ರ ಹಾನಿಯಾದ 3428ಮನೆಗಳಿಗೆ 34.26ಕೋಟಿ, ಅಲ್ಪಸ್ವಲ್ಪ ಹಾನಿಯಾದ 10389 ಮನೆಗಳಿಗೆ 51.13ಕೋಟಿ

Advertisement

ರೂ. ಪಾವತಿಸಲಾಗಿತ್ತು. ಅಂದರೆ ತಲಾ 25 ಸಾವಿರ ರೂ.ಗಳಂತೆ ಎರಡು ಕಂತು ಪಾವತಿಸಲಾಗಿದೆ. ಅಕ್ಟೋಬರ್‌ ತಿಂಗಳಲ್ಲಿ ಮತ್ತೆ 7956 ಮನೆಗಳಿಗೆ ಹಾನಿಯಾಗಿದೆ. ಒಟ್ಟಾರೆ ಮನೆ ಹಾನಿಗೆ ಸಂಬಂಧಿಸಿ 88.42 ಕೋಟಿ ರೂ. ಪಾವತಿಸಲಾಗಿದೆ. ಮುಖ್ಯಮಂತ್ರಿಯವರು ಚುನಾವಣೆಗೂ ಮುನ್ನ ಅಂದರೆ ನವೆಂಬರ್‌ ತಿಂಗಳಲ್ಲಿ ಆಗಮಿಸಿದ ವೇಳೆ ನಡೆದ ನೆರೆ ಪರಿಹಾರ ಕಾರ್ಯ ನಂತರ ವೇಗ ಕಳೆದುಕೊಂಡಿದ್ದು, ಸಂತ್ರಸ್ತರ ಅಳಲು ಮುಂದುವರಿದಿದೆ.

ಮೂಲಸೌಕರ್ಯ ಹಾನಿ: ಆಗಸ್ಟ್‌ನಲ್ಲಾದ ಅತಿವೃಷ್ಟಿಯಿಂದ 669 ಶಾಲಾ ಕಟ್ಟಡಗಳು, 275ಅಂಗನವಾಡಿ ಕಟ್ಟಡಗಳು, 400 ಗ್ರಾಮೀಣ ರಸ್ತೆ, ಸೇತುವೆ, ಕೆರೆಗಳು ಹಾಗೂ 24 ಪ್ರಾಥಮಿಕ ಆರೋಗ್ಯ ಕೇಂದ್ರಗಳು ಹಾನಿಗೊಳಗಾಗಿದ್ದವು. ಒಟ್ಟು 52.14 ಕೋಟಿ ರೂ.ಗಳಷ್ಟು ನಷ್ಟವಾಗಿತ್ತು. ಸರ್ಕಾರದಿಂದ ಮೂಲಸೌಕರ್ಯ ದುರಸ್ತಿಗಾಗಿ 35 ಕೋಟಿ ರೂ. ಬಿಡುಗಡೆಯಾಗಿದೆ. ಕೃಷಿಭೂಮಿ, ಬೆಳೆ ಹಾನಿ: ಹೂಳು ತುಂಬಿಕೊಂಡು ಒಟ್ಟು 5283 ಹೆಕ್ಟೇರ್‌ ಕೃಷಿ ಹಾಗೂ ತೋಟಗಾರಿಕೆ ಪ್ರದೇಶಕ್ಕೆ ನಷ್ಟವಾಗಿದ್ದರೆ, ನದಿ ಪಾತ್ರ ಬದಲಾವಣೆಯಿಂದ ಒಟ್ಟು 7984 ಹೆಕ್ಟೇರ್‌ ಪ್ರದೇಶದ ಮಣ್ಣು ಕೊಚ್ಚಿಹೋಗಿ ಅಪಾರ ಹಾನಿಯಾಗಿದೆ.

ಇದರ ಜತೆಗೆ ಬೆಳೆ ಹಾನಿ ಸೇರಿ ಒಟ್ಟು 165749 ಹೆಕ್ಟೇರ್‌ ಕೃಷಿ ಹಾನಿಯಾಗಿದ್ದರೆ ತೋಟಗಾರಿಕೆಯಲ್ಲಿ ಬೆಳೆ, ಭೂಮಿ ಹಾನಿ ಸೇರಿ ಒಟ್ಟು 15,224ಹೆಕ್ಟೇರ್‌ ಪ್ರದೇಶ ಹಾನಿಯಾಗಿದೆ. ಬೆಳೆ ಹಾನಿ, ಭೂಮಿ ಹಾನಿ ಪರಿಹಾರ ಇನ್ನೂ ಬರಬೇಕಿದೆ. ಒಟ್ಟಾರೆ ಬರೋಬರಿ ಒಂದು ತಿಂಗಳು ಮಂದಗತಿಯಲ್ಲಿ ಸಾಗಿದ್ದ ಅತಿವೃಷ್ಟಿ ಹಾನಿ ಹಾಗೂ ಸಂತ್ರಸ್ತರ ಪರಿಹಾರ ಕಾರ್ಯ ಇನ್ನಾದರೂ ಚುರುಕು ಪಡೆದುಕೊಳ್ಳಬಹುದು ಎಂದು ನಿರೀಕ್ಷಿಸಲಾಗಿದೆ.

 

-ಎಚ್‌.ಕೆ. ನಟರಾಜ

Advertisement

Udayavani is now on Telegram. Click here to join our channel and stay updated with the latest news.

Next