ಯಲ್ಲಾಪುರ: ಜಿಲ್ಲೆಯ ಪ್ರವಾಸೋದ್ಯಮ ಪ್ರವಾಸಿಗರನ್ನು ಸೆಳೆಯುತ್ತಿರುವುದು ನಿಜವಾದರೂ ಪ್ರವಾಸಿಗರಿಗೆ ಮೂಲ ಸೌಕರ್ಯ ಒದಗಿಸುವಲ್ಲಿ ಹಿಂದೆ ಬಿದ್ದಿರುವುದು ಅತ್ಯಂತ ಬೇಸರದ ಸಂಗತಿ. ಅಗತ್ಯ ಸೌಕರ್ಯಗಳ ಕೊರತೆಯೇ ಜಿಲ್ಲೆಯಲ್ಲಿ ಸಾಧ್ಯವಿರುವ ಪ್ರವಾಸೋದ್ಯಮದ ಮೂಲ ಕಲ್ಪನೆ ಸಾಕಾರಗೊಳ್ಳದಿರಲು ಕಾರಣವಾಗಿದೆ ಎಂದು ಪರಿಸರ ಬರಹಗಾರ ಶಿವಾನಂದ ಕಳವೆ ಹೇಳಿದರು.
ರವಿವಾರ ಪಟ್ಟಣದ ನಾಯಕನಕೆರೆಯ ಶ್ರೀಶಾರದಾಂಬಾ ಸಂಸ್ಕೃತ ಪಾಠಶಾಲೆ ಸಭಾಭವನದಲ್ಲಿ ಅಖೀಲ ಭಾರತೀಯ ಸಾಹಿತ್ಯ ಪರಿಷತ್ ಕರ್ನಾಟಕ ಇದರ ಯಲ್ಲಾಪುರ ಘಟಕವು ಸ್ವಾಮಿ ವಿವೇಕಾನಂದ ಬಳಗ ವಜ್ರಳ್ಳಿ, ಶ್ರೀಶಾರದಾಂಬಾ ಸಂಸ್ಕೃತ ಪಾಠಶಾಲೆ ನಾಯಕನಕೆರೆ, ಕಾರ್ಯನಿರತ ಪತ್ರಕರ್ತರ ಸಂಘ ಇವುಗಳ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಾಹಿತ್ಯ ಸಮ್ಮಿಲನದ ಎರಡನೇ ದಿನದ ಕಾರ್ಯಕ್ರಮದಲ್ಲಿ “ಪ್ರವಾಸೋದ್ಯಮ ಮತ್ತು ಉದ್ಯೋಗ ಚಿಂತನ-ಮಂಥನ’ ವಿಚಾರಗೋಷ್ಠಿಯಲ್ಲಿ ಅವರು ಮಾತನಾಡಿದರು.
ಉದ್ಯಮಿ ನರಸಿಂಹ ಛಾಪಖಂಡ “ಪ್ರವಾಸೋದ್ಯಮದ ಅನುಭವಗಳು’ ಎಂಬ ಕುರಿತು ಮಾತನಾಡಿ, ಜಿಲ್ಲೆಯಲ್ಲಿ ಅಪಾರ ಪ್ರಮಾಣದ ಸಂಪತ್ತು ಹಾಗೂ ಸಮೃದ್ಧಿಗಳಿದ್ದರೂ ಅದನ್ನು ಉಪಯುಕ್ತ ರೀತಿಯಲ್ಲಿ ಬಳಸಿಕೊಳ್ಳುವ ಮಾನಸಿಕತೆ ನಮ್ಮಲ್ಲಿ ಇಲ್ಲ. ಪ್ರವಾಸೋದ್ಯಮದಿಂದಾಗಿ ಆರ್ಥಿಕ ಬೆಳವಣಿಗೆಯೊಂದಿಗೆ ಮಾನವ ಸಂಬಂಧಗಳೂ ವೃದ್ಧಿಯಾಗುತ್ತವೆ. ನಮ್ಮ ಜಿಲ್ಲೆ ಪ್ರವಾಸೋದ್ಯಮಕ್ಕೆ ಹೇಳಿ ಮಾಡಿಸಿದಂತಹ ಪ್ರದೇಶವಾಗಿದ್ದು, ಇಲ್ಲಿ ಇದರ ಬೆಳವಣಿಗೆಗಾಗಿ ಕಾರ್ಯತತ್ಪರರಾಗುವಪ್ರಾಮಾಣಿಕರಿಗೆ ನೆರವು ತಾನೇ ದೊರಕುತ್ತದೆ. ಪ್ರವಾಸೋದ್ಯಮದಿಂದಾಗಿ ಆದಾಯ ಹರಿದು ಬರುತ್ತದೆ. ಸಮಾಜದ ಟೀಕೆ ಮತ್ತು ಅವಮಾನಗಳನ್ನು ಎದುರಿಸಿ ಕೇವಲ ಗುರಿ ಸಾಧನೆಯ ನಿಟ್ಟಿನಲ್ಲಿ ಮುನ್ನಡೆಯಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಸಂಕಲ್ಪ ಸಂಸ್ಥೆ ಅಧ್ಯಕ್ಷ ಪ್ರಮೋದ ಹೆಗಡೆ ಮಾತನಾಡಿ, ಪ್ರವಾಸೋದ್ಯಮವೆಂದರೆ ಮಹಾನಗರಗಳಲ್ಲಿನ ಸಿಮೆಂಟ್ ಕಟ್ಟಡವಲ್ಲ. ವಾಸ್ತವಿಕವಾಗಿ ಅದು ನಮ್ಮ ಜಿಲ್ಲೆಯ ನೈಸರ್ಗಿಕ ಸಂಪತ್ತು ಹೊಂದಿರುವ ಪ್ರದೇಶಗಳಲ್ಲಿ ಮಾತ್ರ ಕಾಣಿಸಲ ಸಾಧ್ಯವಾಗಿದೆ. ಪ್ರವಾಸೋದ್ಯಮದ ಅಭಿವೃದ್ಧಿಯಿಂದ ಇಡೀ ಉತ್ತರ ಕನ್ನಡ ಜಿಲ್ಲೆಯ ಸರ್ವಾಂಗೀಣ ಪ್ರಗತಿ ಸಾಧ್ಯ ಎಂದ ಅವರು, ಇಂತಹ ಹೇರಳ ಅವಕಾಶಗಳನ್ನು ಹೊಂದಿರುವ ಉದ್ಯಮವನ್ನು ಕೇವಲ ಮನೋರಂಜನೆಗಾಗಿ ಸ್ಥಾಪಿಸದೇ ವೈಜ್ಞಾನಿಕತೆ, ಆಧ್ಯಾತ್ಮಿಕತೆ, ಶೈಕ್ಷಣಿಕತೆ ಹಾಗೂ ಜ್ಞಾನಗಳನ್ನು ಬಿಂಬಿಸಲು ತನ್ಮೂಲಕ ಅನುವು ಮಾಡಿಕೊಡಬೇಕು. ಸಂಸ್ಕೃತಿ-ಪ್ರಕೃತಿಗಳನ್ನು ಜೋಡಿಸುವ ಕಾರ್ಯದಿಂದ ಪ್ರವಾಸೋದ್ಯಮದ ಪರಿಪೂರ್ಣತೆ ಸಾ ಧಿಸಬಹುದೆಂದ ಅವರು, ಈ ಕುರಿತು ಅಗತ್ಯ ಚರ್ಚೆಗಳು ನಡೆದು ಸರ್ಕಾರಕ್ಕೆ ಮನದಟ್ಟು ಮಾಡಿಕೊಡಬೇಕಾಗಿದೆ ಎಂದರು.
ಅ.ಭಾ.ಸಾ.ಪ ತಾಲೂಕು ಸಂಚಾಲಕ ಶಂಕರ ಭಟ್ಟ ತಾರೀಮಕ್ಕಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀಧರ ಹೆಗಡೆ ನಿರ್ವಹಿಸಿದರು.