ಗಂಗಾವತಿ: ಕೊಪ್ಪಳ ಜಿಲ್ಲೆಯ ಬರದ ತಾಲೂಕುಗಳಿಗೆ ನೀರಾವರಿ ಕಲ್ಪಿಸುವ ಮಹತ್ವದ ಕೃಷ್ಣಾ ಬಿ ಸ್ಕೀಂ ಅಥವಾ ಕೊಪ್ಪಳ ಏತ ನೀರಾವರಿ ಯೋಜನೆ ರೈತರ ಪಾಲಿಗೆ ವರವಾಗಿದ್ದು, ಜನಪ್ರತಿನಿಧಿಗಳಿಂದ ಶಾಪಗ್ರಸ್ತವಾಗಿದೆ. ಪರ ವಿರೋಧ ಹೇಳಿಕೆಗಳ ಮೂಲಕ ಕೃಷ್ಣಾ ಬಿ ಸ್ಕೀಂ ಯೋಜನೆ ಅನುಷ್ಠಾನ ವಿಳಂಬವಾಗುತ್ತಿದ್ದು, ಯೋಜನಾ ಗಾತ್ರ ಪ್ರತಿವರ್ಷ ಹೆಚ್ಚುತ್ತಿದೆ.
ಆರ್ಥಿಕ ಹೊರೆಯ ಕಾರಣದಲ್ಲಿ ಯೋಜನೆ ಅನುಷ್ಠಾನಕ್ಕೆ ಆಡಳಿತ ನಡೆಸುತ್ತಿರುವ ಸರಕಾರಗಳು ಕೈ ಚೆಲ್ಲುತ್ತಿವೆ. ನ್ಯಾಯಾಧೀಕರಣದ ತೀರ್ಪಿನಂತೆ 729 ಟಿಎಂಸಿ ಅಡಿ ನೀರು ಕರ್ನಾಟಕದ ಪಾಲಾಗಿದೆ. ಇದರಲ್ಲಿ 15 ಟಿಎಂಸಿ ಅಡಿ ಕೃಷ್ಣಾ ನದಿಯ ನೀರನ್ನು ಕೃಷ್ಣಾ ಬಿ ಸ್ಕಿಂ ಯೋಜನೆಯಲ್ಲಿ ಏತ ನೀರಾವರಿ ಮೂಲಕ ಕೊಪ್ಪಳ ಜಿಲ್ಲೆಯ ಕುಷ್ಟಗಿ, ಕನಕಗಿರಿ, ಗಂಗಾವತಿ, ಯಲಬುರ್ಗಾ, ಕೊಪ್ಪಳ ತಾಲೂಕುಗಳ 1.12 ಹೆಕ್ಟೆರ್ ಭೂಮಿಗೆ ಹನಿ ನೀರಾವರಿ ಕಲ್ಪಿಸಲು ಯೋಜನೆ ರೂಪಿಸಿ ಅನುಷ್ಠಾನಗೊಳಿಸಲಾಗುತ್ತಿದೆ.
ಈಗಾಗಲೇ ಭೂಸ್ವಾಧೀನ ಮಾಡಿ ಕಾಲುವೆ ತೊಡಲಾಗಿದ್ದು, ಭೂಮಿ ಕಳೆದುಕೊಂಡ ರೈತರಿಗೆ ಪರಿಹಾರ ನಿಗದಿ ಮಾಡಿ ಪಾವತಿಸುವ ಕಾರ್ಯ ನಡೆಯುತ್ತಿದೆ. ಈ ಮಧ್ಯೆ ಯೋಜನೆ ಕಾಮಗಾರಿ ವಿಳಂಬ ಗತಿಯಲ್ಲಿ ನಡೆಯುತ್ತಿದೆ. ಇದರಿಂದಾಗಿ ಯೋಜನೆಯ ಗಾತ್ರ ದುಪ್ಪಟಾಗುವ ಸಾಧ್ಯತೆ ಇದೆ. ಮುಂಬರುವ ರಾಜ್ಯ ಬಜೆಟ್‌ನಲ್ಲಿ ಹಣ ಮೀಸಲಿಟ್ಟು ಕಾಮಗಾರಿ ಪೂರ್ಣಗೊಳಿಸುವ ಅವಶ್ಯವಿದೆ. ಕಳೆದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರದಲ್ಲಿ ಕೃಷ್ಣಾ ಬಿ ಸ್ಕೀಂ ಯೋಜನೆಯಲ್ಲಿ ಅಲ್ಪ ಪ್ರಮಾಣದ ತಾಂತ್ರಿಕ ಬದಲಾವಣೆ ಮಾಡಿ ಜಿಲ್ಲೆಯ 42 ಕೆರೆ ತುಂಬಿಸುವ ಮೂಲಕ ಯೋಜನೆ ಅನುಷ್ಠಾನಗೊಳಿಸಲಾಗಿದೆ.
ಇದಕ್ಕಾಗಿ 1864.05 ಕೋಟಿ ವೆಚ್ಚದಲ್ಲಿ ಕಾಮಗಾರಿ ನಡೆದಿದೆ. ಕೃಷ್ಣಾ ಬೀ ಸ್ಕೀಂ ಯೋಜನೆ ಅನುಷ್ಠಾನಕ್ಕೆ ಹಣದ ಕೊರತೆಯಿಂದ ಮೈತ್ರಿ ಸರಕಾರದಲ್ಲಿ ಕಾಮಗಾರಿ ವಿಳಂಬವಾಗಿದೆ. ಇದೀಗ ಅಧಿಕಾರಕ್ಕೆ ಬಂದಿರುವ ಬಿಜೆಪಿ ಸರಕಾರ ಯೋಜನೆ ಪೂರ್ಣಗೊಳಿಸಲು ಮುಂದಿನ ಬಜೆಟ್‌ನಲ್ಲಿ ಯೋಜನೆಗೆ ಹಣ ಮೀಸಲಿಡುವ ನಿರೀಕ್ಷೆ ಇದೆ. ಕೃಷ್ಣಾ ಬಿ ಸ್ಕೀಂ ಯೋಜನೆ ಶಂಕು ಸ್ಥಾಪನೆ ಜಗದೀಶ ಶೆಟ್ಟರ್ ಸಿಎಂ ಆಗಿದ್ದ ಸಂದರ್ಭದಲ್ಲಿ ನೆರವೇರಿಸಲಾಗಿದೆ.
ಇದೀಗ ಯೋಜನೆ ಪೂರ್ಣಗೊಳಿಸಿ ರೈತರ ವಿಶ್ವಾಸ ಸಂಪಾದನೆ ಮಾಡುವ ಉದ್ದೇಶದಿಂದ ಸಂಸದ ಕರಡಿ ಸಂಗಣ್ಣ, ಶಾಸಕರಾದ ಹಾಲಪ್ಪ ಆಚಾರ್, ಪರಣ್ಣ ಮುನವಳ್ಳಿ, ಬಸವರಾಜ ದಢೇಸುಗೂರು ಸೇರಿ ಜಿಲ್ಲೆಯ ಬಿಜೆಪಿ ಮುಖಂಡರು ತೀವ್ರ ಯತ್ನ ನಡೆಸಿದ್ದಾರೆ. ಈ ಮಧ್ಯೆ ಮಾಜಿ ಸಚಿವ ಬಸವರಾಜ ರಾಯರಡ್ಡಿ ಅವರು ಕೃಷ್ಣಾ ಬಿ ಸ್ಕೀಂ ಯೋಜನೆ ಕುರಿತು ಪುಸ್ತಕ ರಚನೆ ಮಾಡಿ ಸಮಗ್ರ ಮಾಹಿತಿ ನೀಡಲು ಯತ್ನಿಸಿದ್ದಾರೆ. ಪಕ್ಷ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಯಾವುದೇ ಯತ್ನ ನಡೆಸದ ರಾಯರಡ್ಡಿ ಈಗ ಕೃಷ್ಣಾ ಬಿ ಸ್ಕೀಂ ಯೋಜನೆ ಕುರಿತು ನಾಟಕ ಶುರುವಿಟ್ಟುಕೊಂಡಿದ್ದಾರೆಂಬ ಆರೋಪಗಳು ಕೇಳಿ ಬರುತ್ತಿವೆ.
ಕೃಷ್ಣಾ ನದಿ ನೀರನ್ನು ಸಮರ್ಪಕವಾಗಿ ಬಳಕೆ ಮಾಡುವ ಉದ್ದೇಶದಿಂದ ಕೃಷ್ಣಾ ಬಿ ಸ್ಕೀಂ ಯೋಜನೆ ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಗೊಳ್ಳಬೇಕಿದೆ. ರೈತರ ಹೆಸರಿನಲ್ಲಿ ಅಧಿ ಕಾರಕ್ಕೆ ಬರುವ ಪಕ್ಷಗಳು ನಂತರ ರೈತರನ್ನು ಮರೆಯುತ್ತಿವೆ. ಇದರಿಂದ ರೈತರ ಹಿತ ಕಾಪಾಡಲು ಆಗುತ್ತಿಲ್ಲ. ಅಪೂರ್ಣಗೊಂಡ ಕೃಷ್ಣಾ ಬಿ ಸ್ಕೀಂ ಯೋಜನೆ ಪೂರ್ಣಗೊಳಿಸಲು ಪಕ್ಷಭೇದ ಮರೆತು ರಾಜಕೀಯ ಮುಖಂಡರು ಆಂಧ್ರಪ್ರದೇಶ, ತಮಿಳುನಾಡು ಮಾದರಿಯಲ್ಲಿ ಒಂದಾಗಬೇಕಿದೆ. ಮುಂದಿನ ಬಜೆಟ್‌ನಲ್ಲಿ ಕೃಷ್ಣಾ ಬಿ ಸ್ಕೀಂ ಯೋಜನೆಗೆಹಣ ಮೀಸಲಿಡಬೇಕೆಂದು ಬಜೆಟ್ ಪೂರ್ವ ಸಭೆಯಲ್ಲಿ ಒತ್ತಾಯಿಸಲಾಗುತ್ತದೆ.
–ಚಾಮರಸ ಪಾಟೀಲ್ ಬೆಟದೂರು, ಗೌರವಾಧ್ಯಕ್ಷ ರಾಜ್ಯ ರೈತ ಸಂಘ
ಕೆ. ನಿಂಗಜ್ಜ