ನರೇಗಲ್ಲ: ಮಳೆಗಾಲದಲ್ಲಿ ಪಟ್ಟಣದಾದ್ಯಂತ ಕುಡಿಯುವ ನೀರಿಗೆ ಹಾಹಾಕಾರ ಶುರುವಾಗಿದೆ. ಕೆಲವು ಕೊಳವೆ ಬಾವಿಗಳು ಬತ್ತಿಹೋಗಿದ್ದು, ಕುಡಿಯುವ ನೀರಿಗೆ ಜನತೆ ತತ್ತರಿಸುವಂತಾಗಿದೆ. ಪಟ್ಟಣದಲ್ಲಿ ಕುಡಿಯುವ ನೀರಿಗಾಗಿ ಕೆಲವೇ ಕೆಲವು ಕೊಳವೆ ಬಾವಿಗಳಿವೆ. ಖಾಸಗಿ ಕೊಳವೆಬಾವಿಗಳ ಮಾಲೀಕರಿಗೆ ಪ್ರತಿ ತಿಂಗಳು 12 ಸಾವಿರ ರೂ.ಗಳನ್ನು ಕೊಟ್ಟು ನೀರು ಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ.
ಅಂದಾಜು 26 ಸಾವಿರ ಜನಸಂಖ್ಯೆಯನ್ನೊಳಗೊಂಡ ಪಟ್ಟಣದಲ್ಲಿ ಒಟ್ಟು 17 ವಾರ್ಡ್‌ಗಳಿದ್ದು, 55 ಕೊಳವೆ ಬಾವಿಗಳಿವೆ. ಅವುಗಳಿಗೆ 10.20 ಕೋಟಿ ರೂ.ಗಳನ್ನು ಖರ್ಚು ಮಾಡಲಾಗಿದೆ. ಇವುಗಳಲ್ಲಿ 34 ಕೊಳವೆ ಬಾವಿಗಳು ಸಂಪೂರ್ಣವಾಗಿ ಬತ್ತಿಹೋಗಿವೆ. ಉಳಿದ 21ರಲ್ಲಿ ಅಲ್ಪಸ್ವಲ್ಪ ನೀರು ಬರುತ್ತಿದೆ. ಪ್ರತಿನಿತ್ಯ 17 ವಾರ್ಡ್‌ನ ಜನತೆಗೆ ಸಮರ್ಪಕವಾಗಿ ನೀರು ಒಸಗಿಸಲು 4 ಲಕ್ಷ ಲೀಟರ್‌ಗಳಷ್ಟು ನೀರು ಬೇಕಿದೆ. ಆದರೆ, ಈಗ ಪಟ್ಟಣ ಪಂಚಾಯಿತಿಯವರು ನೀಡುತ್ತಿರುವುದು ಕೇವಲ ದಿನಕ್ಕೆ 2 ಲಕ್ಷ ಲೀಟರ್‌ಗಳಷ್ಟು ಮಾತ್ರ. ಇನ್ನೂ 2 ಲಕ್ಷ ಲೀಟರ್ ನೀರಿನ ಕೊರತೆ ಎದುರಿಸುತ್ತಿದೆ. ನೀರಿನ ಕೊರತೆಯಿಂದ 15 ಅಥವಾ 20 ದಿನಕ್ಕೊಮ್ಮೆ ನೀರು ಸರಬರಾಜು ಮಾಡಲಾಗುತ್ತಿದೆ.
ಶಾಸಕರ ಮನವಿಗೆ ಸ್ಪಂದಿಸದ ಜಿಲ್ಲಾಧಿಕಾರಿ: ಸ್ಥಳೀಯ ಶಾಸಕ ಕಳಕಪ್ಪ ಬಂಡಿ ಅವರು ಈಗಿನ ಪರಿಸ್ಥಿತಿ ಗಮನಿಸಿ ಮುಂಬರುವ ಬೇಸಿಗೆ ಕಾಲಕ್ಕೆ ತುಂಬಾ ಗಂಭೀರ ಸಮಸ್ಯೆ ಉದ್ಭವವಾಗುವ ಲಕ್ಷಣಗಳಿವೆ. ಅದಕ್ಕಾಗಿ ಪಟ್ಟಣಕ್ಕೆ ಶಾಶ್ವತ ಕುಡಿಯುವ ನೀರಿನ ಕಾಮಗಾರಿಯು ಪ್ರಗತಿಯಲಿದ್ದು, ಅಲ್ಲಿಯವರೆಗೂ ತಾತ್ಕಾಲಿಕವಾಗಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ ನೀರು ಪೂರೈಕೆ ಮಾಡಬೇಕಾಗಿದೆ ಎಂದು ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಶಿಫಾರಸ್ಸು ಮನವಿ ಸಲ್ಲಿಸಲಾಗಿತು. ಆದರೆ ಪಟ್ಟಣಕ್ಕೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ ನೀರು ಒದಗಿಸುವಲ್ಲಿ ಜಿಲ್ಲಾಡಳಿತ ವಿಫಲವಾಗಿದೆ.
ಟ್ಯಾಂಕರ್ ಮೂಲಕ ಸರಬರಾಜು:
ಪಟ್ಟಣದ 17 ವಾರ್ಡ್‌ಗಳಿಗೂ ಪ್ರತಿನಿತ್ಯ ಒಂದು ಅಥವಾ ಎರಡು ಟ್ಯಾಂಕರ್ ನೀರನ್ನು ಪ.ಪಂ ಅವರು ನೀರು ಒದಗಿಸುತ್ತಿದ್ದಾರೆ. ಸ್ಥಿತಿವಂತರು ಹಣವನ್ನು ಕೊಟ್ಟು ಟ್ಯಾಂಕರ್‌ಗಳ ಮೂಲಕ ತಮ್ಮ ಸಂಪುಗಳಿಗೆ ನೀರು ಪೂರೈಸಿಕೊಳ್ಳುತ್ತಿದ್ದಾರೆ. ಸಾಮಾನ್ಯ ಮತ್ತು ಬಾಡಿಗೆ ಮನೆಗಳಲ್ಲಿ ವಾಸಿಸುವ ಬಡವರು ಮತ್ತು ಮಧ್ಯಮ ವರ್ಗದವರ ನೀರಿನ ಪಾಡಂತೂ ಹೇಳತೀರದಾಗಿದೆ.
ಶುದ್ಧೀಕರಣ ಘಟಕಕ್ಕೆ ಡಿಮಾಂಡ್: ಪಟ್ಟಣದಲ್ಲಿರುವ ಶುದ್ಧೀಕರಣ ಘಟಕಕ್ಕೆ ದಿನೇ ದಿನೇ ಬೇಡಿಕೆ ಹೆಚ್ಚಾಗಿದೆ. ಬೆಳಗಿನಿಂದಲೇ ನೀರಿಗಾಗಿ ಕ್ಯಾನ್‌ಗಳನ್ನು ಇಟ್ಟುಕೊಂಡು ಸಾಲು ನಿಲ್ಲವಂತಾಗಿದೆ. ಘಟಕ್ಕೆ ಸರಬರಾಜು ಆಗುವ ಕೊಳವೆಬಾವಿಗಳಲ್ಲೂ ಸಹ ನೀರಿನ ಕೊರತೆ ಎದುರಾಗಿದ್ದು, ಕೆಲವು ಶುದ್ಧೀಕರಣ ಘಟಕಗಳು ನೀರಿನ ಕೊರತೆಯಿಂದ ಮುಚ್ಚುವ ಹಂತಕ್ಕೆ ತಲುಪಿದೆ.
•ಸಿಕಂದರ್ ಎಂ. ಆರಿ