Advertisement

ಇಂಗ್ಲೆಂಡ್‌ಗೆ ಬರದ ಆಂತಕ; ನೀರಿಗೂ ರೇಷನ್‌; ಬ್ರಿಟನ್‌ ಸರ್ಕಾರದಿಂದ ಅಧಿಕೃತ ಘೋಷಣೆ

12:13 AM Aug 13, 2022 | Team Udayavani |

ಲಂಡನ್‌: ಅನೇಕ ದಿನಗಳಿಂದ ಅಗಾಧ ಉಷ್ಣ ಹಾಗೂ ಶುಷ್ಕ ವಾತಾವರಣ ಆವರಿಸಿರುವ ಲಂಡನ್‌ನ ಕೇಂದ್ರ ಭಾಗ, ದಕ್ಷಿಣ ಹಾಗೂ ಪೂರ್ವ ಭಾಗಗಳನ್ನು ಬರಪೀಡಿತ ಪ್ರದೇಶಗಳೆಂದು ಬ್ರಿಟನ್‌ ಸರ್ಕಾರ ಅಧಿಕೃತವಾಗಿ ಘೋಷಿಸಿದೆ.

Advertisement

ಜುಲೈ ತಿಂಗಳಲ್ಲಿ ಈ ಪ್ರಾಂತ್ಯಗಳಲ್ಲಿ ಸರಾಸರಿ ಉತ್ತಮ ಮಳೆಯಾಗುತ್ತಿತ್ತು. ಆದರೆ, ಈ ಬಾರಿಯ ಜುಲೈನಲ್ಲಿ ಅಲ್ಲಿ ಶೇ. 35ರಷ್ಟು ಮಳೆ ಮಾತ್ರ ಬಿದ್ದಿದೆ. 1935ರ ನಂತರ ಹೀಗಾಗುತ್ತಿರುವುದು ಇದೇ ಮೊದಲು ಎಂದು ತಜ್ಞರು ತಿಳಿಸಿದ್ದಾರೆ.

ಹೀಗಾಗಿ, ಅಲ್ಲಿನ ಸೂಪರ್‌ ಮಾರ್ಕೆಟ್‌ಗಳಲ್ಲಿ ನೀರಿನ ಬಾಟಲಿಗಳ ಮಾರಾಟ ಬಿರುಸಾಗಿದೆ. ಅದರ ಪೂರೈಕೆಯಲ್ಲಿ ಕೂಡ ವ್ಯತ್ಯಯ ಉಂಟಾಗಿದೆ. ಹೀಗಾಗಿ, ಪ್ರತಿ ಗ್ರಾಹಕರಿಗೆ ಮೂರು ನೀರಿನ ಬಾಕ್ಸ್‌ಗಳನ್ನು ಮಾತ್ರ ನೀಡಲಾಗುತ್ತದೆ ಎಂದು ನೋಟಿಸ್‌ ಅಂಟಿಸಲಾಗಿದೆ.

ಬತ್ತಿ ಹೋಯ್ತು ಥೇಮ್ಸ್‌ ಉಗಮಸ್ಥಾನ
ಲಂಡನ್‌ನ ಜೀವನದಿಯಾಗಿರುವ ಥೇಮ್ಸ್‌ನ ಉಗಮಸ್ಥಾನ ಬತ್ತಿ ಹೋಗಿದೆ ಎಂಬ ಮತ್ತೂಂದು ಆತಂಕಕಾರಿ ವಿಚಾರವನ್ನು ಬ್ರಿಟನ್‌ ಹವಾಮಾನ ಇಲಾಖೆಯ ಅಧಿಕಾರಿಗಳು ಹೊರಹಾಕಿದ್ದಾರೆ. ನದಿಯ ಉಗಮ ಸ್ಥಾನವಾದ ಗ್ಲೌಸಿಸ್ಟೆರ್‌ಶೈನ್‌ ಪರ್ವತ ಶ್ರೇಣಿಗಳಲ್ಲಿ ಪ್ರತಿ ವರ್ಷದ ಚೈತ್ರಕಾಲದಲ್ಲಿ ಅಪಾರ ಮಳೆ ಸುರಿಯುವುದರಿಂದ ನದಿ ಮೈದುಂಬಿ ಹರಿಯುತ್ತದೆ.

ಆದರೆ, ಈ ಬಾರಿ ಜುಲೈನಲ್ಲಿ ಅತಿಯಾದ ಉಷ್ಣ ಆವರಿಸಿದ ಹಿನ್ನೆಲೆಯಲ್ಲಿ ನದಿಯ ಉಗಮಸ್ಥಾನದಲ್ಲಿ ಚೈತ್ರವೇ ಮಾಯವಾಗಿದ್ದು ಅದರ ಪರಿಣಾಮ, ಉಗಮ ಸ್ಥಾನ ಬತ್ತಿಹೋಗಿದೆ ಎಂದು ತಜ್ಞರು ಹೇಳಿದ್ದಾರೆ.

Advertisement

ಉತ್ತರ ಧ್ರುವದಲ್ಲಿ ತೊಂದರೆ:!
ಭೂಮಿಯ ಉತ್ತರ ಭಾಗದಲ್ಲಿರುವ ಆರ್ಕ್‌ಟಿಕ್‌ ಪ್ರದೇಶದಲ್ಲಿ ಶಾಖ, ಭೂಮಿಯ ಮಿಕ್ಕೆಲ್ಲಾ ಭಾಗಗಳಿಗಿಂತ ನಾಲ್ಕು ಪಟ್ಟು ಹೆಚ್ಚಾಗಿದೆ. 43 ವರ್ಷಗಳಿಗೆ ಹೋಲಿಕೆ ಮಾಡಿದರೆ ಈ ಪ್ರದೇಶದಲ್ಲಿ 2.7 ಡಿಗ್ರಿ ಸೆಲ್ಸಿಯಸ್ ತಾಪಮಾನ ಹೆಚ್ಚಾಗಿದೆ.

ಹೀಗಾಗಿ, ಈ ಭಾಗದಲ್ಲಿರುವ ಮಂಜು ತ್ವರಿತವಾಗಿ ಕರಗಿ ಸಮುದ್ರ ಸೇರುವುದರಿಂದ ಸಮುದ್ರದ ನೀರಿನ ಮಟ್ಟ ಹೆಚ್ಚಾಗಿ, ಜಲಪ್ರಯಳದಂಥ ಅಪಾಯಗಳು ಸಂಭವಿಸುವ ಸಾಧ್ಯತೆಗಳಿವೆ ಎಂದು ತಜ್ಞರು ಹೇಳಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next