ಚಿಕ್ಕೋಡಿ: ಮಾರ್ಚ್ ಆರಂಭದಲ್ಲಿ ನೆತ್ತಿ ಸುಡುವ ಬಿಸಿಲಿನ ತಾಪಕ್ಕೆ ಗಡಿ ಭಾಗದ ಕೃಷ್ಣಾ, ದೂಧಗಂಗಾ ನದಿಗಳ ನೀರಿನ ಮಟ್ಟದಲ್ಲಿ ಗಣನೀಯ ಕಡಿಮೆಯಾಗುತ್ತಿದ್ದು, ಈಗಿನಿಂದಲೇ ಮಹಾರಾಷ್ಟ್ರದ ಕಾಳಮ್ಮವಾಡಿ ಮತ್ತು ಕೊಯ್ನಾ ಜಲಾಶಯದಿಂದ ನದಿಗೆ ನೀರು ಬಿಡಿಸುವತ್ತ ಜನಪ್ರತಿನಿಧಿ ಗಳು ಗಮನ ಹರಿಸಬೇಕೆಂಬ ಒತ್ತಾಯ ಕೇಳಿ ಬರುತ್ತಿವೆ.
ಕಳೆದ ಆಗಸ್ಟ್ ತಿಂಗಳಲ್ಲಿ ಭೀಕರ ಮಳೆ ಮತ್ತು ಕೊಯ್ನಾ ಜಲಾಶಯದಿಂದ ಹರಿಯ ಬಿಟ್ಟಿರುವ ನೀರಿನ ಪ್ರಮಾಣದಿಂದ ಕೃಷ್ಣಾ ಮತ್ತು ದೂಧಗಂಗಾ ನದಿಗಳಲ್ಲಿ ಪ್ರವಾಹ ಉಂಟಾಗಿ ಜನರನ್ನು ತಲ್ಲಣಗೊಳಿಸಿತ್ತು. ಈಗ ಬೇಸಿಗೆ ಸಮೀಪಿಸುತ್ತಿದ್ದಂತೆ ನದಿಗಳಲ್ಲಿನ ನೀರು ಕಡಿಮೆಯಾಗುತ್ತಿದ್ದು, ಈ ವರ್ಷ ನದಿಗಳು ಬತ್ತಿ ಹೋಗುತ್ತಿದೆಯಾ ಎಂಬ ಚಿಂತೆ ಜನರನ್ನು ಕಾಡತೊಡಗಿದೆ. ಹೆಚ್ಚು ಸಂಕಷ್ಟ ಅನುಭವಿಸಿದ್ದು ನದಿ ತೀರದ ಜನತೆ: ಕಳೆದ ಐದಾರು ವರ್ಷಗಳಿಂದ ಚಿಕ್ಕೋಡಿ ತಾಲೂಕಿನಲ್ಲಿ ಭೀಕರ ಬರಗಾಲ ಎದುರಾಗಿತ್ತು. ಆದರೆ ಕಳೆದ ವರ್ಷದ ಆಗಸ್ಟ್ ತಿಂಗಳಲ್ಲಿ ಸುರಿದ ಧಾರಾಕಾರ ಮಳೆಯಿಂದ ನದಿಗಳು ಉಕ್ಕಿ ಹರಿದು ಪ್ರವಾಹ ಎದುರಾಗಿ ಜನ ಸಂಕಷ್ಟ ಅನುಭವಿಸಿತ್ತು. ಮತ್ತು ಕಳೆದ ಬೇಸಿಗೆಯಲ್ಲಿ ನದಿಯಲ್ಲಿನ ನೀರು ಬತ್ತಿ ಹೋಗಿ ಜನ ತೊಂದರೆ ಅನುಭವಿಸಿದ್ದರು. ಬೇಸಿಗೆಯಲ್ಲಿ ನದಿ ನೀರನ್ನು ಅವಲಂಬಿಸಿರುವ ಜನ ನದಿ ಬತ್ತಿ ಹೋದರೆ ಜನ ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಸಾಧ್ಯತೆ ದಟ್ಟವಾಗಿದೆ.
ಬತ್ತುವ ಸ್ಥಿತಿ ತಲುಪಿದ ದೂಧಗಂಗಾ ನದಿ: ದೂಧಗಂಗಾ ನದಿಯ ನೀರಿನ ಮೇಲೆ ಸುಮಾರು 30 ಗ್ರಾಮಗಳು ಅವಲಂಬಿಸಿವೆ. ಈ ಬಾರಿ ಮಾರ್ಚ್ ಮೊದಲ ವಾರದಲ್ಲಿಯೇ ನದಿಯಲ್ಲಿನ ನೀರಿನ ಮಟ್ಟ ಕುಸಿಯುತ್ತ ಬಂದಿದೆ. ಹೀಗಾಗಿ ಈ ನದಿ ನೀರನ್ನು ಕೊಗನೋಳಿ, ಬಾರವಾಡ, ಮಾಂಗೂರ, ಕಾರದಗಾ, ಬೇಡಿಕಿಹಾಳ, ಶಮನೆವಾಡಿ, ಶಿರದವಾಡ, ಜನವಾಡ, ಸದಲಗಾ, ಯಕ್ಸಂಬಾ ಸೇರಿದಂತೆ ಅನೇಕ ಗ್ರಾಮಗಳು ಕುಡಿಯುವ ನೀರಿಗೆ ಹಾಗೂ ಕೃಷಿಗೆ ಬಳಸುತ್ತಾರೆ. ಅದಲ್ಲದೇ ಏತ ನೀರಾವರಿ ಯೋಜನೆಗಳು, ಗಂಗಾ ಕಲ್ಯಾಣ ಯೋಜನೆಗಳು, ವೈಯಕ್ತಿಕ ನೀರಾವರಿ ಯೋಜನೆಗಳ ಸುಮಾರು 3000 ಪಂಪ್‌ಸೆಟ್‌ಗಳು ಈ ದೂಧಗಂಗಾ ನದಿಗೆ ಅಳವಡಿಸಿದ್ದು, ಇದರಿಂದ ಬೇಸಿಗೆಯಲ್ಲಿ ನದಿ ನೀರು ತ್ವರಿತವಾಗಿ ಖಾಲಿಯಾಗುವ ಸ್ಥಿತಿಗೆ ತಲುಪಿದೆ.
ಬರಗಾಲ ಪೀಡಿತ ಗ್ರಾಮಗಳಲ್ಲಿ ನೀರಿನ ಸಮಸ್ಯೆ: ಚಿಕ್ಕೋಡಿ ತಾಲೂಕಿನ ನಾಗರಮುನ್ನೊಳ್ಳಿ ಹಾಗೂ ಕರೋಶಿ ಜಿಪಂ ಕ್ಷೇತ್ರಗಳಲ್ಲಿ ಬರುವ ಹಳ್ಳಿಗಳಲ್ಲಿ ಸಾಕಷ್ಟು ಕುಡಿಯುವ ನೀರಿನ ಸಮಸ್ಯೆ ಎದುರಾಗುತ್ತಿತ್ತು. ಆದರೆ ಎಲ್ಲ ಹಳ್ಳಿಗಳಿಗೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಮೂಲಕ ರಾಜ್ಯ ಸರ್ಕಾರ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಿದೆ. ಆದರೆ ಬೇಸಿಗೆಯಲ್ಲಿ ನದಿಯಲ್ಲಿನ ನೀರು ಖಾಲಿಯಾದರೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳು ಸ್ಥಗಿತಗೊಳ್ಳುತ್ತಿವೆ. ಮತ್ತೆ ಟ್ಯಾಂಕರ್ ಮೂಲಕ ಜನರಿಗೆ ನೀರು ಕೊಡಲು ಸರ್ಕಾರ ಹೆಣಗಾಡಬೇಕಾಗುತ್ತದೆ. ಮುನ್ನೆಚ್ಚರಿಕೆ ಕ್ರಮವಾಗಿ ಮಹಾರಾಷ್ಟ್ರದ ವಿವಿಧ ಜಲಾಶಯಗಳಿಂದ ಒಂದೊಂದು ಟಿಎಂಸಿ ಪ್ರತಿ ತಿಂಗಳು ನೀರು ಬಿಡಿಸಿದರೆ ನದಿಯಲ್ಲಿನ ನೀರು ಖಾಲಿಯಾಗುವುದಿಲ್ಲ ಮತ್ತು ಕುಡಿಯುವ ನೀರಿನ ಸಮಸ್ಯೆ ಎದುರಾಗುವುದಿಲ್ಲ ಎನ್ನುತ್ತಾರೆ ಹತ್ತರವಾಟದ ರವಿ ಹಿರೇಕೋಡಿ.
ಕಳೆದ ಬೇಸಿಗೆಯಲ್ಲಿ ಸಂಕಷ್ಟ ಅನುಭವಿಸಿದ ರೈತರು: ಕಳೆದ ವರ್ಷದ ಬೇಸಿಗೆ ಆರಂಭದಲ್ಲಿಯೇ ಕೃಷ್ಣಾ ಮತ್ತು ಉಪನದಿಗಳು ಬತ್ತಿ ಬರಡಾದವು. ಜಿಲ್ಲೆಯ ಎಲ್ಲ ಜನಪ್ರತಿನಿಧಿ ಗಳು ಅಂದಿನ ಮಹಾರಾಷ್ಟ್ರದ ಸಿಎಂ ದೇವೇಂದ್ರ ಪಡ್ನವಿಸ್‌ರನ್ನು ಭೇಟಿ ಮಾಡಿ ಮನವಿ ಮಾಡಿದರೂ ನದಿಗೆ ನೀರು ಬರಲಿಲ್ಲ, ಹೀಗಾಗಿ ಚಿಕ್ಕೋಡಿ, ರಾಯಬಾಗ ಮತ್ತು ಅಥಣಿ ತಾಲೂಕಿನ ರೈತರು ಬಾರಿ ಸಂಕಷ್ಟ ಅನುಭವಿಸಿದರು. ಅದೇ ಪರಿಸ್ಥಿತಿ ಈ ಬೇಸಿಗೆಯಲ್ಲಿ ಬರಬಾರದು. ಜಿಲ್ಲೆಯ ನಾಯಕರು ಮಹಾ ನಾಯಕರ ಮೇಲೆ ಒತ್ತಡ ಹಾಕಿ ರಾಜ್ಯದ ಪಾಲಿನ ನೀರನ್ನು ಹಂತ ಹಂತವಾಗಿ ನದಿಗೆ ಬಿಡಿಸುವ ಕೆಲಸ ಮಾಡಬೇಕು ಎನುತ್ತಾರೆ ಮಾಂಜರಿ ರೈತ ತಾತ್ಯಾಸಾಹೇಬ ಕಾಮತ.
ಕಳೆದ ವರ್ಷ ಮೂರು ತಿಂಗಳು ಬರಗಾಲ ಮತ್ತು ನಂತರ ಮೂರು ತಿಂಗಳು ಪ್ರವಾಹ ಹೀಗೆ ಆರು ತಿಂಗಳು ವನವಾಸ ಅನುಭವಿಸಲಾಗಿದೆ. ಈಗ ಮತ್ತೆ ಬೇಸಿಗೆ ಆರಂಭವಾಗಿದೆ. ನದಿಯಲ್ಲಿನ ನೀರು ಬತ್ತುವ ಸ್ಥಿತಿ ತಲುಪಿವೆ. ಸಂಪೂರ್ಣ ನದಿ ಬತ್ತಿ ಹೋದರೆ ರೈತರ ಜೀವನ ನರಕಯಾತನೆಯಾಗುತ್ತದೆ. ಸಾಧ್ಯವಾದಷ್ಟು ಜಿಲ್ಲೆಯ ನಾಯಕರು ನದಿಗೆ ನೀರು ಬಿಡಿಸಿ ಅನುಕೂಲ ಕಲ್ಪಿಸಬೇಕು.-
ಕೃಷ್ಣಾ ಉಪ್ಪಾರ, ಯಡೂರ ರೈತ.
ಕೃಷ್ಣಾ, ದೂಧಗಂಗಾ ಹಾಗೂ ಹಿರಣ್ಯಕೇಶಿ ನದಿಯಲ್ಲಿ ನೀರು ಇರುವತನಕ ಬಹುಗ್ರಾಮ ಕುಡಿಯುವ ನೀರಿನೆಗಳು ಚಾಲ್ತಿಯಲ್ಲಿವೆ. ಈಗಾಗಲೇ ನದಿ ನೀರು ಕಡಿಮೆಯಾಗುತ್ತಾ ಹೋದರೂ ರಾಜ್ಯ ಸರ್ಕಾರ ನದಿಗೆ ನೀರು ಬಿಡಿಸುವ ಪ್ರಯತ್ನ ಮಾಡುತ್ತದೆ. ಇಲ್ಲಿಯವರಿಗೆ ಚಿಕ್ಕೋಡಿ ತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಕಂಡು ಬಂದಿಲ್ಲ, ಹಾಗೇನ್ನಾದ್ದರೂ ಕಂಡು ಬಂದರೆ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗುತ್ತದೆ
. – ಆನಂದ ಬಣಕಾರ, ಎಇಇ, ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ ಚಿಕ್ಕೋಡಿ.
-ಮಹಾದೇವ ಪೂಜೇರಿ