Advertisement

ಮಧುಗಿರಿಯಲ್ಲಿ ಪಾತಾಳ ತಲುಪಿದ ಅಂತರ್ಜಲ

12:21 PM Aug 05, 2019 | Suhan S |

ಮಧುಗಿರಿ: ತಾಲೂಕು ಹಿಂದಿನ ಕಾಲದಲ್ಲಿ ದಾಳಿಂಬೆಗೆ ಹೆಸರಾದ ಕ್ಷೇತ್ರ. ಕುಮುಧ್ವತಿ, ಜಯಮಂಗಲಿ, ಸುವರ್ಣಮುಖೀ ನದಿಗಳು ಹರಿಯುತ್ತಿದ್ದವು. ಕಬ್ಬು, ರಾಗಿ, ನೆಲಗಡಲೆ ಹಾಗೂ ಇತರೆ ಮಿಶ್ರಬೆಳೆ ಬೆಳೆದು ಸಮೃದ್ಧವಾಗಿದ್ದ ರೈತರ ನಾಡು ಇಂದು ಬರದಿಂದ ತತ್ತರಿಸಿದ್ದು, ನದಿಗಳು ಬತ್ತಿ ಅಂತರ್ಜಲಮಟ್ಟ ಪಾತಾಳ ತಲುಪಿದೆ.

Advertisement

ಮಧುಗಿರಿ ಉಪವಿಭಾಗವಾಗಿದ್ದು, ಬಯಲುಸೀಮೆಯಾಗಿದ್ದರೂ ಸಮೃದ್ಧ ವ್ಯವಸಾಯಕ್ಕೆ ಅಡ್ಡಿಯಿರಲಿಲ್ಲ. ಆದರೆ ದಶಕದಿಂದ ಸರಿಯಾದ ಮಳೆಯಾಗದೆ ಇಂದು 1200 ಅಡಿ ಕೊರೆದರೂ ಶುದ್ಧ ಕುಡಿಯುವ ನೀರು ಸಿಗದಂತಾಗಿದೆ. ಬಿತ್ತನೆ ಬೀಜ ಪಡೆದ ರೈತರು ಭೂಮಿ ಹಸನು ಮಾಡಿ ಮಳೆಗಾಗಿ ಮುಗಿಲು ನೋಡುವಂತಾಗಿದೆ. 55 ಸಾವಿರ ರೈತ ಕುಟುಂಬವಿದ್ದು, 23 ಸಾವಿರದಷ್ಟು ಪಹಣಿಯ ಭೂಮಿಯಿದೆ. ತಾಲೂಕಿನ ಜನಸಂಖ್ಯೆ 3 ಲಕ್ಷಕ್ಕೂ ಅಧಿಕ. ಅಭಿವೃದ್ಧಿಗೆ ಕೈಗಾರಿಕೆ, ನೈಸರ್ಗಿಕ ಸಂಪತ್ತು ಇಲ್ಲ. ಶೇ.40ಜನತೆ ಉದ್ಯೋಗ ಅರಸಿ ಗುಳೆ ಹೋಗಿದ್ದಾರೆ. ಉಳಿದವರು ಸ್ಥಳೀಯ ಉದ್ಯೋಗ ಆಸರೆಯಲ್ಲಿ ಬದುಕುತ್ತಿದ್ದಾರೆ.

ಪ್ರಸ್ತುತ ಕೃಷಿಗೆ ವಾತಾವರಣ ಪೂರಕವಾಗಿಲ್ಲ. ಮಳೆಯಿಲ್ಲದೆ ಭೂಮಿ ಬಂಜರಾಗುತ್ತಿದೆ. ಹಲವು ಕಡೆ ಕೆರೆ-ಕಟ್ಟೆ, ಕಲ್ಯಾಣಿ ಸೇರಿ ಹಲವು ಜಲಮೂಲ ನಾಶಗೊಳಿಸಲಾಗಿದೆ. ಅರಣ್ಯಭೂಮಿ ಸಾಕಷ್ಟಿದ್ದರೂ ಮರಗಳು ಇಲ್ಲವಾಗಿವೆ. ಅದರಲ್ಲಿ ಮೈದನಹಳ್ಳಿ ಅರಣ್ಯ ಹಾಗೂ ತಿಮ್ಮಲಾಪುರ ಕರಡಿ ವನ್ಯಧಾಮವಿರುವುದರಿಂದ ಕೊಂಚ ಅರಣ್ಯ ಉಳಿದಿದೆ. ಸರ್ಕಾರ ಜಾರಿಗೊಳಿಸಿದ್ದ ಮೇವು ಬ್ಯಾಂಕಿನಿಂದ ಕುರಿ-ಮೇಕೆ ಸಾಕಾಣೆದಾರರು ಮೇವಿಗೆ ಮರ ಕಡಿಯುವುದು ತಪ್ಪಿದೆ.

ನೇತ್ರಾವತಿ-ಹೇಮಾವತಿ ಬೇಕು: ಸದ್ಯದ ಪರಿಸ್ಥಿತಿಯಲ್ಲಿ ಪಟ್ಟಣಕ್ಕೆ ಮಾತ್ರ ಹೇಮಾವತಿ ನೀರು ಲಭ್ಯವಿದ್ದು, ಎತ್ತಿನಹೊಳೆ ಯೋಜನೆ ನೀರೂ ಬೇಕಾಗಿದೆ. ಯೋಜನೆಯಿಂದ ಕೈಬಿಟ್ಟಿದ್ದ ದೊಡ್ಡೇರಿಯ ಕೆ.ಟಿ.ಹಳ್ಳಿಯ ಕೆರೆ ಸೇರ್ಪಡೆಗೊಳಿಸಲಾಗಿದೆ. ಈ ಕೆರೆಯ ಮಹತ್ವ ಎಷ್ಟಿದೆಯೆಂದರೆ ತಾಲೂಕಿನ ಬಹುತೇಕ ಎಲ್ಲ ಕೆರೆಗೆ ನೀರು ಹರಿಸಬಹುದಾಗಿದೆ. ಯೋಜನೆ ಶೀಘ್ರ ಅನುಷ್ಠಾನವಾಗಲಿ ಎಂದು ಕ್ಷೇತ್ರದ ರೈತರು ಕಾಯುತ್ತಿದ್ದಾರೆ.

ನಾಶವಾಗುತ್ತಿವೆ ಜಲಮೂಲ: ಪ್ರಭಾವಿಗಳು ಕೆರೆ-ಕಟ್ಟೆ ಒತ್ತುವರಿ ಮಾಡಿ ನಾಶಗೊಳಿಸಿದ್ದು, ಅಕ್ರಮ ಮರಳುಗಾರಿಕೆಯಿಂದ ತಲಪರಿಗೆ-ಕಲ್ಯಾಣಿಗಳ ನಿರ್ಲಕ್ಷ್ಯದಿಂದ ಜಲಮೂಲಗಳು ನಾಶದ ಅಂಚಿನಲ್ಲಿವೆ. ಇತ್ತೀಚೆಗೆ ಇವುಗಳ ಉಳಿವಿಗೆ ಶಾಸಕ ಎಂ.ವಿ.ವೀರಭದ್ರಯ್ಯ ನೇತೃತ್ವದಲ್ಲಿ ಪುರಸಭೆ ಮುಖ್ಯಾಧಿಕಾರಿ ಲೋಹಿತ್‌ ಪಟ್ಟಣದಲ್ಲಿ ಕೊಳವೆಬಾವಿಗಳಿಗೆ ಜಲ ಮರುಪೂರಣ ಹಾಗೂ ಮಳೆಕೊಯ್ಲು ಯೋಜನೆಗೆ ಚಾಲನೆ ನೀಡಲಾಗಿದೆ. ಕಲ್ಯಾಣಿಗಳು ಹಾಗೂ ಸಿದ್ದರಕಟ್ಟೆ, ಅರಸನಕಟ್ಟೆಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳಬೇಕಾಗಿದೆ.

Advertisement

 

● ಮಧುಗಿರಿ ಸತೀಶ್‌

Advertisement

Udayavani is now on Telegram. Click here to join our channel and stay updated with the latest news.

Next