ನರೇಗಲ್ಲ: ಪಟ್ಟಣದ ಐತಿಹಾಸಿಕ ಹಿರೇಕೆರೆಗೆ ನೀರು ತುಂಬಿಸುವ ಕಾರ್ಯ ನನಸಾಗುವುದೇ ಎಂದು ಪಟ್ಟಣದ ಜನರು ಜಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ.
ಮಠಾಧೀಶರು, ರೈತರು, ಸಾರ್ವಜನಿಕರು, ಸಂಘ ಸಂಸ್ಥೆಗಳ ಆಶ್ರಯದಲ್ಲಿ ಸರ್ಕಾರದಿಂದ ಯಾವುದೇ ಸಹಾಯ ಆಪೇಕ್ಷಿಸದೇ ಕೆರೆಯನ್ನು ಕಳೆದ ಎರಡು ವರ್ಷದ ಹಿಂದೆ ಅಭಿವೃದ್ಧಿ ಮಾಡಲಾಗಿದೆ. ಇದಕ್ಕೆ ನೀರು ತುಂಬಿಸಿ ಎಂದು ಸರ್ಕಾರ, ಜಿಲ್ಲಾಡಳಿತಕ್ಕೆ ಗೊಗರೆದರೂ ಇಲ್ಲಿಯವರೆಗೂ ಕಾರ್ಯ ಕೈಗೂಡಿಲ್ಲ.
ಕಳೆದ ವರ್ಷ ಬೇಸಿಗೆ ಅವಧಿಯಲ್ಲಿ ನೆಲ-ಜಲ ಸಂರಕ್ಷಣೆ ಸಮಿತಿ ಹಾಗೂ ಸಾರ್ವಜನಿಕರಿಂದ ಜನಪ್ರತಿನಿಧಿಗಳು ಮತ್ತು ಜಿಲ್ಲಾಧಿಕಾರಿಗಳಿಗೆ ಮೌಖೀಕ, ಲಿಖೀತ ಅರ್ಜಿ ಸಲ್ಲಿಸಲಾಗಿದೆ. ಆದರೆ ಅಧಿಕಾರಿಗಳ ಇಚ್ಚಾಶಕ್ತಿ ಕೊರತೆಯಿಂದ ನೀರು ಬಾರದೇ ಇರುವುದುರಿಂದ ಕೆರೆ ಅಂಗಳ ಬರಿದಾಗಿ ಬಿಕೋ ಎನ್ನುತ್ತಿದೆ. ತಮ್ಮೂರಿನ ಕೆರೆ ಅಭಿವೃದ್ಧಿಯಾಗುತ್ತದೆ ಎನ್ನುವ ಕನಸು ಕಂಡವರು ನಿರಾಶರಾಗಿದ್ದಾರೆ.
ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಕೆರೆಗೆ ನೀರು ಬಂದು ವರ್ಷಗಳೇ ಗತಿಸುತ್ತಿದ್ದವು. ಕೆರೆಗೆ ನೀರು ಬಂದರೇ ಈ ಭಾಗದ ಕೊಳವೆ ಬಾವಿಗಳು ಹಾಗೂ ಇನ್ನಿತರ ಜಲಸಂಪನ್ಮೂಲಗಳು ಹೆಚ್ಚಾಗಿ ರೈತರಿಗೆ ಅನುಕೂಲವಾಗುತ್ತಿದೆ. ಈ ಕಾರ್ಯ ನಡೆಯದೇ ಇರುವುದು ಖೇದನೀಯ.ಕಳೆದ ವರ್ಷವೇ ಕೆರೆ ಅಭಿವೃದ್ಧಿ ಕೆಲಸ ಬಹುತೇಕ ಪೂರ್ಣಗೊಂಡಿದೆ. ಆದರೆ ಕೆರೆ ಮಾತ್ರ ಬತ್ತಿ ಹೋಗಿತ್ತು. ಕಳೆದ 6 ವರ್ಷಗಳ ನಂತರ ಐತಿಹಾಸಿಕ ಹಿರೇಕೆರೆಗೆ ಒಂದು ಹನಿ ನೀರಿಲ್ಲದಂತೆ ಬತ್ತಿ ಹೋಯಿತು. ಕೆರೆ ಅಭಿವೃದ್ಧಿ ಭಾಗವಾಗಿ ಏರಿ ಮೇಲೆ ನೆಟ್ಟಿದ್ದ ಗಿಡಿಗಳೂ ನೀರಿಲ್ಲದೆ ಒಣಗಿ ಹೋಗುತ್ತಿವೆ. ವರ್ಷದ ಬೇಸಿಗೆ ಪ್ರಾರಂಭವಾಗುತ್ತಿದೆ. ಮುಂಬರುವ ದಿನಗಳಲ್ಲಿ ಜನ, ಜಾನುವಾರುಗಳಿಗೆ ಕುಡಿಯುವ ನೀರಿಗಾಗಿ ಗುಳೇ ಹೋಗುವ ಪರಿಸ್ಥಿತಿ ನಿರ್ಮಾಣವಾದರೂ ಅಚ್ಚರಿ ಪಡುವಂತಿಲ್ಲ.
ಒಂದು ಕಾಲದಲ್ಲಿ ಜಕ್ಕಲಿ, ಬೂದಿಹಾಳ, ಮಾರನಬಸರಿ, ಕೊಡಿಕೊಪ್ಪ, ತೊಟಗಂಟಿ, ಕೊಚಲಾಪುರ, ದ್ಯಾಮಪುರ, ಮಲ್ಲಾಪುರ ಸೇರಿದಂತೆ ನರೇಗಲ್ಲ ಪಟ್ಟಣದ ಜನರಿಗೆ ಹಿರೇಕೆರೆ ಕುಡಿಯುವ ನೀರಿನ ಆಧಾರವಾಗಿತ್ತು. ಹಿರೇಕೆರೆ ನೀರು ಔಷಧಿ ಗುಣ ಹೊಂದಿದೆ. ಹಾಗಾಗಿ ಇಲ್ಲಿನ ಜನರು ಇದೇ ನೀರನ್ನು ಹೆಚ್ಚಾಗಿ ಬಳಸುತ್ತಿದ್ದರು. ಆದರೆ, ಈಗ ಕೆರೆಯಲ್ಲಿ ನೀರು ಇಲ್ಲದೇ ಇರುವುದರಿಂದ ಶಾಲಾ ಮಕ್ಕಳ ಆಟದ ಮೈದಾನವಾಗಿದೆ. ಇದರಿಂದಾಗಿ ಕೆರೆ ಪಾವಿತ್ರತೆ ಹಾಳು ಮಾಡಲಾಗುತ್ತಿದೆ.
30 ಎಕರೆಗೂ ಅಧಿಕ ವಿಸ್ತಿರಣ ಹೊಂದಿದ ವಿಶಾಲವಾದ ಐತಿಹಾಸಿಕ ಹಿರೇಕೆರೆ ಸೂರ್ಯ ಮುಳಗಿದ ತಕ್ಷಣ ಕುಡುಕರ ಸಾಮ್ರಾಜ್ಯವಾಗಿ ಮಾರ್ಪಡುತ್ತದೆ. ಅಲ್ಲದೇ ಕೆರೆ ಬಯಲಿನಲ್ಲಿ ಅಕ್ರಮ, ಅನೈತಿಕ ಚಟುವಟಿಕೆಗಳು ನಿತ್ಯ ಎಗ್ಗಿಲ್ಲದೇ ನಡೆಯುತ್ತಿದೆ. ಇದನ್ನು ಕಂಡು ಕಾಣದಂತೆ ಇರುವ ಪಟ್ಟಣದ ಆಡಳಿತ ಕಣ್ಣು ಮುಚ್ಚಿ ಕುಳಿತುಕೊಂಡು ಜಾಣ ಕುರುಡು ನೀತಿ ಅನುಸರಿಸುತ್ತಿರುವುದು ಪರಿಸರ ಪ್ರೇಮಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಬತ್ತಿ ಹೋಗಿರುವ ಪಟ್ಟಣದ ಐತಿಹಾಸಿಕ ಹಿರೇಕೆರೆಗೆ ಇತ್ತೀಚಿಗೆ ತುಂಗಭಧ್ರಾ ಜಲಾಶಯದಿಂದ (ಸಿಂಗಟಾಲೂರು ಏತ ನೀರಾವರಿ ಯೋಜನೆ) ನೀರು ತುಂಬಿಸಲಾಗುತ್ತದೆ ಎಂಬ ಗಾಳಿ ಸುದ್ದಿ ಈಚೆಗೆ ಹಬ್ಬಿತ್ತು ಎಂಬುದು ಇಲ್ಲಿ ಗಮನಾರ್ಹ ಸಂಗತಿ.
ಈ ಹಿಂದೆ ಇದ್ದ ಮುಖ್ಯಾಧಿಕಾರಿ, ತಾಲೂಕಿನ ಜನಪ್ರತಿನಿಧಿಗಳೊಂದಿಗೆ ಮತ್ತು ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ ಕೆರೆಗೆ ನೀರು ತುಂಬಿಸುವ ಕಾರ್ಯ ಮಾಡಲಾಗುವುದು. –
ಎಂ.ಎ. ನೂರುಲ್ಲಾಖಾನ್, ಪಪಂ ಮುಖ್ಯಾಧಿಕಾರಿ