ಬೆಂಗಳೂರು: ಮಳೆಯ ಅಭಾವದಿಂದ ಕಾವೇರಿ ಒಡಲು ಬರಿದಾಗುತ್ತಿದ್ದಂತೆ ಉದ್ಯಾನ ನಗರಿಗೆ ನೀರಿನ ಬರದ ಬರೆ ಬಿದ್ದಿದೆ. ಪರಿಣಾಮ ನಗರದ ಕೆಲವೆಡೆ ದುಪ್ಪಟ್ಟು ಹಣ ತೆತ್ತು ಟ್ಯಾಂಕರ್ ನೀರು ಖರೀದಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.
ವರುಣನ ಅವಕೃಪೆಯಿಂದ ರಾಜ್ಯ ರಾಜಧಾನಿಯಲ್ಲಿ ಅಂತರ್ಜಲಮಟ್ಟ ಕುಸಿದು ಕೆಲವು ಬೋರ್‌ವೆಲ್‌ಗಳಲ್ಲಿ ನೀರು ಬತ್ತಿದೆ. ತಮಿಳುನಾಡಿಗೂ ಕಾವೇರಿ ಹರಿಯುತ್ತಿರುವುದರಿಂದ ಕೃಷ್ಣರಾಜ ಸಾಗರ ಅಣೆಕಟ್ಟಿನಿಂದ (ಕೆಆರ್‌ಎಸ್) ಬೇಡಿಕೆಗೆ ತಕ್ಕನಾಗಿ ಉದ್ಯಾನ ನಗರಿಗೆ ನೀರು ಪೂರೈಕೆಯಾಗುತ್ತಿಲ್ಲ. ಹೀಗಾಗಿ 840ಕ್ಕೂ ಹೆಚ್ಚಿನ ಬಡಾವಣೆಗಳಲ್ಲಿ ಈಗಾಗಲೇ ಟ್ಯಾಂಕರ್ ನೀರಿಗೆ ಭಾರೀ ಬೇಡಿಕೆ ವ್ಯಕ್ತವಾಗಿದೆ. ಮಳೆ ಕೊರತೆ ಮುಂದುವರಿದರೆ 2024 ಜನವರಿಯಲ್ಲೇ ಐಟಿ ಸಿಟಿಯಲ್ಲಿ ನೀರಿಗೆ ಹಾಹಾಕಾರ ಉಂಟಾಗಲಿದೆ ಎಂಬುದು ಜಲತಜ್ಞರ ವಾದ.
ಮತ್ತೂಂದೆಡೆ 110 ಹಳ್ಳಿಗಳಿಗೆ ನೀರು ಪೂರೈಸುವ ಕಾವೇರಿ 5ನೇ ಹಂತದ ಯೋಜನೆಯು 2024 ಜನವರಿಯಲ್ಲಿ ಮುಕ್ತಾಯಗೊಳ್ಳಲಿದೆ. ಇದಕ್ಕೆ ತಗುಲುವ 10 ಟಿಎಂಸಿ ನೀರು ಪೂರೈಸುವುದೇ ಸರ್ಕಾರದ ಮುಂದಿರುವ ದೊಡ್ಡ ಸವಾಲು.
110 ಹಳ್ಳಿಗೆ ನೀರು ಪೂರೈಕೆಯೇ ಡೌಟ್: ಕಾವೇರಿ ನೀರು ಪೂರೈಸುವ ಕಾವೇರಿ 5ನೇ ಹಂತದ ಯೋಜನೆಯ ಕಾಮಗಾರಿ ಅಂತಿಮ ಹಂತದಲ್ಲಿದ್ದು, ಟಿ.ಕೆ.ಹಳ್ಳಿ, ಹಾರೋಹಳ್ಳಿ, ತಾತಗುಣಿಯಲ್ಲಿ ನೀರು ಸಂಗ್ರಹಕ್ಕೆ ಅಗತ್ಯವಿರುವ ಹೊಸ ಪಂಪಿಂಗ್ ಸ್ಟೇಷನ್ ಕಾರ್ಯ ಭರದಿಂದ ಸಾಗಿದೆ. ಈ ಪಂಪಿಗ್ ಸ್ಟೇಷನ್‌ಗೆ ಪೈಪ್‌ಲೈನ್ ಅಳವಡಿಕೆ ಕೆಲಸ ನಡೆಯುತ್ತಿದೆ. ತಮಿಳುನಾಡಿಗೆ ಕಾವೇರಿ ಹರಿಯುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರು ಜನರ ಬೇಡಿಕೆಯಷ್ಟು ನೀರು ಪೂರೈಕೆ ಆಗುತ್ತಿಲ್ಲ. ಮಹಾಲಕ್ಷ್ಮೀ ಲೇಔಟ್, ಮಲ್ಲೇಶ್ವರ, ಎಚ್‌ಎಸ್‌ಆರ್ ಲೇಔಟ್, ಜೆಪಿನಗರ ಸೇರಿ ನಗರದ ಹಲವು ಕಡೆ ವಾರಕ್ಕೆ ಮೂರು ಬಾರಿ ಜಲಮಂಡಳಿ ಕಾವೇರಿ ನೀರು ಪೂರೈಸುತ್ತಿದೆ. ಹೆಚ್ಚಿನ ಪ್ರಮಾಣದಲ್ಲಿ ಕಾವೇರಿ ನೀರು ಪೂರೈಸುವಂತೆ ಬೆಂಗಳೂರಿನ ಬಹುತೇಕ ಕಡೆಗಳಲ್ಲಿ ಜನರಿಂದ ಒತ್ತಾಯಗಳು ಬರಲಾರಂಭಿಸಿವೆ. ಹೀಗಿರುವಾಗ ಸದ್ಯದ ಪರಿಸ್ಥಿತಿಯಲ್ಲಿ 110 ಹಳ್ಳಿಗಳಿಗೆ ಬೇಕಾಗುವ ನೀರು ಪೂರೈಸುವುದು ಕಷ್ಟಸಾಧ್ಯ ಎಂದು ಜಲತಜ್ಞರು, ಜಲಮಂಡಳಿ ಮೂಲಗಳು ತಿಳಿಸಿವೆ.
ಬೋರ್‌ವೆಲ್‌ಗಳಲ್ಲಿ ನೀರು ಬತ್ತುತ್ತಿರುವ ನಗರಗಳು ಇವು: ಬೆಂಗಳೂರಿನ ಶೇ.79 ಮಂದಿ ಬೋರ್‌ವೆಲ್ ನೀರನ್ನೇ ಆಶ್ರಯಿಸಿದ್ದಾರೆ. ಬೇಸಿಗೆ ಆರಂಭಕ್ಕೂ ಮುನ್ನವೇ ನೀರಿನ ಅಭಾವದಿಂದ ರಾಜಾಜಿನಗರ, ಯಲಹಂಕ, ಪೀಣ್ಯ, ಯಶವಂತಪುರ, ವೈಟ್‌ಫೀಲ್ಡ್, ಎಲೆಕ್ಟ್ರಾನಿಕ್ ಸಿಟಿ, ಮಾರತ್ತ್ಹಳ್ಳಿ, ವಿಜಯನಗರ, ಜೆ.ಪಿ.ನಗರ ಸೇರಿ ಬೆಂಗಳೂರಿನ ಪ್ರಮುಖ ಪ್ರದೇಶಗಳ ಬಡಾವಣೆಗಳಲ್ಲಿರುವ ಬೋರ್‌ವೆಲ್‌ಗಳ ನೀರು ಬತ್ತಿವೆ. ಹೆಚ್ಚಿನ ಬಡಾವಣೆಗಳಲ್ಲಿ ಅಂತರ್ಜಲ ಕುಸಿದು ಒಂದೆರಡು ತಿಂಗಳಲ್ಲಿ ಇಲ್ಲೂ ನೀರು ಬತ್ತುವ ಲಕ್ಷಣ ಗೋಚರಿಸಿದೆ. ಆಗ ನೀರಿನ ಅಭಾವ ಮತ್ತಷ್ಟು ಹೆಚ್ಚಲಿದೆ. ಬತ್ತಿರುವ ಬೋರ್‌ವೆಲ್‌ಗಳಿಗೆ ರೀ ಬೋರಿಂಗ್ ಮಾಡಿಸುವ ಅನಿವಾರ್ಯತೆ ಎದುರಾಗಿದೆ.
ದಿನ ಬಳಕೆಯ ಅಗತ್ಯಗಳಿಗೆ ನೀರು ಪೂರೈಸುವ ಸಂಬಂಧ ಬಿಬಿಎಂಪಿಯು ನಗರದ ಪ್ರಮುಖ ಸ್ಥಳಗಳಲ್ಲಿ ಕೋಟ್ಯಂತರ ರೂ. ವೆಚ್ಚದಲ್ಲಿ ನಿರ್ಮಿಸಿರುವ ಬೋರ್ ವೆಲ್‌ಗಳಲ್ಲಿ ನೀರಿದ್ದರೂ ನಿರ್ವಹಣೆ ಇಲ್ಲದೇ ಕೆಟ್ಟು ಹೋಗಿವೆ ಎಂದು ವಿವಿಧ ಬಡಾವಣೆಗಳ ನಿವಾಸಿಗಳು ಆರೋಪಿಸಿದ್ದಾರೆ.
ಬೆಂಗಳೂರಿಗೆ ಕುಡಿಯಲು ಅಗತ್ಯವಿರುವ ನೀರನ್ನು ಕೆಆರ್‌ಎಸ್‌ನಲ್ಲಿ ಸಂಗ್ರಹಿಸಿ ಮುಂದೆಯೂ ಪೂರೈಕೆ ಮಾಡಲಿದ್ದಾರೆ. 5ನೇ ಹಂತದ ಕಾವೇರಿ ಯೋಜನೆ ಶೀಘ್ರದಲ್ಲೇ ಮುಕ್ತಾಯಗೊಳ್ಳಲಿದೆ. ಸದ್ಯ ಬೆಂಗಳೂರಿಗರಿಗೆ ಬೇಕಾಗುವಷ್ಟು ನೀರು ಪೂರೈಸಲಾಗುತ್ತಿದೆ. ನೀರಿನ ಸಮಸ್ಯೆಗಳಿದ್ದರೆ ಜಲಮಂಡಳಿ ಗಮನಕ್ಕೆ ತರಬಹುದು. ●
ಎನ್.ಜಯರಾಮ್, ಅಧ್ಯಕ್ಷ, ಜಲಮಂಡಳಿ.
-ಅವಿನಾಶ ಮೂಡಂಬಿಕಾನ