ಹಳೇಬೀಡು: ವಿಶ್ವ ವಿಖ್ಯಾತ ಹೊಯ್ಸಳೇಶ್ವರ ದೇವಾಲಯದ ಉದ್ಯಾನದಲ್ಲಿರುವ ಹುಲ್ಲು ನೀರಿಲ್ಲದೇ ಒಣಗಿ ಹೋಗುತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳದಿರುವುದಕ್ಕೆ ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಹಳೇಬೀಡಿನ ಹೊಯ್ಸಳೇಶ್ವರ ದೇಗುಲಕ್ಕೆ ಭೇಟಿ ನೀಡುವ ದೇಶ ವಿದೇಶಗಳ ಪ್ರವಾಸಿಗರು ದೇವಾಲಯದ ಶಿಲ್ಪಕಲೆಗಳ ವೀಕ್ಷಣೆಯ ನಂತರ ವಿಶಾಲವಾದ ಉದ್ಯಾನಕ್ಕೆ ಆಗಮಿಸಿ ಕುಳಿತು ಪ್ರಕೃತಿ ಮತ್ತು ದೇವಾಲಯದ ಸುತ್ತಲಿನ ಸೌಂದರ್ಯ ಸವಿದು ವಾಪಾಸಾಗುತ್ತಿದ್ದರು. ಆದರೆ ಇತ್ತೀಚೆಗೆ ಉದ್ಯಾನ ನಿರ್ವಹಣೆ ಕೊರತೆಯಿಂದ ಉದ್ಯಾನದಲ್ಲಿದ್ದ ಹುಲ್ಲು ಒಣಗುತ್ತಿದೆ.
15 ಎಕರೆ ಪ್ರದೇಶದಲ್ಲಿ ಉದ್ಯಾನ: ಕೇಂದ್ರ ಪುರಾತತ್ವ ಇಲಾಖೆ ಅಧೀನಕ್ಕೆ ಒಳಪಟ್ಟಿರುವ ಹಳೇಬೀಡು ಹೊಯ್ಸಳೇಶ್ವರ ದೇಗುಲದ ಸುತ್ತ 15 ಎಕರೆ ಪ್ರದೇಶದಲ್ಲಿ ಉದ್ಯಾನ ನಿರ್ಮಿಸಿ ಹುಲ್ಲು ಬೆಳೆಸಲಾಗಿದೆ. ಆದರೆ ಈ ಉದ್ಯಾನಕ್ಕೆ ನೀರು ಪೂರೈಸುತ್ತಿರುವುದು ಕೇವಲ ಎರಡು ಬೋರವೆಲ್‌ಗಳು. ಈ ಎರಡು ಬೋರವೆಲ್‌ಗಳಲ್ಲೂ ಉದ್ಯಾನ ನಿರ್ವಹಣೆಗೆ ಸಾಕಾಗುವಷ್ಟು ನೀರು ಬಾರದೇ ಇರುವುದರಿಂದ ಉದ್ಯಾನದವನದ ಹುಲ್ಲು ಒಣಗಲು ಕಾರಣವಾಗಿದೆ ಎಂದು ಸ್ಥಳೀಯರು ಹೇಳುತ್ತಾರೆ.
ಮಾಜಿ ಪ್ರಧಾನಿ ನೆಹರು ನೆಟ್ಟ ಗಿಡಗಳಿಗೆ ನೀರಿಲ್ಲ : ಸ್ವಾತಂತ್ರಾé ನಂತರ ದೇಶದ ಮೊದಲ ಪ್ರಧಾನಿ ಜವಹಾರಲಾಲ್ ನೆಹರು ಮೊಟ್ಟ ಮೊದಲು ಹಳೇಬೀಡಿನ ಹೊಯ್ಸಳೇಶ್ವರ ದೇಗುಲಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ನೆಟ್ಟಿದ್ದ ಎರಡು ತೆಂಗಿನ ಮರಗಳು ಇಂದು ಫಸಲು ನೀಡುತ್ತಿವೆ.ಆದರೆ ಆ ಮರಗಳಿಗೂ ನೀರಿನ ಕೊರತೆ ಉಂಟಾಗಿದ್ದು, ಮರಗಳು ಒಣಗುವ ಹಂತ ತಲುಪಿರುವುದು ಬೇಸರದ ಸಂಗತಿಯಾಗಿದೆ.
ಹೊಯ್ಸಳೇಶ್ವರ ದೇಗುಲಕ್ಕೆ ಸಂಬಂಧಪಟ್ಟ 4 ಬೋರ್‌ವೆಲ್‌ಗಳ ಪೈಕಿ 2 ಬೋರ್‌ವೆಲ್‌ಗಳಲ್ಲಿ ಮಾತ್ರ ನೀರು ಬರುತ್ತಿದೆ. ಉದ್ಯಾನದ ಹುಲ್ಲಿನ ನಿರ್ವಹಣೆಗೆ ಸ್ಪ್ರಿಂಕ್ಲರ್ ಅಳವಡಿಸಿಸುವ ಮೂಲಕ ಗಿಡಗಳಿಗೆ ನೀರುಣಿಸಲು ಕ್ರಮ ಕೈಗೊಳ್ಳಲಾಗುವುದು.
–ವಿನಯ್ ಕುಮಾರ್, ಫೋರ್‌ಮನ್ ಪುರಾತತ್ವ ಇಲಾಖೆ
-ಕುಮಾರ್