ಕೊಪ್ಪಳ: ಜಿಲ್ಲೆಯಲ್ಲಿ ಪ್ರತಿ ಬೇಸಿಗೆಯಲ್ಲೂ ಕುಡಿಯುವ ನೀರಿಗೆ ಸಮಸ್ಯೆ ಹೆಚ್ಚಾಗುತ್ತದೆ. ಆದರೆ ಕೋವಿಡ್ ಅಬ್ಬರದಲ್ಲಿ ಗ್ರಾಮೀಣ ಪ್ರದೇಶದ ಜನರ ನೀರಿನ ಬವಣೆಯ ಆರ್ತನಾದವನ್ನು ಕೇಳ್ಳೋರೇ ಇಲ್ಲದಂತಾಯಿತು. ಈ ವರ್ಷ ಬೇಸಿಗೆಯಲ್ಲೇ ಕೋವಿಡ್ ಆರ್ಭಟ ಜೋರಾಗಿ ಸರ್ಕಾರ ಲಾಕ್ ಡೌನ್ ಘೋಷಣೆ ಮಾಡಿದ್ದರಿಂದ ಗುಳೆ ಹೋದವರೆಲ್ಲ ಹಳ್ಳಿಗಳಿಗೆ ಮರಳಿ ಬಂದಿದ್ದು, ಎಲ್ಲರೂ ಮನೆಯಲ್ಲೇ ಲಾಕ್‌ಡೌನ್ ಆಗಿದ್ದಾರೆ. ಹೀಗಾಗಿ ಮನೆಯಲ್ಲಿ ನೀರಿನ ಬಳಕೆ ಹೆಚ್ಚಾಗಿದೆ. ಆದರೆ ಜನರಿಗೆ ಸರಿಯಾಗಿ ನೀರೂ ಪೂರೈಕೆಯಾಗಿಲ್ಲ. ಕೆಲವೆಡೆ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ.
16 ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಜಾರಿಗೊಳಿಸಿದ್ದರೂ ಜನರು ಸುತ್ತಮುತ್ತಲಿರುವ ಜನರು ಮಾತ್ರ ನೀರಿಗಾಗಿ ಹೊಲ, ಗದ್ದೆ, ತೋಟಗಳಿಗೆ ಅಲೆದಾಡುವುದು ತಪ್ಪುತ್ತಿಲ್ಲ. ಕೆಲ ಗ್ರಾಪಂಗಳಲ್ಲಿ ನೀರನ್ನು ಮಿತವಾಗಿ ಬಳಸಿ ಎಂದು ಡಂಗುರ ಸಾರಿಸಿದ್ದಾರೆ. ಪ್ರತಿ ಬೇಸಿಗೆಯಲ್ಲೂ ನೀರಿನ ಸಮಸ್ಯೆ ಹೆಚ್ಚಾದಾಗ ಬೋರ್‌ವೆಲ್ ಕೊರೆಸುವುದು, ಪೈಪ್‌ಲೈನ್ ಕಾಮಗಾರಿ ದುರಸ್ತಿ ಸೇರಿ ಇತರೆ ಕಾರ್ಯ ನಡೆಯುತ್ತಿದ್ದವು. ಈ ವರ್ಷ ಲಾಕ್‌ಡೌನ್ ಹಿನ್ನೆಲೆಯಲ್ಲಿ ಆ ಕಾಮಗಾರಿಗಳೂ ಸ್ಥಗಿತಗೊಂಡಿವೆ.
190 ಗ್ರಾಮಗಳು ಸಮಸ್ಯಾತ್ಮಕ: ಜಿಲ್ಲೆಯ ಗಂಗಾವತಿ ತಾಲೂಕಿನಲ್ಲಿ 51 ಗ್ರಾಮ, ಕೊಪ್ಪಳ ತಾಲೂಕಿನಲ್ಲಿ 41 ಗ್ರಾಮ, ಕುಷ್ಟಗಿ ತಾಲೂಕಿನಲ್ಲಿ 81 ಗ್ರಾಮಗಳು, ಯಲಬುರ್ಗಾ ತಾಲೂಕಿನಲ್ಲಿ 17 ಗ್ರಾಮಗಳು ಸೇರಿದಂತೆ ಒಟ್ಟು 190 ಗ್ರಾಮಗಳನ್ನು ನೀರಿನ ಸಮಸ್ಯಾತ್ಮಕ ಗ್ರಾಮಗಳೆಂದು ಗುರುತಿಸಿದೆ. ಇದಲ್ಲದೇ, ಗಂಗಾವತಿ ತಾಲೂಕಿನ 6 ಗ್ರಾಮಗಳಲ್ಲಿ ನಿತ್ಯವೂ ಟ್ಯಾಂಕರ್ ನೀರು ಪೂರೈಸಲಾಗುತ್ತಿದೆ. ಇನ್ನು ಜಿಲ್ಲೆಯ ರೈತರ ಜಮೀನಿನಲ್ಲಿ ನೀರಿನ ಲಭ್ಯತೆ ಅನುಸಾರ 90 ಖಾಸಗಿ ಕೊಳವೆ ಬಾವಿಗಳನ್ನು ಗುರುತು ಮಾಡಿದೆ.
ಅಧಿಕಾರಿಗಳು ಬ್ಯೂಸಿ: ಅಧಿಕಾರಿಗಳು ಕೋವಿಡ್ ನಿಯಂತ್ರಣದ ಕೆಲಸದಲ್ಲೇ ತಲ್ಲೀನರಾದರು. ಗ್ರಾಪಂ ಪಿಡಿಒ, ಕಾರ್ಯದರ್ಶಿ ಸೇರಿದಂತೆ ಇತರೆ ಸಿಬ್ಬಂದಿ ಬ್ಯೂಸಿಯಾಗಿದ್ದರು. ಇದರಿಂದ ಕುಡಿಯುವ ನೀರಿನ ಸಮಸ್ಯೆಯತ್ತ ಅಷ್ಟೊಂದು ಮಹತ್ವ ನೀಡಲೇ ಇಲ್ಲ. ಮೇಲ್ನೋಟಕ್ಕೆ ಸಮಸ್ಯೆ ಮೇಲೆ ನಿಗಾ ಇಟ್ಟಿದ್ದೇವೆಂದು ಜಿಲ್ಲಾಡಳಿತ ಕಾಳಜಿ ಮಾತನ್ನಾಡಿದರೂ ಕೆಲವೆಡೆ ನೀರಿಗೆ ಇಂದಿಗೂ ತೊಂದರೆ ಎದುರಾಗುತ್ತಿದೆ.
ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ನಿಗಾ ಇರಿಸಿದ್ದೇವೆ. ಎಲ್ಲಿಯೂ ಅಷ್ಟೊಂದು ಸಮಸ್ಯೆ ಉಲ್ಬಣಿಸಿಲ್ಲ. ಕೆಲ ಗ್ರಾಮಗಳಲ್ಲಿ ಟ್ಯಾಂಕರ್ ನೀರು ಹಾಗೂ ಬಾಡಿಗೆ ಬೋರ್‌ವೆಲ್ ಪಡೆದು ನೀರು ಪೂರೈಸುತ್ತಿದ್ದೇವೆ. ಬೇಸಿಗೆ ವೇಳೆ ನೀರಿನ ಸಮಸ್ಯೆ ಎದುರಿಸಬಹುದಾದ 190 ಹಳ್ಳಿಗಳನ್ನು ಗುರುತಿಸಿದ್ದೇವೆ.
– ರಂಗಯ್ಯ ಬಡಿಗೇರ, ಎನ್‌ಆರ್‌ಡಬ್ಲ್ಯೂಪಿ, ಇಇ
ಕೋವಿಡ್ಸಂ ದರ್ಭದಲ್ಲಿ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸದಂತೆ ನಿಗಾ ವಹಿಸಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಸಮಸ್ಯೆ ಬಂದಾಕ್ಷಣ ಪರ್ಯಾಯ ವ್ಯವಸ್ಥೆ ಕೈಗೊಳ್ಳಲು ಸೂಚಿಸಿದ್ದು, ಕುಡಿಯುವ ನೀರು ಪೂರೈಕೆಗೆ ಅನುದಾನ ಕೊರತೆ ಇಲ್ಲ. ಅವಶ್ಯವಿದ್ದರೆ ಅನುದಾನ ಬಿಡುಗಡೆ ಮಾಡಲಾಗುವುದು. –
ಬಿ.ಸಿ. ಪಾಟೀಲ, ಜಿಲ್ಲಾ ಉಸ್ತುವಾರಿ ಸಚಿವ
-ದತ್ತು ಕಮ್ಮಾರ