Advertisement

ಮುಖ್ಯಾಧಿಕಾರಿಗೆ ಖಾಲಿ ಕೊಡಗಳ ಪ್ರದರ್ಶನ

05:35 PM Mar 17, 2020 | Suhan S |

ಶ್ರೀನಿವಾಸಪುರ: ಪಟ್ಟಣದ ಪಟ್ಟಾಭಿ ರಸ್ತೆ, ಕಬೀರ್‌ ರಸ್ತೆ ಹಾಗೂ ವಿನೋಬಾ ರಸ್ತೆಗಳ ನಿವಾಸಿಗಳು ಸಮರ್ಪಕ ಕುಡಿಯುವ ನೀರು ಪೂರೈಕೆಗೆ ಆಗ್ರಹಿಸಿ ಪುರಸಭೆ ಮುಖ್ಯಾಧಿಕಾರಿ ಮುಂದೆ ಖಾಲಿ ಕೊಡ ಪ್ರದರ್ಶಿಸಿ ಪ್ರತಿಭಟನೆ ನಡೆಸಿದರು.

Advertisement

ಟ್ಯಾಂಕರ್‌ನಲ್ಲಿ ಹತ್ತು ದಿನಗಳಿಗೊಮ್ಮೆ ನೀರು ಪೂರೈಕೆ ಮಾಡಲಾಗುತ್ತಿದೆ. ಇದರಿಂದ ಕುಡಿಯುವ ನೀರಿಗೆ ತೀವ್ರ ಸಮಸ್ಯೆಯಾಗಿದೆ. ನೀರು ಪೂರೈಕೆ ಮಾಡುವವರಿಗೆ ಕೇಳಿದರೆ ಕಚೇರಿಗೆ ಹೋಗಿ ಕೇಳಿ ಎಂದು ಹೇಳುತ್ತಾರೆ. ಹಾಗಾಗಿ ಸಮಸ್ಯೆ ಬಗೆಹರಿಸುವವರು ಯಾರು ಎಂದು ಪ್ರತಿಭಟನಾನಿರತ ಮಹಿಳೆಯರು ಪ್ರಶ್ನೆ ಮಾಡಿದರು.

ಪ್ರತಿದಿನ ಪೂರೈಸಿ: ಒಂದು ವರ್ಷದ ಹಿಂದೆ ಕೊಳವೆ ಬಾವಿ ರಿಪೇರಿ ಮಾಡಿ ಮೋಟಾರ್‌ ಆಳವಡಿಸಲಾಗಿತ್ತು. ಆದರೆ, ಅಳವಡಿಸಿದ ಮೋಟಾರ್‌ 3 ತಿಂಗಳಲ್ಲಿ ಕೆಟ್ಟು ಹೋಯಿತು. ಮತ್ತೆ ಈ ಕಡೆ ಪುರಸಭೆಯ ಸಿಬ್ಬಂದಿ ಗಮನ ಹರಿಸಲಿಲ್ಲ. ನಂತರ ಟ್ಯಾಂಕರ್‌ ಮೂಲಕ ನೀರು ಪೂರೈಕೆ ಮಾಡಿದರೂ ಸಾಕಾಗುತ್ತಿಲ್ಲ. ಪ್ರತಿದಿನ ಸರಬರಾಜು ಮಾಡಬೇಕಾದ ನೀರನ್ನು ವಾರಕ್ಕೊಮ್ಮೆ ನೀಡಿದರೆ ಹೇಗೆ? ಕೊಳವೆ ಬಾವಿ ರಿಪೇರಿ ಮಾಡಿ ಹೊಸ ಮೋಟಾರ್‌ ಅಳವಡಿಸಿಕೊಡಿ ಎಂದರು.

ಇಂದಿನಿಂದ ಪ್ರತಿದಿನ ಟ್ಯಾಂಕರ್‌ ನೀರು: ದೂರಗಳನ್ನು ಆಲಿಸಿದ ಮುಖ್ಯಾಧಿಕಾರಿ ವಿ.ಮೋಹನ್‌ ಕುಮಾರ್‌, ತಮ್ಮ ರಸ್ತೆಯ ಬದಿ ಇರುವ ಕೊಳವೆ ಬಾವಿ ಪರಿಶೀಲಿಸಿ ಅದರಲ್ಲಿ ನೀರಿದ್ದರೆ ಅದಕ್ಕೆ ಮೋಟಾರ್‌ ಅಳವಡಿಸಲಾಗುತ್ತದೆ. ಜೊತೆಗೆ ಮಂಗಳವಾರದಿಂದಲೇ ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡಲಾಗುತ್ತದೆ ಎಂದು ಭರವಸೆ ನೀಡಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ನಿವಾಸಿಗಳು, ಸಮಸ್ಯೆ ತೀವ್ರವಾಗಿದೆ. ದಿನ ನಿತ್ಯದ ಚಟುವಟಿಕೆಗಳಿಗೆ ಬೇಕಾದಷ್ಟು ನೀರು ಪೂರೈಕೆ ಆಗುತ್ತಿಲ್ಲ. ಟ್ಯಾಂಕರ್‌ ನೀರು ಬಂದರೂ ಅದು ವಾರಕ್ಕೊಮ್ಮೆ. ಒಂದೆರೆಡು ಬಿಂದಿಗೆ ಹಿಡಿದುಕೊಂಡು ಹೋಗಬೇಕು. ಹೆಚ್ಚು ಬಿಂದಿಗೆ ನೀರು ಕೇಳಿದರೆ ಕಚೇರಿಯಲ್ಲಿ ಕೇಳಿ ಎನ್ನುತ್ತಾರೆ. ಅಧಿಕಾರಿಗಳು ಕೊಟ್ಟ ಭರವಸೆಯಂತೆ ಹಿಂದಿರುಗುತ್ತಿದ್ದೇವೆ. ಮಂಗಳವಾರದಿಂದ ನಮಗೆ ಸಮರ್ಪಕ ನೀರು ಸರಬರಾಜು ಮಾಡದಿದ್ದರೆ ಪುರಸಭೆಯ ಮುಂದಿನ ರಸ್ತೆಯಲ್ಲಿ ಪ್ರತಿಭಟನೆ ಮಾಡಲಾಗುತ್ತದೆ ಎಚ್ಚರಿಸಿದರು.

Advertisement

ಈ ಸಂದರ್ಭದಲ್ಲಿ ಶೋಭಾ, ಪ್ರಮೀಳಾ, ಲಕ್ಷ್ಮೀ, ಜಯಮ್ಮ, ಪದ್ಮಮ್ಮ, ಎನ್‌.ಆರ್‌.ನಾರಾಯಣಸ್ವಾಮಿ, ರಾಜೇಶ್‌ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next