ಮಂಗಳೂರು: ಮತದಾರರ ಪಟ್ಟಿಯಿಂದ ಗಣನೀಯ ಸಂಖ್ಯೆಯಲ್ಲಿ ಮತದಾರರ ಹೆಸರುಗಳನ್ನು ಕೈಬಿಡಲಾಗಿದ್ದು, ಅವರೆಲ್ಲ ತಮ್ಮ ಹಕ್ಕುಗಳಿಂದ ವಂಚಿತ ರಾಗಿದ್ದಾರೆ ಎಂದು ಆರೋಪಿಸಿರುವ ಮಾಜಿ ಶಾಸಕ ಜೆ.ಆರ್. ಲೋಬೋ ಅವರು, ಈ ಬಗ್ಗೆ ಚುನಾವಣ ಆಯೋಗಕ್ಕೆ ದೂರು ನೀಡಲಾಗುವುದು ಎಂದು ಹೇಳಿದ್ದಾರೆ.
ನಗರದ ಕಾಂಗ್ರೆಸ್ ಜಿಲ್ಲಾ ಕಚೇರಿಯಲ್ಲಿ ಗುರುವಾರ ಪತ್ರಿಕಾಗೋಷ್ಠಿ ಯನ್ನುದ್ದೇಶಿಸಿ ಮಾತನಾಡಿದ ಅವರು, ಮಂಗಳೂರು ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ಪಟ್ಟಿಯಲ್ಲಿ ಹಲವು ಲೋಪಗಳು ಕಂಡುಬಂದಿವೆ. ಮತದಾರರ ಹೆಸರುಗಳನ್ನು ಯಾವುದೇ ಮುನ್ಸೂಚನೆ ಇಲ್ಲದೆ, ಮತದಾರರಿಗೆ ಅವಕಾಶ ನೀಡದೆ ಕೊನೆ ಕ್ಷಣದಲ್ಲಿ ಏಕಾಏಕಿ ತೆಗೆದು ಹಾಕಲಾಗಿದೆ. ಇದು ಖಂಡನೀಯ ಎಂದರು.
ಕೆಲವು ಉದಾಹರಣೆಗಳನ್ನು ಉಲ್ಲೇಖೀಸುವುದಾದರೆ, ಮಂಗಳೂರು ದಕ್ಷಿಣ ವಿಧಾನಸಭಾ ವ್ಯಾಪ್ತಿಯ ಮತಗಟ್ಟೆ 1ರಲ್ಲಿ ಕೆಲವು ಹೆಸರುಗಳನ್ನು ತೆಗೆದು ಹಾಕಲಾಗಿದೆ. ತೆಗೆದ ಕೆಲವು ಹೆಸರುಗಳನ್ನು ಪೂರಕ ಪಟ್ಟಿಯಲ್ಲಿ ಸೇರಿಸಿ ಮತ್ತೆ ತೆಗೆದು ಹಾಕಲಾಗಿದೆ. ಇವರೆಲ್ಲರೂ ಊರಿನಲ್ಲಿದ್ದು, ಯಾವುದೇ ಮುನ್ಸೂಚನೆ ನೀಡದೆ ಈ ರೀತಿ ಮಾಡಿರುವುದು ತಪ್ಪು ಎಂದು ಹೇಳಿದರು.
ಬಿಕರ್ನಕಟ್ಟೆ ಬೂತ್ ನಂ.55ರಲ್ಲಿ ಕೊಟ್ಟಿರುವ ಮತದಾರರ ಪಟ್ಟಿಯಲ್ಲಿ 942 ಹೆಸರುಗಳಿವೆ. ಆದರೆ ಆಯೋಗದ ವೆಬ್‌ಸೈಟ್‌ನಲ್ಲಿ ಪರಿಶೀಲಿಸಿದಾಗ ಮತಗಟ್ಟೆಯಲ್ಲಿ 1,172 ಮತದಾರರಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಇವರು ಮತದಾನ ಮಾಡಿದ್ದಾರೆ. ಹೀಗೆ 230 ಮತದಾರರ ಮತದಾನ ಹಕ್ಕನ್ನು ಕಾನೂನುಬಾಹಿರವಾಗಿ ಕಸಿದುಕೊಳ್ಳಲಾಗಿದೆ. ನಾಲ್ಯಪದವಿನಲ್ಲಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮತದಾನ ಮಾಡಿದ 8 ಮಂದಿಗೆ ಈ ಬಾರಿ ಅವಕಾಶವಿಲ್ಲ ಎಂದವರು ವಿವರಿಸಿದರು.
ಈ ರೀತಿ ಹಲವಾರು ಬೂತ್‌ಗಳಲ್ಲಿ ಕೊನೆಗಳಿಗೆಯಲ್ಲಿ ಮತದಾರರಿಗೆ ಯಾವುದೇ ನೋಟಿಸ್ ಅಥವಾ ಮುನ್ಸೂಚನೆ ನೀಡದೆ ಹೆಸರುಗಳನ್ನು ತೆಗೆದು ಹಾಕಲಾಗಿದೆ. ಇದರ ಹಿಂದೆ ರಾಜಕೀಯ ಕೈವಾಡ ಇರುವ ಸಂಶಯ ಕಾಡುತ್ತಿದೆ ಎಂದು ಆರೋಪಿಸಿದರು.
ಇಡೀ ವಿಧಾನಸಭಾ ಕ್ಷೇತ್ರದಲ್ಲಿ ಸುಮಾರು 5,000 ಹೆಸರುಗಳನ್ನು ತೆಗೆದು ಹಾಕಿದಂತಾಗುತ್ತದೆ. ಇವು ನಿರ್ಣಾಯಕ ಮತಗಳು. ಆದುದರಿಂದ ಈ ಮತದಾರರ ಪಟ್ಟಿಯ ಕುರಿತು ಸಂಪೂರ್ಣ ತನಿಖೆಗೆ ಚುನಾವಣಆಯೋಗ ಆದೇಶಿಸಬೇಕು ಮತ್ತು ತಪ್ಪಿತಸ್ಥರ ಮೇಲೆ ಕಾನೂನು ಕ್ರಮ ಜರಗಿಸಬೇಕು ಎಂದು ಒತ್ತಾಯಿಸುತ್ತಿದ್ದೇನೆ ಎಂದವರು ಹೇಳಿದರು.
ಮತದಾರರ ಪಟ್ಟಿಯ ಗೊಂದಲ ನಿವಾರಣೆ ಮತ್ತು ಅರ್ಹರು ಮತದಾನದಿಂದ ವಂಚಿತರಾಗದಂತೆ ಮಾಡಲು ಅಧಾರ್ ಕಾರ್ಡ್‌ನ್ನು ಮತದಾರರ ಪಟ್ಟಿಗೆ ಲಿಂಕ್ ಮಾಡುವಂತೆ ಚುನಾವಣ ಆಯೋಗಕ್ಕೆ ಸಲಹೆ ಮಾಡುವುದಾಗಿ ಅವರು ತಿಳಿಸಿದರು.ರಾಜ್ಯಸಭಾ ಮಾಜಿ ಸದಸ್ಯ ಬಿ. ಇಬ್ರಾಹಿಂ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸಲೀಂ, ವಿಶ್ವಾಸ್‌ದಾಸ್, ನೀರಜ್‌ಪಾಲ್, ಅರುಣ್ ಕುವೆಲ್ಲೊ ಉಪಸ್ಥಿತರಿದ್ದರು.