Advertisement

ಸಭೆಗೆ ಗ್ರಾಮಸ್ಥರ ಕೊರತೆ: ಸದಸ್ಯರು ಕ್ರಮ ಕೈಗೊಳ್ಳಲು ಆಗ್ರಹ

11:00 AM May 08, 2022 | Team Udayavani |

ಕೈಕಂಬ: ಗ್ರಾಮ ಸಭೆಗೆ ಗ್ರಾಮಸ್ಥರು ಬರುವುದು ಕಡಿಮೆಯಾಗುತ್ತಿದೆ. ಇದಕ್ಕಾಗಿ ಗ್ರಾಮ ಪಂಚಾಯತ್‌ ಸದಸ್ಯ ನೋರ್ವ ಕನಿಷ್ಠ 5 ಗ್ರಾಮಸ್ಥರನ್ನು ಗ್ರಾಮ ಸಭೆಗೆ ಬರುವಂತೆ ಮಾಡಬೇಕು. ಇದರಿಂದ ಗ್ರಾಮ ಸಭೆಯಲ್ಲಿ ಗ್ರಾಮಸ್ಥರ ಕೊರತೆ ಕಂಡು ಬರುವುದಿಲ್ಲ. ಎಲ್ಲ ವಾರ್ಡ್‌ಗಳ, ಪ್ರದೇಶದ ಸಮಸ್ಯೆಗಳು, ಮನವಿಗಳು ಪ್ರತಿನಿಧಿಸುವಂತೆ ಆಗುತ್ತದೆ. ಮುಂದಿನ ಸಭೆಗೆ ಈ ಬಗ್ಗೆ ಗ್ರಾ.ಪಂ. ಸದಸ್ಯರು ಆಸಕ್ತಿ ವಹಿಸಬೇಕೆಂದು ಬಡಗ ಎಡಪದವು ಗ್ರಾಮ ಸಭೆಯಲ್ಲಿ ಗ್ರಾಮಸ್ಥರು ಆಗ್ರಹಿಸಿದರು.

Advertisement

ಬಡಗ ಎಡಪದವು ಗ್ರಾಮ ಪಂಚಾ ಯತ್‌ನ 2021-22ನೇ ಸಾಲಿನ ದ್ವಿತೀಯ ಹಂತದ ಗ್ರಾಮ ಸಭೆಯು ದ.ಕ.ಜಿ.ಪಂ. ಶಾಲೆ, ಬೆಳ್ಳೆಚಾರಿನಲ್ಲಿ ಗ್ರಾ.ಪಂ.ಅಧ್ಯಕ್ಷ ಹರೀಶ್‌ ಅಧ್ಯಕ್ಷತೆಯಲ್ಲಿ ಶನಿವಾರ ನಡೆಯಿತು.

ಗ್ರಾ.ಪಂ. ಸದಸ್ಯರು ಸರಕಾರದ ಯೋಜನೆ ಯನ್ನು ಗ್ರಾಮಸ್ಥರಿಗೆ ತಿಳಿಸಬೇಕು. ಯಾರೂ ಸವಲತ್ತಿನಿಂದ ವಂಚಿತರಾಗದಂತೆ ಎಚ್ಚರ ವಹಿಸಬೇಕು. ಸಮುದಾಯ ಜನರನ್ನು ಕರೆದು ಸಭೆ ಮಾಡಿ, ಕ್ರಿಯಾಯೋಜನೆ ತಯಾರಿಸಬೇಕು. ಸದಸ್ಯರು ಖುದ್ದಾಗಿ ಹಾಜರಾಗಬೇಕು. ಕೇವಲ ಚಹಾ-ಕಾಫಿಗೆ ಮಾತ್ರ ಸೀಮಿತವಾಗಿರಬಾರದು, ಗ್ರಾಮಸ್ಥರ ಸಮಸ್ಯೆಗೆ ಸ್ಪಂದಿಸಬೇಕು ಎಂದು ಸಭೆಯಲ್ಲಿ ಗ್ರಾಮಸ್ಥರು ಗ್ರಾ.ಪಂ. ಸದಸ್ಯರಿಗೆ ಹೇಳುತ್ತಿರುವುದು ಕಂಡು ಬಂತು.

ಕೃಷಿ ಇಲಾಖೆಯಿಂದ ಕನಿಷ್ಠ ಸವಲತ್ತು: ತರಾಟೆ

ಕೃಷಿ ಇಲಾಖೆಯಿಂದ ಬಡಗ ಎಡಪದವು ಗ್ರಾಮ ರೈತರಿಗೆ ಕನಿಷ್ಠ ಸವಲತ್ತನ್ನು ನೀಡಲಾಗಿದೆ. ಟಾರ್ಫಾಲಿಗೆ ಅರ್ಜಿ ಕೊಟ್ಟು 8 ತಿಂಗಳುಗಳಾದರೂ ಸಿಕ್ಕಿಲ್ಲ. ಮೊಬೈಲ್‌ ನಂಬ್ರ ತೆಗೆದುಕೊಂಡು ಸುಮ್ಮನಾಗಿದ್ದೀರಿ. ರೈತ ಸಂಪರ್ಕ ಕೇಂದ್ರಕ್ಕೆ ಹೋದವರಿಗೆ ಟಾರ್ಫಾಲು ಬೇಕೇ, ಬೇಕೇ ಎಂದು ಕೇಳಿ ನೀಡಿದ್ದೀರಿ, ಪ್ರಥಮವಾಗಿ ಅರ್ಜಿ ನೀಡಿದವರಿಗೆ ಆದ್ಯತೆ ನೀಡಿ, ಸವಲತ್ತು ನೀಡಬೇಕು. ಬಡಗ ಎಡಪದವು ಗ್ರಾಮದ ಎಷ್ಟು ಮಂದಿ ರೈತರಿಗೆ ಕೃಷಿ ಇಲಾಖೆಯಿಂದ ಸವಲತ್ತು ನೀಡಲಾಗಿದೆ ಎಂದು ಪಟ್ಟಿ ನೀಡಿ ಎಂದು ಸಭೆಯಲ್ಲಿ ಕೃಷಿಕರು ಇಲಾಖಾಧಿಕಾರಿಯನ್ನು ಪ್ರಶ್ನಿಸಿದರು. ಕೃಷಿ ಫೀಲ್ಡ್‌ ಅಧಿಕಾರಿ ಚಿದಂಬರ ಮೂರ್ತಿ ಮಾಹಿತಿ ನೀಡುತ್ತಾ, ಈ ಬಾರಿ 250ರಿಂದ 300 ಟಾರ್ಫಾಲು ಬಂದಿದೆ. ಪ್ರಥಮ ಅರ್ಜಿ ಕೊಟ್ಟವರಿಗೆ ಮೊದಲಿಗೆ ಸವಲತ್ತು ನೀಡಲಾಗುತ್ತದೆ ಎಂದರು.

Advertisement

ಪ್ರತಿ ದನಕ್ಕೆ ಕಿವಿಯೊಲೆ ಹಾಕಿಸಿ, ಇದ ರಿಂದ ಸವಲತ್ತು ಪಡೆಯುವಲ್ಲಿ ಸುಲಭ ವಾಗುತ್ತದೆ. ಮೇ 17ಮತ್ತು 18ರಂದು ಕೊಯಿಲದಲ್ಲಿ ತರಬೇತಿ ಕಾರ್ಯಕ್ರಮ ಇದೆ. ಇದರಲ್ಲಿ ಪಾಲ್ಗೊಳ್ಳಲು ಇಚ್ಛಿಸುವವರು ಹೆಸರನ್ನು ಕೊಡಿ ಎಂದು ಪಶು ವೈದ್ಯಾಧಿಕಾರಿ ಸಭೆಯಲ್ಲಿ ಮಾಹಿತಿ ನೀಡಿದರು.

ಶಾಲಾವರಣದಲ್ಲಿರುವ ಎಲ್ಲ ತಂತಿಗಳನ್ನು ಸ್ಥಳಾಂತರ ಮಾಡಲಾಗಿದೆ. ದಡ್ಡಿ ಕ್ರಾಸ್‌ ನಲ್ಲಿ ತಂತಿ ಬದಲಾವಣೆ ಮಾಡಲಾಗುವುದು ಎಂರು ಮೆಸ್ಕಾಂ ಅಧಿಕಾರಿ ವೀರಭದ್ರಪ್ಪ ತಿಳಿಸಿದರು.

ಅಕಾಲಿಕ ಮಳೆ ಹಾನಿ ಬಗ್ಗೆ ಗ್ರಾಮಸ್ಥರು ಮಾಹಿತಿ ನೀಡಿ. ಈಗಾಗಲೇ ಈ ಬಗ್ಗೆ ವಾಟ್ಸ್‌ ಆ್ಯಪ್‌ ಗ್ರೂಫ್‌ ಮಾಡಲಾಗಿದೆ ಎಂದು ಗ್ರಾಮಕರಣಿಕರು ಮಾಹಿತಿ ನೀಡಿದರು.

ಏಕನಿವೇಶನ ಇಲ್ಲಿಯೂ ಪ್ರತಿಧ್ವನಿಸಿತು

ಗಂಜಿಮಠ ಗ್ರಾ.ಪಂ.ನ ಗ್ರಾಮ ಸಭೆಯಲ್ಲಿ ಕಂಡು ಬಂದ ಏಕನಿವೇಶನ ಹೊಸ ಸುತ್ತೋಲೆ ರದ್ಧತಿಯು ಬಡಗ ಎಡಪದವು ಗ್ರಾಮ ಸಭೆಯಲ್ಲಿಯೂ ಪ್ರತಿಧ್ವನಿಸಿತು. ಈ ಹಿಂದೆ ಇದ್ದ ಹಾಗೆಯೇ ಗ್ರಾ.ಪಂ.ನಲ್ಲಿಯೇ ಅದು ಮಾಡುವಂತೆ ಸರಕಾರಕ್ಕೆ ಮನವಿ ಸಲ್ಲಿಸಲು ಸಭೆ ನಿರ್ಧರಿಸಿತ್ತು. ಜತೆಗೆ ತಾ.ಪಂ., ಜಿ.ಪಂ. ಗೂ ಮನವಿ ಸಲ್ಲಿಸಲು ನಿರ್ಧರಿಸಲಾಯಿತು.

ಬಾವಿ ನೀರನ್ನು 3 ತಿಂಗಳುಗಳಿಗೊಮ್ಮೆ ಪರೀಕ್ಷೆ ಮಾಡಿಸಿ, ಆಶಾ ಕಾರ್ಯಕರ್ತೆ ಯರು ಬಾವಿಯ ನೀರನ್ನು ಪರೀಕ್ಷೆಗೆ ಕೊಂಡೊಯುತ್ತಾರೆ. ಅದರ ವರದಿ ಬಂದ ಮೇಲೆ ನೀರು ಕುಡಿಯಲು ಯೋಗ್ಯವೇ ಎಂದು ಹೇಳಲಾಗುತ್ತದೆ. ಇಲ್ಲದಿದ್ದಲ್ಲಿ ಕ್ಲೋರೊನೆಶನ್‌ ಮಾಡಲಾಗುತ್ತದೆ ಎಂದು ಕೊಂಪದವು ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಡಾ| ಚೈತನ್ಯಮಾಹಿತಿ ನೀಡಿದರು.

ಗರ್ಭಿಣಿ ಆಗಿ 3 ತಿಂಗಳೊಳಗೆ ತಾಯಿ ಕಾರ್ಡ್‌ ನೋಂದಣಿ ಮಾಡಿಬೇಕು. ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಆರೋಗ್ಯ ಸಹಾಯಕರು ಇದನ್ನು ಮಾಡುತ್ತಾರೆ. ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಗರ್ಭಿಣಿಯರಿಗೆ ಉಚಿತವಾಗಿ ರಕ್ತಪರೀಕ್ಷೆಯನ್ನು ಮಾಡಲಾಗುತ್ತದೆ ಎಂದು ಡಾ| ಚೈತನ್ಯ ಮಾಹಿತಿ ನೀಡಿದರು.

ಗ್ರಾ.ಪಂ. ಉಪಾಧ್ಯಕ್ಷೆ ಯಶೋದಾ, ಪಿಡಿಒ ಸವಿತಾ, ಪಂ. ಸದಸ್ಯರು, ವಿವಿಧ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು. ಕಾರ್ಯದರ್ಶಿ ಲಕ್ಷ್ಮಣ್‌ ವರದಿ ವಾಚಿಸಿದರು.

ಸರಕಾರಿ ಶಾಲೆ ಆಂಗ್ಲ ಮಾಧ್ಯಮ

ನೋಡಲ್‌ ಅಧಿಕಾರಿಯಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಆಗಮಿಸಿದ್ದ ಮಂಗಳೂರು ಉತ್ತರ ಸದಾನಂದ ಪೂಂಜ ಮಾಹಿತಿ ನೀಡುತ್ತಾ, ಹೊರಗುಳಿದ ಮಕ್ಕಳ ಬಗ್ಗೆ ಮಾಹಿತಿ ನೀಡಿ, ಸರಕಾರಿ ಶಾಲೆಯಲ್ಲೊ ಆಂಗ್ಲಮಾಧ್ಯಮ ಶಾಲೆ ಆರಂಭವಾಗಿದೆ. ಗುಣಮಟ್ಟದ ಶಿಕ್ಷಣಕ್ಕೆ ವಿಶೇಷ ಗಮನ ನೀಡಲಾಗುತ್ತಿದೆ. ಈ ಸಾಲಿನಲ್ಲಿ ಸರಕಾರ ಅತಿಥಿ ಶಿಕ್ಷಕರ ಹೆಸರು ಘೋಷಣೆ ಮಾಡಿದೆ. ಮಂಗಳೂರು ದಕ್ಷಿಣ 81 ಅತಿಥಿ ಶಿಕ್ಷಕರನ್ನು ಉತ್ತರದಲ್ಲಿ 96 ಅತಿಥಿ ಶಿಕ್ಷಕರನ್ನು ಒದಗಿಸಲು ಮನವಿ ಮಾಡಲಾಗಿದೆ. ಈ ಅತಿಥಿ ಶಿಕ್ಷಕರನ್ನು ಅಗತ್ಯವಿದ್ದಲ್ಲಿಗೆ ಹಂಚಲಾಗುತ್ತದೆ ಎಂದರು.

ವಿವಿಧ ಕಾಮಗಾರಿ ಪೂರ್ಣ

ಜಿ.ಪಂ. ಅಭಿವೃದಿ ನಿಧಿಯಿಂದ 1 ಲಕ್ಷ ರೂ. ಅನುದಾನದಲ್ಲಿ ಬೆಳ್ಳೆಚಾರು ದಾಸ್ತಾನು ಕೊಠಡಿ ಕಾಮಗಾರಿ, ಧೂಮ ಚಡವು ಜಂಕ್ಷನ್‌ನಲ್ಲಿ 3 ಲಕ್ಷ ರೂ. ಅನುದಾನದಲ್ಲಿ ಸಾರ್ವಜನಿಕ ಶೌಚಾಲಯ ಕಾಮಗಾರಿ, 3 ಲಕ್ಷ ರೂ. ಅನುದಾನದಲ್ಲಿ ಪೂಪಾಡಿಕಲ್ಲು ಜನತಾ ಕಾಲನಿಯಲ್ಲಿ ಸಭಾಂಗಣ ಕಾಮಗಾರಿ, ತಾ.ಪಂ. ಅಭಿವೃದ್ಧಿ ನಿಧಿಯಿಂದ ದಡ್ಡಿ ಅಂಗನವಾಡಿಗೆ 2.5 ಲಕ್ಷ ರೂ. ವೆಚ್ಚದಲ್ಲಿ ಮೇಲ್ಛಾವಣೆ ಕಾಮಗಾರಿ ಪೂರ್ಣಗೊಂಡಿದೆ ಎಂದು ಪಂ.ರಾಜ್ಯ ಇಲಾಖೆ ಎಂಜಿನಿಯರಿಂಗ್‌ ವಿಭಾಗದ ಎಂಜಿನಿಯರ್‌ ವಿಶ್ವನಾಥ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next