Advertisement

ತರಕಾರಿಗಳ ಕೊರತೆ: ಗ್ರಾಹಕರಿಗೆ ಹೊರೆ; ಲಾಕ್‌ಡೌನ್‌ ಜತೆ ಬೆಲೆ ಏರಿಕೆ ಬಿಸಿ

11:39 AM Jul 18, 2020 | mahesh |

ಮಹಾನಗರ: ಕೋವಿಡ್ ಆತಂಕ, ಲಾಕ್‌ಡೌನ್‌ ಸಂಕಷ್ಟದ ನಡುವೆಯೇ ಸಾರ್ವಜನಿಕರಿಗೆ ದಿನನಿತ್ಯದ ಅಗತ್ಯ ವಸ್ತುಗಳ ಬೆಲೆ ಏರಿಕೆಯ ಬಿಸಿಯೂ ತಟ್ಟಲಾರಂಭಿಸಿದೆ. ತರಕಾರಿ, ದಿನಸಿ ಸಾಮಗ್ರಿಗಳು ಸಹಿತ ದಿನಬಳಕೆಯ ವಸ್ತುಗಳ ಬೆಲೆಯು ಎರಡು ತಿಂಗಳುಗಳಿಂದ ಏರಿಕೆಯಾಗುತ್ತಲೇ ಇದೆ ಎಂಬ ದೂರುಗಳು ಗ್ರಾಹಕರಿಂದ ಕೇಳಿ ಬರುತ್ತಿದೆ. ವಾಸ್ತವವಾಗಿ ಮಾರುಕಟ್ಟೆಯ ನೈಜ ದರ ಮತ್ತು ಕೆಲವು ಅಂಗಡಿಗಳಲ್ಲಿ ಗ್ರಾಹಕರಿಂದ ಪಡೆಯುತ್ತಿರುವ ದರಕ್ಕೂ ತುಂಬಾ ವ್ಯತ್ಯಾಸವಿದೆ. ಜಿಲ್ಲೆಯಲ್ಲಿ ಬುಧವಾರ ರಾತ್ರಿಯಿಂದ ಲಾಕ್‌ಡೌನ್‌ ಘೋಷಣೆಯಾದ ಬಳಿಕ ಕೆಲವು ಅಂಗಡಿಗಳು ಇನ್ನಷ್ಟು ಬೆಲೆ ಏರಿಕೆ ಮಾಡಿವೆ ಎಂದು ಹಲವು ಗ್ರಾಹಕರು ದೂರುತ್ತಿದ್ದಾರೆ.

Advertisement

ವ್ಯಾಪಾರಿಗಳಿಂದ ನಿರಾಕರಣೆ
ಟೊಮೆಟೊ, ಬಟಾಟೆ, ಬೀನ್ಸ್‌ ಸಹಿತ ಕೆಲವು ತರಕಾರಿಗಳ ಬೆಲೆ ಮಾತ್ರ ಒಂದೆರಡು ವಾರಗಳಿಂದ ಹೆಚ್ಚಾಗಿದೆ. ಆದರೆ ದಿನಸಿ ಸಾಮಗ್ರಿಗಳ ಬೆಲೆ ಹೆಚ್ಚಾಗಿಲ್ಲ. ನಗರದಲ್ಲಿ ಅಧಿಕೃತವಾಗಿ ವ್ಯಾಪಾರ ಮಾಡುವ ವ್ಯಾಪಾರಿಗಳು ಜನರಿಂದ ಹೆಚ್ಚುವರಿ ಬೆಲೆ ವಸೂಲಿ ಮಾಡುತ್ತಿಲ್ಲ. ಆದರೆ ಅನಧಿಕೃತವಾಗಿ ಕೆಲವು ಕಡೆ ವ್ಯಾಪಾರ ಮಾಡುವವರು ಈ ರೀತಿ ಬೆಲೆ ಹೆಚ್ಚಿಸುವ ಸಾಧ್ಯತೆ ಇದೆ ಎನ್ನುತ್ತಾರೆ ನಗರದ ಪ್ರಮುಖ ವ್ಯಾಪಾರಸ್ಥರು.

ಬೆಲೆ ಏರಿಕೆಯ ಸೀಸನ್‌
ಟೊಮೆಟೋ ಸಹಿತ ಕೆಲವು ತರಕಾರಿಗಳಿಗೆ ಪ್ರತಿ ಮಳೆಗಾಲದಲ್ಲೂ ಬೆಲೆ ಏರಿಕೆ ಸಾಮಾನ್ಯವಾಗಿದೆ. ಇದು ಜನವರಿ ಅಂತ್ಯದವರೆಗೆ ಹೀಗೆಯೇ ಮುಂದುವರಿಯುತ್ತದೆ. 2 ತಿಂಗಳ ಹಿಂದೆ ಟೊಮೆಟೋ ಕೆ.ಜಿ.ಗೆ 20 ರೂ.ಗಳಷ್ಟಿತ್ತು. ಕಳೆದ ವಾರ 30 ರೂ.ಗೆ ಏರಿಕೆಯಾಗಿ ಪ್ರಸ್ತುತ 48ರಿಂದ 50 ರೂ. ಇದೆ. ಟೊಮೆಟೋ ಬೆಳೆ, ಪೂರೈಕೆ ಕಡಿಮೆ ಇದೆ. ಅದೇ ರೀತಿ ಬಟಾಟೆ ಕಳೆದೆರಡು ವಾರಗಳ ಹಿಂದೆ ಕೆ.ಜಿ.ಗೆ 32ರಿಂದ 34 ರೂ. ಇತ್ತು. ಈಗ 38ರಿಂದ 40 ರೂ.ಗಳಿಗೆ ಏರಿದೆ. ಬೀನ್ಸ್‌ (ಬಿಳಿ) 30 ರೂ.ಗಳಿಂದ 40-50 ರೂ.ಗಳಿಗೆ ಏರಿಕೆಯಾಗಿದೆ. ಬೀನ್ಸ್‌ (ಹಸಿರು) 50 ರೂ. ಇದ್ದುದು 80 ರೂ.ಗಳಿಗೆ ಏರಿಕೆಯಾಗಿದೆ. ಸ್ಥಳೀಯ ತೊಂಡೆಕಾಯಿ 50 ರೂ.ಗಳಿಂದ 80 ರೂ.ಗಳಿಗೆ ಏರಿಕೆಯಾಗಿದೆ. ಇಂತಹ ಏರಿಕೆ ಮಳೆಗಾಲದಲ್ಲಿ ಸಾಮಾನ್ಯ. ಲಾಕ್‌ಡೌನ್‌ನಿಂದಾಗಿ ಕೆಲವು ವಸ್ತುಗಳಿಗೆ ಸ್ವಲ್ಪ ಬೆಲೆ ಏರಿಕೆ ಆಗಿರಬಹುದು ಎನ್ನುತ್ತಾರೆ ನಗರದ ಹಿರಿಯ ವ್ಯಾಪಾರಿ ಜನಾರ್ದನ್‌.

ದಿನಸಿ ದರ ಏರಿಕೆಯಾಗಿಲ್ಲ
ಲಾಕ್‌ಡೌನ್‌ ಬಳಿಕ ಅಕ್ಕಿ, ಇತರ ಆಹಾರ ಧಾನ್ಯ ಸಹಿತ ದಿನಸಿ ಸಾಮಗ್ರಿಗಳ ಬೆಲೆ ಗಮನಾರ್ಹ ಎನಿಸುವಷ್ಟು ಹೆಚ್ಚಳವಾಗಿಲ್ಲ. ಈರುಳ್ಳಿ ಬೆಲೆ ಕಡಿಮೆಯಾಗಿದೆ. ಸಕ್ಕರೆ ಬೆಲೆ 1 ರೂ. ಜಾಸ್ತಿಯಾಗಿದೆ. ಇದು ಹೆಚ್ಚು ಕಡಿಮೆ ಆಗುತ್ತಿರುತ್ತದೆ. ಗ್ರಾಹಕರಿಗೂ ಬೆಲೆಯ ಬಗ್ಗೆ ಮಾಹಿತಿ ಇರುತ್ತದೆ. ಅಲ್ಲದೆ ವ್ಯಾಪಾರಸ್ಥರಿಗೂ ಬದ್ಧತೆ ಇರುತ್ತದೆ. ಮನಬಂದಂತೆ ಬೆಲೆ ಹೆಚ್ಚಿಸಿದರೆ ವ್ಯಾಪಾರ ಕಳೆದುಕೊಳ್ಳಬೇಕಾಗುತ್ತದೆ. ಆದರೆ ಅನಧಿಕೃತವಾಗಿ ಮಾರಾಟ ಮಾಡುವವರು ಬೆಲೆ ಹೆಚ್ಚಿಸುವ ಸಾಧ್ಯತೆಗಳು ಇರುತ್ತವೆ ಎನ್ನುತ್ತಾರೆ ವ್ಯಾಪಾರಿಗಳಾದ ಸಂತೋಷ್‌ ಹಾಗೂ ಇತರ ಕೆಲವರು ಹೇಳುತ್ತಿದ್ದಾರೆ.

“ಅಂಗಡಿ ಮುಚ್ಚಲು ಸಮಯ ಕೊಡಿ’
ತರಕಾರಿ, ದಿನಸಿ ಅಂಗಡಿ ಬೆಳಗ್ಗೆ 8ರಿಂದ 11ರ ವರೆಗೆ ತೆರೆಯಲು ಅವಕಾಶವಿದೆ. ಲಾಕ್‌ಡೌನ್‌ಗೆ ನಮ್ಮ ಪೂರ್ಣ ಸಹಕಾರವಿದೆ. ಆದರೆ ಅಂಗಡಿಗಳನ್ನು ಮುಚ್ಚಿದ ಬಳಿಕ ಹಣದ ಲೆಕ್ಕಾಚಾರ, ಕಾರ್ಡ್‌ ಪೇಮೆಂಟ್‌ ಕ್ಲಿಯರೆನ್ಸ್‌, ಡಿಜಿಟಲ್‌ ಪೇಮೆಂಟ್‌ ಕ್ಲಿಯರೆನ್ಸ್‌ ಮೊದಲಾದ ಕೆಲಸಗಳನ್ನು ಅಂಗಡಿಯಲ್ಲಿಯೇ ಮಾಡಬೇಕಾಗತ್ತದೆ. ಅಲ್ಲದೆ ಸಿಬಂದಿಯನ್ನು ಅವರ ಮನೆಗೆ ತಲುಪಿಸಬೇಕು. ಹಾಗಾಗಿ 10.30ಕ್ಕೆ ಬಾಗಿಲು ಹಾಕಬೇಕಿದೆ. ಆದರೆ 10.30ಕ್ಕೆ ಬಾಗಿಲು ಹಾಕಿದರೆ ಗ್ರಾಹಕರು ಬಂದು 11 ಗಂಟೆಯವರೆಗೆ ಅವಕಾಶವಿದೆ ಎಂದು ತರಾಟೆಗೆ ತೆಗೆದುಕೊಳ್ಳುತ್ತಾರೆ. ಹಾಗಾಗಿ 11 ಗಂಟೆಯವರೆಗೆ ವ್ಯಾಪಾರ ಮಾಡಿ ಅನಂತರ ಇತರ ಕೆಲಸ, ಮನೆ ತಲುಪಲು ಅರ್ಧ ಗಂಟೆ ಹೆಚ್ಚುವರಿ ಸಮಯ ನೀಡಿದರೆ ಉತ್ತಮ. ಎಂದು ಕೆಲವು ವ್ಯಾಪಾರಿಗಳು ಅಭಿಪ್ರಾಯಪಟ್ಟಿದ್ದಾರೆ.

Advertisement

ಶೇ.10ರಷ್ಟು ಏರಿಕೆ
ಮಳೆಗಾಲದಲ್ಲಿ ಸಾಮಾನ್ಯವಾಗಿ ಕೆಲವು ಬಗೆಯ ತರಕಾರಿಗಳ ಕೊರತೆ ಇರುತ್ತದೆ. ಅದನ್ನು ಹೊರತುಪಡಿಸಿದರೆ ಇತರ ಯಾವುದೇ ತರಕಾರಿ, ದಿನಸಿ ಸಾಮಗ್ರಿಗಳ ಪೂರೈಕೆ ಸಹಜವಾಗಿದೆ. ಲಾಕ್‌ಡೌನ್‌ನಿಂದಾಗಿ ಲಾರಿಗಳು ಬರದಿದ್ದರೆ ಕೆಲವು ವಸ್ತುಗಳ ಬೆಲೆ ಸುಮಾರು ಶೇ. 10ರಷ್ಟು ಮಾತ್ರ ಹೆಚ್ಚಳವಾಗಿರಬಹುದು.
– ಜನಾರ್ದನ್‌ ಕಾರ್ಯದರ್ಶಿ, ವ್ಯಾಪಾರಸ್ಥರ ಸಂಘ ಮಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next