Advertisement

ಯೂರಿಯಾ ರಸಗೊಬ್ಬರ ಕೊರತೆ

12:56 PM Aug 12, 2020 | Suhan S |

ಹುಬ್ಬಳ್ಳಿ: ರಾಜ್ಯದ ಬಹುತೇಕ ಕಡೆ ಮಳೆಯಾಗುತ್ತಿದೆ, ಪ್ರಮುಖ ಜಲಾಶಯಗಳು ಭರ್ತಿಯಾಗುತ್ತಿದ್ದು, ಉತ್ತಮ ಮುಂಗಾರು ಭರವಸೆ ಮೂಡಿಸಿದೆ. ಇದರ ನಡುವೆ ಯೂರಿಯಾ ರಸಗೊಬ್ಬರ ಕೊರತೆ ರೈತರನ್ನು ಕಾಡತೊಡಗಿದೆ. ಗೊಬ್ಬರದ ರೇಕ್‌ಗಳು ಬಾರದಿರುವುದು ಆತಂಕ ಹೆಚ್ಚುವಂತೆ ಮಾಡಿದೆ. ರಾಜ್ಯದಲ್ಲಿ ರಸಗೊಬ್ಬರ ಕೊರತೆ ಇಲ್ಲ ಎಂದು ಹೇಳಲಾಗುತ್ತಿದೆ. ಆದರೆ ವಾಸ್ತವವಾಗಿ ಯೂರಿಯಾ ದೊರೆಯದೆ ರೈತರು ಪರದಾಡುವಂತಾಗಿದೆ. ಇದನ್ನೇ ಬಳಸಿಕೊಂಡ ಕೆಲ ಡೀಲರ್‌ಗಳು ಹೆಚ್ಚಿನ ದರಕ್ಕೆ ಯೂರಿಯಾ ಮಾರುತ್ತಿದ್ದಾರೆ. ಇನ್ನೊಂದೆಡೆ ಮಾರುಕಟ್ಟೆಯಲ್ಲಿ ಯೂರಿಯಾ ಕೊರತೆ ಇರುವುದು ಸತ್ಯ ಎಂಬುದನ್ನು ಅಧಿಕಾರಿ ಮೂಲಗಳು ಒಪ್ಪುತ್ತಿವೆ.

Advertisement

ಎಲ್ಲಿಂದ ಬರುತ್ತೆ ಗೊಬ್ಬರ?: ಬೇವು ಲೇಪಿತ ಯೂರಿಯಾ ರಸಗೊಬ್ಬರ ನೀಡಿಕೆ ನಂತರದಲ್ಲಿ ದೇಶ ಯೂರಿಯಾ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಿದೆ. ಆದರೆ ಮಾರುಕಟ್ಟೆಯಲ್ಲಿ ಯೂರಿಯಾ ರಸಗೊಬ್ಬರ ಕೊರತೆಯಿಂದ, ಸಾಮಾನ್ಯ ದರಕ್ಕಿಂತ ಪ್ರತಿ ಚೀಲಕ್ಕೆ 100 ರೂ. ಹೆಚ್ಚಿನ ದರಕ್ಕೆ ಡೀಲರ್‌ ಗಳು ಮಾರಾಟಕ್ಕೆ ಮುಂದಾಗಿದ್ದಾರೆ ಎಂದುಹೇಳಲಾಗುತ್ತಿದೆ. ಹೆಚ್ಚಿನ ದರ ನೀಡಲು ಒಪ್ಪಿದರೆ ಒಂದೇ ದಿನದಲ್ಲಿ ಮಾರಾಟಗಾರರ ಅಂಗಡಿ ಮುಂದೆ ರಸಗೊಬ್ಬರ ತುಂಬಿದ ಲಾರಿ ನಿಂತಿರುತ್ತದೆ. ರಸಗೊಬ್ಬರ ಕೊರತೆ ಎಂದು ಹೇಳಲಾಗುತ್ತಿದ್ದು, ಹೆಚ್ಚಿನ ದರಕ್ಕೆ ಎಲ್ಲಿಂದ ಬರುತ್ತದೆ ಎಂಬುದು ಕೆಲ ಮಾರಾಟಗಾರರ ಪ್ರಶ್ನೆ.

ಸಾಮಾನ್ಯವಾಗಿ ಒಂದು ಚೀಲ ಯೂರಿಯಾ ರಸಗೊಬ್ಬರಕ್ಕೆ 270-280 ರೂ.ಗೆ ಡೀಲರ್‌ಗಳು ಮಾರಾಟಗಾರರಿಗೆ ನೀಡುತ್ತಿದ್ದರು. ಕೋವಿಡ್‌ -19 ಕಾಟ ಹಾಗೂ ಲಾಕ್‌ಡೌನ್‌ನಿಂದ ಯೂರಿಯಾ ಉತ್ಪಾದನೆ ಕುಂಠಿತವಾಗಿದ್ದು, ಕೊರತೆ ಉಂಟಾಗಬಹುದೆಂಬ ಲೆಕ್ಕಾಚಾರದಲ್ಲಿ ಒಂದಿಷ್ಟು ಮಾರಾಟಗಾರರು ಕೆಲ ತಿಂಗಳು ಮೊದಲೇ ಪ್ರತಿ ಚೀಲಕ್ಕೆ 310-315 ರೂ. ಗಳಂತೆ ನಾಲ್ಕೈದು ಲೋಡ್‌ಗಳನ್ನು ಸಂಗ್ರಹಿಸಿಟ್ಟುಕೊಂಡಿದ್ದಾರೆ. ರಸಗೊಬ್ಬರ ನೀಡುವಂತೆ ಇದೀಗ ಡೀಲರ್‌ಗಳನ್ನು ಕೇಳಿದರೆ ಪ್ರತಿ ಚೀಲಕ್ಕೆ 420-430 ರೂ. ಎಂದು ಹೇಳುತ್ತಿದ್ದು, ಈ ದರಕ್ಕೆ ಒಪ್ಪಿದರೆ ರಸಗೊಬ್ಬರ ತಕ್ಷಣಕ್ಕೆ ದೊರೆಯುತ್ತಿದೆ.

ಈ ಹಿಂದೆ ಬಂದಿದ್ದ ಯೂರಿಯಾ ರಸಗೊಬ್ಬರವನ್ನು ಎಲ್ಲ ಸೊಸೈಟಿಗಳು, ಫೆಡರೇಶನ್‌ಗಳಿಗೆ ಹಂಚಿಕೆ ಮಾಡಲಾಗಿತ್ತು. ಇದೀಗ ಅಲ್ಲೂ ಖಾಲಿಯಾಗಿದೆ ಎಂದು ಹೇಳಲಾಗುತ್ತಿದ್ದು, ಯೂರಿಯಾ ರಸಗೊಬ್ಬರ ಪೂರೈಕೆಯ ಪ್ರಮುಖ ಕಂಪೆನಿ ಇಇಫ್ಶೋ ಇನ್ನೊಂದು ವಾರದಲ್ಲಿ ದರ ಪಟ್ಟಿ ಪ್ರಕಟಿಸುವುದಾಗಿ ತಿಳಿಸಿದೆ ಎಂದು ಹೇಳಲಾಗುತ್ತಿದೆ.

ವಾರಾಂತ್ಯಕ್ಕೆ ರೇಕ್‌ ನಿರೀಕ್ಷೆ?: ಕೋವಿಡ್ ಸಂಕಷ್ಟ ಹಾಗೂ ಲಾಕ್‌ಡೌನ್‌ನಿಂದ ಯೂರಿಯಾ ರಸಗೊಬ್ಬರ ಉತ್ಪಾದನೆಯಲ್ಲಿ ಕುಂಠಿತವಾಗಿದೆ. ಇದರಿಂದ ಯೂರಿಯಾ ರಸಗೊಬ್ಬರದ ರೇಕ್‌ ಗಳು ಬಾರದಿರುವುದು ಮಾರುಕಟ್ಟೆಯಲ್ಲಿ ಯೂರಿಯಾ ರಸಗೊಬ್ಬರ ಕೊರತೆಗೆ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ. ಧಾರವಾಡ, ಬೆಳಗಾವಿ, ಹಾವೇರಿ, ರಾಯಚೂರು, ಬಾಗಲಕೋಟೆ, ಗದಗ, ಕೊಪ್ಪಳ, ಬಳ್ಳಾರಿ ಹೀಗೆ ವಿವಿಧ ಜಿಲ್ಲೆಗಳಲ್ಲಿ ರಸಗೊಬ್ಬರ ಡೀಲರ್‌ಗಳು, ಮಾರಾಟಗಾರರು ಹಾಗೂ ರೈತರು ಯೂರಿಯಾ ರಸಗೊಬ್ಬರ ರೇಕ್‌ಗಳು ಬರುತ್ತವೆಯೇ ಎಂದು ಎದುರುನೋಡುತ್ತಿದ್ದಾರೆ. ಮಾರ್ಕೆಟಿಂಗ್‌ ಫೆಡರೇಶನ್‌ ಮೂಲಗಳ ಪ್ರಕಾರ ವಾರಂತ್ಯಕ್ಕೆ ಯೂರಿಯಾ ರಸಗೊಬ್ಬರ ರೇಕ್‌ಗಳು ಬರುವ ನೀರಿಕ್ಷೆ ಇದ್ದು, ಹೀಗಾದರೆ ಯೂರಿಯಾ ರಸಗೊಬ್ಬರ ಕೊರತೆ ಒಂದಿಷ್ಟಾದರೂ ನೀಗಲಿದೆ.

Advertisement

ಎಚ್ಚೆತ್ತುಕೊಳ್ಳಬೇಕಿದೆ ರಾಜ್ಯ ಸರಕಾರ : ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗಿದ್ದು, ಪ್ರಮುಖ ಜಲಾಶಯಗಳು ಭರ್ತಿಯಾಗಿದ್ದರಿಂದ ಈ ಬಾರಿ ನಿರೀಕ್ಷೆಗೆ ಮೀರಿ ಮುಂಗಾರು ಬಿತ್ತನೆಯಾಗಿದೆ. ಉತ್ತಮ ಫ‌ಸಲಿನ ನಿರೀಕ್ಷೆಯಲ್ಲಿ ಅನ್ನದಾತರಿದ್ದಾರೆ. ಇದೀಗ ಬೆಳೆಗಳಿಗೆ ಯೂರಿಯಾ ರಸಗೊಬ್ಬರ ನೀಡಬೇಕಿದ್ದರಿಂದ ರೈತರು ಗೊಬ್ಬರಕ್ಕಾಗಿ ಪರದಾಡುತ್ತಿದ್ದು, ಈ ಹಂತದಲ್ಲಿ ರಾಜ್ಯ ಸರಕಾರ ಹೆಚ್ಚು ಮುತುವರ್ಜಿ ವಹಿಸಬೇಕಿದೆ.

ಈ ಹಿಂದೆ ರಸಗೊಬ್ಬರಕ್ಕಾಗಿಯೇ ಹಾವೇರಿಯಲ್ಲಿ ಗೋಲಿಬಾರ್‌ ನಡೆದು ಇಬ್ಬರು ಮೃತಪಟ್ಟಿದ್ದರು. ಧಾರವಾಡ ಸೇರಿದಂತೆ ಕೆಲ ಜಿಲ್ಲೆಗಳಲ್ಲಿ ಗದ್ದಲಗಳಾಗಿದ್ದವು. ಈ ಬಾರಿ ಉತ್ತಮ ಫ‌ಸಲು ಇದ್ದು, ರೈತರು ಯೂರಿಯಾ ರಸಗೊಬ್ಬರ ಪಡೆಯಲು ಪರದಾಡುತ್ತಿದ್ದಾರೆ. ಪ್ರತಿ ಎಕರೆಗೆ ಕನಿಷ್ಠ 3-4 ಚೀಲವಾದರೂ ಬೇಕಾಗುತ್ತಿದ್ದು, ಯೂರಿಯಾ ರಸಗೊಬ್ಬರದ ಲಾರಿ ಬಂದಿದೆ ಎಂದರೆ ಸಾಕು ಮುಗಿ ಬೀಳುವ ಸ್ಥಿತಿ ಇದೆ. ಸರಕಾರ ಯೂರಿಯಾ ಕೊರತೆ ನೀಗಿಸುವ ನಿಟ್ಟಿನಲ್ಲಿ ಅಗತ್ಯ ಎಚ್ಚರಿಕೆ ಹಾಗೂ ಸಮರ್ಪಕ ಕ್ರಮ ಕೈಗೊಳ್ಳಬೇಕಿದೆ. ಮುಖ್ಯವಾಗಿ ಸೊಸೈಟಿಗಳು ಹಾಗೂ ಫೆಡರೇಶನ್‌ಗಳಿಗೆ ಹಂಚಿಕೆ ಮಾಡಲಾದ ಯೂರಿಯಾ ರಸಗೊಬ್ಬರ ಬೇರೆ ಕಡೆಗಳಲ್ಲಿ ಮಾರಾಟಕ್ಕೆ ಮುಂದಾಗುತ್ತಿದೆಯೇ ಎಂಬುದರ ಮೇಲೆಯೂ ನಿಗಾ ಇರಿಸಬೇಕಿದೆ ಎಂಬ ಮಾತೂ ಕೇಳಿಬಂದಿದೆ.

 

-ಅಮರೇಗೌಡ ಗೋನವಾರ

Advertisement

Udayavani is now on Telegram. Click here to join our channel and stay updated with the latest news.

Next