Advertisement

ಖಾಸಗಿ ಆಸ್ಪತ್ರೆಗಳಲ್ಲಿ ಬಿಲ್ಲಿಂಗ್‌ನಲ್ಲಿ ಪಾರದರ್ಶಕತೆ ಇಲ್ಲ; ಗಮನ ಹರಿಸಲು ಡಾ.ಸುಧಾಕರ್‌ ಸೂಚನೆ

03:28 PM Dec 17, 2022 | Team Udayavani |

ಬೆಂಗಳೂರು : ಕೆಲ ಖಾಸಗಿ ಆಸ್ಪತ್ರೆಗಳಲ್ಲಿ ಬಿಲ್ಲಿಂಗ್‌ ಮಾಡುವಾಗ ಹಾಗೂ ದತ್ತಾಂಶಗಳ ಸಂಗ್ರಹಣೆಯಲ್ಲಿ ಪಾರದರ್ಶಕತೆಯೇ ಇಲ್ಲ. ಫಾನಾ ಸಂಘಟನೆಯು ಈ ಬಗ್ಗೆ ಗಮನಹರಿಸಬೇಕು. ಹಾಗೆಯೇ ಈ ಬಗ್ಗೆ ಮುಂದಿನ ದಿನಗಳಲ್ಲಿ ಚರ್ಚೆ ನಡೆಸಬೇಕು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ಕಿವಿಮಾತು ಹೇಳಿದರು.

Advertisement

ಫಾನಾದಿಂದ ಆಯೋಜಿಸಿದ್ದ 3 ನೇ ರಾಷ್ಟ್ರೀಯ ಆರೋಗ್ಯ ಸಮ್ಮೇಳನದಲ್ಲಿ ಸಚಿವರು ಮಾತನಾಡಿ, ಜನರಿಗೆ ಉತ್ತಮ ಆರೋಗ್ಯ ಸೇವೆಗಳನ್ನು ನೀಡಲು ಸರ್ಕಾರಿ, ಖಾಸಗಿ ಆಸ್ಪತ್ರೆಗಳು ಹಾಗೂ ಫಾನಾ ಸಹಯೋಗದಲ್ಲಿ ಕೆಲಸ ಮಾಡಬೇಕು. ಜನರಿಗೆ ಸದಾ ಲಭ್ಯವಾಗುವಂತೆ ಹಾಗೂ ಚಿಕಿತ್ಸೆ ಕಡಿಮೆ ದರದಲ್ಲಿ ದೊರೆಯುವಂತೆ ವ್ಯವಸ್ಥೆ ಇರಬೇಕು. ನಾನು ಯಾರನ್ನೂ ನಿರ್ದಿಷ್ಟವಾಗಿ ದೂರುತ್ತಿಲ್ಲ. ಆದರೆ ಕೆಲ ಖಾಸಗಿ ಆಸ್ಪತ್ರೆಗಳಲ್ಲಿ ಬಿಲ್ಲಿಂಗ್‌ನಲ್ಲಿ ಪಾರದರ್ಶಕತೆಯೇ ಇಲ್ಲ. ಸರ್ಕಾರದ ರಾಷ್ಟ್ರೀಯ, ರಾಜ್ಯ ಮಟ್ಟದ ಕಾರ್ಯಕ್ರಮಗಳಿಗೆ ಸರಿಯಾದ ದತ್ತಾಂಶ ಬೇಕಾಗುತ್ತದೆ. ಇದಕ್ಕಾಗಿ ಖಾಸಗಿ ಆಸ್ಪತ್ರೆಗಳು ಮಾಹಿತಿ, ದತ್ತಾಂಶಗಳನ್ನು ಸರಿಯಾಗಿ ಸರ್ಕಾರದೊಂದಿಗೆ ಹಂಚಿಕೊಳ್ಳಬೇಕು ಎಂದರು.

ಉತ್ತಮ ಸಂಬಂಧ ಅಗತ್ಯ

ಖಾಸಗಿ ಆಸ್ಪತ್ರೆಗಳಿಲ್ಲದೆ, ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಉತ್ತಮವಾಗಿ ಕೆಲಸ ಮಾಡಲು ಸಾಧ್ಯವಿಲ್ಲ. ಜನರಿಗೆ ಉತ್ತಮ ಆರೋಗ್ಯ ಸೇವೆಯನ್ನು ಸರ್ಕಾರ ಹಾಗೂ ಖಾಸಗಿ ಆಸ್ಪತ್ರೆಗಳ ನಡುವೆ ಉತ್ತಮ ಸಂಬಂಧ ಇರಬೇಕು. ಉತ್ತಮ ಸಮನ್ವಯದಿಂದ ಹಾಗೂ ನಿರಂತರ ಸಂವಹನದಿಂದ ಉತ್ತಮ ಸೇವೆ ನೀಡಲು ಸಾಧ್ಯವಾಗುತ್ತದೆ ಎಂದರು.

ಮೊದಲು ವೈದ್ಯ ಕೇಂದ್ರಿತ ವ್ಯವಸ್ಥೆ ಇತ್ತು. ಈಗ ರೋಗಿಗಳ ಕೇಂದ್ರಿತ ವ್ಯವಸ್ಥೆ ಇದೆ. ಜೀವನಶೈಲಿಯ ಬದಲಾವಣೆಯಿಂದಾಗಿ ಅಸಾಂಕ್ರಾಮಿಕ ರೋಗಗಳು ಹೆಚ್ಚಾಗುತ್ತಿವೆ. ಇದಕ್ಕಾಗಿ 438 ನಮ್ಮ ಕ್ಲಿನಿಕ್‌ಗಳನ್ನು ಆರಂಭಿಸಲಾಗುತ್ತಿದೆ. ಜನವರಿ ಅಂತ್ಯಕ್ಕೆ ಎಲ್ಲಾ ಕ್ಲಿನಿಕ್‌ಗಳು ಕಾರ್ಯಾರಂಭವಾಗಲಿವೆ. ಕಾರ್ಮಿಕರು, ವಲಸಿಗರು, ಕೊಳೆಗೇರಿ ನಿವಾಸಿಗಳಿಗೆ ಇಂತಹ ಕ್ಲಿನಿಕ್‌ಗಳು ಮೀಸಲಾಗಿವೆ. ಇದೇ ರೀತಿ ಬಡವರು ಹೆಚ್ಚಿರುವ ಪ್ರದೇಶಗಳಲ್ಲಿ ಮಹಿಳೆಯರಿಗಾಗಿ ʼಆಯುಷ್ಮತಿʼ ಕ್ಲಿನಿಕ್‌ಗಳನ್ನು ಆರಂಭಿಸಲಾಗುತ್ತಿದೆ ಎಂದು ತಿಳಿಸಿದರು.

Advertisement

ರಾಜ್ಯದಲ್ಲಿ ಮೊದಲ ಬಾರಿಗೆ ಮಾನಸಿಕ ಆರೋಗ್ಯ ಇನೀಶಿಯೇಟಿವ್‌ ಆರಂಭಿಸಿದ್ದು, ಇದನ್ನೇ ಮಾದರಿಯಾಗಿಸಿಕೊಂಡು ಕೇಂದ್ರ ಸರ್ಕಾರವು ಕಾರ್ಯಕ್ರಮ ಜಾರಿ ಮಾಡಿದೆ. ಭಾರತದಲ್ಲಿ ನಾಲ್ಕು ವ್ಯಕ್ತಿಯಲ್ಲಿ ಒಬ್ಬರು ಮಧುಮೇಹಕ್ಕೊಳಗಾಗಿದ್ದಾರೆ ಎಂದು ಅಂದಾಜಿಸಲಾಗಿದೆ. ಇದೂ ಸೇರಿದಂತೆ ಎಲ್ಲಾ ಅಸಾಂಕ್ರಾಮಿಕ ರೋಗಿಗಳನ್ನು ಗ್ರಾಮೀಣ ಹಂತದಲ್ಲೇ ತಪಾಸಣೆ ಮಾಡಬೇಕು ಎಂದು ನಿರ್ಧರಿಸಲಾಗಿದೆ. ಈವರೆಗೆ ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಶೇ.60 ಕ್ಕೂ ಅಧಿಕ ಜನರ ಆರೋಗ್ಯ ತಪಾಸಣೆ ಮಾಡಲಾಗಿದೆ. ಸಂಪದ್ಭರಿತ ರಾಜ್ಯವನ್ನು ನಿರ್ಮಾಣ ಮಾಡಲು ಆರೋಗ್ಯಯುತ ರಾಜ್ಯವನ್ನು ನಿರ್ಮಿಸಬೇಕಿದೆ ಎಂದರು.

ಆರೋಗ್ಯ ಕ್ಷೇತ್ರ ವೇಗವಾಗಿ ಬೆಳೆಯುತ್ತಿದೆ. ಮುಂದಿನ ಮೂರು ವರ್ಷಗಳಲ್ಲಿ ದೇಶದ ಆರೋಗ್ಯ ಕ್ಷೇತ್ರವು 370 ಬಿಲಿಯನ್‌ ಯುಎಸ್‌ ಡಾಲರ್‌ಗೆ ಆರ್ಥಿಕತೆಯಾಗಿ ಬೆಳೆಯಲಿದೆ ಎಂದು ಅಂದಾಜಿಸಲಾಗಿದೆ. ಸಣ್ಣ ಆಸ್ಪತ್ರೆಗಳು ಕೂಡ ಬೆಳೆಯಬೇಕು ಎಂದರು.

ಕೋವಿಡ್‌ ಸಾಂಕ್ರಾಮಿಕವನ್ನು ನಿಯಂತ್ರಣಕ್ಕೆ ತರಲು ಖಾಸಗಿ ಆಸ್ಪತ್ರೆಗಳು ಸರ್ಕಾರಕ್ಕೆ ಬಹಳ ನೆರವು ನೀಡಿವೆ ಎಂದು ಶ್ಲಾಘಿಸಿದ ಸಚಿವರು, ಇದಕ್ಕಾಗಿ ಧನ್ಯವಾದ ತಿಳಿಸಿದರು.

ಏಕಗವಾಕ್ಷಿ ವ್ಯವಸ್ಥೆಗೆ ಕ್ರಮ

ಖಾಸಗಿ ಆಸ್ಪತ್ರೆಗಳ ಅಭಿವೃದ್ಧಿಗಾಗಿ ಸರ್ಕಾರದಿಂದ ಬೇಕಿರುವ ವಿವಿಧ ಅನುಮತಿಗಳಿಗೆ ಏಕಗವಾಕ್ಷಿ ವ್ಯವಸ್ಥೆ ತರಲು ಪ್ರಯತ್ನಿಸಲಾಗುವುದು ಎಂದು ಸಚಿವ ಡಾ.ಕೆ.ಸುಧಾಕರ್‌ ಭರವಸೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next