ಗಂಗಾವತಿ: ಮಿನಿಗೋವಾ, ದೇಶ ವಿದೇಶದ ಪ್ರವಾಸಿಗರ ಸ್ವರ್ಗ ಎಂದೇ ಖ್ಯಾತಿ ಪಡೆದ ಹಂಪಿ ಸಮೀಪದಲ್ಲಿರುವ ತಾಲೂಕಿನ ವಿರೂಪಾಪೂರಗಡ್ಡಿ ಸಂಪೂರ್ಣ ಖಾಲಿ ಖಾಲಿಯಾಗಿದ್ದು, ಇಲ್ಲಿಯ ರೆಸಾರ್ಟ್‌ಗಳಲ್ಲಿ ಕೆಲಸ ಮಾಡುತ್ತಿದ್ದ ಕೂಲಿ ಕಾರ್ಮಿಕರು ಉದ್ಯೋಗ ಅರಸಿ ಬೆಂಗಳೂರು, ಗೋವಾ, ಮಂಗಳೂರಿಗೆ ಹೋಗುತ್ತಿರುವ ದೃಶ್ಯ ಸಾಮಾನ್ಯವಾಗಿದೆ.
ಕಳೆದ ಮೂರು ದಶಕಗಳಿಂದ ರೆಸಾರ್ಟ್‌ಗಳಲ್ಲಿ ಸುತ್ತಲಿನ ಗ್ರಾಮಗಳ ನೂರಾರು ಕಾರ್ಮಿಕರು ಕೆಲಸ ಮಾಡಿ ಬದುಕು ಕಟ್ಟಿಕೊಂಡಿದ್ದರು. ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸಿ, ಸಣ್ಣಪುಟ್ಟ ಮನೆ ನಿರ್ಮಿಸಿಕೊಂಡಿದ್ದರು. ವಿರೂಪಾಪೂರಗಡ್ಡಿ ಹತ್ತಿರದ ಹಂಪಿ ಪ್ರದೇಶದಲ್ಲಿರುವ ಅನೇಕ ಸ್ಮಾರಕಗಳಿಗೆ ಧಕ್ಕೆಯಾಗುತ್ತದೆ ಎಂಬ ಕಾರಣಕ್ಕೆ ಗಡ್ಡಿಯಲ್ಲಿರುವ ರೆಸಾರ್ಟ್ ತೆರವು ಮಾಡುವಂತೆ ಹಂಪಿ ಅಭಿವೃದ್ಧಿ ಪ್ರಾಧಿ ಕಾರ 2011ರಲ್ಲಿ ನೋಟಿಸ್ ನೀಡಿದ್ದನ್ನು ರೆಸಾರ್ಟ್ ಮಾಲೀಕರು ಹೈಕೋರ್ಟ್, ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸುವ ಮೂಲಕ ಇಲ್ಲಿಯವರೆಗೆ ತಡೆಯಾಜ್ಞೆ ಪಡೆದು ರೆಸಾರ್ಟ್ ವ್ಯವಹಾರ ನಡೆಸುತ್ತಿದ್ದಾರೆ. ರೆಸಾರ್ಟ್‌ಗಳಲ್ಲಿ ಅಕ್ರಮ ಚಟುವಟಿಕೆ ನಡೆಸಲಾಗುತ್ತಿದ್ದು, ತಿಂಗಳೊಳಗೆ ತೆರವುಗೊಳಿಸುವಂತೆ ಸುಪ್ರೀಂಕೋರ್ಟ್ ಆದೇಶ ಮಾಡಿದ್ದು, ಹಂಪಿ ಪ್ರಾ ಧಿಕಾರ ಮತ್ತು ಜಿಲ್ಲಾಡಳಿತ ರೆಸಾರ್ಟ್ ಮಾಲೀಕರಿಗೆ ಸುಪ್ರೀಂ ಕೋರ್ಟ್ ಆದೇಶ ಪ್ರತಿಯನ್ನು ತಲುಪಿಸಿದೆ.
ಇದರಿಂದ ಸ್ವಯಂ ಪ್ರೇರಣೆಯಿಂದ ರೆಸಾರ್ಟ್ ಮಾಲೀಕರು ಸುತ್ತಲಿನ ಗ್ರಾಮಗಳಲ್ಲಿರುವ ಖಾಲಿ ಗೋದಾಮುಗಳಲ್ಲಿ ಸಾಮಗ್ರಿ ಸಂಗ್ರಹಿಸಲಾಗುತ್ತಿದೆ. ಈ ಮಧ್ಯೆ 2002ರಲ್ಲಿ ರಚನೆಯಾಗಿರುವ ಹಂಪಿ ಅಭಿವೃದ್ಧಿ ಪ್ರಾಧಿ ಕಾರ ಮತ್ತು ನಿಯಮಗಳನ್ನು ಪ್ರಶ್ನಿಸಿ ರೆಸಾರ್ಟ್ ಮಾಲೀಕರು 2011ರಲ್ಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಫೆ. 24ರಂದು ಈ ಅರ್ಜಿ ವಿಚಾರಣೆ ನಡೆಯಲಿದ್ದು ವಿರೂಪಾಪೂರಗಡ್ಡಿಯಲ್ಲಿರುವ ರೆಸಾರ್ಟ್ ಅಳಿವು ಉಳಿವು ಅಂದು ಗೊತ್ತಾಗಲಿದೆ.
ಹೊಟೇಲ್‌ಗೆ ಶುಕ್ರದೆಸೆ: ಪ್ರತಿವರ್ಷ ನವೆಂಬರ್‌ನಿಂದ ಏಪ್ರಿಲ್‌ವರೆಗೆ ಹಂಪಿ ವಿರೂಪಾಪೂರಗಡ್ಡಿ, ಕಿಷ್ಕಿಂದಾ ಅಂಜನಾದ್ರಿಬೆಟ್ಟ ವೀಕ್ಷಣೆಗೆ ದೇಶ ವಿದೇಶ ಪ್ರವಾಸಿಗರು ಆಗಮಿಸುತ್ತಾರೆ. ರೆಸಾರ್ಟ್‌ಗಳನ್ನು ತೆರವು ಮಾಡುವಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿದ್ದರಿಂದ ರೆಸಾರ್ಟ್ ಮಾಲೀಕರು ಪೂರ್ಣ ಪ್ರಮಾಣದಲ್ಲಿ ವ್ಯವಹಾರ ಸ್ಥಗಿತ ಮಾಡಿದ್ದರಿಂದ ಸಾಣಾಪೂರ, ಕಡೆಬಾಗಿಲು, ಜಂಗ್ಲಿ, ಹನುಮನಹಳ್ಳಿ, ಆನೆಗೊಂದಿ ಗ್ರಾಮಗಳಲ್ಲಿರುವ ಸಣ್ಣಪುಟ್ಟ ಹೊಟೇಲ್‌ಗಳಲ್ಲಿ ಪ್ರವಾಸಿಗರು ಉಳಿದು ಕೊಂಡಿದ್ದು, ವಿರೂಪಾಪೂರಗಡ್ಡಿ ಸುತ್ತಲಿನ ಗ್ರಾಮಗಳ ಹೊಟೇಲ್‌ಗಳಿಗೆ ಶುಕ್ರದೆಸೆ ಬಂದಿದೆ.
ರೆಸಾರ್ಟ್ ತೆರವು ಮಾಡುವ ಸುಪ್ರೀಂಕೋರ್ಟ್ ಆದೇಶದ ಪ್ರತಿ ರೆಸಾರ್ಟ್ ಮಾಲೀಕರಿಗೆ ತಲುಪಿಸಲಾಗಿದೆ. ಪ್ರಾ ಧಿಕಾರದಿಂದ ಸಮೀಕ್ಷೆ ನಡೆಸಲಾಗಿದೆ. ಈಗಾಗಲೇ ರೆಸಾರ್ಟ್ ಕ್ಲೋಸ್(ಮುಚ್ಚಿವೆ) ಎಂದು ಬೋರ್ಡ್ ಹಾಕಲಾಗಿದೆ. ಮುಂಗಡ ಕಾಯ್ದಿರಿಸಿದ್ದ ರೂಮ್ ಕ್ಯಾನ್ಸಲ್ ಮಾಡಲಾಗಿದೆ. ಕೂಲಿಕಾರರು ಗುಳೆ ಹೋಗಿರುವ ಕುರಿತು ಮಾಹಿತಿ ಇಲ್ಲ ಮಾಹಿತಿ ಸಂಗ್ರಹ ಮಾಡಲಾಗುತ್ತದೆ.
-ಎಲ್.ಡಿ. ಚಂದ್ರಕಾಂತ, ತಹಶೀಲ್ದಾರ್
-ಕೆ.ನಿಂಗಜ್ಜ