Advertisement

ವಿಶ್ವ ವಿಖ್ಯಾತ ಮರವಂತೆ ಬೀಚ್‌ನಲ್ಲಿ ‘ಪ್ರವಾಸಿ ಮಿತ್ರ’ರ ಕೊರತೆ

01:17 AM Jul 09, 2019 | sudhir |

ಕುಂದಾಪುರ: ನದಿ – ಸಮುದ್ರದ ಮಧ್ಯೆ ಹಾದು ಹೋಗುವ ಹೆದ್ದಾರಿಯ ಅಪೂರ್ವವಾದ ದೃಶ್ಯ ಕಾಣ ಸಿಗುವ ವಿಶ್ವವಿಖ್ಯಾತ ಮರವಂತೆ ಕಡಲ ತೀರದಲ್ಲಿ ಸಾವಿರಾರು ಮಂದಿ ಪ್ರವಾಸಿಗರು ಬರುತ್ತಿದ್ದಾರೆ. ಆದರೆ ಇಲ್ಲಿ ಪ್ರವಾಸಿಗರ ಸುರಕ್ಷತೆಗಾಗಿ ಇರಬೇಕಾದ ‘ಪ್ರವಾಸಿ ಮಿತ್ರ’ರ ಕೊರತೆಯಿದೆ. ಅಪಾಯವನ್ನು ಲೆಕ್ಕಿಸದೇ ನೀರಿಗಿಳಿಯುತ್ತಿದ್ದರೂ, ಕೇಳುವವರೆ ಇಲ್ಲದಂತಾಗಿದೆ.

Advertisement

ಇಲ್ಲಿ ಗೃಹ ರಕ್ಷಕ ದಳದ ಇಬ್ಬರು ಸಿಬಂದಿ ಹಾಗೂ ಒಬ್ಬರು ಲೈಫ್‌ ಗಾರ್ಡ್‌ ಸೇರಿ ಮೂವರನ್ನು ಪ್ರತಿ ದಿನ ಇರುವಂತೆ ನಿಯೋಜಿಸಲಾಗಿದ್ದರೂ, ಹೆಚ್ಚಿನ ದಿನಗಳಲ್ಲಿ ಇಲ್ಲಿ ಒಬ್ಬರು ಮಾತ್ರ ಇರುತ್ತಾರೆ. ಇತ್ತೀಚೆಗಷ್ಟೇ ಗೃಹ ರಕ್ಷಕ ದಳದಿಂದ ನಾಲ್ವರನ್ನು ಇಲ್ಲಿ ನಿಯೋಜಿಸಲಾಗಿದ್ದರೂ, ಅದಿನ್ನು ಜಾರಿಯಾಗಿಲ್ಲ.

ಕಾಮಗಾರಿಯಿಂದ ಸೂಚನಾ ಫಲಕಕ್ಕೆ ಹಾನಿ

ಕಡಲ ತಟದಲ್ಲಿ ಎಷ್ಟೇ ಮುನ್ನೆಚ್ಚರಿಕೆ ಫಲಕಗಳನ್ನು ಹಾಕಲಾಗಿದ್ದರೂ, ಸಲಹೆ – ಸೂಚನೆ ನೀಡಿದರೂ ಅದನ್ನೆಲ್ಲ ಲೆಕ್ಕಿಸದೇ, ಅಲೆಗಳ ಅಬ್ಬರವನ್ನು ಕೂಡ ಅಂದಾಜಿಸದೇ ನೀರಿಗೆ ಇಳಿದು ಆಡುತ್ತಾರೆ. ಬ್ರೇಕ್‌ ವಾಟರ್‌ ಕಾಮಗಾರಿಯಿಂದಾಗಿ ಕೆಲವೆಡೆ ಸೂಚನಾ ಫಲಕಗಳು ಇಲ್ಲದಂತಾಗಿದೆ. ಅದಕ್ಕಾಗಿ ಬಹು ಮುಖ್ಯವಾಗಿ ಇಲ್ಲಿ ಪ್ರವಾಸಿ ಮಿತ್ರರ ಅಗತ್ಯವಿದೆ. ಆದರೂ, ಇಲ್ಲಿ ಕೆಲ ದಿನಗಳಲ್ಲಿ ತ್ರಾಸಿ – ಮರವಂತೆಯ ಕಡಲ ಕಿನಾರೆಯಲ್ಲಿ ಹೆಚ್ಚಿನ ದಿನಗಳಲ್ಲಿ ಒಬ್ಬರು ಸಿಬಂದಿ ಮಾತ್ರ ಇರುತ್ತಾರೆ.

ಈ ಪ್ರವಾಸಿ ಮಿತ್ರರು ಬೆಳಗ್ಗೆ 10 ರಿಂದ ಸಂಜೆ 7 ಗಂಟೆಯವರೆಗೆ ಕಡಲ ತೀರದಲ್ಲಿ ಕೆಲಸ ನಿರ್ವ ಹಿಸುತ್ತಾರೆ. ಇಲ್ಲಿಗೆ ಬರುವಂತಹ ಪ್ರವಾಸಿಗರಿಗೆ ಸಲಹೆ, ಸೂಚನೆಗಳನ್ನು ಕೊಡಬೇಕಾದುದು ಇವರ ಕರ್ತವ್ಯವಾಗಿರುತ್ತದೆ. ಅಪಾಯ ಸಂಭವಿಸಿದಾಗ ನೀರಿಗಿಳಿದು ರಕ್ಷಿಸಲು ಒಬ್ಬ ಲೈಫ್‌ ಗಾರ್ಡ್‌ ಕೂಡ ಇಲ್ಲಿರಬೇಕಾಗುತ್ತದೆ.

Advertisement

ಸೆಲ್ಫಿ ಕ್ರೇಜ್‌ಗೆ ಬಲಿ

ಇತ್ತೀಚಿನ ದಿನಗಳಲ್ಲಿ ಪ್ರವಾಸಿ ತಾಣಗಳಲ್ಲಿ ಸೆಲ್ಫಿ ಕ್ರೇಜ್‌ ಹೆಚ್ಚಾಗಿದ್ದು, ಹೊರ ಜಿಲ್ಲೆ, ರಾಜ್ಯಗಳಿಂದ ಬರುವಂತಹ ಪ್ರವಾಸಿಗರು ಭೋರ್ಗರೆಯುವ ಕಡಲ ತೆರೆಗಳ ಮಧ್ಯೆ ನಿಂತು ಅಪಾಯಕಾರಿ ಸೆಲ್ಫಿ ತೆಗೆಸಿಕೊಳ್ಳುವಂತಹ ನಿದರ್ಶನಗಳು ಇವೆ. ಈ ಸಂದರ್ಭದಲ್ಲಿ ಅವರಿಗೆ ಮುನ್ನೆಚ್ಚರಿಕೆ ನೀಡಬೇಕಾ ದುದು ಪ್ರವಾಸಿ ಮಿತ್ರರ ಬಹು ಮುಖ್ಯ ಕಾರ್ಯ.

ಮಳೆಗಾಲದ ಸಮಯದಲ್ಲಿ ಸಮುದ್ರದ ಅಲೆಗಳು ಅತ್ಯಂತ ಅಪಾಯಕಾರಿಯಾಗಿದ್ದು, ಇದರ ಅಬ್ಬರವನ್ನು ಅಂದಾಜಿಸುವುದು ಕೂಡ ಕಷ್ಟ. ಇದನ್ನು ಅರಿಯದೇ ಬೇರೆ ಬೇರೆ ಕಡೆಗಳಿಂದ ಬರುವಂತಹ ಪ್ರವಾಸಿಗರು, ಸಮುದ್ರ ತೀರದವರೆಗೆ ಅಪಾಯಕಾರಿ ಸ್ಥಳಕ್ಕೂ ಇಳಿಯುತ್ತಾರೆ. ತ್ರಾಸಿಯಿಂದ ಮರವಂತೆವರೆಗೆ ಸುಮಾರು 3 ಕಿ.ಮೀ. ಉದ್ದದ ಕಡಲ ಕಿನಾರೆಯಲ್ಲಿ ಒಬ್ಬರೇ ಸಿಬಂದಿ ಮಾತ್ರ ಇದ್ದರೆ ಅನಾಹುತವನ್ನು ತಡೆಯುವುದಾದರೂ ಹೇಗೆ ಎನ್ನುವುದು ಸ್ಥಳೀಯರ ಪ್ರಶ್ನೆ.

Advertisement

Udayavani is now on Telegram. Click here to join our channel and stay updated with the latest news.

Next