Advertisement
ಹೌದು, ಜಿಲ್ಲೆಯಲ್ಲಿ ಬರೋಬ್ಬರಿ 3.48 ಲಕ್ಷ ಕುಟುಂಬಗಳಿದ್ದು, ಆ ಪೈಕಿ ಇಲ್ಲಿವರೆಗೂ ಕೇವಲ 2.73 ಲಕ್ಷ ಕುಟುಂಬಗಳು ಮಾತ್ರ ವೈಯಕ್ತಿಕ ಶೌಚಾಲಯಗಳ ಸೌಲಭ್ಯ ಹೊಂದಿದ್ದು ಇನ್ನೂ 75,064 ಕುಟುಂಬ ಗಳು ಶೌಚಾಲಯ ಸೌಲಭ್ಯವೇ ಪಡೆ ಯದೇ ಇರುವುದು ನೀತಿ ಆಯೋಗವು ಗುರುತಿಸಿರುವ ಸೂಚ್ಯಾಂಕದಲ್ಲಿ ಕಂಡು ಬಂದಿದೆ.
Related Articles
Advertisement
ಗುಡಿಬಂಡೆ ತಾಲೂಕಿನಲ್ಲಿ 15,606 ಕುಟುಂಬಗಳು ಇದ್ದು ಆ ಪೈಕಿ 13,041 ಕುಟುಂಬಗಳು ಇಲ್ಲಿವರೆಗೂ ವೈಯಕ್ತಿಕ ಶೌಚಾಲಯಗಳನ್ನು ಹೊಂದಿದ್ದು, ಉಳಿದಂತೆ 2,565 ಕುಟುಂಬಗಳಲ್ಲಿ ವೈಯಕ್ತಿಕ ಶೌಚಾಲಯ ಸೌಲಭ್ಯ ಇಲ್ಲ. ಶಿಡ್ಲಘಟ್ಟ ತಾಲೂಕಿನಲ್ಲಿ ಒಟ್ಟು 55,293 ಕುಟುಂಬಗಳಿದ್ದು ಆ ಪೈಕಿ 43,912 ಮನೆಗಳಿಗೆ ಮಾತ್ರ ವೈಯಕ್ತಿಕ ಶೌಚಾಲಯ ಸೌಲಭ್ಯ ಇದ್ದು ಇನ್ನೂ ಬರೋಬರಿ 11,381 ಕುಟುಂಬಗಳಿಗೆ ಶೌಚಾಲಯ ವ್ಯವಸ್ಥೆ ದೂರು ಇದೆ.
ಕಾಗದ ಮೇಲಷ್ಟೇ ಬಯಲು ಬಹಿರ್ದೆಸೆ ಮುಕ್ತ!: ಜಿಲ್ಲೆಯ ಗ್ರಾಪಂಗಳು ಕಾಗದ ಮೇಲೆ ಅಷ್ಟೇ ಗ್ರಾಪಂಗಳು ಸಂಪೂರ್ಣ ಬಯಲು ಬಹಿರ್ದೆಸೆ ಮುಕ್ತವೆಂದು ಸ್ವಯಂ ಘೋಷಣೆ ಮಾಡಿಕೊಂಡಿವೆ. ಜಿಲ್ಲೆಯ ಬಹಳಷ್ಟು ಕುಗ್ರಾಮಗಳಲ್ಲಿ ಬಡ ಕುಟುಂಬಗಳಿಗೆ ಕನಿಷ್ಠ ಶೌಚಾಲಯ ನಿರ್ಮಾಣ ಮಾಡಿಕೊಳ್ಳಲು ಸರ್ಕಾರದ ಸೌಲಭ್ಯ ಸಿಕ್ಕಿಲ್ಲ. ಶೇ.80 ರಿಂದ 90 ರಷ್ಟು ಶೌಚಾಲಯಗಳ ನಿರ್ಮಾಣ ಆಗಿದ್ದರೆ ಆ ಗ್ರಾಪಂಗಳನ್ನು ಬಯಲು ಬಹಿರ್ದೆಸೆ ಮುಕ್ತ ಗ್ರಾಪಂಗಳೆಂದು ಘೋಷಿಸಿಕೊಳ್ಳಲಾಗಿದ್ದರೂ, ಅನೇಕ ಗ್ರಾಮಗಳ ಜನರಿಗೆ ಇನ್ನೂ ಬಯಲೇ ಶೌಚಾಲಯ ಎನ್ನುವುದು ಮಾತ್ರ ಆಡಳಿತಶಾಹಿಯ ಕಾರ್ಯವೈಖರಿಯನ್ನು ಅಣಕಿಸುವಂತಿದೆ.
ಶೌಚಗೃಹ ನಿರ್ಮಾಣದಲ್ಲೂ ಅಕ್ರಮ: ಜಿಲ್ಲೆಯಲ್ಲಿ ಆರಂಭದಲ್ಲಿ ಕೇಂದ್ರ ಸರ್ಕಾರ ವೈಯಕ್ತಿಕ ಶೌಚಾಲಯ ನಿರ್ಮಾಣಕ್ಕೆ ಪ್ರೋತ್ಸಾಹ ಧನ ಕೊಡುವಾಗ ಗ್ರಾಪಂಗಳು ಸರ್ಕಾರಕ್ಕೆ ಶೌಚಾಲಯಗಳ ನಿರ್ಮಾಣ ಆಗದೇ ಇದ್ದರೂ, ಸುಳ್ಳು ಲೆಕ್ಕ ಕೊಟ್ಟು ಹಣ ನುಂಗಿರುವ ಉದಾಹರಣೆಗಳು ಜಿಲ್ಲೆಯಲ್ಲಿವೆ. ಬಾಗೇಪಲ್ಲಿ ಅತಂಹ ಹಿಂದುಳಿದ ತಾಲೂಕಿನಲ್ಲಿ ಶೇ.84 ಪ್ರಗತಿ ತೋರಿಸಿರುವುದು ಕೂಡ ಕಳ್ಳಾಟದ ಒಂದು ಭಾಗವೇ. ಜಿಲ್ಲೆಯ ಹಲವು ತಾಲೂಕುಗಳಲ್ಲಿ ಗ್ರಾಪಂಗಳು ವೈಯಕ್ತಿಕ ಶೌಚಾಲಯಗಳ ನಿರ್ಮಾಣ ವೇಳೆ ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಲಕ್ಷಾಂತರ ರೂ. ಸರ್ಕಾರದ ಹಣವನ್ನು ಲಾಪಟಾಯಿಸಿರುವುದರಿಂದ ಬಹಳಷ್ಟು ಕುಟುಂಬಗಳಿಗೆ ಇನ್ನೂ ವೈಯಕ್ತಿಕ ಶೌಚಾಲಯ ನಿರ್ಮಾಣ ಸಾಧ್ಯವಾಗಿಲ್ಲ.
ಎಷ್ಟು ಸಿಗುತ್ತೇ ಪ್ರೋತ್ಸಾಹ ಧನ?: ಸರ್ಕಾರದಿಂದ ಈ ಹಿಂದೆ ವೈಯಕ್ತಿಕ ಶೌಚಾಲಯಗಳ ನಿರ್ಮಾಣಕ್ಕೆ ಪ್ರತಿ ಕುಟುಂಬಕ್ಕೆ ಸ್ವತ್ಛ ಭಾರತ ಯೋಜನೆಯಡಿ 5 ರಿಂದ 6 ಸಾವಿರ ರೂ. ಪ್ರೋತ್ಸಾಹ ಧನ ಸಿಗುತ್ತಿತ್ತು. ಸಾಮಾನ್ಯ ವರ್ಗಕ್ಕೆ ಪ್ರೋತ್ಸಾಹ ಧನ ಇರಲಿಲ್ಲ. ಆದರೆ ನರೇಗಾ ಯೋಜನೆ ಬಂದ ಬಳಿಕ ಯೋಜನೆಗಡಿ ವೈಯಕ್ತಿಕ ಶೌಚಾಲಯಗಳ ನಿರ್ಮಾಣಕ್ಕೆ ಸರ್ಕಾರ ಸಾಕಷ್ಟು ಅವಕಾಶ ಮಾಡಿಕೊಟ್ಟಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಗಂಡಕ್ಕೆ ವೈಯಕ್ತಿಕ ಶೌಚಾಲಯ ನಿರ್ಮಾಣಕ್ಕೆ ಈಗ 20,000 ರೂ. ಸಾಮಾನ್ಯ ವರ್ಗಕ್ಕೆ 12 ಸಾವಿರ ರು, ಪ್ರೋತ್ಸಾಹ ಧನವನ್ನು ಕೇಂದ್ರ ಸರ್ಕಾರ ಈಗಲೂ ನೀಡುತ್ತಿದೆ.
–ಕಾಗತಿ ನಾಗರಾಜಪ್ಪ