Advertisement

ತರಗತಿ ಆರಂಭವಾದರೂ ಪಠ್ಯಪುಸ್ತಕ ಕೊರತೆ

09:43 AM Jun 06, 2022 | Team Udayavani |

ಹುಬ್ಬಳ್ಳಿ: ಶಾಲೆಗಳು ಆರಂಭಗೊಂಡು ದಿನಗಳು ಕಳೆಯುತ್ತಿದ್ದರೂ ಪುಸ್ತಕದ ಪರಿಷ್ಕರಣೆ ಗೊಂದಲ ತಣ್ಣಗಾಗುತ್ತಿಲ್ಲ. ತರಗತಿಗಳು ಆರಂಭಗೊಂಡ ಮಕ್ಕಳು ಪಾಠ ಕೇಳಬೇಕು, ಆದರೆ ಇದುವರೆಗೂ ಹಲವು ಪುಸ್ತಕಗಳ ಕೊರತೆ ವಿದ್ಯಾರ್ಥಿಗಳನ್ನು, ಶಿಕ್ಷಕರನ್ನು ಗೊಂದಲಕ್ಕೀಡು ಮಾಡಿದೆ.

Advertisement

ಪ್ರತಿ ವರ್ಷ ಶಾಲೆ ಆರಂಭಕ್ಕೂ ಮುನ್ನ ಅಥವಾ ಮೊದಲ ಒಂದು ವಾರದದಲ್ಲಿ ಎಲ್ಲ ಶಾಲೆಗಳಿಗೆ ಪುಸ್ತಕ ವಿತರಣೆ ಪೂರ್ಣಗೊಳಿಸಲಾಗುತ್ತಿತ್ತು. ಆದರೆ ಈ ವರ್ಷ ಹಲವು ಗೊಂದಲಗಳಿಂದ ಇದುವರೆಗೆ ಮಕ್ಕಳ ಕೈಗೆ ಎಲ್ಲ ಪುಸ್ತಕಗಳು ಸೇರಿಲ್ಲ. 1ರಿಂದ 10ನೇ ತರಗತಿ ಕನ್ನಡ ಮಾಧ್ಯಮ ಪುಸ್ತಕದ ಪರಿಷ್ಕರಣೆ ಗೊಂದಲ ಒಂದೆಡೆಯಾದರೆ, ಮತ್ತೂಂದೆಡೆ ಪುಸ್ತಕ ಮುದ್ರಣದ ಕಾಗದದ ಕೊರತೆ ಸಹ ಕಾರಣವಾಗಿದೆ.

ಶಾಲೆಗಳಿಗೆ 1ರಿಂದ 10ನೇ ತರಗತಿಯ ಕನ್ನಡ ಹಾಗೂ 6ರಿಂದ 10ನೇ ತರಗತಿ ಸಮಾಜ ವಿಜ್ಞಾನ, 7ರಿಂದ 9ನೇ ತರಗತಿ ತೃತೀಯ ಭಾಷೆ ಕನ್ನಡ ಪುಸ್ತಕ ಪರಿಷ್ಕರಣೆಯಾಗಿದೆ. ಆದರೆ 3ನೇ ತರಗತಿ ಪಠ್ಯದಲ್ಲಿ ಯಾವುದೇ ಪರಿಷ್ಕರಣೆ ಮಾಡಲಾಗಿಲ್ಲ. 10ನೇ ತರಗತಿ ಕನ್ನಡ ಹಾಗೂ ಸಮಾಜ ವಿಜ್ಞಾನ ಪಠ್ಯ ಪರಿಷ್ಕರಣೆಯಾಗಿದೆ. ಇನ್ನು 8-9ನೇ ತರಗತಿಯ ಯಾವ ಪುಸ್ತಕಗಳೂ ಬಂದಿಲ್ಲ.

ಶಹರದ ಬೇಡಿಕೆ: ಹುಬ್ಬಳ್ಳಿ ನಗರ ವ್ಯಾಪ್ತಿಯ ಶಾಲೆಗಳಿಗೆ ಇಲಾಖೆಯಿಂದ ಎಲ್ಲ ಶೀರ್ಷಿಕೆಗಳ ಪುಸ್ತಕಗಳು ಸೇರಿ ಉಚಿತವಾಗಿ ನೀಡಲು 3,37,654 ಪುಸ್ತಕಗಳು ಹಾಗೂ ಮಾರಾಟಕ್ಕೆ 2,24,975 ಪುಸ್ತಕಗಳು ಸೇರಿ ಒಟ್ಟು 5, 62,629 ಪುಸ್ತಕಗಳಿಗೆ ಬೇಡಿಕೆ ಸಲ್ಲಿಸಲಾಗಿತ್ತು. ಸದ್ಯ ಇಲಾಖೆಯಿಂದ ಉಚಿತವಾಗಿ ನೀಡಲು 1,96,528 ಮತ್ತು ಮಾರಾಟಕ್ಕೆ 1,10,552 ಪುಸ್ತಕಗಳು ಒಟ್ಟು 3,07,080 ಪುಸ್ತಕಗಳನ್ನು ಪೂರೈಕೆ ಮಾಡಲಾಗಿದೆ. ಈಗಾಗಲೇ ಶಹರ ವ್ಯಾಪ್ತಿಯ ಶಾಲೆಗಳಿಗೆ ಉಚಿತವಾಗಿ 1,40,129 ಮತ್ತು ಮಾರಾಟಕ್ಕೆ 1,08,089 ಪುಸ್ತಕಗಳನ್ನು ವಿತರಣೆ ಮಾಡಲಾಗಿದೆ.

ಶಹರ ವ್ಯಾಪ್ತಿಯಲ್ಲಿ ಒಟ್ಟು 335 ಶಾಲೆಗಳು ಬರುತ್ತಿದ್ದು, ಅದರಲ್ಲಿ 155 ಖಾಸಗಿ ಅನುದಾನ ರಹಿತ ಶಾಲೆಗಳಿದ್ದು, 84 ಅನುದಾನಿತ ಶಾಲೆಗಳು, 96 ಸರಕಾರಿ ಶಾಲೆಗಳು ಬರುತ್ತಿವೆ. ಸರಕಾರಿ ಶಾಲೆಗಳಿಗೆ ಬಂದಿರುವ ಎಲ್ಲ ಶೀರ್ಷಿಕೆಗಳ ಪುಸ್ತಕಗಳನ್ನು ನೀಡಲಾಗಿದ್ದು, ಇನ್ನು ಬರದೆ ಇರುವ ಪುಸ್ತಕಗಳ ಆಗಮನಕ್ಕೆ ಕಾಯಲಾಗುತ್ತಿದೆ.

Advertisement

ಈಗಾಗಲೇ ಶಹರ ಘಟಕದಿಂದ ಶೇ.65 ಶಾಲೆಗಳಿಗೆ ಪುಸ್ತಕ ವಿತರಣೆ ಮಾಡಲಾಗಿದ್ದು, ಜೂ.6ರಿಂದ 10ರ ವರೆಗೆ ಇನ್ನುಳಿದಿರುವ ಶಾಲೆಗಳಿಗೆ ಪುಸ್ತಕ ವಿತರಣೆ ಮಾಡಲಾಗುತ್ತಿದೆ. ಖಾಸಗಿ ಅನುದಾನ ರಹಿತ ಶಾಲೆಗಳಲ್ಲಿ ಸುಮಾರು 80ಕ್ಕೂ ಹೆಚ್ಚು ಶಾಲೆಗಳು ಪುಸ್ತಕಗಳನ್ನು ಖರೀದಿಸಿಕೊಂಡು ಹೋಗಿದ್ದು, ಇನ್ನುಳಿದ ಶಾಲೆಗಳಿಗೆ ಪುಸ್ತಕಗಳ ಖರೀದಿ ಪ್ರಕ್ರಿಯೆ ನಡೆಯಬೇಕಿದೆ.

ಒಂದನೇ ಹಂತದಲ್ಲಿ ಶೇ.65 ಪುಸ್ತಕಗಳ ವಿತರಣೆ ಮಾಡಲಾಗಿದ್ದು, ಜೂ. 6ರಿಂದ ಎರಡನೇ ಹಂತದಲ್ಲಿ ಪುಸ್ತಕ ವಿತರಣೆ ಮಾಡಲಾಗುತ್ತಿದೆ. ಜೊತೆಗೆ ಪರಿಷ್ಕರಣೆ ಮಾಡಲಾಗಿರುವ ಪುಸ್ತಕಗಳು ಸದ್ಯ ಇನ್ನು ಲಭ್ಯವಾಗಿಲ್ಲ. ಅವುಗಳು ಬಂದ ನಂತರ ಶಾಲೆಗಳಿಗೆ ವಿತರಣೆ ಮಾಡಲಾಗುತ್ತದೆ. ಎಂ.ಎಸ್‌. ಶಿವಳ್ಳಿಮಠ, ಪ್ರಭಾರಿ ಬಿಇಒ , -ಡಿ.ಎಫ್‌. ಈರಗಾರ, ಶಹರ ಶಿಕ್ಷಣ ಸಂಯೋಜಕ                               

 ಬಸವರಾಜ ಹೂಗಾರ

Advertisement

Udayavani is now on Telegram. Click here to join our channel and stay updated with the latest news.

Next