ಕುಷ್ಟಗಿ: ಒಂದನೇ ತರಗತಿಗೆ 1, ಎರಡನೇ ತರಗತಿಗೆ 8, ಮೂರನೇ ತರಗತಿಗೆ 5, ನಾಲ್ಕನೇ ತಗರತಿ 5, ಐದನೇ ತರಗತಿಗೆ 3 ಇದು ಕುಷ್ಟಗಿ ಪಟ್ಟಣದ 5ನೇ ವಾರ್ಡ್ ಇಂದಿರಾ ನಗರದ ಕಿರಿಯ ಪ್ರಾಥಮಿಕ ಶಾಲೆಯಲ್ಲಿರುವ ವಿದ್ಯಾರ್ಥಿಗಳ ಸಂಖ್ಯೆ. ಶಾಲೆಯಲ್ಲಿ ಯಾವ ತರಗತಿಯಲ್ಲೂ ವಿದ್ಯಾರ್ಥಿಗಳ ಸಂಖ್ಯೆ ಒಂದಂಕಿ ದಾಟಿಲ್ಲ.
ಇದು ಪಟ್ಟಣದ ಶಾಲೆಯ ದುಸ್ಥಿತಿ. ಶಾಲೆಯಲ್ಲಿ ಒಟ್ಟು 23 ವಿದ್ಯಾರ್ಥಿಗಳಿಗೆ ಮುಖ್ಯ ಶಿಕ್ಷಕ ಸೇರಿದಂತೆ ಇಬ್ಬರೇ ಶಿಕ್ಷಕರಿದ್ದಾರೆ. ಪಟ್ಟಣದ ಶಾಲೆಗೆ ಈ ಆವಸ್ಥೆಯ ಬಗ್ಗೆ ಶಿಕ್ಷಣ ಇಲಾಖೆ, ಸ್ಥಳೀಯರು ಯಾರೂ ತಲೆ ಕೆಡಿಸಿಕೊಳ್ಳದಿರುವುದು ಅಚ್ಚರಿಗೆ ಕಾರಣವಾಗಿದೆ. 23 ವಿದ್ಯಾರ್ಥಿಗಳಿರುವ ಶಾಲೆಯಲ್ಲಿ ಇಬ್ಬರು ಶಿಕ್ಷಕರಲ್ಲಿ ಯಾರಾದ್ರೂ ಒಬ್ಬರು ಸಭೆ, ಕಚೇರಿ ಕೆಲಸಕ್ಕೆ ಹೋದಲ್ಲಿ ವಿದ್ಯಾರ್ಥಿಗಳು ಪಾಠ ಕಲಿಕೆಯ ಸಮಯವನ್ನು ಆಟದಲ್ಲಿ ಕಳೆಯುವಂತಾಗಿದೆ.
ಸದರಿ ಶಾಲೆಯ ಮುಖ್ಯ ಶಿಕ್ಷಕರು ಸಿಆರ್‌ಪಿ ಹುದ್ದೆ ನಿಭಾಯಿಸುತ್ತಿದ್ದು, ಅವರುಶಾಲೆಗಳ ಭೇಟಿಗೆ ಹೋದರೆ ಏಕೋಪಾಧ್ಯಾಯ ಶಾಲೆಯಾಗಿರುವುದೇ ಹೆಚ್ಚು. ಈ ಹಿನ್ನೆಲೆಯಲ್ಲಿ ಸದರಿ ವಾರ್ಡ್ ಸದಸ್ಯ ಚಿರಂಜೀವಿ ಹಿರೇಮಠ ಪ್ರತಿಕ್ರಿಯಿಸಿ, ಈ ಶಾಲೆಯಲ್ಲಿ ಇರುವ ಇಬ್ಬರು ಶಿಕ್ಷಕರು ಹೊಂದಾಣಿಕೆ ಮಾಡಿಕೊಂಡಿದ್ದರು. ಒಬ್ಬರಾದಂತೆ ಮತ್ತೂಬ್ಬರು ಅನ ಧಿಕೃತ ಗೈರಾಗುತ್ತಿದ್ದಾರೆ. ಹೀಗಾಗಿ ಶಾಲೆಯಲ್ಲಿ ಪಾಠ ಕಲಿಯಬೇಕಾದ ಮಕ್ಕಳು, ಆಟವಾಡಲು ಶಾಲೆಗೆ ಬರುವಂತಾಗಿದೆ ಎಂದು ಆರೋಪಿಸಿದರು.
1997ರಲ್ಲಿ ಈ ಶಾಲೆ ಆರಂಭವಾಗಿದೆ. ಹಿಂದೆಲ್ಲ 100ಕ್ಕೂ ಅಧಿಕ ವಿದ್ಯಾರ್ಥಿಗಳಿದ್ದ ಈ ಶಾಲೆ ಇದೀಗ 23ಕ್ಕೆ ಕುಸಿದಿರುವುದು ಬೇಸರ ತರಿಸಿದೆ. ಶಾಲೆ ಯಾವೂದೇ ಕಾರಣಕ್ಕೂ ಮುಚ್ಚದಂತೆ ಶಿಕ್ಷಣಾ ಧಿಕಾರಿಗಳಲ್ಲಿ ಅಗತ್ಯ ಕ್ರಮಕ್ಕೆ ವಿಷಯ ಪ್ರಸ್ತಾಪಿಸಿರುವುದಾಗಿ ಪುರಸಭೆ ಸದಸ್ಯ ಚಿರಂಜೀವಿ ಹಿರೇಮಠ ತಿಳಿಸಿದರು.
ಸಿಆರ್‌ಪಿ ಹುದ್ದೆ ಜೊತೆಗೆ ಮುಖ್ಯ ಶಿಕ್ಷಕ ಹುದ್ದೆ ವಹಿಸಿದ್ದು, ಸಭೆ ಮತ್ತು ಶಾಲಾ ವೀಕ್ಷಣೆ ಇದ್ದರೂ ಶಾಲೆಗೆ ಹಾಜರಾಗುತ್ತಿದ್ದು, ಮಕ್ಕಳ ಕಲಿಕೆ ಮಟ್ಟದಿಂದ ಹಿಂದುಳಿಯಬಾರದು ಎಂಬ ಉದ್ದೇಶದಿಂದ ಶಾಲೆಗೆ ಪ್ರತಿದಿನ ಕರ್ತವ್ಯಕ್ಕೆ ಹಾಜರಾಗುತ್ತೇನೆ
.-ದಂಡಪ್ಪ ಹೊಸಮನಿ, ಮುಖ್ಯ ಶಿಕ್ಷಕ