ತಾವರಗೇರಾ: ಪಟ್ಟಣದ ಉರ್ದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳ ಕೊರತೆಯಿಂದ ಬಣಗುಡುತ್ತಿದೆ. ಈ ಶಾಲೆಯಲ್ಲಿ ಒಂದರಿಂದ ಎಂಟನೇ ತರಗತಿವರೆಗಿದ್ದು, ಒಂದರಿಂದ ಏಳನೇಯ ತರಗತಿವರೆಗೆ ಮಾತ್ರ ವಿದ್ಯಾರ್ಥಿಗಳು ವ್ಯಾಸಂಗ ಮಾಡುತಿದ್ದಾರೆ. ಏಳೂ ತರಗತಿಗಳು ಸೇರಿ ಕೇವಲ 15 ವಿದ್ಯಾರ್ಥಿಗಳು ಮಾತ್ರವಿದ್ದು, ಇವರಿಗೆ ಪಾಠ ಬೋಧನೆ ಮಾಡಲು ನಾಲ್ವರು ಶಿಕ್ಷಕರು, ಮೂವರು ಅಡುಗೆ ಸಿಬ್ಬಂದಿ ಇದ್ದಾರೆ. ಈ ಶಾಲೆಯಲ್ಲಿ ಸುಸಜ್ಜಿತವಾದ ಏಳು ಕೊಠಡಿಗಳಿವೆ. ಆದರೆ ಅದಕ್ಕೆ ತಕ್ಕಂತೆ ವಿದ್ಯಾರ್ಥಿಗಳಿಲ್ಲ.
ಶಾಲೆಯಲ್ಲಿ 1ನೇ ತರಗತಿಯಲ್ಲಿ ಇಬ್ಬರು, 2ನೇ ತರಗತಿಯಲ್ಲಿ ಐವರು, 4ನೇ ತರಗತಿಯಲ್ಲಿ ಐವರು, 5ನೇ ತರಗತಿಯಲ್ಲಿ ಮೂವರು ಸೇರಿದಂತೆ ಒಟ್ಟು 15 ವಿದ್ಯಾರ್ಥಿಗಳಿದ್ದಾರೆ. ಇನ್ನೂಳಿದಂತೆ 3, 6, 7ನೇ ತರಗತಿಯಲ್ಲಿ ಯಾವುದೇ ವಿದ್ಯಾರ್ಥಿಗಳಿಲ್ಲ. ಇರುವ 15 ವಿದ್ಯಾರ್ಥಿಗಳಲ್ಲಿ ನಿತ್ಯ ಮೂರ್‍ನಾಲ್ಕು ವಿದ್ಯಾರ್ಥಿಗಳು ಗೈರಾಗಿರುತ್ತಾರೆ.
ಕೊಠಡಿ: ಪಟ್ಟಣದ ಉರ್ದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸುಸಜ್ಜಿತವಾದ ಏಳು ಕೊಠಡಿಗಳಿವೆ. ಅದರಲ್ಲಿ ಒಂದು ಶಿಕ್ಷಕರ ಕೊಠಡಿ, ಇನ್ನೊಂದು ಅಡುಗೆ ಕೊಠಡಿಯನ್ನಾಗಿ ಬಳಸಲಾಗುತ್ತಿದೆ. ಉಳಿದ ಐದು ತರಗತಿಯ ಕೊಠಡಿಗಳಿದ್ದು, ವಿದ್ಯಾರ್ಥಿಗಳ ಕೊರತೆಯಿಂದ ಕೊಠಡಿಗಳು ಬಣಗುಡುತ್ತಿವೆ.
ಶಿಕ್ಷಕರು: ನಾಲ್ವರು ಶಿಕ್ಷಕರಲ್ಲಿ ಒಬ್ಬರೂ ಮುಖ್ಯ ಶಿಕ್ಷಕರು, ಮೂವರು ಸಹ ಶಿಕ್ಷಕರಿದ್ದಾರೆ. ಕೇವಲ 15 ವಿದ್ಯಾರ್ಥಿಗಳಿಗೆ ನಾಲ್ವರು ಪಾಠ ಬೋಧನೆ ಮಾಡುತ್ತಿರುವುದು ಸಾರ್ವಜನಿಕರ ಚರ್ಚೆಗೆ ಗ್ರಾಸವಾಗಿದೆ. ಬೆರಳೆಣಿಕೆಯಷ್ಟು ವಿದ್ಯಾರ್ಥಿಗಳಿಗೆ ಬಿಸಿಯೂಟ ತಯಾರಿಲು ಮೂವರು ಸಿಬ್ಬಂದಿಗಳಿದ್ದಾರೆ. ಸರಕಾರಕ್ಕೆ ಮೂವರು ಅಡುಗೆ ಸಿಬ್ಬಂದಿ ವೇತನ ಹೊರೆಯಾಗಿ ಪರಿಣಮಿಸಿದೆ. ಇದಕ್ಕೆ ಸಂಬಂಧಿಸಿದ ಅಧಿಕಾರಿಗಳು ಶಾಲೆಗೆ ಭೇಟಿ ನೀಡಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಪಟ್ಟಣದ ಜನತೆ ಒತ್ತಾಯಿಸಿದ್ದಾರೆ.
ಮಕ್ಕಳ ದಾಖಲಾತಿ ಸಂಖ್ಯೆ 15 ಇದ್ದು, ನಾವೂ ಶಾಲೆ ಪ್ರಾರಂಭದಲ್ಲಿ ದಾಖಲಾತಿ ಆಂದೋಲನ ಮಾಡಿದ್ದೇವೆ. ಆದರೂ ವಿದ್ಯಾಥಿಗಳ ದಾಖಲಾತಿ ಸಂಖ್ಯೆ ಹೆಚ್ಚಾಗಿಲ್ಲ.
•ಷಹನಾಜ್ ಬೇಗಂ,ಪ್ರಭಾರಿ ಮುಖ್ಯ ಶಿಕ್ಷಕಿ
ಪಟ್ಟಣದ ಉರ್ದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ದಾಖಲಾತಿಯ ಸಂಖ್ಯೆ ಕಡಿಮೆ ಇರುವುದು ಗಮನಕ್ಕೆ ಬಂದಿಲ್ಲ. ಈ ಕುರಿತು ಶಾಲೆಗೆ ಭೇಟಿ ನೀಡಿ ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳುತ್ತೇನೆ.
•ಎಂ. ಚನ್ನಬಸಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ
•ಎನ್. ಶಾಮೀದ್