ಶೃಂಗೇರಿ: ತಾಲೂಕಿನ ಸರಕಾರಿ ಶಾಲೆಯಲ್ಲಿ ಕಟ್ಟಡಗಳು ಬಹುತೇಕ ಸುಸ್ಥಿತಿಯಲ್ಲಿದ್ದು, ಶಿಕ್ಷಕರ ಕೊರತೆ ಹಾಗೂ ಸಾರಿಗೆ ವ್ಯವಸ್ಥೆ ಪೋಷಕರನ್ನು ಚಿಂತೆಗೀಡುಮಾಡಿದೆ.
ಕಿರಿಯ ಪ್ರಾಥಮಿಕ ಪಾಠಶಾಲೆ 12 ಹಾಗೂ ಹಿರಿಯ ಪ್ರಾಥಮಿಕ ಶಾಲೆ 34 ಇದ್ದು, ಪ್ರಾಥಮಿಕ ಶಾಲೆಗೆ 35 ಹಾಗೂ ಮಾಧ್ಯಮಿಕ ಶಾಲೆಯಲ್ಲಿ 10 ಶಿಕ್ಷಕರ ಕೊರತೆ ಇದೆ. ಅನೇಕ ಶಾಲೆಯಲ್ಲಿ ವಿದ್ಯಾರ್ಥಿಗಳ ಕೊರತೆ ಉಂಟಾಗಿದ್ದು, ಬೆರಳೆಣಿಕೆಯ ಮಕ್ಕಳು ಶಾಲೆಯಲ್ಲಿದ್ದಾರೆ. ಕಳೆದ 10 ವರ್ಷದಲ್ಲಿ 30ಕ್ಕೂ ಹೆಚ್ಚು ಶಾಲೆ ವಿದ್ಯಾರ್ಥಿಗಳ ಕೊರತೆಯಿಂದ ಮುಚ್ಚಿದೆ.
ಶಾಲೆಗಳಲ್ಲಿ ಕೆಲ ಕೊಠಡಿಗಳ ದುರಸ್ತಿ ಇದ್ದರೂ, ಪಾಠ ಪ್ರವಚನಕ್ಕೆ ಅಡ್ಡಿಯಾಗುವಷ್ಟು ಸಮಸ್ಯೆ ಇಲ್ಲ. ಶಿಕ್ಷಕರ ಕೊರತೆ ನೀಗಿಸಲು ಅತಿಥಿ ಉಪನ್ಯಾಸಕರ ಸಹಾಯ ಪಡೆದು, ಅವರ ವೇತನವನ್ನು ದಾನಿಗಳಿಂದ ಪಡೆದು ನೀಡಲಾಗುತ್ತಿದೆ. ಬಹುತೇಕ ಶಿಕ್ಷಕರು ಹೊರ ಜಿಲ್ಲೆಯವರಾಗಿದ್ದು, ಬಂದ ಕಲವೇ ವರ್ಷದಲ್ಲಿ ವರ್ಗಾವಣೆ ಮಾಡಿಸಿಕೊಂಡು ಊರಿನ ಸಮೀಪ ತೆರಳುವುದರಿಂದ ಮಲೆನಾಡು ಭಾಗಕ್ಕೆ ಶಿಕ್ಷಕರ ಕೊರತೆ ಸಾಮಾನ್ಯವಾಗಿದೆ. ಸರ್ವ ಶಿಕ್ಷಾ ಅಭಿಯಾನ ಮತ್ತು ಸರಕಾರದ ಅನುದಾನದಡಿ ಬಹುತೇಕ ಮೂಲಭೂತ ಸೌಲಭ್ಯವನ್ನು ಹೊಂದಿದೆ.
ಸಾರಿಗೆ ವ್ಯವಸ್ಥೆ-ತಾಲೂಕಿನ ಗ್ರಾಮೀಣ ಭಾಗಕ್ಕೆ ಸಾರಿಗೆ ವ್ಯವಸ್ಥೆ ಇಲ್ಲದೇ ಇರುವುದು ವಿದ್ಯಾರ್ಥಿಗಳ ಶಿಕ್ಷಣಕ್ಕೆ ಮಾರಕವಾಗಿದೆ. ಖಾಸಗಿ ಶಾಲೆಯಂತೆ ಮೆಣಸೆ ಸರಕಾರಿ ಶಾಲೆಯು ಸರಕಾರಿ ಬಸ್ ಸೇವೆ ನೀಡುತ್ತಿದ್ದು, ಇದರಿಂದ ಶಾಲೆಯಲ್ಲಿ 300 ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದಾರೆ.
ಖಾಸಗಿ ಶಾಲೆಯ ಸಾರಿಗೆ ವ್ಯವಸ್ಥೆ-ತಾಲೂಕಿನ ಖಾಸಗಿ ಶಾಲೆಗಳು ಸ್ವಂತ ಸಾರಿಗೆ ವ್ಯವಸ್ಥೆ ಮಾಡಿಕೊಂಡಿದ್ದು, ಮಕ್ಕಳನ್ನು ಕರೆದೊಯ್ಯುವ ವ್ಯವಸ್ಥೆ ಮಾಡಿಕೊಂಡಿದೆ. ಇದಲ್ಲದೇ ಕೊಪ್ಪದ ಖಾಸಗಿ ಶಾಲಾ ಬಸ್ ತಾಲೂಕಿನಿಂದ ವಿದ್ಯಾರ್ಥಿಗಳನ್ನು ಕರೆದೊಯ್ಯುತ್ತಿದೆ. ಖಾಸಗಿ ಶಾಲೆಯತ್ತ ಮನಸ್ಸು ಮಾಡುತ್ತಿರುವ ಪೋಷಕರು ಸಾರಿಗೆ ವ್ಯವಸ್ಥೆಯೂ ಇರುವತ್ತ ಹೆಚ್ಚು ಗಮನ ಹರಿಸಿದ್ದಾರೆ.
ಮುಚ್ಚಿರುವ ಶಾಲೆಗಳ ದುಸ್ಥಿತಿ
ಈಗಾಗಲೇ 30 ಕ್ಕೂ ಹೆಚ್ಚು ಶಾಲೆ ಮುಚ್ಚಿದ್ದರೆ, ಇನ್ನಷ್ಟು ಶಾಲೆ ಮುಚ್ಚುವ ಹಂತ ತಲುಪಿದೆ. ಶಾಲೆ ಮುಚ್ಚಿದ ನಂತರ ನಿರ್ವಹಣೆಯನ್ನು ಗ್ರಾಪಂಗೆ ನೀಡುತ್ತಿದೆ. ಮುಚ್ಚಿದ ಶಾಲೆ ನಿರ್ವಹಣೆ ಮಾಡದೇ ಮೇಲ್ಛಾವಣಿ ಕುಸಿಯುತ್ತಿದ್ದು, ಕಿಟಕಿ ಬಾಗಿಲು ಗೆದ್ದಲು ಹಿಡಿಯುತ್ತಿದೆ.
ಸರಕಾರದ ಆದೇಶದಂತೆ ಶಾಲೆಯನ್ನು ಆರಂಭಿಸಲು ಅಗತ್ಯ ಸಿದ್ಧತೆ ನಡೆಸಲಾಗಿದೆ. ತಾಲೂಕಿನ ಎಲ್ಲಾ ಶಾಲೆ ಬಹುತೇಕ ಸುಸ್ಥಿತಿಯಲ್ಲಿದ್ದು, ಸಣ್ಣಪುಟ್ಟ ರಿಪೇರಿಯನ್ನು ಶಾಲೆಯ ಸಮಿತಿ ನಿರ್ವಹಣೆ ಮಾಡಲಿದೆ. 45 ಶಿಕ್ಷಕರ ಕೊರತೆ ಇದೆ.
-ಎನ್.ಜಿ. ರಾಘವೇಂದ್ರ, ಬಿಇಒ, ಶೃಂಗೇರಿ.
ಗ್ರಾಮೀಣ ಪ್ರದೇಶದಿಂದ ಶಾಲಾ, ಕಾಲೇಜಿಗೆ ತೆರಳಲು ಸೂಕ್ತ ಸಾರಿಗೆ ವ್ಯವಸ್ಥೆ ಇಲ್ಲದೇ ಕಲಿಕೆಗೆ ಹಿನ್ನಡೆಯಾಗಿದೆ. ಸೀಮಿತವಾಗಿರುವ ಬಸ್ ಅಥವಾ ಸಮಯಕ್ಕೆ ಸರಿಯಾದ ಬಸ್ ಇಲ್ಲದೇ, ಖಾಸಗಿ ವಾಹನವನ್ನು ಅವಲಂಬಿಸಬೇಕಾಗಿದೆ. ಗ್ರಾಮೀಣ ಪ್ರದೇಶಕ್ಕೆ ಸರಕಾರ ಸಾರಿಗೆ ವವ್ಯಸ್ಥೆ ಕಲ್ಪಿಸಬೇಕು.
-ರಾಜಕುಮಾರ್, ಕೆಲವಳ್ಳಿ ಶೃಂಗೇರಿ