ರಾಯಚೂರು: ಭೂ ದಾಖಲೆಗಳ ಇಲಾಖೆಯಲ್ಲಿ ಸಾಕಷ್ಟು ಹುದ್ದೆಗಳು ಖಾಲಿಉಳಿದಿರುವ ಕಾರಣ ಸಹಸ್ರಾರು ಅರ್ಜಿಗಳು ಬಾಕಿ ಉಳಿದಿದ್ದು, ಸಾರ್ವಜನಿಕರುತಿಂಗಳಾನುಗಟ್ಟಲೇ ಕಾಯುವಂತಾಗಿದೆ. ಕಚೇರಿಗಳಿಗೆ ಅಲೆದರೂ ಕೆಲಸ ಆಗದ ಸ್ಥಿತಿಯಿದ್ದು, ಇರುವ ಸಿಬ್ಬಂದಿಯಿಂದಲೇಕೆಲಸ ನಿರ್ವಹಿಸಬೇಕಾದ ಅನಿವಾರ್ಯತೆ ಇದೆ.
ಜಿಲ್ಲೆಯ ಏಳು ತಾಲೂಕುಗಳಲ್ಲಿ ನಿತ್ಯ ಒಂದಲ್ಲ ಒಂದು ಕಾರಣಕ್ಕೆ ಭೂಮಿಗೆ ಸಂಬಂಧಿಸಿದ ಅರ್ಜಿಗಳು ಸಲ್ಲಿಕೆಯಾಗುತ್ತಿವೆ. ಆದರೆ, ತಕ್ಷಣಕ್ಕೆ ಕಾರ್ಯೋನ್ಮುಖವಾಗಬೇಕಿದ್ದಇಲಾಖೆಗೆ ಸಿಬ್ಬಂದಿ ಸಮಸ್ಯೆ ತಲೆನೋವಾಗಿ ಪರಿಣಮಿಸಿದೆ.
ಜಿಲ್ಲೆಗೆ ಒಟ್ಟು ಮಂಜೂರಾದ 187 ಹುದ್ದೆಗಳಲ್ಲಿ ಈಗ 56 ಹುದ್ದೆಗಳು ಖಾಲಿ ಇವೆ.ಭೂ ದಾಖಲೆಗಳ ಸಹಾಯಕ ನಿರ್ದೇಶಕ (ಕಾರ್ಯನಿರ್ವಾಹಕ) ಹುದ್ದೆಗಳು ಐದರಲ್ಲಿಎರಡು ಖಾಲಿ ಇವೆ. ಅಧೀಕ್ಷಕ ಹುದ್ದೆಗಳಲ್ಲಿ ಐದರಲ್ಲಿ ಒಂದು ಮಾತ್ರ ಭರ್ತಿಯಾಗಿದ್ದು, 4 ಖಾಲಿ ಇವೆ. ಆಡಳಿತ ವಿಭಾಗದಲ್ಲಿ ಒಂದು ಅಧೀಕ್ಷಕ ಹುದ್ದೆ ಮಂಜೂರಾಗಿದ್ದು, ಅದು ಖಾಲಿ ಇದೆ. 19 ತಪಾಸಕರಲ್ಲಿ 8 ಮಾತ್ರಭರ್ತಿಯಾಗಿದ್ದು, 11 ಖಾಲಿ ಇವೆ. 107 ಭೂಮಾಪಕ ಹುದ್ದೆಗಳಲ್ಲಿ 12 ಖಾಲಿ ಇವೆ.ಒಂದು ಪ್ರಥಮ ದರ್ಜೆ ಸಹಾಯಕ ಹುದ್ದೆ,ಒಂದು ದ್ವಿತೀಯ ದರ್ಜೆ ಸಹಾಯಕ, 24 ಬಾಂದು ಜವಾನ ಹುದ್ದೆಗಳು ಖಾಲಿ ಇವೆ.
ಮಸ್ಕಿ, ಸಿರವಾರ ಸಮಸ್ಯೆ: ಜಿಲ್ಲೆಯಲ್ಲಿಏಳು ತಾಲೂಕುಗಳಿದ್ದರೂ ಭೂ ದಾಖಲೆಗಳ ಇಲಾಖೆಗೆ ಮಾತ್ರ ಇನ್ನೂ ಐದೇ ತಾಲೂಕು ಲೆಕ್ಕದಲ್ಲಿವೆ. ಕಳೆದೆರಡು ವರ್ಷಗಳಿಂದ ಅಸ್ತಿತ್ವಕ್ಕೆ ಬಂದ ಮಸ್ಕಿ, ಸಿರವಾರ ತಾಲೂಕಿಗೆ ಸ್ವಂತ ಕಚೇರಿಗಳಿಲ್ಲ. ಎರಡು ತಾಲೂಕಿಗೆ ತಲಾ 15ರಂತೆ 30 ಸಿಬ್ಬಂದಿ ಬೇಕಿದೆ. ಆದರೆ, ಆಡಳಿತಾತ್ಮಕವಾಗಿ ವಿಂಗಡಣೆಗೊಂಡಿರುವ ಕಾರಣ ಅಲ್ಲಿನ ಕೆಲಸ ಕಾರ್ಯಗಳನ್ನು ಲಿಂಗಸುಗೂರು, ಮಾನ್ವಿ, ಸಿಂಧನೂರಿನ ಅಧಿಕಾರಿಗಳಿಗೆ ನಿಯೋಜಿಸಲಾಗಿದೆ. ಸಿರವಾರದ ಬಹುತೇಕ ಅರ್ಜಿ ಮಾನ್ವಿ ಅಧಿಕಾರಿಗಳಿಗೆ ಸುಪರ್ದಿಗೆ ಬಂದರೆ, ಮಸ್ಕಿಯದ್ದು ಮಾತ್ರ ತಲೆನೋವಾಗಿ ಪರಿಣಮಿಸಿದೆ. ಅತ್ತ ಸಿಂಧನೂರು ತಾಲೂಕು, ಲಿಂಗಸುಗೂರು ಮತ್ತು ಮಾನ್ವಿ ಮೂರು ತಾಲೂಕಿನ ವ್ಯಾಪ್ತಿಯ ಹಳ್ಳಿಗಳು ಇದರವ್ಯಾಪ್ತಿಗೆ ಬರುತ್ತಿರುವ ಸಿಬ್ಬಂದಿ ಮೂರು ತಾಲೂಕಿಗೆ ಅಲೆಯುವಂತಾಗಿದೆ.
ತಿದ್ದುಪಡಿ ಅರ್ಜಿಗಳೇ ಹೆಚ್ಚು ಬಾಕಿ: ವಿಭಾಗ, ಕ್ರಮ, ಉಡುಗೊರೆ, ಹದ್ದು ಬಸ್ತ್ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಸಾಕಷ್ಟು ಅರ್ಜಿಗಳು ಬಾಕಿ ಉಳಿದಿವೆ. ಅದರಲ್ಲಿ ಪಹಣಿಗಳಲ್ಲಿರುವ ತಿದ್ದುಪಡಿ ಅರ್ಜಿಗಳೇ ಸಾಕಷ್ಟು ಬಾಕಿಉಳಿದಿವೆ. ಜಿಲ್ಲೆಯ ವಿವಿಧ ತಹಶೀಲ್ದಾರ್ ಲಾಗಿನ್‌ನಲ್ಲಿ 10,445 ಅರ್ಜಿಗಳು ಬಾಕಿಉಳಿದಿವೆ. ಅವುಗಳನ್ನು ತಹಶೀಲ್ದಾರ್ ಪರಿಶೀಲಿಸಿದ ನಂತರ ಮಾಪಕರ ಲಾಗಿನ್‌ಒಳಗೆ ಬರುತ್ತದೆ. ಎಲ್ಲ ಅರ್ಜಿಗಳು ಇತ್ಯರ್ಥಗೊಳ್ಳಬೇಕಾದರೆ ವರ್ಷಗಳೇಬೇಕಾಗಬಹುದು ಎನ್ನಲಾಗುತ್ತಿದೆ. ಇನ್ನೂ 11 ಇ ವಿಭಾಗದಲ್ಲಿ 19638, ಇ ಸ್ವತ್ತುವಿಭಾಗದಲ್ಲಿ 413, ಎಎಲ್‌ಎನ್ ವಿಭಾಗದಲ್ಲಿ692, ತಾತ್ಕಾಲ್ ವಿಭಾಗದಲ್ಲಿ 5650 ಅರ್ಜಿ,ಹದ್ದು ಬಸ್ತ್ ವಿಭಾಗದಲ್ಲಿ 3280 ಅರ್ಜಿಗಳು ಬಾಕಿ ಉಳಿದಿವೆ.
ಪ್ರಸ್ತಾವನೆ ಸಲ್ಲಿಕೆ : ಮಸ್ಕಿ ಮತ್ತು ಸಿರವಾರ ತಾಲೂಕು ರಚನೆಯಾಗಿ ವರ್ಷಗಳೇ ಕಳೆದರೂ ಅಲ್ಲಿ ಸ್ವಂತ ಕಚೇರಿ ಕೂಡ ಇಲ್ಲ.ಹೀಗಾಗಿ ಸರ್ಕಾರ ಪ್ರತ್ಯೇಕ ಕಚೇರಿ ಹಾಗೂ ಸಿಬ್ಬಂದಿ ನೇಮಕಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇದಕ್ಕೆ ಕೂಡಲೇ ಬಾಡಿಗೆ ಕಟ್ಟಡದಲ್ಲಿ ಕಚೇರಿ ಆರಂಭಿಸುವಂತೆ ನಿರ್ದೇಶನ ಬಂದಿದ್ದು, ಅದಕ್ಕೆ ಬೇಕಾದ ಎಲ್ಲ ದಾಖಲೆಗಳನ್ನು ಸಲ್ಲಿಸುವಂತೆ ತಿಳಿಸಲಾಗಿದೆ. ಸದ್ಯಕ್ಕೆ ಬಾಡಿಗೆ ಕಟ್ಟಡದಲ್ಲಿ ತಾತ್ಕಾಲಿಕವಾಗಿ ಕಚೇರಿ ನಡೆಸಲು ನಿರ್ಧರಿಸಲಾಗಿದೆ. ಇನ್ನೂ ಸಿಬ್ಬಂದಿ ವಿಚಾರದ ಬಗ್ಗೆ ಮಾತ್ರ ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.
ಭೂ ದಾಖಲೆಗಳ ಇಲಾಖೆಯಲ್ಲಿ ಸಿಬ್ಬಂದಿ ಕೊರತೆಯಿಂದ ಇರುವ ಸಿಬ್ಬಂದಿ ಮೇಲೆ ಒತ್ತಡ ಬಿದ್ದಿದೆ. ಒಂದು ಅರ್ಜಿ ವಿಲೇ ಮಾಡಲು ಸರ್ಕಾರವೇ ಕಾಲಮಿತಿ ನಿಗದಿಗೊಳಿಸಿದೆ. ಹೀಗಾಗಿ ಇರುವಸಿಬ್ಬಂದಿಯೇ ಹೆಚ್ಚಿನ ಹೊರೆ ಹೊರಬೇಕಿದೆ. ಸಾಕಷ್ಟು ಹುದ್ದೆಗಳು ಖಾಲಿಯಿದ್ದು, ಸರ್ಕಾರದ ಗಮನಕ್ಕೆ ತರಲಾಗಿದೆ. ಮಸ್ಕಿ, ಸಿರವಾರತಾಲೂಕುಗಳ ಅರ್ಜಿಗಳನ್ನು ಅಕ್ಕಪಕ್ಕದ ತಾಲೂಕುಗಳ ಸಿಬ್ಬಂದಿಗಳೇ ನಿರ್ವಹಿಸಬೇಕಿದೆ. ಅಲ್ಲಿ ಕಚೇರಿ ಆರಂಭಿಸುವಂತೆಯೂ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. –
ಹನುಮೇಗೌಡ, ಡಿಡಿಎಲ್‌ಆರ್ ರಾಯಚೂರು
–ಸಿದ್ಧಯ್ಯಸ್ವಾಮಿ ಕುಕನೂರು