Advertisement

ಮೇಲ್ದರ್ಜೆಗೇರದ ವಂಡ್ಸೆ ಪ್ರಾ. ಆರೋಗ್ಯ ಕೇಂದ್ರದಲ್ಲಿ ಸಿಬಂದಿ ಕೊರತೆ

04:50 PM Oct 30, 2022 | Team Udayavani |

ವಂಡ್ಸೆ: ಹೋಬಳಿ ಕೇಂದ್ರವಾಗಿರುವ ವಂಡ್ಸೆ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮು ದಾಯ ಆರೋಗ್ಯ ಕೇಂದ್ರವಾಗಿ ಮೇಲ್ದರ್ಜೆಗೆ ಏರಿಸಬೇಕೆಂಬ ಬೇಡಿಕೆ ಈಡೇರದಿರುವುದು ಗ್ರಾಮಸ್ಥರಲ್ಲಿ ಅಸಮಾಧಾನ ಉಂಟು ಮಾಡಿದೆ.

Advertisement

ಸುಮಾರು 3,500 ಸಾವಿರ ಜನಸಂಖ್ಯೆ ಹೊಂದಿರುವ ವಂಡ್ಸೆಯನ್ನು ಬೆಳ್ಳಾಲ, ಕೆರಾಡಿ, ಚಿತ್ತೂರು, ಕರ್ಕುಂಜೆ, ನೂಜಾಡಿ, ನೆಂಪು, ಕುಂದಬಾರಂದಾಡಿ, ದೇವಲ್ಕುಂದ, ಹೊಸೂರು, ಇಡೂರು, ಪರಿಸರದ ಗ್ರಾಮಗಳ ನಿವಾಸಿಗಳು ಚಿಕಿತ್ಸೆಗಾಗಿ ವಂಡ್ಸೆ ಪಾಥಮಿಕ ಆರೋಗ್ಯ ಕೇಂದ್ರವನ್ನು ಅವಲಂಬಿಸಿದ್ದಾರೆ. ವಿಶಾಲವಾದ ಕಾರ್ಯವ್ಯಾಪ್ತಿ ಹೊಂದಿರುವ ವಂಡ್ಸೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಅಗತ್ಯವಿರುವ ಸೌಲಭ್ಯಗಳ ವ್ಯವಸ್ಥೆಯ ಕೊರತೆ ಎದುರಾಗಿದೆ. ಸರಕಾರದ 108 ಆ್ಯಂಬುಲೆನ್ಸ್‌ ಬೇಡಿಕೆ ಇದ್ದರೂ ಈವರೆಗೆ ಈಡೇರಲಿಲ್ಲ. ಆಸ್ಪತ್ರೆಯ ಜೀಪು ನಿರ್ವಹಣೆಯ ಕೊರತೆಯಿಂದಾಗಿ ಬದಿಸೇರಿದೆ. ಅನೇಕ ಹುದ್ದೆಗಳು ಇನ್ನೂ ಭರ್ತಿಯಾಗಿಲ್ಲ. ಖಾಯಂ ವೈದ್ಯರ ನೇಮಕಾತಿಯಾಗಿದ್ದರೂ ಅವರಿಗೆ ಜವಾಬ್ದಾರಿ ನಿಭಾಯಿಸಲು ಅನೇಕ ಸಮಸ್ಯೆ ಎದುರಾಗಿದೆ. ಪ್ರತಿಯೊಂದು ಕಾಯಿಲೆಗಳಿಗೆ ಆಸು ಪಾಸಿನ ಗ್ರಾಮಸ್ಥರು ವಂಡ್ಸೆ ಪ್ರಾಥಮಿಕ ಆರೋಗ್ಯ ಕೇಂದ್ರವನ್ನೇ ಅವಲಂಬಿಸಬೇಕಾಗಿದೆ. ಆದರೆ ಇಲ್ಲಿನ ಸೌಲಭ್ಯಗಳ ಕೊರತೆಯ ಅವ್ಯವಸ್ಥೆ ರೋಗಿಗಳ ಮೇಲೆ ಪರಿಣಾಮ ಬೀರಿದೆ.

24 ಗಂಟೆಗಳ ಸೇವೆಯ ಸೌಲಭ್ಯಕ್ಕೆ ಬೇಡಿಕೆ

ಕೊಲ್ಲೂರು-ಕುಂದಾಪುರ ನಡುವಿನ ಮುಖ್ಯ ರಾಜ್ಯ ಹೆದ್ದಾರಿ ಇದಾಗಿದ್ದು, ತುರ್ತು ಚಿಕಿತ್ಸೆಗೆ ವಂಡ್ಸೆಯನ್ನೇ ಅವಲಂಬಿಸಬೇಕಾಗಿದೆ. ಆಸುಪಾಸಿನ ಗ್ರಾಮಸ್ಥರಿಗೆ ರಾತ್ರಿ ವೇಳೆ ಆರೋಗ್ಯ ಸಮಸ್ಯೆ ಎದುರಾದಲ್ಲಿ ದೂರದ ಕುಂದಾಪುರಕ್ಕೆ ಸಾಗಬೇಕಾಗಿದೆ. ಆ ನಿಟ್ಟಿನಲ್ಲಿ ವಂಡ್ಸೆ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೆ ಏರಿಸಿ 24 ಗಂಟೆಗಳ ಸೇವೆ ಒದಗಿಸಬೇಕೆನ್ನುವುದು ಗ್ರಾಮಸ್ಥರ ಬೇಡಿಕೆಯಾಗಿದೆ.

ಶಾಸಕರ ತುಡಿತ

Advertisement

ಶಾಸಕ ಬಿ.ಎಂ. ಸುಕುಮಾರ್‌ ಶೆಟ್ಟಿ, ವಂಡ್ಸೆ ಗ್ರಾ.ಪಂ. ಅಧ್ಯಕ್ಷ ಉದಯಕುಮಾರ್‌ ಶೆಟ್ಟಿ ಸತತ ಪ್ರಯತ್ನದ ನಡುವೆಯೂ ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭಡ್ತಿ ದೊರಕದಿರುವುದು ದುರದೃಷ್ಟಕರ. ಗ್ರಾಮಸಭೆಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೇರಿಸುವ ಬಗ್ಗೆ ಹಲವಾರು ಬಾರಿ ಚರ್ಚೆ ನಡೆದು ನಿರ್ಣಯ ಕೈಗೊಂಡು ಜಿಲ್ಲಾ ವೈದ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದ್ದರೂ ಯಾವುದೇ ಕ್ರಮ ಕೈಗೊಳ್ಳದ ಬಗ್ಗೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಚಿವರಿಗೆ ಆಗ್ರಹ: ವಂಡ್ಸೆ ಪ್ರಾಥಮಿಕ ಆರೋಗ್ಯ ಕೇಂದ್ರ ಮೇಲ್ದರ್ಜೆಗೆ ಏರಿಸುವ ಬಗ್ಗೆ ಇಲಾಖೆ ಗಮನಕ್ಕೆ ತರಲಾಗಿದೆ. ಅಗತ್ಯತೆಯ ಸೌಲಭ್ಯ ಒದಗಿಸುವ ಬಗ್ಗೆ ಸಚಿವರೊಡನೆ ಭೇಟಿಯಾಗಿ ಕ್ರಮ ಕೈಗೊಳ್ಳುವಂತೆ ಆಗ್ರಹಿಸುತ್ತೇನೆ. –ಬಿ.ಎಂ. ಸುಕುಮಾರ್‌ ಶೆಟ್ಟಿ, ಶಾಸಕರು

ಶೀಘ್ರ ಕ್ರಮ ಕೈಗೊಳ್ಳಿ: ವಂಡ್ಸೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಎದುರಾಗಿರುವ ಸಿಬಂದಿ ಹಾಗೂ ಸೌಕರ್ಯಗಳ ಕೊರತೆ ನಿಭಾಯಿಸುವಲ್ಲಿ ಸರಕಾರ ಕ್ರಮ ಕೈಗೊಳ್ಳಬೇಕು. ಗ್ರಾ.ಪಂ.ಸಭೆಯಲ್ಲಿ ನಿರ್ಣಯ ಕೈಗೊಂಡು ಇಲಾಖೆಗೆ ಮನವಿ ಸಲ್ಲಿಸಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. –ಉದಯಕುಮಾರ್‌ ಶೆಟ್ಟಿ, ಅಧ್ಯಕ್ಷರು, ಗ್ರಾ.ಪಂ. ವಂಡೆ

 ಡಾ| ಸುಧಾಕರ ನಂಬಿಯಾರ್‌

Advertisement

Udayavani is now on Telegram. Click here to join our channel and stay updated with the latest news.

Next