ಮಧುಗಿರಿ: ತಾಲೂಕಿನ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಸಿಬ್ಬಂದಿ ಕೊರತೆ ಇದ್ದು, ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ ವಾರಕ್ಕೆ 2-3 ಬಾರಿ ಮಾತ್ರ ಕಚೇರಿಗೆ ಭೇಟಿ ನೀಡುತ್ತಾರೆ. ಇದರಿಂದ ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸಲು ಯಾರೂ ಇಲ್ಲದಂತಾಗಿ ತೊಂದರಯಾಗುತ್ತಿದೆ.
ಕಚೇರಿ ಆರಂಭವಾದಾಗಿನಿಂದಲೂ ನಾಲ್ವರು ಸಾರಿಗೆ ಅಧಿಕಾರಿಗಳನ್ನು ಕಂಡಿದೆ. ಅದರಲ್ಲಿ ಒಬ್ಬರು ಕಚೇರಿ ಆರಂಭವಾದಾಗ ಬಂದ ಪ್ರಥಮ ಅಧಿಕಾರಿ ಕಾಯಂ ಅಧಿಕಾರಿಯಾಗಿದ್ದು, ನಂತರ ಬಂದ ಉಳಿದ ಮೂವರ ಹುದ್ದೆ ಕಾಯಂ ಆಗಿರಲಿಲ್ಲ. ಅಲ್ಲದೇ ಬೇರೆಡೆ ಇರುವ ಕೆಲಸದ ಒತ್ತಡದಿಂದ ಮಧುಗಿರಿ ಕಚೇರಿಗೆ ಬರುತ್ತಿಲ್ಲ. ಜೊತೆಗೆ ಕೆಳ ಹಂತದ ಸಿಬ್ಬಂದಿಯೂ ಕಡಿಮೆಯಾಗಿದ್ದು, ಸಾರ್ವಜನಿಕರ ಕೆಲಸಗಳಿಗೆ ನಿತ್ಯ ಸಮಸ್ಯೆಯಾಗಿದೆ.
ಬೊಕ್ಕಸಕ್ಕೂ ನಷ್ಟ: ಈಗಿರುವ ಎಆರ್‌ಟಿಒ ರಾಜು ತುಮಕೂರಿನಲ್ಲೂ ಕಾರ್ಯನಿರ್ವಹಿಸುತ್ತಿದ್ದು, ಮಧುಗಿರಿಗೆ ಪ್ರಭಾರಿಯಾಗಿ ನೇಮಕವಾಗಿದ್ದಾರೆ. ವೃತ್ತ ನೀರಿಕ್ಷಕರ ಹುದ್ದೆ ಖಾಲಿಯಿದ್ದು, ಎರಡೂ ಹುದ್ದೆ ಇವರೇ ನಿಭಾಯಿಸುವ ಪರಿಸ್ಥಿತಿ ಬಂದೊದಗಿದೆ. ಇವರು ಕಚೇರಿಗೆ ಆಗಮಿಸುವ ದಿನದ ಮಾಹಿತಿ ಇಲ್ಲದೇ ಜನರು ಬಂದು ವಾಪಸ್ ಹೋಗು ವಂತಾಗಿದೆ. ಇಲ್ಲಿರುವ ಶೇ.95 ಸಿಬ್ಬಂದಿ ನಿಯೋಜನೆ ಗೊಂಡಿದ್ದರೂ ಕಾಯಂ ಆಗದಿರುವುದರಿಂದ ಜನರಿಗೆ ಉತ್ತಮ ಸೇವೆ ಒದಗಿಸಲು ಅಸಾಧ್ಯ. ದೂರದಿಂದ ಬರುವ ಜನರಿಗೆ ಅಧಿಕಾರಿಗಳು ಲಭ್ಯರಿಲ್ಲದಿದ್ದರೆ ಸಮಸ್ಯೆಗೆ ಮುಕ್ತಿ ಸಿಗುವ ಆಶಾಭಾವನೆ ಇಲ್ಲ. ವೃತ್ತ ನಿರೀಕ್ಷಕರ 2 ಹುದ್ದೆಯೂ ಖಾಲಿಯಿದ್ದು, ಕೆಲಸಗಳು ಸರಾಗವಾಗಿ ನಡೆಯುತ್ತಿಲ್ಲ. ಇದರಿಂದ ಸರ್ಕಾರದ ಬೊಕ್ಕಸಕ್ಕೂ ನಷ್ಟವಾಗುತ್ತಿದ್ದು, ಕಾಯಂ ಅಧಿಕಾರಿಗಳನ್ನು ನಿಯೋ ಜಿಸಬೇಕು ಎಂಬುದು ನಾಗರಿಕರ ಆಗ್ರಹವಾಗಿದೆ.
● ಮಧುಗಿರಿ ಸತೀಶ್