Advertisement

ಢವಳಗಿ ರೈತ ಸಂಪರ್ಕ ಕೇಂದ್ರದಲ್ಲಿ ಸಿಬ್ಬಂದಿ ಕೊರತೆ

05:24 PM Jun 09, 2022 | Shwetha M |

ಮುದ್ದೇಬಿಹಾಳ: ತಾಲೂಕಿನ ಢವಳಗಿ ಹೋಬಳಿ ವ್ಯಾಪ್ತಿಯ ಕೃಷಿ ಇಲಾಖೆಗೆ ಸೇರಿದ ರೈತ ಸಂಪರ್ಕ ಕೇಂದ್ರದಲ್ಲಿ ಸಿಬ್ಬಂದಿ ಕೊರತೆ ಇದ್ದು ರೈತರಿಗೆ ಸೌಲಭ್ಯಗಳು ಸರಿಯಾಗಿ ದೊರಕುತ್ತಿಲ್ಲ. ಜೊತೆಗೆ ನಮ್ಮ ಕೆಲಸ ಕಾರ್ಯಗಳಿಗೆ ವಿನಾಕಾರಣ ಅಲೆದಾಡುವಂತಾಗಿದೆ ಎಂದು ನೊಂದ ರೈತರು ದೂರಿದ್ದಾರೆ.

Advertisement

7 ಗ್ರಾಮ ಪಂಚಾಯಿತಿ, 28 ಹಳ್ಳಿಗಳನ್ನೊಳ ಗೊಂಡಿರುವ ಈ ಕೇಂದ್ರದಲ್ಲಿ ಇರುವ ಬೆರಳೆಣಿಕೆ ಯಷ್ಟು ಸಿಬ್ಬಂದಿ ಮೇಲೆ ಹೆಚ್ಚಿನ ಕೆಲಸದ ಭಾರ ಬಿದ್ದು ಅವರೂ ಹೈರಾಣಾಗುತ್ತಿರುವುದು ಮಾತ್ರವಲ್ಲದೆ ರೈತರಿಗೆ ಸರಿಯಾದ ಸೇವೆ ಕೊಡುವಲ್ಲಿಯೂ ವಿಫಲರಾಗುತ್ತಿದ್ದಾರೆ. ಇದರಿಂದ ರೈತರು ತೊಂದರೆ ಅನುಭವಿಸುವಂತಾಗಿದೆ ಎಂದು ದೂರಿದ್ದಾರೆ.

ಸದ್ಯ ಇಲ್ಲಿ ನಾಲ್ವರು ಸಿಬ್ಬಂದಿ ಕೊರತೆ ಇದ್ದು ಖಾಸಗಿಯವರನ್ನು ದಿನಗೂಲಿ ಆಧಾರದ ಮೇಲೆ ಬಳಸಿಕೊಂಡು ತಾತ್ಕಾಲಿಕವಾಗಿ ಸಮಸ್ಯೆ ಎದುರಿಸಲು ಇಲಾಖೆ ಮೇಲಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ. ಆದರೆ ಇವರಿಂದಲೂ ನಿರೀಕ್ಷಿತ ಸೇವೆ ಸಾಧ್ಯವಾಗುತ್ತಿಲ್ಲ.

ಈ ವರ್ಷ ಮುಂಗಾರು ಉತ್ತಮವಾಗುವ ಲಕ್ಷಣಗಳು ಕಂಡು ಬಂದಿದ್ದು ಹೋಬಳಿ ವ್ಯಾಪ್ತಿಯಲ್ಲಿ ಹೆಚ್ಚಿನ ರೈತರು ತಮ್ಮ ಹೊಲಗಳಲ್ಲಿ ಮುಂಗಾರು ಬೆಳೆ ಬೆಳೆಯುವ ಸಿದ್ದತೆಯಲ್ಲಿದ್ದಾರೆ. ಆದರೆ ಬೀಜ ಬಿತ್ತನೆಗೆ, ಕೃಷಿ ಉಪಕರಣಗಳಿಗೆ ಕುತ್ತು ಬಂದಿದ್ದು ಇವು ರೈತರಿಗೆ ವಿಳಂಬವಾಗಿ ದೊರಕುತ್ತಿವೆ ಎನ್ನಲಾಗುತ್ತಿದೆ.

ಪ್ರತಿಯೊಂದು ಕೃಷಿ ಕೇಂದ್ರಕ್ಕೆ ಕೃಷಿ ಅಧಿಕಾರಿಗೆ ನೆರವಾಗಲು ಸಹಾಯಕ ಕೃಷಿ ಅಧಿಕಾರಿ, ಕೃಷಿ ಸಹಾಯಕರು ಇರಬೇಕು ಅನ್ನೋ ನಿಯಮ ಇದೆ. ಆದರೆ ಇಲ್ಲಿ ಇಬ್ಬರೇ ಸಿಬ್ಬಂದಿ ಇರುವುದರಿಂದ ಎಲ್ಲ ಹಳ್ಳಿಗಳ ರೈತರನ್ನೂ ತಲುಪಿ ಕೃಷಿ ಸಂಬಂಧಿ ಕೆಲಸ ಮಾಡಲು ಇವರಿಂದ ಆಗುತ್ತಿಲ್ಲ ಎನ್ನುವ ದೂರು ಕೇಳಿ ಬರುತ್ತಿದೆ.

Advertisement

ಮುಂಗಾರು ಬಿತ್ತನೆಗೆ ಕೃಷಿ ಭೂಮಿ ಹದಗೊಳಿಸಿರುವ ರೈತರಿಗೆ ಸರ್ಕಾರದ ಸಬ್ಸಿಡಿ ಬೀಜ, ಗೊಬ್ಬರ ಪಡೆಯುವುದು ದುಸ್ತರವಾಗುತ್ತಿದೆ. ಕೇಂದ್ರಕ್ಕೆ ಬಂದರೂ ಸಿಬ್ಬಂದಿ ಕೊರತೆಯಿಂದ ಸಕಾಲಕ್ಕೆ ಬೀಜ, ಗೊಬ್ಬರ ಸಿಗುತ್ತಿಲ್ಲ. ಸಿಬ್ಬಂದಿ ಕೊರತೆ ಪರಿಣಾಮ ಸರ್ಕಾರದ ಸೌಲಭ್ಯಗಳು, ಯೋಜನೆಗಳು ರೈತರಿಗೆ ಸರಿಯಾಗಿ ತಲುಪುತ್ತಿಲ್ಲ. ಮೇಲಾಗಿ ನಿಗದಿತ ಅವಧಿಯೊಳಗೆ ಎಲ್ಲ ಸೌಲಭ್ಯಗಳನ್ನು ರೈತರಿಗೆ ತಲುಪಿಸುವುದು ಸಾಧ್ಯವಾಗುತ್ತಿಲ್ಲ ಎಂದು ರೈತರು ದೂರುತ್ತಿದ್ದಾರೆ.

ಕಳಪೆ ಮತ್ತು ನಕಲಿ ಬೀಜ, ಗೊಬ್ಬರದ ಬಗ್ಗೆ ಅರಿವು ಮೂಡಿಸಲು, ರೈತರ ಆದಾಯ ದ್ವಿಗುಣಗೊಳಿಸುವ ಬೆಳೆ ಪದ್ಧತಿ ಕುರಿತು ಸಲಹೆ ನೀಡಲು, ಮಣ್ಣಿನ ಗುಣಮಟ್ಟ ಸಂರಕ್ಷಿಸುವ ಜಾಗೃತಿ ಮೂಡಿಸಲು ಸಿಬ್ಬಂದಿ ಕೊರತೆ ಅಡ್ಡಿ ಉಂಟು ಮಾಡಿದೆ. ಈಗಲಾದರೂ ಸಂಬಂಧಿಸಿದವರು ಎಚ್ಚೆತ್ತುಕೊಂಡು ಕೂಡಲೇ ಈ ಕೇಂದ್ರಕ್ಕೆ ಅಗತ್ಯ ಪ್ರಮಾಣದ ಸಿಬ್ಬಂದಿ ಒದಗಿಸಿ ರೈತರಿಗೆ ಸಕಾಲಕ್ಕೆ ನೆರವಾಗಲು ಕ್ರಮ ಕೈಗೊಳ್ಳಬೇಕು ಎಂದು ರೈತರು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next