ಕುಷ್ಟಗಿ: ಪಟ್ಟಣದ 2ನೇ ವಾರ್ಡ್‌ನ ಬುತ್ತಿ ಬಸವೇಶ್ವರ ನಗರದ ಅಂಗನವಾಡಿ ಕೇಂದ್ರಕ್ಕೆ ದಶಕ ಕಳೆದರೂ ಬಾಡಿಗೆ ಕಟ್ಟಡವೇ ಗತಿಯಾಗಿದೆ.
ಬುತ್ತಿ ಬಸವೇಶ್ವರ ನಗರದ ಶ್ರೀ ಅನ್ನದಾನೇಶ್ವರ ಕಾಲೇಜಿನ ಹೊಸ ಕಟ್ಟಡದ ಹಿಂಭಾಗದ ಮನೆಯೊಂದರ ಐದಾರು ಅಡಿಗೆ ಸೀಮಿತವಾದ ವಾಣಿಜ್ಯ ಮಳಿಗೆಯೇ ಸದ್ಯ ಅಂಗನವಾಡಿ ಕೇಂದ್ರವಾಗಿದೆ. ಅಂಗನವಾಡಿಗೆ ಪೂರೈಸಿದ ಆಹಾರ ಪದಾರ್ಥ, ಸಾಮಾಗ್ರಿ, ಸರಂಜಾಮುಗಳ ಸಂಗ್ರಹ, ಅಡುಗೆ ತಯಾರಿಕೆ. ಮಕ್ಕಳ ಆಟ, ಊಟ, ಪಾಠ ಎಲ್ಲದಕ್ಕೂ ಇದರಲ್ಲೇ ವ್ಯವಸ್ಥೆ ಮಾಡಬೇಕು.
ಈ ಅಂಗನವಾಡಿಯಲ್ಲಿ 20 ಮಕ್ಕಳಿದ್ದಾರೆ. ಸರಾಸರಿ ಹಾಜರಾತಿ 15 ಸಾಮಾನ್ಯವಾಗಿರುತ್ತದೆ. ತೀರ ಇಕ್ಕಟ್ಟಾದ ಸ್ಥಳಾವಕಾಶ, ಕೇಂದ್ರದ ಮುಂದಿರುವ ರಸ್ತೆಯಿಂದಾಗಿ ಮಕ್ಕಳು ಆಟವಾಡಲು ಜಾಗೆ ಇಲ್ಲ. ಮಕ್ಕಳ ಮಧ್ಯೆ ಗ್ಯಾಸ್ ಸ್ಟೌವ್ ಹೊತ್ತಿಸಿ ಊಟ ತಯಾರಿಸುವ ಅನಿವಾರ್ಯತೆ ಇದೆ. ಅಂಗನವಾಡಿ ಕಾರ್ಯಕರ್ತೆ ಬಸಮ್ಮ ಮಕ್ಕಳೊಟ್ಟಿಗೆ ಅಂಟಿಕೊಂಡು ಕುಳಿತುಕೊಳ್ಳುವ ಪರಿಸ್ಥಿತಿ ಇದೆ. ಬೇರೆ ಕಟ್ಟಡಕ್ಕೆ ಸ್ಥಳಾಂತರಿಸಬೇಕಾದರೆ ವಾರ್ಡ್‌ನಲ್ಲಿ ದುಬಾರಿ ಬಾಡಿಗೆ ಭರಿಸಬೇಕು. ಅಂಗನವಾಡಿಗೆ ಬಾಡಿಗೆ ಮನೆ ನೀಡಲು ನಿರಾಕರಿಸುತ್ತಿದ್ದು, ಏನೂ ಮಾಡದ ಅಸಹಾಯಕ ಪರಿಸ್ಥಿತಿಗೆ ಕಾರಣವಾಗಿದೆ.
ಹೆಸರಿಗೆ ನಿವೇಶನ: ಈ ಅಂಗನವಾಡಿ ಕಟ್ಟಡಕ್ಕಾಗಿ ವಾರ್ಡ್ ವ್ಯಾಪ್ತಿಯಲ್ಲಿರುವ ನಾಲೆಯ ಖಾಲಿ ಜಾಗೆಯನ್ನು ಸ್ಥಳೀಯರು ಗುರುತಿಸಿದ್ದಾರೆ. ಕಳೆದ ವರ್ಷ ಫೆ. 19ರಂದು ನಡೆದ ಪುರಸಭೆ ಸಾಮಾನ್ಯ ಸಭೆಯಲ್ಲಿ ಖಾಲಿ ಜಾಗೆಯಲ್ಲಿ ಅಂಗನವಾಡಿ ಕಟ್ಟಡಕ್ಕಾಗಿ ಠರಾವು ಅಂಗೀಕರಿಸಲಾಗಿದೆ. ನಕಾಶೆ ಸವಿರದ ದಾಖಲಾತಿಯೊಂದಿಗೆ ಮುಂದಿನ ಆದೇಶಕ್ಕಾಗಿ ಜಿಲ್ಲಾಧಿಕಾರಿಗಳಿಗೆ ಎರಡು ಬಾರಿ ಅರ್ಜಿ ಸಲ್ಲಿಸಲಾಗಿದೆ. ಸಲ್ಲಿಸಿದ ಅರ್ಜಿಗೆ ಜಿಲ್ಲಾ ಧಿಕಾರಿ ಕಚೇರಿಯಿಂದ ಇದುವರೆಗೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಪುರಸಭೆ ಪತ್ರ ವ್ಯವಹಾರದಿಂದ ಪುನಃ ಜಿಲ್ಲಾ ಧಿಕಾರಿ ಗಮನ ಸೆಳೆಯುವ ಪ್ರಯತ್ನ ಮಾಡಿಲ್ಲ. ಕಡೇ ಪಕ್ಷ ಸ್ಥಳೀಯ ಪುರಸಭೆ ನಾಲೆಯ ಜಾಗೆಯ ಸರಹದ್ದು ಗುರುತಿಸಿ, ಅತಿಕ್ರಮಣ ತಡೆಗೆ ಸುತ್ತಲೂ ತಂತಿ ಬೇಲಿ ಹಾಕುವ ಪ್ರಯತ್ನಕ್ಕೂ ಕೈ ಹಾಕಿಲ್ಲ. ಹೀಗಾಗಿ ಈ ನಿವೇಶನದಲ್ಲಿ ಅಂಗನವಾಡಿ ಕೇಂದ್ರ ಕಟ್ಟಡ ನಿರ್ಮಿಸುವ ಕನಸು ಹಾಗೆಯೇ ಉಳಿದಿದ್ದು, ಜಿಲ್ಲಾಧಿ ಕಾರಿಗಳು ಮನಸ್ಸು ಮಾಡಿದರೆ ಸಾಧ್ಯವಿದೆ.
2ನೇ ವಾರ್ಡ್‌ನಲ್ಲಿ ಪುರಸಭೆ ಜಾಗೆ ಅಳತೆ, ಸೂಕ್ತ ದಾಖಲೆಗಳನ್ನು ನೀಡಿದರೆ ಅಂಗನವಾಡಿ ಕೇಂದ್ರವನ್ನು ಆದ್ಯತೆಯಿಂದ ನಿರ್ಮಿಸಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಪ್ರಭಾರಿ ಉಪ ನಿರ್ದೇಶಕ ವೀರೇಂದ್ರ ನಾವದಗಿ ತಿಳಿಸಿದ್ದಾರೆ.
2ನೇ ವಾರ್ಡ್ ಅಂಗನವಾಡಿ ಕಟ್ಟಡಕ್ಕೆ ಕಳೆದ ಅವಧಿ ಯಲ್ಲಿ ಅನುದಾನ ಮಂಜೂರಾಗಿದ್ದು, ಆದರೆ ನಾಲೆಯ ನಿವೇಶನದ ಸೂಕ್ತ ದಾಖಲಾತಿಗಳನ್ನು ಸಲ್ಲಿಸದೇ ಇರುವುದು ಅನುದಾನ ವಾಪಸ್ಸಾಗಿದೆ. ಈ ಕುರಿತಾಗಿ ಜಿಲ್ಲಾಡಳಿತ ಅಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಿಗೆ ಖುದ್ದು ಮನವಿ ಮಾಡಿದ ಹಿನ್ನೆಲೆಯಲ್ಲಿ ಸೂಕ್ತ ದಾಖಲಾತಿಗಳನ್ನು ನೀಡಿದರೆ ಮಾತ್ರ ಪುನಃ ಅನುದಾನ ಮಂಜೂರಿಯ ಭರವಸೆ ನೀಡಿದ್ದು, ಈ ನಿಟ್ಟಿನಲ್ಲಿ ಪ್ರಯತ್ನದಲ್ಲಿರುವೆ.
–ರಾಜೇಶ ಪತ್ತಾರ, ಪುರಸಭೆ ಸದಸ್ಯ
-ಮಂಜುನಾಥ ಮಹಾಲಿಂಗಪುರ