ಹಾನಗಲ್ಲ: ಉತ್ತರಕರ್ನಾಟಕದ ವಿದ್ಯಾರ್ಥಿಗಳಲ್ಲಿ ಅಗಾಧ ಪ್ರತಿಭೆಯಿದ್ದು, ಕೌಶಲ್ಯಗಳ ಕೊರತೆಯಿಂದ ಉದ್ಯೋಗ ಮಾರುಕಟ್ಟೆಯಲ್ಲಿ ಹಿಂದುಳಿಯಲು ಕಾರಣವಾಗಿದೆ ಎಂದು ಜನತಾ ಶಿಕ್ಷಣ ಸೌಹಾರ್ದ ಸಹಕಾರಿ ಸಂಸ್ಥೆಯ ಅಧ್ಯಕ್ಷ ಸುರೇಶ ರಾಯ್ಕರ್ ಅಬಿಪ್ರಾಯ ಪಟ್ಟರು.
ಪಟ್ಟಣದ ಶ್ರೀ ಕುಮಾರೇಶ್ವರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ‘ಎಲಿವೇಟ್-ಸ್ಕಿಲ್ಸ್ ಆನ್‌ಕ್ಯಾಂಪಸ್’ ಕೋರ್ಸ್‌ನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿ ಗಳಲ್ಲಿರುವ ಈ ಕೊರತೆಯನ್ನು ನೀಗಿಸಲು ಉತ್ತರ ಕರ್ನಾಟಕದವರೇ ಆದ ಗುರುರಾಜ ದೇಶಪಾಂಡೆಯವರು ಹುಟ್ಟುಹಾಕಿದ ದೇಶಪಾಂಡೆ ಫೌಂಡೇಶನ್ ನ ಸಹಯೋಗದಲ್ಲಿ ಬಿಎ ಮತ್ತು ಬಿಕಾಂ ಅಂತಿಮ ವಿದ್ಯಾರ್ಥಿಗಳಿಗಾಗಿ ‘ಎಲಿವೆಟ್-ಸ್ಕಿಲ್ಸ್ ಆನ್‌ಕ್ಯಾಂಪಸ್’ ಕೋರ್ಸ್‌ನ್ನು ಶ್ರೀಕುಮಾರೇಶ್ವರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಪ್ರಾರಂಭ ಮಾಡಿದ್ದು, ಅತ್ಯಂತ ಸಂತೋಷದ ವಿಷಯ. ವಿದ್ಯಾರ್ಥಿಗಳು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ದೇಶಪಾಂಡೆ ಫೌಂಡೇಶನ್ ತಂತ್ರಜ್ಞಾನ ವಿಭಾಗದ ಮುಖ್ಯಸ್ಥ ರಾಘವೇಂದ್ರ ಮುಖ್ಯ ಅತಿಥಿಗಳಾಗಿ ಮಾತನಾಡಿ, ಗ್ರಾಮೀಣ ವಿದ್ಯಾರ್ಥಿಗಳು ಪಠ್ಯ ವಿಷಯಗಳನ್ನು ಚೆನ್ನಾಗಿ ಅಭ್ಯಸಿಸಿ ಉತ್ತಮ ಅಂಕಗಳನ್ನು ಗಳಿಸಿದರೂ ಕೂಡ ಕೌಶಲ್ಯಗಳು ಹಾಗೂ ಗುರಿ-ಉದ್ದೇಶಗಳನ್ನು ಹೊಂದುವಿಕೆಯ ಕೊರತೆಯಿಂದ ಜೀವನದಲ್ಲಿ ಸಾಫಲ್ಯ ಹೊಂದಲು ಹಿಂಜರಿಕೆಯಾಗಿದೆ. ಇಂತಹ ಕೊರತೆಯನ್ನು ನೀಗಿಸಲು ಎಲಿವೇಟ್‌ನಂತಹ ಕೋರ್ಸಗಳು ಸಹಕಾರಿಯಾಗಿ ವಿದ್ಯಾರ್ಥಿಗಳಿಗೆ ಅವರ ಓದು ಮುಗಿಯುವುದರೊಳಗೆ ಉದ್ಯೋಗ ದೊರಕಿಸಿಕೊಳ್ಳಲು ಸಾಧ್ಯವೆಂದರು.
ಇನ್ನೋರ್ವ ಅತಿಥಿ ದೇಶಪಾಂಡೆ ಫೌಂಡೇಶನ್ ಸೀನಿಯರ್ ಮ್ಯಾನೇಜರ್ ಪ್ರಸನ್ನ ಕುಲಕರ್ಣಿ ಮಾತನಾಡಿ, ಭಾಷೆಗಳನ್ನು ಕಲಿತು ಪ್ರಭುತ್ವ ಸಾಧಿಸುವುದರ ಮೂಲಕ ವ್ಯಕ್ತಿತ್ವ ಉನ್ನತಿಕರಿಸಿಕೊಳ್ಳಲು ಎಲಿವೇಟ್ ಕೋರ್ಸ್ ಉಪಯುಕ್ತವಾಗುತ್ತದೆ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜು ಪ್ರಾಂಶುಪಾಲ ಪ್ರೊ| ಸಿ.ಮಂಜುನಾಥ, ನಮ್ಮ ಗ್ರಾಮೀಣ ವಿದ್ಯಾರ್ಥಿಗಳು ಕಚ್ಚಾ ಡೈಮಂಡ್ ಇದ್ದ ಹಾಗೆ ಎಲಿವೇಟ್ ಕೋರ್ಸ್ ನಮ್ಮ ವಿದ್ಯಾರ್ಥಿಗಳನ್ನು ಫಾಲೀಸ್ ಮಾಡಿ ಕೌಶಲ್ಯವಂತರನ್ನಾಗಿಸಿ ಉದ್ಯೋಗವಂತರನ್ನಾಗಿ ಮಾಡುವಲ್ಲಿ ಸಹಕಾರಿಯಾಗುತ್ತದೆ ಎಂದರು.
ಕಾಲೇಜಿನ ಪ್ಲೇಸ್‌ಮೆಂಟ್ ಆಫೀಸರ್ ಡಾ| ಪ್ರಕಾಶ ಹೊಳೇರ ಪ್ರಾಸ್ತಾವಿಕ ಮಾತನಾಡಿದರು. ಶ್ರೀಲಕ್ಷ್ಮೀ ಪಾಟೀಲ ಮತ್ತು ಕೀರ್ತನಾ ಪೂಜಾರ ಪ್ರಾರ್ಥಿಸಿದರು. ಅರುಣಾ ಬಾಳೂರ ಸ್ವಾಗತಿಸಿದರು. ಪಾರ್ವತಿ ಮೂಲಿಮನಿ ನಿರೂಪಿಸದರು. ಪ್ರತಿಭಾ ಕುರಬರ ವಂದಿಸಿದರು.