Advertisement

ಸೋರುತಿಹುದು ಶಾಲೆ ಛಾವಣಿ

05:19 PM Jun 03, 2018 | |

ಹೊಳಲ್ಕೆರೆ: ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ಸರ್ಕಾರ ಕೋಟ್ಯಂತರ ರೂ. ವ್ಯಯಿಸುತ್ತಿದ್ದರೂ ಶಾಲೆಗಳಿಗೆ ಸರ್ಕಾರಿ
ಸೌಲಭ್ಯ ಮರೀಚಿಕೆಯಾಗಿದೆ. ಅಂತಹ ಮೂಲ ಸೌಕರ್ಯ ವಂಚಿತ ಶಾಲೆಗಳಲ್ಲಿ ತಾಲೂಕಿನ ರಾಮಗಿರಿ ಹೋಬಳಿಯ
ರಂಗಾಪುರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯೂ ಒಂದು.

Advertisement

ಮುರಿದು ಹೋದ ಮೇಲ್ಛಾವಣಿ, ತುಂಡಾಗಿರುವ ಹೆಂಚು, ಬಿರುಕು ಬಿಟ್ಟ ಗೋಡೆ, ಗಾಳಿ ಬಂದರೆ ಅಲ್ಲಾಡುವ ಕಿಡಕಿ ಬಾಗಿಲು, ನೀರಿಲ್ಲದ ಶೌಚಾಲಯ ಮತ್ತಿತರ ಸಮಸ್ಯೆಗಳು ಈ ಶಾಲೆಯಲ್ಲಿ ಜೀವಂತವಾಗಿವೆ. 1ರಿಂದ7 ನೇ ತರಗತಿವರೆಗೆ 104 ವಿದ್ಯಾರ್ಥಿಗಳು ಓದುತ್ತಿದ್ದಾರೆ. ಆದರೆ ಮೂಲ ಸೌಲಭ್ಯಗಳು ಮಾತ್ರ ಅವರಿಗೆ ದೊರೆತಿಲ್ಲ. ಎಡೆಬಿಡದೆ ಸುರಿಯುತ್ತಿರುವ ಮಳೆ ಶಾಲೆಯ ವಿದ್ಯಾರ್ಥಿಗಳಿಗೆ ಶಾಪವಾಗಿ ಪರಿಣಮಿಸಿದೆ. ಮಳೆ ಸುರಿದರೆ ಶಿಥಿಲಗೊಂಡ ಕೊಠಡಿಗಳ ಮೇಲ್ಛಾವಣಿಯಿಂದ ನೀರು ಸುರಿಯಲಾರಂಭಿಸುತ್ತದೆ. ಹಾಗಾಗಿ ಪಾಠ ಕೇಳಲು ಶಾಲೆಗೆ ಹೋಗುವ ವಿದ್ಯಾರ್ಥಿಗಳು ಶಾಲಾ ಕೊಠಡಿಗಳಲ್ಲಿ ನಿಂತಿರುವ ನೀರನ್ನು ಹೊರ ಹಾಕಲು ಹರಸಾಹಸಪಡುವಂತಾಗಿದೆ.

ಈ ಶಾಲೆಯಲ್ಲಿ ಒಟ್ಟು ಒಂಭತ್ತು ಕೊಠಡಿಗಳಿವೆ. ಗೋಡೆಗಳು ಸಂಪೂರ್ಣ ಶಿಥಿಲಗೊಂಡಿದ್ದು, ಹೆಂಚುಗಳು ಮುರಿದು ಹೋಗಿದ್ದರಿಂದ ನೀರು ಶಾಲೆಯೊಳಗೆ ಹರಿಯುತ್ತವೆ. 104 ವಿದ್ಯಾರ್ಥಿಗಳಿಗೆ ಬೇಕಾದಷ್ಟು ಕೊಠಡಿಗಳಿವೆ ಎನ್ನುವ ಸಮಾಧಾನವಿದ್ದರೂ ಕೊಠಡಿಯಲ್ಲಿರುವ ಸೂರು ವಿದ್ಯಾರ್ಥಿಗಳ ತಲೆಯ ಮೇಲೆ ಯಾವಾಗ ಬೀಳುತ್ತದೆಯೋ ಎನ್ನುವ ಆತಂಕವೂ ಕಾಡುತ್ತಿದೆ.

ಎಲ್ಲಾ ಕೊಠಡಿಗಳೂ ಶಿಥಿಲಾವಸ್ಥೆ ತಲುಪಿ ಹಲವಾರು ವರ್ಷಗಳಾಗಿದ್ದರೂ ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳು ದುರಸ್ತಿಗೆ ಮುಂದಾಗದೇ ಇರುವುದು ಮಾತ್ರ ವಿಪರ್ಯಾಸ. ಶಾಲೆಯ ಗೋಡೆಗಳು ಹಾಗೂ ಮೇಲ್ಛಾವಣಿಯ ಮರದ ತೊಲೆಗಳು ಶಕ್ತಿ ಕಳೆದುಕೊಂಡಿವೆ. ರೀಪುಗಳು ಮುರಿದು ಹೋಗಿ ಹೆಂಚುಗಳು ಒಡೆದಿವೆ.

ಮಳೆಗಾಲದಲ್ಲಿ ಕೊಠಡಿಗಳು ಸೋರುತ್ತವೆ. ನೀರಿನಿಂದ ತೊಯ್ದ ಗೋಡೆಗಳು, ಡೆಸ್ಕ್ಗಳು ಕುಸಿಯುವಂತಿವೆ. ದೊಡ್ಡ
ಅನಾಹುತ ಸಂಭವಿಸುವ ಮೊದಲು ಸಂಬಂಧಿಸಿದವರು ಎಚ್ಚೆತ್ತುಕೊಂಡು ಶಾಲೆಗೆ ಅಗತ್ಯ ಸೌಲಭ್ಯ ಕಲ್ಪಿಸಬೇಕು
ಎಂಬುದು ರಂಗಾಪುರ ಗ್ರಾಮಸ್ಥರ ಒತ್ತಾಯ.

Advertisement

ರಂಗಾಪುರ ಶಾಲೆಯ ಮೇಲ್ಛಾವಣಿಗೆ ಹಳೆದಾಗಿರುವುದರಿಂದ ನೀರು ಸೋರಿದೆ. ಮೇಲ್ಛಾವಣೆ ರಿಪೇರಿಗೆ 2 ಲಕ್ಷ ರೂ.
ಅನುದಾನಕ್ಕಾಗಿ ಪ್ರಸ್ತಾವನೆ ಸಲ್ಲಿಸಲಾಗಿದೆ. ಸಾಕಷ್ಟು ಕೊಠಡಿಗಳಿರುವುದರಿಂದ ಹೊಸ ಕೊಠಡಿ ನೀಡಿರಲಿಲ್ಲ. ಈಗ ಸೋರುತ್ತಿರುವುದರಿಂದ ಹೊಸ ಕೊಠಡಿ ಸೌಲಭ್ಯ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು. 
 ಜಗದೀಶ್‌, ಕ್ಷೇತ್ರಶಿಕ್ಷಣಾಧಿಕಾರಿ.

ಉತ್ತಮ ಶಾಲೆ ಎಂಬ ಖ್ಯಾತಿ ಗಳಿಸಿದ್ದರೂ ಸರಕಾರ ಶಾಲೆಗೆ ಬೇಕಾದ ಸೌಲಭ್ಯ ಕಲ್ಪಿಸಿಲ್ಲ. ಶಾಲಾ ಕೊಠಡಿಗಳು
ಶಿಥಿಲಗೊಂಡ ಬಗ್ಗೆ ಹಲವಾರು ಬಾರಿ ಶಿಕ್ಷಣ ಇಲಾಖೆಗೆ ಹಾಗೂ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಸೌಲಭ್ಯ ಸಿಕ್ಕಿಲ್ಲ. 
 ಜಿ.ಆರ್‌. ರವಿಕುಮಾರ್‌, ಎಸ್‌ಡಿಎಂಸಿ ಅಧ್ಯಕ್ಷ.

„ಎಸ್‌. ವೇದಮೂರ್ತಿ

Advertisement

Udayavani is now on Telegram. Click here to join our channel and stay updated with the latest news.

Next