Advertisement

ಸ್ವಂತ ಕಟ್ಟಡವಿಲ್ಲದೇ ಬಯಲಲ್ಲೇ ಪಾಠ!

02:08 PM May 27, 2022 | Team Udayavani |

ಹೊಸಪೇಟೆ: ಸ್ವಂತ ಶಾಲಾ ಕಟ್ಟಡವಿಲ್ಲದೇ ದೇವಸ್ಥಾನದ ಆವರಣದಲ್ಲಿ ಪಾಠ-ಪ್ರವಚನ ಕೇಳುವಂತ ಪರಿಸ್ಥಿತಿ ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಬೈಲುವದ್ದಿಗೇರಿ ಗ್ರಾಮದಲ್ಲಿ ನಿರ್ಮಾಣವಾಗಿದ್ದು ಮಕ್ಕಳು ಪರದಾಡುತ್ತಿದ್ದಾರೆ.

Advertisement

ಹೌದು! ವಿಜಯನಗರ ಜಿಲ್ಲಾ ಕೇಂದ್ರ ಹೊಸಪೇಟೆಯಿಂದ ಅನತಿ ದೂರದಲ್ಲಿರುವ ಬೈಲುವದ್ದಿಗೇರಿ ಗ್ರಾಮದಲ್ಲಿ ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣದ ಅಭಿಯಾನದಡಿಯಲ್ಲಿ ಉನ್ನತೀಕರಿಸಿದ ಪ್ರೌಢಶಾಲೆಯ 9 ಮತ್ತು 10ನೇ ತರಗತಿ ಮಕ್ಕಳಿಗೆ ಸುಡಗಾಡೆಪ್ಪ ತಾತನ ಮಠದ ಆವರಣವೇ ಗತಿಯಾಗಿದೆ. ಕಳೆದ ಎರಡು ವರ್ಷದ ಹಿಂದೆ ಸ್ವಂತ ಕಟ್ಟಡವಿಲ್ಲದೆ ಆರಂಭವಾದ ಪ್ರೌಢಶಾಲೆ ಗ್ರಾಮದ ಹೆದ್ದಾರಿಗೆ ಹೊಂದಿಕೊಂಡಿದ್ದ ಪ್ರಾಥಮಿಕ ಶಾಲೆಯಲ್ಲಿ 8 ಕೊಠಡಿಯ ಎರಡು ಕೋಣಿಯಲ್ಲಿ ಮಕ್ಕಳು ಪಾಠ-ಪ್ರವಚನ ಕೇಳುತ್ತಿದ್ದರು. ಶಾಲಾ ಕಟ್ಟಡದ ಎರಡು ಕೊಠಡಿಗಳು ಹೆದ್ದಾರಿ 67 ವಿಸ್ತರಣೆ ಕಾರ್ಯದಲ್ಲಿ ನೆಲಸಮಗೊಂಡವು. ಕೊನೆಗೆ ಕೊಠಡಿ ಸಮಸ್ಯೆ ಎದುರಾಗಿ ಮಠದ ಆವರಣದಲ್ಲಿ ಮಕ್ಕಳು ಗಾಳಿ-ಮಳೆ, ಚಳಿಗೆ ಪಾಠ-ಪ್ರವಚನ ಕೇಳಿ ಕಲಿಯುವಂತಾಗಿದೆ. ದೇವಸ್ಥಾನದಲ್ಲಿ ಆಗಾಗ ವಿವಾಹ ಕಾರ್ಯಕ್ರಮಗಳು, ಜಾತ್ರೆ ಮಹೋತ್ಸವ, ಸಭೆ, ಸಮಾರಂಭಗಳು ನಡೆಯುವುದು ವಾಡಿಕೆ. ಈ ದಿನಗಳಲ್ಲಿ ಶಿಕ್ಷಕರು, ಮಕ್ಕಳಿಗೆ ಶಾಲೆ ರಜೆ ಘೋಷಣೆ ಮಾಡುತ್ತಾರೆ. ಇದರಿಂದ ಮಕ್ಕಳು ಕಲಿಕೆಯಿಂದ ಹಿಂದೆ ಬೀಳುವ ಪರಿಸ್ಥಿತಿ ಎದುರಾಗಿದೆ. ಮಕ್ಕಳ ಶೌಚಾದಿಕ್ರಿಯೆಗಳಿಗೂ ಬಯಲೆ ಆಸರೆಯಾಗಿದೆ.

ಕಲಿಕೆಗಿಲ್ಲ ಪೂರಕ ವಾತಾವರಣ

ಹೆದ್ದಾರಿಯಲ್ಲಿ ಮಠ ಇರುವುದರಿಂದ ಮಕ್ಕಳಿಗೆ ಕಲಿಕೆಗೆ ಪೂರಕ ವಾತವರಣವಿಲ್ಲ. ಮಠಕ್ಕೆ ಆಗಮಿಸುವ ಭಕ್ತರ ಗದ್ದಲ ಒಂದಡೆಯಾದರೆ, ರಸ್ತೆಯಲ್ಲಿ ಎಡಬಿಡದೇ ಸಂಚಾರ ಮಾಡುವ ವಾಹನ ಸಂಚಾರದಿಂದ ಕೇಳಿದ ಪಾಠವೇ ಅರ್ಥವಾಗುವುದಿಲ್ಲ ಎಂಬದು ಮಕ್ಕಳ ಅಳಲು.

ಯಮರೂಪಿ ವಾಹನಗಳ ಭಯ

Advertisement

ಮಕ್ಕಳು ಕಲಿಕೆಗಾಗಿ ಗ್ರಾಮದಿಂದ ಹೆದ್ದಾರಿ ದಾಟಿಕೊಂಡು ಸುಡುಗಾಡೆಪ್ಪ ತಾತಾನವರ ದೇವಾಲಯಕ್ಕೆ ತೆರಳಬೇಕಾಗಿದೆ. ಹೆದ್ದಾರಿಯಲ್ಲಿ ನಿರಂತರ ವಾಹನ ಸಂಚಾರದಿಂದ ಮಕ್ಕಳು ಜಾಗೃತರಾಗಿ ರಸ್ತೆ ಹಾದು ಹೋಗಬೇಕಿದೆ. ಈ ಸಂದರ್ಭದಲ್ಲಿ ಸ್ವಲ್ಪ ಎಚ್ಚರ ತಪ್ಪಿದರೆ ಅವಘಡಗಳಾಗುವ ಸಂಭವ ಹೆಚ್ಚಿದೆ ಎಂಬುದು ಮಕ್ಕಳ ಪಾಲಕರ ಆತಂಕ.

ಶಾಲೆಗೆ ನಿವೇಶನ ಕೊರತೆ

ಕಳೆದ ಎರಡು ವರ್ಷದ ಹಿಂದೆ ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣದ ಅಭಿಯಾನದಡಿಯಲ್ಲಿ ಉನ್ನತೀಕರಿಸಿದ ಪ್ರೌಢಶಾ ಲೆಯ 8,9 ಮತ್ತು 10 ತರಗತಿಯನ್ನು ಗ್ರಾಮದ ಪ್ರಾಥಮಿಕ ಶಾಲೆಯಲ್ಲಿ ಆರಂಭಿಸಲಾಯಿತು. ಪ್ರೌಢಶಾಲೆ ಸ್ವಂತ ಕಟ್ಟಡ ನಿರ್ಮಾಣಕ್ಕಾಗಿ ಸರ್ಕಾರ ಸೂಕ್ತ ಸ್ಥಳದ ಹುಡುಕಾಟದಲ್ಲಿದೆ.

ಶಿಕ್ಷಕರ ಕೊರತೆ

ಗ್ರಾಮದ ಪ್ರಾಥಮಿಕ ಶಾಲೆಯ ಶಿಕ್ಷಕರೊಬ್ಬರನ್ನು ಪ್ರೌಢಶಾಲೆಗೆ ನಿಯೋಜನೆ ಗೊಳಿಸಲಾಗಿದೆ. ಅವರೊಂದಿಗೆ ಇನ್ನೂ ಮೂವರು ಗುತ್ತಿಗೆ ಆಧಾರದ ಶಿಕ್ಷಕರು, ಮಠದ ಅಂಗಳದಲ್ಲಿ ಪಾಠ ಮಾಡುತ್ತಿದ್ದಾರೆ. ಶೀಘ್ರವೇ ಗ್ರಾಮದಲ್ಲಿ ಶಾಲಾ ಕಟ್ಟಡ ನಿರ್ಮಾಣ ಮಾಡಬೇಕು. ಇಲ್ಲವಾದಲ್ಲಿ ಗ್ರಾಮದ ಸಮೀಪದ ಧರ್ಮಸಾಗರ ಗ್ರಾಮಕ್ಕೆ ಶಾಲೆಯನ್ನು ಸ್ಥಳಾಂತರಿಸಬೇಕು ಎಂಬುದು ಗ್ರಾಮಸ್ಥರು ಒತ್ತಾಸೆಯಾಗಿದೆ.

ಬೈಲುವದ್ದಿಗೇರಿ ಗ್ರಾಮದ ಸುತ್ತಮುತ್ತಲಿನ ಗ್ರಾಮದ ಮಕ್ಕಳ ವ್ಯಾಸಂಗಕ್ಕಾಗಿ ಗ್ರಾಮದಲ್ಲಿ ಉನ್ನತೀಕರಿಸಿದ ಪ್ರೌಢಶಾಲೆಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಕಳೆದ ಎರಡು ವರ್ಷದ ಹಿಂದೆ ಪ್ರಾಥಮಿಕ ಶಾಲೆಯಲ್ಲಿ ಆರಂಭಿಸಿತು. ಶಾಲೆಯ ಕೆಲ ಕೊಠಡಿಗಳು ಹೆದ್ದಾರಿ ವಿಸ್ತರಣೆಯಲ್ಲಿ ನೆಲಸಮಗೊಂಡವು. ಅಂದಿನಿಂದ ಪ್ರೌಢಶಾಲಾ ಮಕ್ಕಳು ಸುಡುಗಾಡೆಪ್ಪ ಮಠದ ಅಂಗಳದಲ್ಲಿ ಪಾಠ-ಪ್ರವಚನ ಕಲಿಯುತ್ತಿದ್ದಾರೆ. ಸರ್ಕಾರ ಶೀಘ್ರವೇ ಶಾಲೆಗೆ ಸ್ವಂತ ಕಟ್ಟಡವಾಗಲಿ ಅಥವಾ ಧರ್ಮಸಾಗರಕ್ಕೆ ಶಾಲೆಯನ್ನು ಸ್ಥಳಾಂತರ ಮಾಡಬೇಕು. ದಿನೇಶ್‌, ಸದಸ್ಯರು, ಬೈಲುವದ್ದಿಗೇರಿ ಗ್ರಾಮ ಪಂಚಾಯಿತಿ

ಬೈಲುವದ್ದಿಗೇರಿ ಗ್ರಾಮದಲ್ಲಿ ಉನ್ನತೀಕರಿಸಿದ ಸರ್ಕಾರಿ ಪ್ರೌಢಶಾಲೆ ಮಕ್ಕಳಿಗೆ ಕೊಠಡಿಗಳ ಕೊರತೆ ಇದೆ. ಈ ಕುರಿತು ಸೋಮವಾರ ಶಾಲೆಗೆ ಭೇಟಿ ನೀಡಿ ಪರಿಶೀಲಿಸಲಾಗುವುದು. ಗ್ರಾಮದಲ್ಲಿ ಸರ್ವೇ ನಂ. 44ರ 7.9 ಎಕರೆ ಪ್ರದೇಶದಲ್ಲಿ ಶಾಲೆ ಕಟ್ಟಡ ನಿರ್ಮಾಣಕ್ಕೆ ನಿವೇಶನ ಕಲ್ಪಿಸಲು ಜಿಲ್ಲಾಡಳಿತಕ್ಕೆ ಮನವಿ ಮಾಡಿಕೊಳ್ಳಲಾಗಿದೆ. ಶೀಘ್ರದಲ್ಲಿ ನಿವೇಶನ ದೊರಕಲಿದೆ. ಬಳಿಕ ಸಾರ್ವಜನಿಕ ಇಲಾಖೆಯಿಂದ ಕಟ್ಟಡ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು. ಉತ್ತಂಗಿ ಕೊಟ್ರೇಶ್‌, ಉಪನಿರ್ದೇಶಕರು, ಸಾರ್ವಜನಿಕ ಶಿಕ್ಷಣ ಇಲಾಖೆ

ಪಿ. ಸತ್ಯನಾರಾಯಣ

Advertisement

Udayavani is now on Telegram. Click here to join our channel and stay updated with the latest news.

Next