ಹಾವೇರಿ: ಇಲ್ಲಿಯ ಜಿಲ್ಲಾ ಆಸ್ಪತ್ರೆಯಲ್ಲಿ ಸ್ಕ್ಯಾನಿಂಗ್ ಮಾಡುವ ತಜ್ಞ ವೈದ್ಯರು ಇಲ್ಲದೇ ಬಡ ಗರ್ಭಿಣಿಯರು ಅನಿವಾರ್ಯವಾಗಿ ದುಬಾರಿ ವೆಚ್ಚ ತೆತ್ತು ಖಾಸಗಿ ಕೇಂದ್ರಗಳಲ್ಲಿ ಸ್ಕ್ಯಾನಿಂಗ್‌ಮಾಡಿಸಿಕೊಳ್ಳುವ ಪರಿಸ್ಥಿತಿ ಎದುರಾಗಿದ್ದು ಬಡವರು ಪರದಾಡುವಂತಾಗಿದೆ.
ಜಿಲ್ಲಾಸ್ಪತ್ರೆಯಲ್ಲಿ ಇತ್ತೀಚೆಗೆ ಹೊಸದಾಗಿ ಆರಂಭವಾಗಿರುವ ಮಕ್ಕಳು ಮತ್ತು ಮಹಿಳೆಯರ ವಿಭಾಗದಲ್ಲಿ ಸ್ಕ್ಯಾನಿಂಗ್ ಮಾಡಲಾಗುತ್ತಿತ್ತು. ಆದರೆ, ಕಳೆದ ಒಂದು ವರ್ಷದಿಂದ ಸ್ಕ್ಯಾನಿಂಗ್ ವೈದ್ಯರಿಲ್ಲ ಎಂಬ ಕಾರಣಕ್ಕಾಗಿ ಸ್ಕ್ಯಾನಿಂಗ್‌ಬಂದ್ ಮಾಡಲಾಗಿದೆ. ಇಲ್ಲಿ ಈ ಹಿಂದೆ ಕಾರ್ಯನಿರ್ವಹಿಸುತ್ತಿದ್ದ ರೇಡಿಯಾಲಜಿಸ್ಟ್ ವರ್ಗಾವಣೆ ಮಾಡಿಸಿಕೊಂಡು ಹೋಗಿದ್ದು ತಜ್ಞರು ಇಲ್ಲದೇ ಬಡವರು ಪರದಾಡುವಂತಾಗಿದೆ.
ನಿತ್ಯ ಜಿಲ್ಲೆಯ ವಿವಿಧೆಡೆಯಿಂದ 80ಕ್ಕೂ ಹೆಚ್ಚು ಗರ್ಭಿಣಿಯರು ಸ್ಕ್ಯಾನಿಂಗ್‌ಗಾಗಿ ಬರುತ್ತಾರೆ. ವೈದ್ಯರ ಸಲಹೆ ಮೇರೆಗೆ ಹೆರಿಗೆಗೂ ಮುನ್ನ ಅನೇಕ ಬಾರಿ ಸ್ಕ್ಯಾನಿಂಗ್‌ಮಾಡಿಸಬೇಕಾಗುತ್ತದೆ. ಗರ್ಭದಲ್ಲಿ ತೊಡಕು ಇದ್ದರೆ ತಿಳಿದುಕೊಳ್ಳಲು ನಿಗದಿತ ಅವ ಧಿಗೊಮ್ಮೆ ಸ್ಕ್ಯಾನಿಂಗ್ ಮಾಡಿಸುವುದು ಕಡ್ಡಾಯವೂ ಆಗಿದೆ. ಆದರೆ, ಜಿಲ್ಲಾಸ್ಪತ್ರೆಯಲ್ಲಿ ಉಚಿತವಾಗಿ ದೊರೆಯುತ್ತಿದ್ದ ಸ್ಕ್ಯಾನಿಂಗ್ ಸೌಲಭ್ಯ ಈಗ ವೈದ್ಯರಿಲ್ಲದೇ ಸ್ಥಗಿತಗೊಂಡಿರುವುದು ಬಡವರ ಬವಣೆ ಹೆಚ್ಚಿಸಿದೆ.
ವೈದ್ಯರು ಬರುತ್ತಿಲ್ಲ: ಜಿಲ್ಲಾಸ್ಪತ್ರೆಗೆ ರೇಡಿಯಾಲಜಿಸ್ಟ್ ಹುದ್ದೆ ಖಾಲಿಯಿದ್ದು, ಇಲ್ಲಿಗೆ ಯಾವ ವೈದ್ಯರೂ ವರ್ಗಾವಣೆ ಮಾಡಿಸಿಕೊಂಡು ಬರುತ್ತಿಲ್ಲ. ಹೊರಗುತ್ತಿಗೆ ಆಧಾರದಲ್ಲಿ ಖಾಸಗಿ ವೈದ್ಯರ ಸೇವೆ ಪಡೆಯಲು ಅವಕಾಶವಿದ್ದರೂ ಖಾಸಗಿ ವೈದ್ಯರು ಬರಲು ಒಪ್ಪುತ್ತಿಲ್ಲ. ಈ ಹಿಂದೆ ಸ್ಥಳೀಯ ವೈದ್ಯರೊಬ್ಬರು ತಿಂಗಳಿಗೆ 1.10 ಲಕ್ಷ ರೂ. ಗೌರವಧನದ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಆದರೆ, ಈಗ ಅವರೂ ಬರಲು ಒಪ್ಪುತ್ತಿಲ್ಲ ಎನ್ನಲಾಗಿದೆ. ನಿತ್ಯ ಬೆಳಗ್ಗೆಯಿಂದ ಸಂಜೆವರೆಗೆ ನೂರಾರು ಜನರ ಸ್ಕ್ಯಾನಿಂಗ್‌ಮಾಡಿದರೂ ಸಿಗುವುದು ಕಡಿಮೆ ವೇತನ ಎಂಬುದು ಅವರ ವಾದ. ಅದಕ್ಕಾಗಿ ಮಾಸಿಕ ಗೌರವಧನಕ್ಕಿಂತ ಪ್ರತಿ ಸ್ಕ್ಯಾನಿಂಗ್‌ಗೆ ದರ ನಿಗದಿ ಮಾಡಬೇಕು ಎಂಬ ಬೇಡಿಕೆಯಿದೆ. ಹಾಗಾದರೆ ಮಾಸಿಕ ನಾಲ್ಕೈದು ಲಕ್ಷ ರೂ. ಸಂಪಾದಿಸಬಹುದು. ಇದನ್ನು ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ತೀರ್ಮಾನಿಸಬೇಕಾಗುತ್ತದೆ. ಆದರೆ, ಸದ್ಯಕ್ಕೆ ಜಿಲ್ಲಾಸ್ಪತ್ರೆ ಸರ್ಜನ್ ಇನ್ನೂ ಯಾರ ಹೆಸರನ್ನೂ ಶಿಫಾರಸು ಮಾಡಿಲ್ಲ.
ಖಾಸಗಿ ಲಾಬಿ ಶಂಕೆ: ಸರ್ಕಾರಿ ಆಸ್ಪತ್ರೆಯಲ್ಲಿ ಸ್ಕ್ಯಾನಿಂಗ್‌ವೈದ್ಯರು ಇಲ್ಲದೇ ಇರುವುದನ್ನು ಖಾಸಗಿ ಸ್ಕ್ಯಾನಿಂಗ್‌ಕೇಂದ್ರಗಳು ದುರ್ಬಳಕೆ ಮಾಡಿಕೊಳ್ಳುತ್ತಿದ್ದು, ದುಬಾರಿ ದರದಲ್ಲಿ ಸ್ಕ್ಯಾನಿಂಗ್ ಮಾಡುತ್ತಿವೆ. ಖಾಸಗಿ ಸ್ಕ್ಯಾನಿಂಗ್ ಕೇಂದ್ರಕ್ಕೆ ಹೋದರೆ 500 ರಿಂದ ಸಾವಿರ ರೂ.ವರೆಗೂ ಹಣ ನೀಡಬೇಕಾಗಿದ್ದು ಬಡ ರೋಗಿಗಳು ಖಾಸಗಿ ಸ್ಕ್ಯಾನಿಂಗ್ ಕೇಂದ್ರಗಳಿಗೆ ಹೋಗುವ ಅನಿವಾರ್ಯತೆ ನಿರ್ಮಾಣವಾಗಿದೆ.
ಜಿಲ್ಲಾಸ್ಪತ್ರೆ ರೇಡಿಯಾಲಜಿಸ್ಟ್ ಹುದ್ದೆಗೆ ಖಾಸಗಿ ವೈದ್ಯರೂ ಸಿಗದಿರುವುದರ ಹಿಂದೆ ಖಾಸಗಿ ಸ್ಕ್ಯಾನಿಂಗ್‌ಸೆಂಟರ್ ಗಳ ಮಸಲತ್ತು ಅಡಗಿದೆಯೇ ಎಂಬ ಅನುಮಾನ ಸಾರ್ವಜನಿಕರನ್ನು ಕಾಡುತ್ತಿದೆ. ಜಿಲ್ಲಾಸ್ಪತ್ರೆಯಲ್ಲಿ ರೇಡಿಯಾಲಜಿಸ್ಟ್ ಇಲ್ಲದಿದ್ದರೆ ಸುತ್ತಮುತ್ತ ಇರುವ ನಾಲ್ಕಾರು ಸ್ಕ್ಯಾನಿಂಗ್‌ಕೇಂದ್ರಗಳು ಬ್ಯುಸಿಯಾಗಿರುತ್ತವೆ. ದಿನಕ್ಕೆ ಒಂದು ಕೇಂದ್ರದಲ್ಲಿ 50ಕ್ಕೂ ಹೆಚ್ಚು ಜನರನ್ನು ಪರೀಕ್ಷೆ ಮಾಡಲಾಗುತ್ತಿದ್ದು, ಇದರಿಂದ ಭಾರಿ ಲಾಭ ಗಳಿಸುತ್ತಿವೆ. ಅದಕ್ಕಾಗಿ ಜಿಲ್ಲಾಸ್ಪತ್ರೆಗೆ ಯಾವುದೇ ರೇಡಿಯಾಲಜಿಸ್ಟ್ ಹೋಗದಂತೆ ಖಾಸಗಿ ಲಾಬಿ ತಡೆಯುತ್ತಿದೆ ಎಂಬ ಆರೋಪವೂ ಕೇಳಿಬಂದಿದೆ. ಒಟ್ಟಾರೆ ಜಿಲ್ಲಾಸ್ಪತ್ರೆಯಲ್ಲಿ ಸ್ಕ್ಯಾನಿಂಗ್ ಇಲ್ಲದೇ ಬಡವರು ಖಾಸಗಿ ಕೇಂದ್ರಗಳಿಗೆ ಹೋಗಿ ದುಬಾರಿ ಹಣ ನೀಡಿ ಸ್ಕ್ಯಾನಿಂಗ್ ಮಾಡಿಸಿಕೊಳ್ಳುವ ಸ್ಥಿತಿ ನಿರ್ಮಾಣವಾಗಿದ್ದು, ಈ ಬಗ್ಗೆ ಜಿಲ್ಲಾಧಿಕಾರಿ ಅಧ್ಯಕ್ಷತೆ ಸಮಿತಿ ಶೀಘ್ರದಲ್ಲಿ ಹುದ್ದೆ ಭರ್ತಿ ಮಾಡಲು ಕ್ರಮ ಕೈಗೊಳ್ಳಬೇಕಿದೆ.
ರೇಡಿಯಾಲಜಿಸ್ಟ್ ಹುದ್ದೆ ಒಂದು ವರ್ಷದಿಂದ ಖಾಲಿಯಿದೆ. ಇದರಿಂದಾಗಿ ಜಿಲ್ಲಾಸ್ಪತ್ರೆಯಲ್ಲಿ ಸ್ಕ್ಯಾನಿಂಗ್‌ಸೌಲಭ್ಯ ದೊರೆಯುತ್ತಿಲ್ಲ. ಖಾಸಗಿ ವೈದ್ಯರನ್ನು ಪ್ರತಿ ಸ್ಕ್ಯಾನಿಂಗ್ ಗೆ 300 ರೂ. ನೀಡಲು ಸರ್ಕಾರ ಒಪ್ಪಿಗೆ ಸೂಚಿಸಿದೆ. ಆದರೂ ಯಾರೂ ಸೇವೆಗೆ ಮುಂದೆ ಬರುತ್ತಿಲ್ಲ. ಶೀಘ್ರದಲ್ಲಿ ಹೊರಗುತ್ತಿಗೆ ಆಧಾರದಲ್ಲಾದರೂ ವೈದ್ಯರನ್ನು ನೇಮಕ ಮಾಡಿ ಸ್ಕ್ಯಾನಿಂಗ್‌ಸೌಲಭ್ಯ ಕಲ್ಪಿಸಲು ಪ್ರಯತ್ನಿಸಲಾಗುವುದು.
-ಡಾ| ನಾಗರಾಜ ನಾಯಕ, ಜಿಲ್ಲಾಸ್ಪತ್ರೆ ಸರ್ಜನ್
-ಎಚ್.ಕೆ. ನಟರಾಜ