Advertisement

ಸಕಲ ಸೌಲಭ್ಯವಿದ್ದರೂ ಓದುಗರೇ ಇಲ್ಲ

03:39 PM Nov 05, 2019 | Suhan S |

ಭಟ್ಕಳ: ನಗರದ ಮಧ್ಯ ಭಾಗದಲ್ಲಿ ಗ್ರಂಥಾಲಯವು ಹೊಸ ಸ್ವಂತ ಕಟ್ಟಡದೊಂದಿಗೆ ಕಾರ್ಯ ನಿರ್ವಹಿಸುತ್ತಿದ್ದು 28 ಸಾವಿರದಷ್ಟು ಪುಸ್ತಕಗಳಿವೆ, ಕನ್ನಡ, ಇಂಗ್ಲೀಷ್‌, ಹಿಂದಿ, ಉರ್ದು, ಮರಾಠಿ ಸೇರಿದಂತೆ 20ಕ್ಕೂ ಹೆಚ್ಚು ದಿನ ಪತ್ರಿಕೆಗಳು, ನಿಯತಕಾಲಿಕೆಗಳು ಬರುತ್ತಿದ್ದರೂ ಸಹ ಓದುಗರ ನಿರುತ್ಸಾಹ ಎದ್ದು ಕಾಣುತ್ತಿದೆ.

Advertisement

ನಗರದ ಗ್ರಂಥಾಲಯದಲ್ಲಿ ಸುಮಾರು 1000 ಸದಸ್ಯರು ತಮ್ಮ ನೋಂದಣಿಯನ್ನು ಮಾಡಿಕೊಂಡಿದ್ದಾರೆ. ಈ ಹಿಂದೆ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಕಥೆ ಪುಸ್ತಕ, ಕಾದಂಬರಿ ಇತ್ಯಾದಿಗಳನ್ನು ತೆಗೆದುಕೊಂಡು ಹೋಗಿ ಓದಿ ತಂದು ಕೊಡುತ್ತಿದ್ದರೆ, ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಲೈಬ್ರರಿಯತ್ತ ಮುಖ ಮಾಡುವುದೇ ಕಡಿಮೆಯಾಗಿದೆ. 28 ಸಾವಿರ ಪುಸ್ತಕಗಳಿದ್ದರೂ ದಿನವೊಂದಕ್ಕೆ ಕನಿಷ್ಠ ಐವರೂ

ಕೂಡಾ ಪುಸ್ತಕಗಳನ್ನು ತೆಗೆದುಕೊಂಡು ಹೋಗಲು ಬರುವುದು ಕಷ್ಟ ಸಾಧ್ಯ ಎನ್ನುವಂತಾಗಿದ್ದರೆ, ದಿನ ನಿತ್ಯ ಪತ್ರಿಕೆಗಳನ್ನು ಓದಲು ಕನಿಷ್ಠ 50 ರಿಂದ 100 ಜನರು ಬರುತ್ತಾರೆ ಎನ್ನುವುದೇ ಸಮಾಧಾನ. ಲೈಬ್ರರಿಯಲ್ಲಿ ಕೇವಲ ಕಥೆ, ಕಾದಂಬರಿ ಪುಸ್ತಕಗಳು ಮಾತ್ರವಲ್ಲ ಅನೇಕ ಇತರೆ ಪುಸ್ತಕಗಳೂ ಕೂಡಾ ಇದ್ದು ಅವುಗಳಲ್ಲಿ ಜನರಲ್‌ ನ್ಯಾಲೆಡ್ಜ್ ರೈಲ್ವೇ, ಎಫ್‌ಸಿಡಿ, ಎಸ್‌ಡಿಸಿ, ಬ್ಯಾಂಕಿಂಗ್‌ ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷಾ ಪುಸ್ತಕಗಳೂ ಕೂಡಾ ಲಭ್ಯವಾಗುವುದರಿಂದ ಪರೀಕ್ಷೆಗಳು ಇದ್ದಾಗ ಯುವಕರು ಅನೇಕರು ಬಂದು ಸದಸ್ಯತ್ವ ಪಡೆದು ಇಂತಹ ಪುಸ್ತಕಗಳನ್ನು ತೆಗೆದುಕೊಂಡು ಹೋಗುವುದು ಬಿಟ್ಟರೆ ಇನ್ನಿತರ ಸಮಯದಲ್ಲಿ ಯುವಕರು ಗ್ರಂಥಾಲಯದ ಬಳಿಯಲ್ಲಿಯೂ ಸುಳಿಯುವುದಿಲ್ಲ.

ಯುವ ಸಮೂಹ ಇ-ಲೈಬ್ರರಿಯನ್ನು ನಂಬಿಕೊಂಡಿದ್ದಾರೆಯೇ ಎನ್ನುವ ಪ್ರಶ್ನೆ ಮುಡುವುದು ಸಹಜ. ಸರಕಾರ ಗ್ರಾಮೀಣ ಭಾಗದ ಜನತೆಗೆ ಅನುಕೂಲವಾಗುವಂತೆ ಪ್ರತಿ ಗ್ರಾಪಂ ಮಟ್ಟದಲ್ಲಿ ಗ್ರಾಮೀಣ ಗ್ರಂಥಾಲಯಗಳನ್ನು ತೆರೆದು ಗ್ರಾಂಥಾಲಯ ಸಹಾಯಕರನ್ನು ತಾತ್ಕಾಲಿಕ ನೆಲೆಯಲ್ಲಿ ನೇಮಕ ಮಾಡಿಕೊಂಡು ಅವರಿಗೆ ನಿಗದಿತ ಸಂಬಳ ಕೊಡಲು ಆರಂಭಿಸಿತು. ತಾಲೂಕಿನಲ್ಲಿ 16 ಗ್ರಾಪಂಗಳಿದ್ದು ಪ್ರತಿ ಗ್ರಾಪಂ ಮಟ್ಟದಲ್ಲಿಯೂ 3 ರಿಂದ 10 ಸಾವಿರ ಪುಸ್ತಕಗಳಿವೆ. ದಿನ ನಿತ್ಯ 2 ರಿಂದ 5 ದಿನ ಪತ್ರಿಕೆಗಳು, ನಿಯತಕಾಲಿಕೆಗಳು ಬರುತ್ತವೆ. ಆದರೆ ಓದುಗರೇ ಇಲ್ಲ. ಪ್ರತಿ ಗ್ರಾಪಂ ಮಟ್ಟದಲ್ಲಿ ಸರಾಸರಿ 5 ರಿಂದ 10 ಜನರು ಓದುಗರು ಭೇಟಿ ನೀಡುತ್ತಾರೆ.

ಗ್ರಾಮೀಣ ಭಾಗದಲ್ಲಿ ಕರ್ತವ್ಯ ನಿರ್ವಹಿಸುವವರಿಗೆ ಸರಿಯಾಗಿ ಸಂಬಳ ಪಾವತಿಯಾಗುತ್ತಿಲ್ಲ ಎನ್ನುವ ಕೊರಗು ಒಂದೆಡೆಯಾದರೆ, ಗ್ರಾಪಂ ಮಟ್ಟದಲ್ಲಿರುವ ಗ್ರಂಥಾಲಯಗಳನ್ನು ಇನ್ನು ಮುಂದೆ ಗ್ರಾಪಂ ನಿರ್ವಹಿಸುವುದು ಎನ್ನುವುದು ಇನ್ನೊಂದು ವಿಷಯ. ಇಲ್ಲಿ ಕಳೆದ ಹಲವಾರು ವರ್ಷಗಳಿಂದ ಅಲ್ಪ ಸಂಬಳಕ್ಕೆ ದುಡಿದು ಇದು ನಮ್ಮ ಗ್ರಂಥಾಲಯ ಎಂದು ತಿಳಿದು ಕೊಂಡಿರುವವರಿಗೆ ಮುಂದೇನು ಎನ್ನುವಂತಾಗಿದೆ.

Advertisement

ಸರಕಾರ ಗ್ರಾಂಥಾಲಯ ಇಲಾಖೆಯಿಂದ ಗ್ರಾಮ ಪಂಚಾಯತಕ್ಕೆ ಹಸ್ತಾಂತರಿಸಿದ್ದೇ ಆದಲ್ಲಿ ಈಗಿರುವ ಗ್ರಾಂಥಾಲಯ ಸಹಾಯಕರು ಎಲ್ಲಿಗೆ ಹೋಗಬೇಕು. ಗ್ರಾಮ ಪಂಚಾಯತ್‌ ಇವರನ್ನೇ ಮುಂದುವರಿಸುತ್ತದೆ ಎನ್ನುವ ಖಾತ್ರಿ ಇದೆಯೇ ಎನ್ನುವ ಪ್ರಶ್ನೆ ಕಾಡುತ್ತಿರುವುದು ಮಾತ್ರ ಸತ್ಯ

 

-ಆರ್ಕೆ, ಭಟ್ಕಳ

Advertisement

Udayavani is now on Telegram. Click here to join our channel and stay updated with the latest news.

Next