Advertisement

ಗ್ರಂಥಾಲಯಕ್ಕೆ ಓದುಗರ ಕೊರತೆ

02:08 PM Oct 30, 2019 | Suhan S |

ಹಾವೇರಿ: ಜಿಲ್ಲಾ ಕೇಂದ್ರ ಹಾವೇರಿ ನಗರದಲ್ಲಿ ಸಕಲ ಸೌಲಭ್ಯಗಳುಳ್ಳ ಮಹದೇವ ಬಣಕಾರ ಜಿಲ್ಲಾ ಕೇಂದ್ರ ಗ್ರಂಥಾಲಯವಿದೆಯಾದರೂ ಸೌಲಭ್ಯಕ್ಕೆ ತಕ್ಕಂತೆ ಓದುಗರ ಸಂಖ್ಯೆ ಇಲ್ಲದಿರುವುದೇ ದೊಡ್ಡ ಕೊರಗು ಆಗಿದೆ.

Advertisement

ಸಾಮಾನ್ಯವಾಗಿ ಬಹಳಷ್ಟು ಕಡೆಗಳಲ್ಲಿ ಓದುವವರು ಹೆಚ್ಚಿರುತ್ತಾರೆ. ಪುಸ್ತಕ, ಓದಲು ಕುರ್ಚಿ, ಕಟ್ಟಡ ಸೇರಿದಂತೆ ಇತರ ಸಮರ್ಪಕ ವ್ಯವಸ್ಥೆ ಇರುವುದಿಲ್ಲ ಎನ್ನುವ ದೂರುಗಳೇ ಹೆಚ್ಚಿರುತ್ತವೆ. ಆದರೆ, ಜಿಲ್ಲಾ ಗ್ರಂಥಾಲಯದಲ್ಲಿ ಓದಲು ಸಕಲ ಸೌಲಭ್ಯವಿದೆ. ಆದರೆ, ಓದುವವರಿಲ್ಲದ ಪರಿಸ್ಥಿತಿ ಎದುರಿಸುತ್ತಿದೆ. ಗ್ರಂಥಾಲಯಕ್ಕೆ 2014ರಲ್ಲಿ ಅಂದಾಜು 4 ಕೋಟಿ ರೂ.ಗಳಲ್ಲಿ ಹೊಸ ಕಟ್ಟಡ ಕಟ್ಟಲಾಗಿದೆ.

ಇದರಲ್ಲಿ ಜಿಲ್ಲಾ ಮುಖ್ಯ ಗ್ರಂಥಾಲಯ ಅಧಿಕಾರಿ ಕಚೇರಿ, ಶಾಖಾ ಗ್ರಂಥಾಲಯ, ಸ್ಪರ್ಧಾತ್ಮಕ ಪರೀಕ್ಷೆ ಅಧ್ಯಯನ ವಿಭಾಗ, ಓದುವ ಕೊಠಡಿ, ಅಧ್ಯಯನ ಕೊಠಡಿ, ಪತ್ರಿಕೆ ಓದುವ ವಿಭಾಗ, ಸಭಾಭವನ ಹೀಗೆ ಸಕಲ ಸೌಲಭ್ಯಗಳು ಇವೆ. ಡಿಜಿಟಲ್‌ ಗ್ರಂಥಾಲಯವೂ ಇದ್ದು, ಅದಕ್ಕಾಗಿ ಆರು ಕಂಪ್ಯೂಟರ್‌ಗಳನ್ನು ಇಡಲಾಗಿದೆ. ಆಸಕ್ತರು ಲಿಂಕ್‌ ಬಳಸಿ ಓದಬಹುದಾಗಿದೆ. ಗ್ರಂಥಾಲಯದಲ್ಲಿ ಒಟ್ಟು ಆರು ಹುದ್ದೆಗಳಿದ್ದು, ಒಬ್ಬರು ಮುಖ್ಯ ಗ್ರಂಥಾಲಯ ಅಧಿಕಾರಿ, ಇಬ್ಬರು ಗ್ರಂಥಾಲಯ ಸಹಾಯಕರು, ಇಬ್ಬರು ಗ್ರಂಥಾಲಯ ಸಹವರ್ತಿಗಳು, ಒಬ್ಬ ಗುಮಾಸ್ತ ಕಾರ್ಯನಿರ್ವಹಿಸುತ್ತಿದ್ದಾರೆ. ಹೀಗೆ ಸಕಲ ಸೌಲಭ್ಯವಿರುವ ಮಹದೇವ ಬಣಕಾರ ಜಿಲ್ಲಾ ಕೇಂದ್ರ ಗ್ರಂಥಾಲಯದಲ್ಲಿ ಬರೋಬ್ಬರಿ 29,730 ಪುಸ್ತಕಗಳು ಇವೆ. ನಿತ್ಯ 22 ಪತ್ರಿಕೆಗಳ ಎರಡು ಪ್ರತಿಗಳು, 42 ಮ್ಯಾಗಜಿನ್‌ಗಳು ತರಿಸಲಾಗುತ್ತದೆ. ಆದರೆ, ಗ್ರಂಥಾಲಯದ ಸದಸ್ಯರ ಸಂಖ್ಯೆ ಇರುವುದು ಕೇವಲ 2,091. ಪುಸ್ತಕ, ವಿವಿಧ ಗ್ರಂಥ ಓದುವವರಿಗಿಂತ ಪತ್ರಿಕೆ ಓದುವವರ ಸಂಖ್ಯೆ ಅಧಿಕವಾಗಿದ್ದು, ಶೇ. 75ರಷ್ಟು ಜನರು ಪತ್ರಿಕೆ ಓದಲು ಗ್ರಂಥಾಲಯಕ್ಕೆ ಬರುತ್ತಾರೆ.

ಬೇಡಿಕೆಯೂ ಇದೆ: ಜಿಲ್ಲಾ ಗ್ರಂಥಾಲಯ ನಗರದ ಮಾರುಕಟ್ಟೆ ಪ್ರದೇಶದಲ್ಲಿದೆ. ಇದು ನಗರದ ವಿವಿಧ ವಾರ್ಡ್‌ಗಳಲ್ಲಿರುವ ಜನರಿಗೆ ಈ ಸ್ಥಳ ದೂರವಾಗುತ್ತದೆ. ಗ್ರಂಥಾಲಯ ದೂರವಿದೆ ಎಂಬ ಕಾರಣಕ್ಕಾಗಿಯೇ ಗ್ರಂಥಾಲಯಕ್ಕೆ ಬರುವ ಓದುಗರ ಸಂಖ್ಯೆ ಕಡಿಮೆಯಾಗಿದೆ ಎಂಬ ಕಾರಣವೂ ಇದೆ. ಹೀಗಾಗಿ ಜಿಲ್ಲಾ ಕೇಂದ್ರ ಹಾವೇರಿಯಲ್ಲಿ ನಗರ ಗ್ರಂಥಾಲಯ ಪ್ರಾಧಿಕಾರ ರಚನೆ ಆಗಬೇಕು. ಪ್ರಾಧಿಕಾರ ರಚನೆಯಾಗುವುದರಿಂದ ವಾರ್ಡ್‌ ಮಟ್ಟದಲ್ಲಿಯೂ ಗ್ರಂಥಾಲಯ ಸ್ಥಾಪನೆಗೆ ಅವಕಾಶ ಸಿಗುತ್ತದೆ. ಆಗ ಆಯಾ ವಾರ್ಡಿನ ಜನರು ಸಮೀಪದ ಗ್ರಂಥಾಲಯದಲ್ಲಿಯೇ ಪುಸ್ತಕ, ಪತ್ರಿಕೆ ಓದಬಹುದು ಎಂಬ ನಿರೀಕ್ಷೆ ಹೊಂದಲಾಗಿದೆ ಎಂಬ ಬೇಡಿಕೆ ಇದೆ. ಜಿಲ್ಲೆಯ ರಾಣಿಬೆನ್ನೂರಿನಲ್ಲಿ ನಗರ ಗ್ರಂಥಾಲಯ ಪ್ರಾಧಿಕಾರವಿದ್ದು, ಜಿಲ್ಲಾ ಕೇಂದ್ರದಲ್ಲಿಯೂ ಆಗಬೇಕು ಎಂಬ ಪ್ರಸ್ತಾವನೆ ಸರ್ಕಾರದ ಮಟ್ಟದಲ್ಲಿದೆ.

ಅದೇ ರೀತಿ ಹಾವೇರಿಯ ಮಂಜುನಾಥ ನಗರದಲ್ಲೊಂದು ಶಾಖಾ ಗ್ರಂಥಾಲಯ ಸ್ಥಾಪನೆಗೆ ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇನ್ನು ಮಾರುಕಟ್ಟೆ ಪ್ರದೇಶದಲ್ಲಿ ಸದ್ಯ ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿರುವ ಶಾಖಾ ಗ್ರಂಥಾಲಯಕ್ಕೆ ಸ್ವಂತ ಸ್ಥಳ ಹಾಗೂ ಕಟ್ಟಡದ ಬೇಡಿಕೆಯೂ ಇದೆ. ಇದರ ಜತೆಗೆ ನಗರದ ಹಳೇ ನಗರಸಭೆ ಕಚೇರಿ ಎದುರು ಮಕ್ಕಳ ಗ್ರಂಥಾಲಯವಿದೆ. ಆ ಕಟ್ಟಡ ಬಹಳ ಹಳೆಯದಾಗಿದ್ದು ಮಳೆಗಾಲದಲ್ಲಿ ಸೋರುತ್ತದೆ. ವಿಶೇಷವಾಗಿ ಇದು ಮಕ್ಕಳ ಗ್ರಂಥಾಲಯವಾಗಿದ್ದರೂ ಇಲ್ಲಿ ಮಕ್ಕಳನ್ನು ಆಕರ್ಷಿಸುವ ಉದ್ಯಾನವನ, ಆಟಿಕೆ, ಮಕ್ಕಳ ವಿಶೇಷ ಆಕರ್ಷಕ ಪುಸ್ತಕಗಳು ಇಲ್ಲ. ಇದನ್ನು ಆಕರ್ಷಕಗೊಳಿಸಬೇಕು ಎಂಬ ಬೇಡಿಕೆಯೂ ಇದೆ.

Advertisement

 

-ಎಚ್‌.ಕೆ. ನಟರಾಜ

Advertisement

Udayavani is now on Telegram. Click here to join our channel and stay updated with the latest news.

Next