ರಾಮನಗರ: ಕಳೆದ ವರ್ಷ ಮಳೆ ಅಬ್ಬರದಿಂದ ನಲುಗಿದ್ದ ರಾಮನಗರ ಜಿಲ್ಲೆ ಈಬಾರಿ ಅನಾವೃಷ್ಟಿಯಿಂದ ಸಂಕಷ್ಟಕ್ಕೆ ಸಿಲುಕಿದೆ. ಮುಂಗಾರು ಮಳೆ ಕೈಕೊಟ್ಟಿದೆ. ಹವಾಮಾನ ಇಲಾಖೆ ಶೇ.44 ಮುಂಗಾರು ಕೊರತೆಯಾಗಿದೆ ಎಂದು ಮಾಹಿತಿ ನೀಡಿದ್ದು, ಜಿಲ್ಲೆಯಲ್ಲಿ ಶೇ.36 ಮಾತ್ರ ಬಿತ್ತನೆ ನಡೆದಿದೆ. ಇದರೊಂದಿಗೆ ಜಿಲ್ಲಾದ್ಯಂತ ಬರದ ಛಾಯೆ ಆವರಿಸಿದೆ.
ಕೃಷಿ ಇಲಾಖೆ ಮಾಹಿತಿಯಂತೆ ಆ.21 ಬಿತ್ತನೆಗೆ ಕೊನೆಯ ದಿನವಾಗಿದ್ದು, ಈ ವೇಳೆಗಾಗೇ ಬಿತ್ತನೆ ಕಾರ್ಯ ಪೂರ್ಣಗೊಳ್ಳ ಬೇಕಿತ್ತು. ಆದರೆ, ಶೇ.60 ಕ್ಕಿಂತ ಹೆಚ್ಚು ರೈತರು ಇನ್ನೂ ಭೂಮಿಯನ್ನು ಬಿತ್ತನೆಗೆ ಹದಗೊಳಿಸಿಲ್ಲ. ಆಗಸ್ಟ್ ತಿಂಗಳಲ್ಲಿ ಶೇ. 61 ಮಳೆ ಕೊರತೆಯಾಗಿದ್ದು, ಸೆಪ್ಟಂಬರ್‌ನಲ್ಲಿ ಮಳೆ ಬರುವ ನಂಬಿಕೆಯೂ ಇಲ್ಲವಾಗಿದೆ.
ನಡೆಯದ ಬಿತ್ತನೆ ಕಾರ್ಯ: ಜಿಲ್ಲೆಯಲ್ಲಿ ಮಾಗಡಿ ತಾಲೂಕನ್ನು ಹೊರತು ಪಡಿಸಿದರೆ ಉಳಿದ ಮೂರು ತಾಲೂಕುಗಳಲ್ಲಿ ಬಿತ್ತನೆ ಪ್ರಮಾಣ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದೆ. ಮಾಗಡಿಯಲ್ಲಿ ಶೇ.77 ಬಿತ್ತನೆ ನಡೆದಿದ್ದು, ರಾಮನಗರ ತಾಲೂಕಿನಲ್ಲಿ ಶೇ.26.69 ಬಿತ್ತನೆ ನಡೆದಿದೆ. ಚನ್ನಪಟ್ಟಣದಲ್ಲಿ ಶೇ.3.66, ಕನಕಪುರದಲ್ಲಿ ಶೇ.7.58 ಬಿತ್ತನೆ ನಡೆದಿದ್ದು ಕೃಷಿ ಚಟುವಟಿಕೆ ಸ್ತಬ್ಧಗೊಂಡಿದೆ.
ಒಣಗುತ್ತಿದೆ ಪೈರು: ಮಾಗಡಿ ತಾಲೂಕಿನಲ್ಲಿ ಪ್ರತಿವರ್ಷ ಬೇಗ ಬಿತ್ತನೆ ಕಾರ್ಯ ಆರಂಭವಾಗುವುದು ವಾಡಿಕೆ. ಅದರಂತೆ ಈಸಾಲಿನಲ್ಲಿ ಮಾಗಡಿ ತಾಲೂಕಿನಲ್ಲಿ ಶೇ.77 ಭೂಮಿಯಲ್ಲಿ ಬಿತ್ತನೆ ಕಾರ್ಯ ನಡೆದಿದ್ದು, ಬೆಳೆದು ನಿಂತಿರುವ ಸಣ್ಣ ಪೈರುಗಳು ಮಳೆ ಕೊರತೆಯಿಂದ ಒಣಗಲಾರಂಭಿಸಿವೆ. ಇನ್ನೊಂದು ವಾರದಲ್ಲಿ ಮಳೆ ಬಾರದೇ ಹೋದಲ್ಲಿ ಪೈರುಗಳು ಒಣಗಲಿದ್ದು, ರೈತರು ಸಂಕಷ್ಟಕ್ಕೆ ಸಿಲುಕಲಿದ್ದಾರೆ. ಇದೇ ರೀತಿ ಜಿಲ್ಲೆಯಲ್ಲಿ ಬಿತ್ತನೆಯಾಗಿರುವ ಪ್ರದೇಶಗಳಲ್ಲಿ ಸಮ ಮಳೆ ಕೊರತೆಯಿಂದಾಗಿ ಪೈರುಗಳು ಒಣಗುವ ಆತಂಕ ಎದುರಾಗಿದೆ.
ಕೆರೆ ಜಲಾಶಯಗಳು ಖಾಲಿ: ಮಳೆ ಕೊರತೆಯಿಂದಾಗಿ ಜಿಲ್ಲೆಯ ಕೆರೆಗಳು ಮತ್ತು ಜಲಾಶಯಗಳು ಖಾಲಿಯಾಗುತ್ತಿವೆ. ಜಿಲ್ಲೆಯಲ್ಲಿ 102 ಸಣ್ಣ ನೀರಾವರಿ ಇಲಾಖೆಗೆ ಒಳಪಟ್ಟಿರುವ ದೊಡ್ಡ ಕೆರೆಗಳಿವೆ. ಈ ಕೆರೆಗಳ ಪೈಕಿ ಶೇ.60 ಕೆರೆಗಳಲ್ಲಿ ಶೇ.30ರಿಂದ 40 ನೀರಿದ್ದು, ಉಳಿದ ಕೆರೆಗಳಲ್ಲಿ ಈ ಪ್ರಮಾಣ ಇನ್ನೂ ಕಡಿಮೆಯಿದೆ. ಮುಂಗಾರು ಕೈಕೊಟ್ಟರೆ ಇನ್ನೆರಡು ತಿಂಗಳಲ್ಲಿ ಕೆರೆಗಳು ಬರಿದಾಗಲಿವೆ. ಇನ್ನು ಜಿಲ್ಲೆಯ ಕಣ್ವ, ಮಂಚನಬಲೆ, ವೈ.ಜಿ.ಗುಡ್ಡ, ಇಗ್ಗಲೂರು, ಹಾರೋಬೆಲೆ ಜಲಾಶಯಗಳಲ್ಲಿ ನೀರಿನ ಮಟ್ಟ ಕಡಿಮೆಯಾಗಿದೆ. ಈ ಜಲಾಶಯಗಳಿಗೆ ಒಳಹರಿವಿನ ಪ್ರಮಾಣ ಶೂನ್ಯವಾಗಿದ್ದು ನೀರಿನ ಅಭಾವ ಜಿಲ್ಲೆಯಲ್ಲಿ ತೀವ್ರಗೊಳ್ಳುವ ಸಾಧ್ಯತೆ ಹೆಚ್ಚಿದೆ.
ಬರ ಗೋಷಣೆಯಾಗಲಿ: ಜಿಲ್ಲೆಯಲ್ಲಿ ಮುಂಗಾರು ಮಳೆ ಕೈಕೊಟ್ಟಿದ್ದು, ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಪರಿಸ್ಥಿತಿ ಇದೇ ರೀತಿ ಮುಂದುವರೆದಲ್ಲಿ ಜನ ಜಾನುವಾರುಗಳ ಕುರಿಯುವ ನೀರಿಗೂ ತಾತ್ವಾರ ಎದುರಾಗಲಿದ್ದು, ಹಸುಕರುಗಳ ಮೇವಿಗೆ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ. ಸರ್ಕಾರ ರಾಮನಗರ ಜಿಲ್ಲೆಯನ್ನು ಬರಪೀಡಿತ ಪ್ರದೇಶ ಎಂದು ಘೋಷಿಸಿ ಕೂಡಲೇ ಬರಪರಿಹಾರ ಕಾರ್ಯವನ್ನು ಕೈಗೊಳ್ಳಬೇಕು. ಜಿಲ್ಲೆಯ ಜನ- ಜಾನುವಾರುಗಳ ನೆರವಿಗೆ ಧಾವಿಸಬೇಕು ಎಂದು ರೈತರು ಒತ್ತಾಯಿಸಿದ್ದಾರೆ.
ಜಿಲ್ಲೆಯಲ್ಲಿ ಗಣನೀಯವಾಗಿ ಮಳೆ ಪ್ರಮಾಣ ಕುಸಿದಿದೆ. ಅಧಿಕಾರಿಗಳ ಅಂಕಿಅಂಶವೇ ಸುಳ್ಳು, ಇಷ್ಟು ಮಿ.ಮೀಟರ್ ಮಳೆ ಆಗಿದೆ ಎಂದು ಎಲ್ಲೋ ಮಾಪನ ಇಟ್ಟು ಅಳೆದು ಇಡೀ ಜಿಲ್ಲೆಗೆ ಅನ್ವಯಿಸಲಾಗದು. ಕಚೇರಿಯಲ್ಲಿ ಕುಳಿತು ಅಧಿಕಾರಿಗಳು ಅಂಕಿ ಸಂಖ್ಯೆ ನೀಡುವುದು ನಂಬಲರ್ಹ ಮಾಹಿತಿಯಲ್ಲ. ಜಿಲ್ಲೆಯನ್ನು ಬರಪೀಡಿತ ಪ್ರದೇಶ ಎಂದು ಘೋಷಿಸಿ ತುರ್ತಾಗಿ ಬರಪರಿಹಾರ ಕಾರ್ಯ ಕೈಗೊಳ್ಳಬೇಕು. ವೈಜ್ಞಾನಿಕವಾಗಿ ಹಾನಿ ಪರಿಹಾರ ನೀಡಬೇಕು.
-ಸಿ.ಪುಟ್ಟಸ್ವಾಮಿ, ಹಿರಿಯ ರೈತ ಹೋರಾಟಗಾರ
ಮುಂಗಾರು ಮಳೆ ಕೊರತೆಯಿಂದಾಗಿ ಜಿಲ್ಲೆಯಲ್ಲಿ ಬಿತ್ತನೆ ಪ್ರಾಮಾಣ ಕುಂಟಿತವಾಗಿದೆ. ಈ ಬಗ್ಗೆ ಸರ್ಕಾರಕ್ಕೆ ವರದಿ ನೀಡಲಾಗಿದೆ. ಮುಂಗಾರು ಬಿತ್ತನೆ ಕಾರ್ಯ ಈ ವೇಳೆಗೆ ಪೂರ್ಣಗೊಳ್ಳ ಬೇಕಿತ್ತು. ಆದರೆ ಸಮರ್ಪಕವಾಗಿ ಮಳೆ ಬಾರದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಬಿತ್ತನೆ ನಡೆದಿಲ್ಲ.
-ರಾಮಕೃಷ್ಣಯ್ಯ, ಜಿಲ್ಲಾ ಜಂಟಿ ಕೃಷಿ ನಿರ್ದೇಶಕ
- ಸು.ನಾ.ನಂದಕುಮಾರ್