ಜೇವರ್ಗಿ: ತಾಲೂಕಿನಲ್ಲಿ ಮುಂಗಾರು ಉತ್ತಮವಾಗಲಿದೆ ಎಂದು ನಿರೀಕ್ಷಿಸಿದ್ದ ರೈತ ಸಮುದಾಯಕ್ಕೆ ಇದೀಗ ನಿರಾಶೆಯಾಗಿದೆ. ಕಳೆದ 15 ದಿನಗಳಿಂದ ಮಳೆರಾಯನ ಸುಳಿವೇ ಇಲ್ಲ. ಮೋಡ ಕವಿದ ವಾತಾವರಣ ಇದ್ದರೂ ಮಳೆ ಬೀಳುವ ಯಾವ ಲಕ್ಷಣವೂ ಗೋಚರಿಸುತ್ತಿಲ್ಲ. ಅಲ್ಲದೇ ರೈತರು ತಮ್ಮ ಜಮೀನಿನಲ್ಲಿ ಬಿತ್ತನೆ ಬೀಜ ಬಿತ್ತಲು ಚಾತಕ ಪಕ್ಷಿಯಂತೆ ಆಗಸದತ್ತ ಮುಖ ಮಾಡಿ ವರುಣನ ಆಗಮನಕ್ಕೆ ಕಾಯ್ದು ಕುಳಿತಿದ್ದಾರೆ.
ತಾಲೂಕಿನಲ್ಲಿ ಮಳೆ ಪ್ರಮಾಣ ಸಂಪೂರ್ಣ ಕುಸಿದಿದ್ದರಿಂದ ಬಿತ್ತನೆ ಚೇತರಿಕೆ ಕಂಡಿಲ್ಲ. ಈ ಬಾರಿ ಮುಂಗಾರು ಕೈಕೊಡುವ ಎಲ್ಲ ಲಕ್ಷಣಗಳು ಗೋಚರಿಸುತ್ತಿರುವುದರಿಂದ ರೈತ ಸಮುದಾಯದಲ್ಲಿ ಆತಂಕ ಮನೆ ಮಾಡಿದೆ. ಕಳೆದ 15ರಿಂದ 20 ದಿನದ ಹಿಂದೆ ಸ್ವಲ್ಪ ಮಳೆ ಸುರಿದಿದ್ದನ್ನು ಬಿಟ್ಟರೆ ಬಿತ್ತನೆಗೆ ಸಮರ್ಪಕವಾಗಿ ಮಳೆಯಾಗಿಲ್ಲ. ತಾಲೂಕಿನಲ್ಲಿ ಮುಂಗಾರು ಫಸಲು ಕೇವಲ ಭ್ರಮೆ ಎಂಬುದಾಗಿ ರೈತರು ಮಾತನಾಡಿಕೊಳ್ಳುತ್ತಿದ್ದಾರೆ. ಈ ತಿಂಗಳ ಕೊನೆಯಲ್ಲಿಯಾದರೂ ಉತ್ತಮ ಮಳೆಯಾದರೆ ನಿರೀಕ್ಷಿಸಿದಷ್ಟು ಫಸಲು ಬಾರದಿದ್ದರೂ ಕೊಂಚವಾದರೂ ಫಸಲು ಬಂದಿತ್ತಲ್ಲ ಎನ್ನುವ ನಿರೀಕ್ಷೆಯಲ್ಲಿ ರೈತರು ಇದ್ದಾರೆ.
ಮುಂಗಾರು ಬಿತ್ತನೆಗೆ ನಿಗದಿತ ಪ್ರಮಾಣದ ಮಳೆ ಬೀಳದೆ ಕುಡಿಯುವ ನೀರಿಗೂ ಹಾಹಾಕಾರ ಉಂಟಾಗಿದೆ. ಈ ಸಮಯದಲ್ಲಿ ಹಳ್ಳ-ಕೊಳ್ಳಗಳನ್ನು ಹರಿಯುವುದನ್ನು ಕಂಡ ಜನತೆ ಈಗ ಕೊಡ ನೀರಿಗೂ ಪರಿತಪಿಸುವ ಸ್ಥಿತಿ ನಿರ್ಮಾಣವಾಗಿದೆ. ಕಿ.ಮೀ.ಗಟ್ಟಲೆ ದೂರ ತೆರಳಿ ನೀರು ತರುವ ಗ್ರಾಮೀಣ ಪ್ರದೇಶದ ಜನರು ಆಡಳಿತಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ. ತಾಲೂಕಿನ 30ಕ್ಕಿಂತ ಹೆಚ್ಚು ಹಳ್ಳಿಗಳಿಗೆ ಕುಡಿಯುವ ನೀರಿಗೆ ಆಸರೆಯಾಗಿರುವ ಭೀಮಾನದಿ ಸಂಪೂರ್ಣ ಬತ್ತಿ ಹೋಗುತ್ತಿದೆ. ಕುಡಿಯುವ ನೀರು ಸೇರಿದಂತೆ ಅನೇಕ ಸಮಸ್ಯೆಗಳಿಂದ ತತ್ತರಿಸಿರುವ ಗ್ರಾಮೀಣ ಪ್ರದೇಶದ ಜನರ ಸಮಸ್ಯೆಗಳನ್ನು ಆಲಿಸುವ ಸೌಜನ್ಯ ಕ್ಷೇತ್ರದ ಜನಪ್ರತಿನಿಧಿಗಳಿಗಿಲ್ಲ ಎಂದು ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ತಾಲೂಕಿನಲ್ಲಿ ಮೇವಿನ ಕೊರತೆ ಎದುರಾಗಿರುವುದರಿಂದ ಜಾನುವಾರುಗಳನ್ನು ಕಸಾಯಿ ಖಾನೆಗೆ ಮಾರಾಟ ಮಾಡಲಾಗುತ್ತಿದೆ. ಇನ್ನು ಕೆಲವರು ಎಲ್ಲಿಯಾದರೂ ಬದುಕಲಿ ಎಂದು ಬಿಟ್ಟಿದ್ದಾರೆ. ಜೂನ್-ಜುಲೈ ತಿಂಗಳಿನಲ್ಲಿ ಉತ್ತಮ ಮಳೆಯಾಗಿ ಹಸಿರು ಮೇವು ಸಿಗುವುದೆಂಬ ನಿರೀಕ್ಷೆಯಲ್ಲಿದ್ದ ರೈತರಿಗೆ ನಿರಾಶೆಯಾಗಿದೆ. ಮೂಕ ಪ್ರಾಣಿಗಳನ್ನು ರಕ್ಷಿಸಲು ಜನರು ತೀವ್ರ ತೊಂದರೆ ಪಡುತ್ತಿದ್ದಾರೆ.
ಮುಂಗಾರು ಮಳೆಯಾಗದ ಕಾರಣ ಗ್ರಾಮೀಣ ಪ್ರದೇಶಗಳಲ್ಲಿ ಕೃಷಿ ಚಟುವಟಿಕೆಗಳು ಸ್ಥಗಿತಗೊಂಡಿದೆ. ಪಟ್ಟಣದತ್ತ ಕೆಲಸ ಅರಸಿ ನಿತ್ಯವೂ ಕೂಲಿ ಕಾರ್ಮಿಕರ ದಂಡು ಆಗಮಿಸುತ್ತಿದೆ. ಊರಲ್ಲಿ ಕೆಲಸವೇ ಇಲ್ಲ. ಜೇವರ್ಗಿ ಪಟ್ಟಣಕ್ಕೆ ಬಂದರೆ ಕೆಲಸ ಸಿಕ್ಕು ಅವತ್ತಿನ ತುತ್ತಿನ ಚೀಲ ತುಂಬಿಸಿಕೊಳ್ಳಬಹುದೆಂಬ ಆಸೆಯಿಂದ ಬುತ್ತಿ ಕಟ್ಟಿಕೊಂಡು ಜನಿವಾರ, ಚನ್ನೂರ, ಗುಡೂರ, ರ್ಯಾವನೂರ, ಗೌನಳ್ಳಿ, ರದ್ದೇವಾಡಗಿ ಸೇರಿದಂತೆ ಕೆಲವು ಗ್ರಾಮೀಣ ಪ್ರದೇಶಗಳಿಂದ ಕೂಲಿಕಾರ್ಮಿಕರು ಬರುತ್ತಿದ್ದಾರೆ. ಇನ್ನು ಕೆಲ ಜನರು ಕೆಲಸ ಅರಸಿ ಬೆಂಗಳೂರು, ಮುಂಬೈ, ಹೈದ್ರಾಬಾದ ಕಡೆ ವಲಸೆ ಹೋಗುತ್ತಿದ್ದಾರೆ.
ವರುಣನ ಕರುಣೆಗಾಗಿ ತಾಲೂಕಿನಾದ್ಯಂತ ಪ್ರಾರ್ಥನೆ, ಭಜನೆ ಸೇರಿದಂತೆ ಅನೇಕ ಧಾರ್ಮಿಕ ಕಾರ್ಯಕ್ರಮಗಳತ್ತ ಜನ ಮುಖಮಾಡಿದ್ದಾರೆ. ಕೂಡಲೇ ಜನರ ಸಂಕಷ್ಟಕ್ಕೆ ಸರಕಾರ ಸ್ಪಂದಿಸಬೇಕು, ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಬೇಕು, ರಾಷ್ಟ್ರೀಕೃತ ಬ್ಯಾಂಕ್ ಮೂಲಕ ರೈತರು ಪಡೆದ ಸಾಲ ಮನ್ನಾ ಮಾಡಬೇಕು ಎಂದು ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಘಟಕದ ಅಧ್ಯಕ್ಷ ವಿಶ್ವರಾಧ್ಯ ಬಡಿಗೇರ ಗಂವ್ಹಾರ ಆಗ್ರಹಿಸಿದ್ದಾರೆ.
•ವಿಜಯಕುಮಾರ ಎಸ್.ಕಲ್ಲಾ