ಗಂಗಾವತಿ: ಮುಂಗಾರು ಮಳೆ ಕೈಕೊಟ್ಟಿದ್ದರಿಂದ ತುಂಗಭದ್ರಾ ಜಲಾಶಯದಲ್ಲಿ ನೀರಿನ ಸಂಗ್ರಹ ಅತ್ಯಂತ ಕಡಿಮೆ ಇದ್ದು, ಮುಂಗಾರು ಬೆಳೆಗಾಗುವಷ್ಟು ನೀರು ಸಹ ಸಂಗ್ರಹವಾಗಿಲ್ಲ. ಮತ್ತೂಮ್ಮೆ ರೈತಾಪಿ ವರ್ಗ ಸಂಕಷ್ಟದಲ್ಲಿದ್ದು, ಅಚ್ಚುಕಟ್ಟು ಪ್ರದೇಶದ ಬಹುತೇಕ ಗ್ರಾಮೀಣ ಜನರು ದುಡಿಮೆಗಾಗಿ ಬೆಂಗಳೂರು ಸೇರಿ ವಿವಿಧೆಡೆ ಗುಳೆ ಹೊರಟಿದ್ದಾರೆ.
ಅಚ್ಚುಕಟ್ಟು ಪ್ರದೇಶದಲ್ಲಿ ಸುಮಾರು 12 ಲಕ್ಷ ಎಕರೆ ಪ್ರದೇಶ ನೀರಾವರಿಗೊಳಪಟ್ಟಿದ್ದು, ಸರಕಾರ ನಿಯಮಗಳ ಪ್ರಕಾರ 8 ಲಕ್ಷ ಎಕರೆ ಪ್ರದೇಶ ನೀರಾವರಿ ಪ್ರದೇಶವಾಗಿದೆ. ಕಳೆದ ವರ್ಷವೂ ಸಹ ಸರಕಾರ ನಿರ್ಲಕ್ಷ ್ಯದ ಪರಿಣಾಮವಾಗಿ ಆಗಸ್ಟ್ ಎರಡನೇ ವಾರ ಮುಂಗಾರು ಹಂಗಾಮಿನ ನೀರನ್ನು ಕಾಲುವೆಗೆ ಹರಿಸಲಾಗಿತ್ತು. ರೈತರು ಮುಂಗಡವಾಗಿ ಭತ್ತದ ಸಸಿ ಮಡಿ (ಭತ್ತದ ಸಸಿ) ಹಾಕಿದ್ದರಿಂದ ಆಗಸ್ಟ್ ಕೊನೆಯ ವಾರದ ವೇಳೆಗೆ ಭತ್ತದ ನಾಟಿ ಕಾರ್ಯ ಮುಗಿಸಿದ್ದರು.
ಮುಂಗಾರು ಹಂಗಾಮಿನ ಭತ್ತದ ಬೆಳೆ ಜುಲೈ ಮೊದಲ ವಾರದಲ್ಲಿ ನಾಟಿಯಾದರೆ ಮುಂದಿನ ಚಳಿಗಾಲಕ್ಕೆ ಸಿಗದೇ ಉತ್ತಮ ಇಳುವರಿ ಬರುತ್ತದೆ. ಚಳಿಗಾಲದಲ್ಲಿ ಭತ್ತ ತೆನೆ ಬಿಚ್ಚುವಾಗ ಚಳಿಗೆ ಸಿಕ್ಕು ತೆನೆ ಸರಿಯಾಗಿ ಬೆಳೆಯುವುದಿಲ್ಲ. ಪ್ರತಿ ವರ್ಷ ಚಳಿಗಾಲ ಆರಂಭಕ್ಕೂ ಮೊದಲು ಭತ್ತ ತೆನೆ ಬಿಚ್ಚುವ ಹಾಗೆ ರೈತರು ನಾಟಿ ಮಾಡುವುದು ಅಚ್ಚುಕಟ್ಟು ಪ್ರದೇಶದ ರೈತರ ರೂಢಿಯಾಗಿದೆ. ಈ ಭಾರಿ ಇನ್ನೂ ಸಹ ಡ್ಯಾಂನಲ್ಲಿ ನೀರು ಸಂಗ್ರಹವಾಗಿಲ್ಲ. ಆದರೂ ಕೆಲ ರೈತರು ಆಗಷ್ಟ ಕೊನೆಯ ವಾರಕ್ಕೆ ಡ್ಯಾಂಗೆ ನೀರು ಬಂದು ಕಾಲುವೆಗಳಿಗೆ ಹರಿಸುತ್ತಾರೆಂಬ ನಂಬಿಕೆಯಿಂದ ಸಸಿ ಮಡಿ ಹಾಕಿದ್ದಾರೆ. ಇನ್ನೂ ಸ್ವಲ್ಪ ರೈತರು ನದಿ ದಂಡೆ ಮತ್ತು ಪಂಪ್ ಸೆಟ್ ಹೊಂದಿರುವವರು ಈಗಾಗಲೇ ಭತ್ತ ನಾಟಿ ಮಾಡಿದ್ದಾರೆ. ಈ ಪ್ರಮಾಣ ಶೇ.05ರಷ್ಟು ಮಾತ್ರ ಕಾಲುವೆಯಿಂದಲೇ ಅತೀ ಹೆಚ್ಚು ನೀರಾವರಿ ಪ್ರದೇಶ ಇರುವುದರಿಂದ ರೈತರು ಆತಂಕಕ್ಕೆ ಒಳಗಾಗಿದ್ದಾರೆ.
ಕುಡಿಯುವ ನೀರಿನ ನೆಪದಲ್ಲಿ ಪೋಲು: ಕುಡಿಯುವ ನೆಪದಲ್ಲಿ ಎಡದಂಡೆ ಕಾಲುವೆಗೆ ಸುಮಾರು 1.5 ಟಿಎಂಸಿ ಅಡಿಯಷ್ಟು ನೀರನ್ನು ಹರಿಸಲಾಗುತ್ತಿದ್ದು ಮೇಲ್ಭಾಗದಲ್ಲಿ ಬಹುತೇಕ ಉಪಕಾಲುವೆಯ ಮೂಲಕ ನೀರು ಪೋಲಾಗುತ್ತಿದೆ. ಇದರಿಂದ ಪ್ರಸ್ತುತ ಡ್ಯಾಂನಲ್ಲಿ ಸಂಗ್ರಹವಾದ ನೀರನ್ನು ಅಧಿಕಾರಿಗಳು ಸರಿಯಾದ ನಿರ್ವಹಣೆಯಿಲ್ಲದೇ ಪೋಲು ಮಾಡುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ರೈತರು ವ್ಯಾಪಕ ಟೀಕೆ ಮಾಡುತ್ತಿದ್ದಾರೆ.
Advertisement
ಪ್ರಸ್ತುತ ತುಂಗಭದ್ರಾ ಡ್ಯಾಂ ನಲ್ಲಿ 25 ಟಿಎಂಸಿ ಅಡಿ ನೀರು ಸಂಗ್ರಹವಾಗಿದ್ದು, ಕಳೆದ ವರ್ಷ 93 ಟಿಎಂಸಿ ಅಡಿ ನೀರು ಸಂಗ್ರಹವಾಗಿತ್ತು. ಜಲಾನಯನ ಪ್ರದೇಶದಲ್ಲಿ ಮುಂಗಾರು ಮಳೆ ತಡವಾಗಿದ್ದರಿಂದ ಜುಲೈ ಅಂತ್ಯವಾದರೂ ಜಲಾಶಯ ಬರಿದಾಗಿದೆ. ಇದರಿಂದ ಅಚ್ಚುಕಟ್ಟು ಪ್ರದೇಶದ ರೈತರು ಭತ್ತ ನಾಟಿ ಮಾಡದೇ ಪ್ರತಿ ದಿನ ಜಲಾಶಯದ ನೀರಿನ ಮಟ್ಟವನ್ನು ನೋಡುವಂತಾಗಿದೆ. ಮುಂಗಾರು ಭತ್ತದ ನಾಟಿ ರೈತರ ಕೈಸೇರಲು ಕನಿಷ್ಠ 45 ಟಿಎಂಸಿ ಅಡಿ ನೀರು ಬೇಕಾಗುತ್ತದೆ. ಜಲಾಶಯದಲ್ಲಿ ಇದೀಗ 25 ಟಿಎಂಸಿ ಅಡಿ ನೀರು ಸಂಗ್ರಹವಾಗಿದ್ದು, ಒಳಹರಿವು ಸಹ ಕಳೆದ ವರ್ಷಕ್ಕೆ ಹೋಲಿಸಿದರೆ ಅತ್ಯಂತ ಕಡಿಮೆ ಪ್ರಮಾಣದಲ್ಲಿದೆ.
Related Articles
Advertisement
ರಾಯಚೂರು, ಮಾನ್ವಿ, ಸಿಂಧನೂರು ಭಾಗದಲ್ಲಿರುವ ಕೆರೆ ಕೃಷಿ ಹೊಂಡಗಳನ್ನು ಭರ್ತಿ ಮಾಡಿ ಕೂಡಲೇ ಕಾಲುವೆ ನೀರನ್ನು ನಿಲ್ಲಿಸಿ 50 ಟಿಎಂಸಿ ಅಡಿ ನೀರು ಸಂಗ್ರಹವಾದ ಕೂಡಲೇ ರೈತರಿಗೆ ನೀರು ಹರಿಸಲು ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಗಮನ ಹಿಸಬೇಕು ಎಂದು ರೈತರು ಆಗ್ರಹಿಸಿದ್ದಾರೆ.
ಗ್ರಾಮೀಣ ಭಾಗದ ಜನರೆಲ್ಲ ದುಡಿಯಲು ಗುಳೆ:
ಏತ ನೀರಾವರಿ: ನಿಯಮ ಉಲ್ಲಂಘಿಸಿದ ಅಧಿಕಾರಿಗಳು
ಕೃಷಿ ಹಾಗೂ ಕುಡಿಯುವ ನೀರಿಗಾಗಿ ತುಂಗಭದ್ರಾ ಡ್ಯಾಂ ನಿರ್ಮಾಣಗೊಂಡಿದ್ದು, ಡ್ಯಾಂ ನಿರ್ಮಾಣದ ನಂತರ ಸುಮಾರು 68 ವರ್ಷಗಳ ಕಾಲ ಡ್ಯಾಂ ಜುಲೈ ಮೊದಲ ವಾರದೊಳಗೆ ಭರ್ತಿಯಾಗಿ ಎರಡನೇ ವಾರ ಕಾಲುವೆ ಮೂಲಕ ರೈತರ ಹೊಲಗದ್ದೆಗಳಿಗೆ ನೀರು ಹರಿಸಲಾಗುತ್ತಿತ್ತು. ಡ್ಯಾಂ ಮೇಲ್ಭಾಗದ ಕೆಲವು ರಾಜಕಾರಣಿಗಳಿಂದಾಗಿ ಕೆಲ ಯೋಜನೆಗಳು ಆರಂಭವಾಗಿ ಡ್ಯಾಂಗೆ ಸರಿಯಾಗಿ ನೀರು ಹರಿದು ಬರುವುದು ನಿಲ್ಲುವಂತಾಗಿದೆ. ಮೇಲ್ಭಾಗದಲ್ಲಿ ನಿರ್ಮಾಣಗೊಂಡಿರುವ ಕೆರೆ ತುಂಬಿಸುವ ಯೋಜನೆಗಳು, ಸಿಂಗಟಾಲೂರು, ಹುಲಿಗುಡ್ಡ ಸೇರಿ ಇತರೆ ಕೆಲ ಏತನೀರಾವರಿಗಳಿಗೆ ಡ್ಯಾಂ ಭರ್ತಿಯಾದ ನಂತರ ನೀರನ್ನು ಹರಿಸಬೇಕೆಂಬ ನಿಯಮವಿದ್ದರೂ ಇದನ್ನು ಉಲ್ಲಂಘಿಸಿ ಒಳಹರಿವು ಆರಂಭವಾದ ಕೂಡಲೇ ಏತನೀರಾವರಿ ಮೂಲಕ ನೀರನ್ನು ಸಂಗ್ರಹ ಮಾಡುವುದರಿಂದ ಕಳೆದ 5 ವರ್ಷಗಳಿಂದ ತುಂಗಭದ್ರಾ ಡ್ಯಾಂ ಭರ್ತಿಯಾಗುತ್ತಿಲ್ಲ. ಇದರಿಂದ ಅಚ್ಚುಕಟ್ಟು ಪ್ರದೇಶದ ರೈತರಿಗೆ ಸಂಕಷ್ಟ ಎದುರಾಗಿದೆ.
ಡ್ಯಾಂ ಮೇಲ್ಭಾಗದಲ್ಲಿ ಅವೈಜ್ಞಾನಿಕವಾಗಿ ಒಳಹರಿವಿನ ನೀರನ್ನು ಬಳಸುತ್ತಿರುವುದರಿಂದ ಅಚ್ಚುಕಟ್ಟು ಪ್ರದೇಶದ ರೈತರಿಗೆ 5 ವರ್ಷಗಳಿಂದ ತೀವ್ರ ಅನ್ಯಾಯವಾಗುತ್ತಿದೆ. ಮಳೆ ಅಥವಾ ಡ್ಯಾಂ ಭರ್ತಿಯಾದ ನಂತರವೇ ಮೇಲ್ಭಾಗದ ನೀರಾವರಿ ಯೋಜನೆಗಳಿಗೆ ನೀರನ್ನು ಹರಿಸಬೇಕಾಗಿದ್ದು, ಅಧಿಕಾರಿಗಳು ಅಲ್ಲಿಯ ಜನಪ್ರತಿನಿಧಿಗಳಿಂದ ಡ್ಯಾಂಗೆ ಒಳಹರಿವು ಇಲ್ಲವಾಗಿದೆ. ಜತೆಗೆ ಡ್ಯಾಂನಲ್ಲಿರುವ ನೀರನ್ನು ಅಕ್ರಮವಾಗಿ ಕೈಗಾರಿಕೆಗಳು ಬಳಸುತ್ತಿರುವುದರಿಂದ ಕೆಳಭಾಗದ ರೈತರಿಗೆ ನೀರು ಸಿಗದಂತಾಗಿದೆ. ಕುಡಿಯುವ ನೀರಿಗಾಗಿ ತುಂಗಭದ್ರಾ ಡ್ಯಾಂ ನಿರ್ಮಿಸಿದಂತಾಗಿದೆ.•ತಿಮ್ಮಣ್ಣ ಕನಕರಡ್ಡಿ, ಸಿಂಗನಾಳ ರೈತ
•ಕೆ.ನಿಂಗಜ್ಜ