ಹಾಸನ: ಕಳೆದ 5 ದಿನಗಳಿಂದ ಮುಂಗಾರು ಮಳೆ ಮತ್ತೆ ಸ್ಥಗಿತವಾಗಿದ್ದು, ಜಿಲ್ಲೆಯ ರೈತರಲ್ಲಿ ಆತಂಕ ಸೃಷ್ಟಿಸಿದೆ. ಕಳೆದ ವಾರ ಸುರಿದ ಮಳೆಯಿಂದ ರೈತರು ಸಮಾಧಾನಗೊಂಡಿದ್ದರು. ಆದರೆ ನಾಲ್ಕೈದು ದಿನಗಳಿಂದ ಮುಗಿಲಲ್ಲಿ ಮೋಡ ಮರೆಯಾಗಿ ನೀಲಾಕಾಶದಲ್ಲಿ ಸೂರ್ಯನ ಪ್ರಕರ ಕಂಡು ಮತ್ತೆ ಮಳೆ ಮಾಯವಾಯಿತೇ ಎಂದು ರೈತರು ಕಳವಳಗೊಂಡಿದ್ದಾರೆ.
ಆಲೂಗಡ್ಡೆ ಬೆಳೆ ಬಹುತೇಕ ನಾಶವಾಗಿದೆ. ಇನ್ನು ಮೆಕ್ಕೆಜೋಳ ಹುಲುಸಾಗಿ ಬೆಳೆದಿದ್ದು, ಈಗ ಹೂವು ಅರಳಿ ಗೊನೆ ಹೊರಡುವ ಹಂತದಲ್ಲಿದೆ. ಈಗ ಮಳೆ ಅಗತ್ಯವಿದೆ. ಆದರೆ ಈಗ ಮಳೆ ಮಾಯವಾಗಿ ಭೂಮಿಯ ಹದ ಒಣಗಲಾರಂಭಿಸಿದೆ. ಮೆಕ್ಕೆ ಜೋಳಕ್ಕೆ ಗೊಬ್ಬರ ಹಾಕಿರುವ ರೈತರು ಮಳೆಯನ್ನು ಎದುರು ನೋಡುತ್ತಿದ್ದಾರೆ. ಬೆಳೆ ಗಿಲ್ಲ ನೀರು: ಮಲೆನಾಡು ಪ್ರದೇಶದಲ್ಲಿ ಭತ್ತದ ನಾಟಿ ಸಿದ್ಧತೆಯಲ್ಲಿದ್ದ ರೈತರಿಗೆ ಮಳೆಯ ಕೊರತೆಯಿಂದ ಗದ್ದೆಗಳಲ್ಲಿ ನೀರಿಲ್ಲದೆ ನಾಟಿ ಮಾಡಲು ಸಾಧ್ಯವಾಗುತ್ತಿಲ್ಲ. ತಕ್ಷಣ ಮಳೆ ಆರಂಭವಾಗದಿದ್ದರೆ ಭತ್ತದ ನಾಟಿ ಸಾಧ್ಯವಿಲ್ಲದಂತಾಗಿದೆ.
ನಾಲೆಗಳಲ್ಲಿ ಹರಿಯದ ನೀರು : ಜಲಾಶಯಗಳ ಅಚ್ಚುಕಟ್ಟು ಪ್ರದೇಶಗಳಿಗೆ ನಾಲೆ ಗಳಲ್ಲಿ ನೀರು ಹರಿಸದಿದ್ದರಿಂದ ಅಚ್ಚುಕಟ್ಟು ಪ್ರದೇಶದಲ್ಲಿಯೂ ಕೃಷಿ ಚಟುವಟಿಕೆಗಳು ಆರಂಭವಾಗಿಲ್ಲ. ಯಗಚಿ ಜಲಾಶಯ ಭರ್ತಿಯಾಗಿದೆ. ಆದರೆ ಆ ಜಲಾಶಯದಲ್ಲಿ ಭತ್ತದ ಬೆಳೆಯ ಪ್ರದೇಶ ಬಹಳ ಕಡಿಮೆ , ಅರೆ ನೀರಾವರಿ ಬೆಳಗಳಿಗಷ್ಟೇ ಯಗಚಿ ನೀರು ಲಭ್ಯ. ಇನ್ನು ಹೇಮಾವತಿ ಜಲಾಶಯದಲ್ಲಿ ಒಳ ಹರಿವು ಕ್ಷೀಣಿಸಿದೆ. 37 .10 ಟಿಎಂಸಿ ಸಂಗ್ರಹ ಸಾಮಥ್ಯದ ಜಲಾಶಯದಲ್ಲಿ ಬುಧವಾರದವರೆಗೆ 30 ಟಿಎಂಸಿ ನೀರು ಸಂಗ್ರಹವಾಗಿದೆ. 32 ಟಿಎಂಸಿ ನೀರು ಸಂಗ್ರಹವಾದರಷ್ಟೇ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಹರಿಸಲು ಸಾಧ್ಯ ಎಂದು ಹೇಮಾವತಿ ಯೋಜನೆ ಎಂಜಿನಿಯರುಗಳು ಹೇಳುತ್ತಿದ್ದಾರೆ.
ಕಳೆದ ವರ್ಷ ಜು.12 ರಂದೇ ಹೇಮಾವತಿ ಡ್ಯಾಂ ಭರ್ತಿಯಾಗಿತ್ತು. ಜುಲೈ 3 ನೇ ವಾರದಿಂದ ಅಚ್ಚುಕಟ್ಟು ಪ್ರದೇಶಕ್ಕೆ ನಾಲೆಗಳಲ್ಲಿ ನೀರು ಹರಿಸಲಾಗುತ್ತಿತ್ತು. ಆದರೆ ಈ ವರ್ಷ ಇನ್ನು ನಾಲೆಗಳಿಗೆ ನೀರು ಹರಿಸಲು ಸಾಧ್ಯವಾಗಿಲ್ಲ. ಆಲೂರು ಸಮೀಪದ 1.50 ಟಿಎಂಸಿ ಸಂಗ್ರಹ ಸಾಮರ್ಥಯದ ವಾಟೆಹೊಳೆ ಜಲಾಶಯ ಸದ್ಯಕ್ಕೆ ಭರ್ತಿಯಾಗುವ ಸೂಚನೆಗಳು ಕಾಣುತ್ತಿಲ್ಲ. ಇನ್ನೂ ಒಂದು ಟಿಎಂಸಿ ನೀರು ಕೂಡ ಸಂಗ್ರಹವಾಗಿಲ್ಲ. ಜಿಲ್ಲೆಯ ಬಯಲು ಸೀಮೆಯ ತಾಲೂಕುಗಳಾದ ಅರಸೀಕೆರೆ ಮತ್ತು ಚನ್ನರಾಯಪಟ್ಟಣ ಹೊರತುಪಡಿಸಿ ಉಳಿದ ತಾಲೂಕುಗಳಲ್ಲಿ ಈ ವರ್ಷ ಪ್ರತಿ ತಿಂಗಳೂ ಮಳೆಯ ಕೊರತೆ ಕಾಡುತ್ತಲೇ ಬಂದಿದೆ. ಮಲೆನಾಡು ಆಲೂರು ಮತ್ತು ಸಕಲೇಶಪುರ ತಾಲೂಕುಗಳಲ್ಲಿಯೂ ಈ ವರ್ಷ ಮಳೆಯ ಕೊರತೆಯಾಗಿದೆ.
ಮಾನ್ಸೂನ್ ಮಳೆ ಶೇ. 24 ರಷ್ಟು ಕೊರತೆ:
ಹಾಸನ: ಮಾನ್ಸೂನ್ ಮಳೆ ಈ ಬಾರಿ ಕೈಕೊಟ್ಟಿದೆ. ಜೂನ್ ಮತ್ತು ಜುಲೈನಲ್ಲಿ ಯಥೇತ್ಛವಾಗಿ ಮಳೆಯಾಗಿ ಕೆರೆ, ಕಟ್ಟೆಗಳು, ಜಲಾಶಯಗಳು ಭರ್ತಿಯಾಗಿ ಕೃಷಿ ಚಟುವಟಿಕೆಗಳು ಆರಂಭವಾಬೇಕಾಗಿತ್ತು. ಆದರೆ ಈ ವರ್ಷ ಮಾನ್ಸೂನ್ ಮಳೆಯೂ ಕೊರತೆಯಾಗಿದೆ. ಜಿಲ್ಲೆಯಲ್ಲಿ ಜೂನ್ 1 ರಿಂದ ಆಗಸ್ಟ್ 2 ರವರೆಗೆ ಮಾನ್ಸೂನ್ ಮಳೆ ಶೇ. 24 ರಷ್ಟು ಕೊರತೆಯಾಗಿದೆ.
-ಎನ್. ನಂಜುಂಡೇಗೌಡ