Advertisement

ಈ ತಿಂಗಳು ಮಳೆ ಕಮ್ಮಿ- ಹವಾಮಾನ ಇಲಾಖೆ ಮುನ್ಸೂಚನೆ: ರೈತರಿಗೆ ಸಂಕಷ್ಟದ ಆತಂಕ

10:04 PM Aug 02, 2023 | Team Udayavani |

ಬೆಂಗಳೂರು: ರಾಜ್ಯಾದ್ಯಂತ ಈ ತಿಂಗಳಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗುವ ಕುರಿತು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಮಳೆಯನ್ನೇ ಅವಲಂಬಿಸಿರುವ ರೈತರಿಗೆ ಸಂಕಷ್ಟ ಎದುರಾಗುವ ಲಕ್ಷಣ ಗೋಚರಿಸಿದೆ.

Advertisement

ರಾಜ್ಯದಲ್ಲಿ ಪ್ರತಿ ವರ್ಷ ಜೂನ್‌ ಪ್ರಾರಂಭವಾಗುತ್ತಿದ್ದಂತೆ ಮುಂಗಾರು ಪ್ರವೇಶಿಸಿ ಮಳೆಯ ಅಬ್ಬರ ಜೋರಾಗಿರುತ್ತದೆ. ಆದರೆ, ಈ ಬಾರಿ ಮುಂಗಾರು ರಾಜ್ಯಕ್ಕೆ ತಡವಾಗಿ ಕಾಲಿಟ್ಟಿದೆ. ಪರಿಣಾಮ ವಿವಿಧ ಜಿಲ್ಲೆಗಳಲ್ಲಿ ಸಮಪ್ರಮಾಣದಲ್ಲಿ ಮಳೆಯಾಗದೆ, ರೈತರು ಉತ್ತಮ ಬೆಳೆ ತೆಗೆಯದೆ ಕಂಗೆಟ್ಟಿದ್ದಾರೆ. ಜುಲೈನಲ್ಲಿ ವಾಡಿಕೆಗಿಂತ ಅಧಿಕ ಮಳೆಯಾಗಿತ್ತು. ಹಾಲಿ ತಿಂಗಳಲ್ಲಿ ಪೂರ್ತಿ ರಾಜ್ಯವ್ಯಾಪಿ ವಾಡಿಕೆಗಿಂತ ಭಾರಿ ಕಡಿಮೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ಕೊಟ್ಟಿದೆ. ತರಕಾರಿ, ಹಣ್ಣು, ರಾಗಿ, ಭತ್ತ, ಜೋಳ ಬೆಳೆಯುವ ರೈತರಿಗೂ ಈ ತಿಂಗಳಲ್ಲಿ ಬಿಸಿ ತಟ್ಟಲಿದೆ.

2 ಜಿಲ್ಲೆಗಳಲ್ಲಿ ಮಾತ್ರ:
ಉತ್ತರ ಕರ್ನಾಟಕ, ಉತ್ತರ ಒಳನಾಡಿನಲ್ಲಿ ಇದುವರೆಗೆ ವಾಡಿಕೆಗಿಂತ ಹೆಚ್ಚಿನ ಮಳೆ ಸುರಿದಿದೆ. ಸದ್ಯ ದಕ್ಷಿಣ ಒಳನಾಡಿನ ರಾಮನಗರ, ಕೊಡಗು ಜಿಲ್ಲೆಗಳಲ್ಲಿ ಮಾತ್ರ ಮಳೆ ಕೊರತೆ ಇದೆ. ಉಳಿದಂತೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಮಳೆಯಾಗಿದೆ. ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಸೇರಿ ಕರಾವಳಿ ಜಿಲ್ಲೆಗಳಲ್ಲಿ ವಾಡಿಕೆಗಿಂತ ಭಾರಿ ಅಧಿಕ ಮಳೆಯಾಗಿದೆ.
ಇದೇ ವೇಳೆ, ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಿಗೆ ಆ.5ರ ವರೆಗೆ ಎಲ್ಲೋ ಅಲರ್ಟ್‌ ಘೋಷಿಸಲಾಗಿದೆ. ರಾಜ್ಯದ ಒಂದೆರಡು ಕಡೆ ಬಿರುಗಾಳಿಯ ವೇಗವು ಗಂಟೆಗೆ 40 ರಿಂದ 50 ಕಿ.ಮೀ ಇರಲಿದೆ. ಉಳಿದಂತೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮುಂದಿನ ಒಂದು ವಾರ ಮಳೆಯಾಗುವ ಸಾಧ್ಯತೆಗಳಿಲ್ಲ

ಜುಲೈನಲ್ಲಿ ಅತಿ ಮಳೆ ಏಕೆ?
ಜೂನ್‌ನಲ್ಲಿ ಮಳೆ ಕೊರತೆ ಅಧಿಕವಾಗಿತ್ತು. ಆದರೆ, ಜುಲೈನಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆ ಸುರಿದಿದೆ. ಗಾಳಿ ದಿಕ್ಕಿನ ಬದಲಾವಣೆ ವಲಯವು ಅನೇಕ ದಿನ 20, 18, 17 ಡಿಗ್ರಿ ಉತ್ತರ ಅಕ್ಷಾಂಶದಲ್ಲಿ ಹಾದು ಹೋಗಿತ್ತು. ರಾಜ್ಯಕ್ಕೆ ಈ ಬಾರಿ 10 ದಿನ ತಡವಾಗಿ ಮುಂಗಾರು ಪ್ರವೇಶಿಸಿತ್ತು. ಮಾನ್ಸೂನ್‌ ಟ್ರಫ್ನ ಸ್ಥಿತಿ ಅನೇಕ ದಿನಗಳ ಕಾಲ ವಾಡಿಕೆಗಿಂತ ದಕ್ಷಿಣ ದಿಕ್ಕಿನಲ್ಲಿತ್ತು. ಬಿಪೋರ್‌ಜಾಯ್‌ ಚಂಡಮಾರುತದಿಂದ ಮುಂಗಾರಿನ ಪಶ್ಚಿಮ ದಿಕ್ಕಿನಿಂದ ಬೀಸಿದ ಗಾಳಿ ಸೇರಿದಂತೆ ವಿವಿಧ ಹವಾಮಾನ ಬದಲಾವಣೆಯಿಂದಾಗಿ ಜುಲೈನಲ್ಲಿ ಉತ್ತರ ಒಳನಾಡು, ಮಧ್ಯ ಭಾರತದಲ್ಲಿ ಉತ್ತಮ ಮಳೆಯಾಯಿತು. ಮತ್ತೂಂದೆಡೆ ಪಶ್ಚಿಮ ಕರಾವಳಿ ಟ್ರಫ್ಗಳು ಅನೇಕ ದಿನಗಳ ಕಾಲ ಇದ್ದ ಹಿನ್ನೆಲೆಯಲ್ಲಿ ಕರಾವಳಿ ಸೇರಿದಂತೆ ಪಶ್ಚಿಮ ದಿಕ್ಕಿನಲ್ಲಿ ಹೆಚ್ಚಿನ ಮಳೆಯಾಗಿದೆ. ಹೀಗಾಗಿ ಜೂನ್‌ನಲ್ಲಿದ್ದ ಮಳೆ ಕೊರತೆ ಸಮಸ್ಯೆ ನೀಗಿತ್ತು.

ಕರ್ನಾಟಕದಲ್ಲಿ ಆಗಸ್ಟ್‌ ತಿಂಗಳಿನಲ್ಲಿ ಕಡಿಮೆ ಮಳೆಯಾಗುವ ಶೇ.50ರಷ್ಟು ಸಾಧ್ಯತೆಗಳಿವೆ. ಇದುವರೆಗೆ ರಾಜ್ಯದಲ್ಲಿ ವಾಡಿಕೆಯಷ್ಟೆ ಮಳೆಯಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಮಳೆ ಪ್ರಮಾಣ ಕಡಿಮೆ ಇದೆ.
| ಎ.ಪ್ರಸಾದ್‌, ವಿಜ್ಞಾನಿ “ಡಿ”, ರಾಜ್ಯ ಹವಾಮಾನ ಇಲಾಖೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next